ದೀಪಾವಳಿಗೆ ನಗೆಪಟಾಕಿ ಹಾರಿಸುವ ಅಂದವಾದ ಚಿತ್ರ

0

ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ಲವ್ ಸ್ಟೋರಿಗಳಿಗೇನು ಕಡಿಮೆಯಿಲ್ಲ. ಆದರೆ ಈ ವಿಷಯವನ್ನು ತಮ್ಮ ಕಥೆಯ ತಿರುಳನ್ನಾಗಿಸಿ ಸಮಾಜವನ್ನು ಕಾಡುತ್ತಿರುವ ವೈದ್ಯಕೀಯ ಕ್ಷೇತ್ರದ ಅಜಾಗರೂಕತೆ ಬಗ್ಗೆ ಅರಿವು ಮೂಡಿಸುವ ಸಿನಿಮಾಗಳ ಸಾಲಿಗೆ ಅಂದವಾದ ಸೇರುತ್ತದೆ.
ಒಂದು ಉತ್ತಮ ಸಂದೇಶದ ಸುತ್ತ ನವಿರಾದ ಪ್ರೇಮ ಕಥಾಹಂದರ, ಸಹಜ ತುಂಟಾಟ, ಮಲೆನಾಡಿನ ಮಳೆಯೊಂದಿಗೆ ಮನಸ್ಸಿಗೆ ಮುದ ನೀಡುವ ಚುಮು ಚುಮು ಚಳಿ, ಕಚಗುಳಿ ಇಡುವ ಸಂಭಾಷಣೆ, ಕಾಡುವ ಸಸ್ಪೆನ್ಸ್, ಹೀಗೆ ನಿರ್ದೇಶಕ ಚಲ ಪ್ರೇಕ್ಷಕಮಹಾಪ್ರಭುವಿಗೆ ಹಬ್ಬದ ಸವಿ ಉಣಬಡಿಸುತ್ತಾ ಹೋಗಿದ್ದಾರೆ. ಮೊದಲಾರ್ಧದಲ್ಲಿ ಚಿತ್ರದ ದೃಶ್ಯಗಳು ತೆವಳಿದಂತೆ ಕಂಡುಬಂದರೂ ಹೊಸಪ್ರತಿಭೆಗಳ ಸಹಜ ನಟನೆ ಚಿತ್ರದ ಪ್ಲಸ್ ಪಾಯಿಂಟ್ ಎನಿಸುತ್ತದೆ. ಇದು ಕೊನೆಯವರೆಗು ಪ್ರೇಕ್ಷಕನನ್ನು ಹಿಡಿದಿಡುತ್ತದೆ.
ಚಿತ್ರಕಥೆಯಲ್ಲಿ ಬರುವ ಬಿಡಿ ಬಿಡಿ ಭಾಗಗಳು ಕೆಲವೊಮ್ಮೆ ಕಥೆಯಲ್ಲಿ ದ್ವಂದ್ವ ಭಾವವನ್ನು ಮೂಡಿಸಿದರೂ ಚಿತ್ರ ಅನಾವರಣಗೊಳ್ಳುತ್ತಿದ್ದಂತೆ ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
ಚಿತ್ರದ ನಾಯಕಿ ಅರ್ಥ (ಅನುಷಾ ರಂಗನಾಥ್) ಚಿಕ್ಕಂದಿನಲ್ಲಿ ಮಾಡಿದ ಒಂದು ಸಣ್ಣ ತಪ್ಪಿಗೆ ತನ್ನ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕುಳಿದರು ಆಕೆಯ ಬಾಲ್ಯದಲ್ಲಿ ದುರಂತವೊಂದು ಘಟಿಸಿಹೋಗುತ್ತದೆ. ಆಶ್ರಮದಲ್ಲಿ ಬೆಳೆಯುತ್ತಾ ತಾನು ಏಲಿಯನ್ ಎಂದು ತನ್ನ ಬದುಕನ್ನ ಪುಟ್ಟ ಪುಟ್ಟ ಸುಳ್ಳುಗಳೊಂದಿಗೆ ಕಟ್ಟಿಕೊಳ್ಳುತ್ತಾ ಹೋಗುತ್ತಾಳೆ. ಅಮ್ಮು ಎಂಬ ಹೆಸರಿನೊಂದಿಗೆ ಮೋಹನ (ಜೈ)ನ ಪರಿಚಯ ಬಾಲ್ಯದಲ್ಲೆ ಆದರೂ ಚಿತ್ರ ತೆರೆದುಕೊಳ್ಳುವುದು ಮೋಹನ ಬೆಳದು ನಿಂತ ಬಳಿಕವೆ.
ಸುಳ್ಳುಗಳನ್ನ ನಂಬುತ್ತಾ ಹೋಗುವ ಮುಗ್ದ ಕಂಗಳ ನಾಯಕ ನಾಯಕಿಯನ್ನು ಆರಾಧಿಸಲು ಆರಂಭಿಸುತ್ತಾನೆ. ಇವರಿಬ್ಬರ ಪ್ರೀತಿ ಚಿಗುರಿ ಮೊಳಕೆಯೊಡೆಯುವಷ್ಟರಲ್ಲಿ ಅರ್ಥ ಯಾರು? ಯಾಕೆ ಅವಳು ವಿಭಿನ್ನ ಎಂಬುದು ತಿಳಿಯುತ್ತದೆ. ಇದರಲ್ಲಿ ಸ್ಪೇಸ್ ಶಿಪ್ ದೃಶ್ಯವೊಂದು ಸೇರಿ ನಾಯಕಿಯು ಬೇರೆಯಂದು ಪ್ರಪಂಚಕ್ಕೆ ಸೇರಿದವಳಾ ಎಂಬಂತೆಯೂ ಕಲಾತ್ಮಕವಾಗಿ ಬಿಂಬಿಸಲಾಗುತ್ತೆ.
ಅರ್ಥ ಪಡೆಯಲು ನಾಯಕ ಪಡುವ ಫಜೀತಿ ಹಾಸ್ಯಮಯವಾಗಿದ್ದರು ಕಥೆಯ ಮೊದಲ ಭಾಗ ಕಂಡು ನಿರೂಪಣೆಯಲ್ಲಿ ಇನ್ನಷ್ಟು ಶ್ರಮವಹಿಸಬಹುದಿತ್ತು ಎನಿಸುತ್ತದೆ. ತುಸು ಬಾಲಿಶವಾಗಿ ಕಂಡರು ಮೊದಲ ಪ್ರಯತ್ನದಲ್ಲೆ ನಾಯಕ ಜೈ ಹಾಗು ನಾಯಕಿ ಅನುಷಾ ನಟನೆ ಹೃದಯಸ್ಪರ್ಶಿಯಾಗಿದೆ. ಹರೀಶ್ ರೈ ಮತ್ತು ಕೆ ಎಸ್ ಶ್ರೀಧರ್ ಪೋಷಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ಅವರ ಹಾಡುಗಳ ರಚನೆ, ವಿಕ್ರಮ್ ವರ್ಮನ್ ಸಂಗೀತ ಸಂಯೋಜನೆ ಹಾಗೂ ಗುರುಕಿರಣ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವತುಂಬಿದೆ.
ಹರೀಶ್ ಎನ್ ಸೊಂಡೇಕೊಪ್ಪ ಛಾಯಾಗ್ರಹಣ ಮಲೆನಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

Spread the love
Leave A Reply

Your email address will not be published.

Flash News