ಕಮರ್ಷಿಯಲ್​ ಸೂತ್ರದಡಿ ಕಮಾಲ್​ ಮಾಡಿದ ಮಕ್ಕಳ ಗಿರ್ಮಿಟ್​

0

ಚಿತ್ರ – ಗಿರ್ಮಿಟ್
ನಿರ್ದೇಶನ, ಪರಿಶ್ರಮ – ರವಿ ಬಸ್ರೂರು ಮತ್ತು ತಂಡ
ನಿರ್ಮಾಪಕರು – ಎನ್​ ಎಸ್​ ರಾಜ್​ ಕುಮಾರ್​
ತಾರಾಗಣ – ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ, ಸಿಂಚನಾ ಕೋಟೇಶ್ವರ ಮೊದಲಾದವರು.

ಮಕ್ಕಳ ಚಿತ್ರವೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಮಕ್ಕಳನ್ನಿಟ್ಟುಕೊಂಡು ತಯಾರಾದ ಮಕ್ಕಳ ಕಮರ್ಷಿಯಲ್​ ಚಿತ್ರವು ಪ್ರೇಕ್ಷಕರ ಮನಗೆದ್ದಿದೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪ್ರಯತ್ನವಾದ ಗಿರ್ಮಿಟ್​ ಪ್ರೇಕ್ಷಕರಿಗೆ ಅಕ್ಷರಶಃ ಗಿರ್ಮಿಟ್​ ಸವಿಯನ್ನು ಉಣಬಡಿಸಿದೆ. ದೊಡ್ಡವರ ಪಾತ್ರಗಳಲ್ಲಿ ಅಭಿನಯಿಸಿರುವ ಮಕ್ಕಳು ಅಪ್ಪಟ ಮನರಂಜನೆಯನ್ನು ನೀಡಿದ್ದಾರೆ.

ಒಬ್ಬ ಸ್ಟಾರ್​ ನಟನ ಅಭಿಮಾನಿಗಳು ಬಯಸುವ ಎಲ್ಲ ರೀತಿಯ ಮನರಂಜನೆಯ ಅಂಶಗಳು ಇದರಲ್ಲಿವೆ. ಮಕ್ಕಳೇ ಇಲ್ಲಿ ನಾಯಕ, ನಾಯಕಿ, ಅಪ್ಪ, ಅಮ್ಮ, ಸ್ನೇಹಿತ ಹಾಗೂ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡವರಂತೆ ಮೀಸೆ, ಸೀರೆಯನ್ನುಟ್ಟುಕೊಂಡ ಮಕ್ಕಳ ಪಾತ್ರಗಳು ಯಾವುದೂ ಅಸಹಜ ಎನ್ನಿಸುವಂತೆ ಮೂಡಿಬಂದಿಲ್ಲ. ಎಲ್ಲರೂ ನೈಜವಾಗಿ ನಟಿಸಿದ್ದಾರೆ.
ಚಿತ್ರವು ಒಂದು ಸಾಮಾನ್ಯ ಕಥೆಯನ್ನು ಹೊಂದಿದೆ. ನಾಯಕ ರಾಜನಿಗೆ (ಆಶ್ಲೇಷ್​ ರಾಜ್​) ಮದುವೆಗೆ ಹುಡುಗಿ ಹುಡುಕುತ್ತಿರುತ್ತಾರೆ. ಇನ್ನೊಂದು ಕಡೆ ನಾಯಕಿ ರಶ್ಮಿ (ಶ್ಲಾಘಾ ಸಾಲಿಗ್ರಾಮಾ) ಅವರ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಬೇಕೆಂಬ ಹುಡುಕಾಟ ನಡೆಯುತ್ತಿರುತ್ತದೆ. ತನ್ನನ್ನು ಇಷ್ಟಪಡುವ ನಾಯಕನಿಗೆ ನಾಯಕಿ ತನ್ನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಸಬೇಕು ಎಂದು ಷರತ್ತು ವಿಧಿಸುತ್ತಾಳೆ. ನಂತರದಲ್ಲಿ ನಾಯಕ ನಡೆಸುವ ಪ್ರಯತ್ನಗಳು, ನಾಯಕಿಯ ಅಕ್ಕಂದಿರ ಮದುವೆ ಮಾಡಿಸಿ ತನ್ನ ಮದುವೆ ಹೇಗೆ ಮಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ.
ಚಿತ್ರವು ಮಾಸ್​ ಆಡಿಯನ್ಸ್​ ಗೆ ಹೇಳಿ ಮಾಡಿಸಿದಂತಿದೆ. ಚಿತ್ರದಲ್ಲಿ ಎಲ್ಲ ರೀತಿಯ ಅಂಶಗಳೂ ಇವೆ. ಕುಂದಾಪುರ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಪಕೃತಿ ಸೌಂದರ್ಯವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಮಕ್ಕಳ ಸಂಭಾಷಣೆ. ಚಿತ್ರದಲ್ಲಿ ಬಳಕೆಯಾಗಿರುವ ಕುಂದಾಪುರ ಕನ್ನಡ, ಉತ್ತರ ಕರ್ನಾಟಕದ ಭಾಷೆ ಹಿತ ನೀಡುತ್ತದೆ. ಭಾಷೆಯಲ್ಲಿ ಬಳಕೆಯಾಗಿರುವ ಹಾಸ್ಯ ಮಾತುಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಪ್ರಾದೇಶಿಕ ಭಾಷೆಯು ಪರಿಣಾಮಕಾರಿಯಾಗಿ ಬಳಕೆಯಾಗಿದೆ. (ಸಂಭಾಷಣೆ ಪ್ರಮೋದ್​ ಮರವಂತೆ) ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಸೇರಿದಂತೆ ಹಿರಿಯ ಕಲಾವಿದರು ಮಕ್ಕಳಿಗೆ ಡಬ್​ ಮಾಡಿರುವುದು ವಿಶೇಷವಾಗಿದೆ. ದೊಡ್ಡವರ ದನಿಗೆ ತಕ್ಕಂತೆ ಮಕ್ಕಳು ನಟಿಸಿದ್ದಾರೆ. ಯಾವ ಮಾತುಗಳೂ ಅತಿರೇಕ ಎನಿಸುವುದಿಲ್ಲ.
ರವಿ ಬಸ್ರೂರು ನೀಡಿರುವ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳೂ ಕೇಳಲು ಇಂಪಾಗಿವೆ. ನಟ ಪುನೀತ್​ ರಾಜ್​ ಕುಮಾರ್​ ಚಿತ್ರಕ್ಕೆ ಒಂದು ಗೀತೆಯನ್ನೂ ಹಾಡಿದ್ದು ಕೇಳುವಂತಿದೆ. ಮಕ್ಕಳ ಮೂಲಕ ಸೃಷ್ಟಿಯಾಗಿರುವ ಪಾತ್ರಗಳು ಎಲ್ಲೂ ಬಾಲಿಶ ಎನಿಸದ ರೀತಿಯಲ್ಲಿ ಬಸ್ರೂರು ಚಿತ್ರ ತಯಾರಿಸಿದ್ದಾರೆ.
ಚಿತ್ರದಲ್ಲಿ ಭಾವನೆಗಳ ಏರಿಳಿತವೂ ಇದೆ. ನಾಯಕಿಯ ತಂದೆ ಹೆಣ್ಣು ಮಕ್ಕಳ ಮದುವೆ ಮಾಡುವ ಕಷ್ಟದ ಬಗ್ಗೆ ಮಾತನಾಡುವ ರೀತಿ ಒಂದು ಕ್ಷಣ ಕಣ್ಣಂಚಲ್ಲಿ ನೀರು ತರಿಸುತ್ತದೆ. ಪೋಷಕರ ಪಾತ್ರಗಳಲ್ಲಿ ಮಕ್ಕಳೂ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಸುಮಾರು 280 ಮಕ್ಕಳನ್ನು ಹಾಕಿಕೊಂಡು ಚಿತ್ರ ತಯಾರಿಸಿರುವ ಬಸ್ರೂರು ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಕನ್ನಡಕ್ಕೆ ಇಂತಹ ಚಿತ್ರಗಳು ಹೆಚ್ಚು ಬರಬೇಕು.
ಎನ್​ ಎಸ್​ ರಾಜ್​ ಕುಮಾರ್​ ಹಾಕಿರುವ ಬಂಡವಾಳಕ್ಕೆ ಮೋಸವಿಲ್ಲ. ದುಡ್ಡು ಕೊಟ್ಟು ಬರುವ ಪ್ರೇಕ್ಷಕನಿಗೂ ಅಪ್ಪಟ ಮನರಂಜನೆಯ ರಸದೂಟವನ್ನೇ ಉಣಿಸಿ ಗಿರ್​ ಮಿಟ್​ ಉಣಿಸುತ್ತದೆ.
ಕಮರ್ಷಿಯಲ್​ ಸೂತ್ರ ಇಟ್ಟುಕೊಂಡು ಬಸ್ರೂರು ತಯಾರಿಸಿರುವ ಮಕ್ಕಳ ಈ ಪ್ರಯೋಗಾತ್ಮಕ ಮನರಂಜನೆಯ ಚಿತ್ರವು ಯಶಸ್ವಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗಗಳು ಹೆಚ್ಚಾಗಬೇಕಿದೆ.

Spread the love
Leave A Reply

Your email address will not be published.

Flash News