ಹೊಸ ಚಿತ್ರಕ್ಕೆ ಬೆನ್ನು ತಟ್ಟಿದ ರಕ್ಷಿತ್​ ಶೆಟ್ಟಿ, ಮಕ್ಕಳ ದಿನಾಚರಣೆಗೆ ಶ್ರೀಮನ್ನಾರಯಣನಿಂದ ಅಳಿದು ಉಳಿದವರು ಫಸ್ಟ್​ ಲುಕ್​ ರಿಲೀಸ್​

0

ಚಂದನವನದ ಸಿಂಪಲ್​ ಸ್ಟಾರ್​ ರಕ್ಷಿತ್​ ತಮ್ಮ ಮಹಾತ್ವಾಕಾಂಕ್ಷೆಯ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್​ ಬಗ್ಗೆ ಮಾತನಾಡಿದ್ದರು. ರಕ್ಷಿತ್​ ರನ್ನು ತೆರೆಯ ಮೇಲೆ ನೋಡಲು ಬಯಸುತ್ತಿರುವ ಅಭಿಮಾನಿಗಳ ಕುತೂಹಲ ತಣಿಸಿದ್ದರು.
ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ರಕ್ಷಿತ್​ ಹೊಸ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ. ಹೊಸ ಚಿತ್ರವೊಂದರ ಫಸ್ಟ್​ ಲುಕ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಹುರಿದುಂಬಿಸಿದ್ದಾರೆ.
ಗುರುವಾರ, ನ.14 ರಂದು ಹೊಸ ನಿರ್ದೇಶಕರ ಚಿತ್ರವಾದ ಅಳಿದು ಉಳಿದವರು ಫಸ್ಟ್​ ಲುಕ್​ ಅನಾವರಣಗೊಳಿಸಿದ್ದಾರೆ. ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಹೊಸ ಚಿತ್ರ ಅಳಿದು ಉಳಿದವರು ಚಿತ್ರದ ಪೋಸ್ಟರ್​ ಬಿಡುಗಡೆಯಾಗಿರುವುದು ವಿಶೇಷವಾಗಿದೆ. ಗುರುವಾರ ಸಂಜೆ 5.55ಕ್ಕೆ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ.
ಏನು ಹೇಳುತ್ತದೆ ಫಸ್ಟ್​ ಲುಕ್​?
ಚಿತ್ರದ ಫಸ್ಟ್​ ಲುಕ್​ ನಲ್ಲಿ ಕೆಂಪು ಮತ್ತು ಕಪ್ಪು ಪಟ್ಟಿಗಳ ಆವರಣದ ನಡುವೆ ಮೂರು ಕಪ್ಪು ಆಕೃತಿಗಳು ನಿಂತಿರುವುದನ್ನು ನಾವು ಕಾಣಬಹುದು. ಭಿನ್ನ ಶೀರ್ಷಿಕೆಯ ಚಿತ್ರವು ತನ್ನ ಫಸ್ಟ್​ ಲುಕ್​ ನಲ್ಲಿ ಚಿತ್ರವು ವಿಶೇಷವಾದದ್ದನ್ನು ಹೇಳ ಹೊರಟಿದೆ ಎಂಬ ಸೂಚನೆ ನೀಡಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೈಲರ್​ ಶೀಘ್ರದಲ್ಲೇ ಬರಲಿದೆ ಎಂದು ಚಿತ್ರತಂಡ ಪೋಸ್ಟರ್​ ನಲ್ಲಿ ಹೇಳಿಕೊಂಡಿದೆ.
ಸ್ಟಾರ್​ ನಟ, ನಿರ್ದೇಶಕರಾದ ರಕ್ಷಿತ್​ ತಮ್ಮ ಸಮಯವನ್ನು ಮೀಸಲಿಟ್ಟು ಆಗಮಿಸಿರುವುದು ಚಿತ್ರತಂಡದ ಸಂತಸ ಇಮ್ಮಡಿಯಾಗುವಂತೆ ಮಾಡಿದೆ.
ಈ ಹಿಂದೆ ಕಹಿ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಅರವಿಂದ್​ ಶಾಸ್ತ್ರಿ ಈ ಹೊಸ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅಶು ಬೆದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಶು ಬೆದ್ರ ವೆನ್ಚರ್ಸ್​ ಮತ್ತು ಪಿವಿಆರ್​ ಪಿಕ್ಚರ್ಸ್​ ಸಂಸ್ಥೆಗಳು ಚಿತ್ರದ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿವೆ.
ಬೆದ್ರ ನಿರ್ಮಾಪಕರಾಗುವ ಜೊತೆಗೆ ಮೊದಲ ಬಾರಿಗೆ ಅಳಿದು ಉಳಿದವರು ಚಿತ್ರದ ನಾಯಕನಾಗಿಯೂ ನಟಿಸುತ್ತಿದ್ದಾರೆ. ಸಂಗೀತ ಭಟ್​ ಬೆದ್ರ ಅವರಿಗೆ ಜೋಡಿಯಾಗಲಿದ್ದಾರೆ. ಬೆದ್ರ ಅವರು ಈ ಹಿಂದೆ ಸಿಂಪಲ್ಲಾಗಿ ಇನ್ನೊಂದು ಲವ್​ ಸ್ಟೋರಿ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಚಿತ್ರದಲ್ಲಿ ಪ್ರತಿಭಾವಂತ ನಟರಿದ್ದಾರೆ. ಹಿರಿಯ ನಟ ಅತುಲ್​ ಕುಲಕರ್ಣಿ, ಲೂಸಿಯಾ ಪವನ್​ ಕುಮಾರ್​, ಬಿ ಸುರೇಶ್​ ತಾರಾಗಣದಲ್ಲಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಮಿಥುನ್​ ಮುಕುಂದ್​ ಚಿತ್ರಕ್ಕೆ ರಾಗ ಸಂಯೋಜಿಸಿದ್ದಾರೆ.
ರಕ್ಷಿತ್​ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದಿನ ದಿನಕ್ಕೂ ಹೆಚ್ಚುತ್ತಿದ್ದು ಇದರ ನಡುವೆ ಹೊಸ ಚಿತ್ರಗಳಿಗೆ ರಕ್ಷಿತ್​ ಪ್ರೋತ್ಸಾಹ ನೀಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಪ್ರಯೋಗಾತ್ಮಕ ನಿರ್ದೇಶಕನಾಗಿರುವ ರಕ್ಷಿತ್​ ಮತ್ತೊಂದು ಪ್ರಯೋಗಾತ್ಮಕ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುವಂತಹದ್ದು.

Spread the love
Leave A Reply

Your email address will not be published.

Flash News