ಶೀಘ್ರವೇ ರಾಜ್ಯಾದ್ಯಂತ ಚಿಟ್ಟೆ ಸಮೀಕ್ಷೆ:ಸಂಜಯ್ ಮೋಹನ್

0

ಬೆಂಗಳೂರು:ವನ್ಯಸಂಪತ್ತಿರುವ ಕರ್ನಾಟಕದಲ್ಲಿ ಸದ್ಯದಲ್ಲೇ ಚಿಟ್ಟೆಗಳ ಸೆನ್ಸಸ್ ಶುರುವಾಗಲಿದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಜ್ಯ ವನ್ಯಜೀವಿ ಮುಖ್ಯ ಪರಿಪಾಲಕ ಸಂಜಯ್ ಮೋಹನ್ ತಿಳಿಸಿದ್ದಾರೆ.

ಬೆಂಗಳೂರಿನ ದೊರೆಸಾನಿಪಾಳ್ಯದ ಸಂಶೋಧನಾ ಕೇಂದ್ರದಲ್ಲಿ ನಡೆದ ಚಿಟ್ಟೆಗಳು ಹಾಗೂ ಕೀಟಗಳ ಹಬ್ಬದಲ್ಲಿ ಮಾತನಾಡಿದ ಅವರು,ಚಿಟ್ಟೆಗಳಲ್ಲಿ ನಮ್ಮ ರಾಜ್ಯ ಅತ್ಯಂತ ಶ್ರೀಮಂತವಾಗಿದೆ. ರಾಜ್ಯದ ಅನೇಕ ಅರಣ್ಯ ಪ್ರದೇಶದಲ್ಲಿ ಯಥೇಚ್ಛವಾಗಿ ವಿವಿಧ ಜಾತಿಯ ಚಿಟ್ಟೆಗಳಿವೆ. ಹೀಗಾಗಿ ಅವುಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು ಹಾಗೂ ಅವುಗಳ ಸಂರಕ್ಷಣೆಗಾಗಿ ತಜ್ಞರು ಹಾಗೂ ವಿಕ್ಞಾನಿಗಳ ಮೂಲಕ ಅವುಗಳ ಗಣತಿಯನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಈಗಾಗಲೇ ಆ ಪ್ರಕ್ರಿಯೆಯಲ್ಲಿ ತೊಡಗಿದ್ದು ಬಹುಶಃ ಇನ್ನೊಂದು ತಿಂಗಳಲ್ಲಿ ಚಿಟ್ಟೆಗಳ ಗಣತಿಯ ಪ್ರಕ್ರಿಯೆ ಶುರುವಾಗಲಿದೆ ಎಂದು ತಿಳಿಸಿದರು.ಈ ಕಾರ್ಯಕ್ಕೆ ತಮ್ಮೆಲ್ಲರ‌ ಸಹಕಾರ ಬೇಕು. ಈ ಹಿಂದೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂಬ ಪಕ್ಷಿಯನ್ನು ಗುರುತಿಸಲಾಗಿದೆ.ಅದೇ ರೀತಿ ಮತ್ತಷ್ಟು ವಿವಿಧ ಜಾತಿಯ ಚಿಟ್ಟೆಗಳನ್ನು ಸಂಶೋಧಿಸಲಾಗುತ್ತದೆ ಎಂದು ಸಂಜಯ್ ಮೋಹನ್ ಅವರು ಹೇಳಿದರು.

ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಬಳಕೆ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಿಲೀಪ್ ಕುಮಾರ್ ದಾಸ್ ಅವರು ಮಾತನಾಡಿ, ರಾಜ್ಯದಲ್ಲೇ 800ಕ್ಕೂ ಅಧಿಕ ಜಾತಿಯ ಚಿಟ್ಟೆಗಳಿದ್ದು ದೇಶದಲ್ಲೇ ಅಧಿಕ‌ ಎಂದು ಸಂತಸ ಹಂಚಿಕೊಂಡರು.

ಇದಕ್ಕೂ ಮುನ್ನ ಚಿಟ್ಟೆ ಹಬ್ಬದಲ್ಲಿ ಪಾಲ್ಗೊಂಡ 7 ಶಾಲೆಗಳ ವಿದ್ಯಾರ್ಥಿಗಳು ಹಾಗೂ ಇತರೆ ಮಂದಿಯನ್ನು ಸೇರಿಸಿ ಸುಮಾರು ಏಳು ಗುಂಪುಗಳಾಗಿ ಮಾಡಿ ಚಿಟ್ಟೆಯ ನಡಿಗೆ ಕೈಗೊಳ್ಳಲಾಯ್ತು. ಈ ವೇಳೆ ಪ್ರತಿ ತಂಡಕ್ಕೂ ವಿವಿಧ ತಜ್ಞರು ಚಿಟ್ಟೆ ಮತ್ತು ಕೀಟ ಪ್ರಪಂಚ ಕುರಿತು ವಿವರ ನೀಡಿದರು.

ಪುಳಕಿತರಾದ ಮಕ್ಕಳು: ಹಬ್ಬದ ಪಾಲ್ಗೊಂಡ ಮಕ್ಕಳಂತೂ ತಮಗೆ ಗೊತ್ತಿಲ್ಲದ ಸಂಗತಿಯನ್ನು ತಿಳಿದು ಪುಳಕಿತರಾದರು. ಬಳಿಕ ಸಂಶೋಧನಾ ಕೇಂದ್ರದ ಪಾರ್ಕ್ ನಲ್ಲಿ ಮುಖ್ಯ ಅತಿಥಿಗಳು ಚಿಟ್ಟೆಗಳ ಹಬ್ಬದ ಅಂಗವಾಗಿ ಸಸಿಗಳನ್ನ ನೆಟ್ಟು, ಬಣ್ಣ ಬಣ್ಣದ ಚಿಟ್ಟೆಗಳನ್ನು ಹಾರಿಬಿಟ್ಟರು. ನಂತರ ಮಕ್ಕಳ ಜೊತೆ ಚಿಟ್ಟೆ ಪ್ರಪಂಚದ ಬಗ್ಗೆ ಸಂವಾದ ನಡೆಸಲಾಯ್ತು. ಜೊತೆಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ಪೇಂಟಿಂಗ್ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯ್ತು.

ಕಾರ್ಯಕ್ರಮದಲ್ಲಿ ಇಲಾಖೆಯ ಅಭಿವೃದ್ಧಿ ವಿಭಾಗದ ಪಿಸಿಸಿಎಫ್ ಅಜಯ್ ಮಿಶ್ರಾ, EWPRT ವಿಭಾಗದ ಪಿಸಿಸಿಎಫ್ ರೀತು ಕಕ್ಕರ್ ಸೇರಿದಂತೆ ಇತರೆ‌ ಐಎಫ್ ಎಸ್ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

#kannadaFlashnews #KannadaNews #Forest #ChiiteKeetaHabba #DoresaaniPaalya #ChitteCensus #SanjayMohan

Spread the love
Leave A Reply

Your email address will not be published.

Flash News