ಬೆಂಗ್ಳೂರ್ ಇತಿಹಾಸದಲ್ಲೇ ಬೃಹತ್ ಸಂಖ್ಯೆಯ ಮರಗಳ ಮಾರಣಹೋಮಕ್ಕೆ ಸ್ಕೆಚ್ ರೆಡಿ..

0

ಬೆಂಗಳೂರು: ಅಭಿವೃದ್ಧಿ ಹಾಗೂ ನಗರೀಕರಣದ ನೆವದಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮದಿಂದ ರಾಜಧಾನಿಯ ಹಸಿರು-ಶುದ್ಧಗಾಳಿಯ ವಾತಾವರಣ ಕಣ್ಮರೆಯಾಗುತ್ತಿದೆ.ಎಷ್ಟೇ ಹೋರಾಟ ನಡೆದ್ರೂ ಆಡಳಿತ ವರ್ಗದ ಹಿತಾಸಕ್ತಿಯಿಂದಾಗಿ ಮರಗಳ ಹನನಕ್ಕೆ ಬ್ರೇಕ್ ಬೀಳ್ತಲೇ ಇಲ್ಲ.ಮೊದ್ಲೇ ಕಾಂಕ್ರೀಟ್ ಕಾಡೆನ್ನುವ ಕುಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರುದ್ರೆ ಆಕ್ಸಿಜನ್ ಸಿಲಿಂಡರ್ ಗಳನ್ನು ಬೆನ್ನಿಗೆ ಕಟ್ಕೊಂಡು ಅಡ್ಡಾಡುವ ಸ್ಥಿತಿ ನಿರ್ಮಾಣವಾಗುತ್ತದೇನೋ..

ಪರಿಸ್ಥಿತಿ ತೀರಾ ಚಿಂತಾಜನಕವಾಗುತ್ತಿರುವಾಗ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಿಂದ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.ಮತ್ತಷ್ಟು ಮರಗಳು ತಮ್ಮ ಜೀವ ಕಳಕೊಳ್ಳೊಕ್ಕೆ ಸಿದ್ಧವಾಗ್ಬೇಕಾದ ಶಾಕಿಂಗ್ ಸುದ್ದಿ ಅದು..ಪರಿಸರವಾದಿಗಳು ಎಷ್ಟೇ ಬೊಬ್ಬೆ ಹೊಡೆದುಕೊಳ್ಳಲಿ,ಕೋರ್ಟ್ ವ್ಯಾಪ್ತಿಯಲ್ಲಿ ಎಷ್ಟೇ ಕಾನೂನಾತ್ಮಕ ಹೋರಾಟ ನಡೆಯುತ್ತಲೇ ಇರಲಿ,ನಾವ್ ಮಾತ್ರ ಫ್ಯೂಚರ್ ಬೆಂಗಳೂರು ನೆವದಲ್ಲಿ ,ಮರಗಳನ್ನು ಕಡಿಯುತ್ತಲೇ ಇರುತ್ತೇವೆ ಎನ್ನುತ್ತಲೇ ಮರಗಳ ಬುಡಕ್ಕೆ ಕೊಡಲಿ ಹಾಕ್ಲಿಕ್ಕೆ ಬಿಬಿಎಂಪಿ ಸ್ಕೆಚ್ ನ್ನು ಈಗಾಗ್ಲೇ ಸಿದ್ಧಪಡಿಸಿಕೊಂಡಿದೆ. 

ಬಹುಷಃ ಈ ಬಾರಿಯ ಬಿಬಿಎಂಪಿಯ ಸ್ಕೆಚ್ ಪಾಲಿಕೆ ಇತಿಹಾಸದಲ್ಲಿ ಅತೀ ದೊಡ್ಡ ಸಂಖ್ಯೆಯ ಮರಗಳ ಮಾರಣ ಹೋಮ ಎನ್ನುವ ಕುಖ್ಯಾತಿ ಪಡೆದುಕೊಂಡಿದೆ.ಏಕೆಂದ್ರೆ ಈ ಬಾರಿ ವಿವಿಧ ಕಾರ್ಯೋದ್ದೇಶಗಳಿಗೆ ಬಲಿಯಾಗಲಿರುವ ಮರಗಳ ಸಂಖ್ಯೆಯನ್ನು 4 ಸಾವಿರ ಎಂದು ಅಂದಾಜಿಸಲಾಗಿದೆ.ಅಂದ್ರೆ ಬೆಂಗಳೂರಿನ ಆಕ್ಸಿಜನ್ ಪ್ರಮಾಣದಲ್ಲಿ ಶೇಕಡಾ 5 ರಿಂದ 10 ರಷ್ಟು ಪ್ರಮಾಣವನ್ನು ನಾವ್ ಕಳೆದುಕೊಂಡಂತಾಯಿತು.

ಬೆಂಗಳೂರು ನಗರ ಹಾಗೂ ಹೊರ ವಲಯದ ಸುತ್ತ ಮುತ್ತ ನಮ್ಮೆ ಮೆಟ್ರೋ ಕಾಮಗಾರಿ, ರಸ್ತೆ ಅಗಲೀಕರಣ, ನೈಸ್ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ  4 ಸಾವಿರ  ಮರಗಳನ್ನು ಕಟಾವು ಮಾಡಲೇಬೇಕಿದೆಯಂತೆ.ಹಾಗೊಂದು ವರದಿ ನೀಡಿದೆ. ರಾಜ್ಯ ಸರ್ಕಾರದ ಟ್ರೀ ಎಕ್ಸ್ ಫರ್ಟ್ ಕಮಿಟಿ. ಬೆಂಗಳೂರಿನ ಸಮಗ್ರ ಅಭಿವೃದ್ದಿ ಹಿನ್ನಲೆಯಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳ  ಪರಿಶೀಲನೆ ಕೈಗೊಂಡಿರುವ ಕಮಿಟಿ ಮರಗಳ ಕಟಾವಿಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ವೀಕ್ಷಣೆಯನ್ನೂ ನಡೆಸಿ ಸರ್ಕಾರಕ್ಕೆ ಅಂತಿಮವಾಗಿ ಇಂತದ್ದೊಂದು ಪರಿಸರವಿರೋಧಿ ರಿಪೋರ್ಟ್ ನೀಡಿದೆ.

ಇನ್ನು ಎಲ್ಲೆಲ್ಲಿ ಮರಗಳ ಮಾರಣ ಹೋಮಕ್ಕೆ ಸ್ಕೆಚ್ ರೆಡಿ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ನೋಡೋದಾದ್ರೆ, ಕಗ್ಗಲಿಪುರ ವ್ಯಾಪ್ತಿಯಲ್ಲಿ ‌ನಮ್ಮ ಮೇಟ್ರೋ ಕಾಮಗಾರಿಗೆ 115 ಮರಗಳ ಕಟಾವು ಮಾಡಲು ನಿರ್ಧರಿಸಲಾಗಿದೆ. ಮೆಟ್ರೋ ಕಾಮಗಾರಿ ನಡೆಯಲಿರುವ ಕಾಡುಗೋಡಿ, ಅನೇ ಕಲ್, ಯಲಹಂಕ, ಕೆ.ಅರ್ .ಪುರಂ ಮಾಗಡಿ ರಸ್ತೆ ಗಳಲ್ಲಿ ಮರಗಳ ಕಟಾವಿಗೆ ಸ್ಕೇಚ್ ಹಾಕಲಾಗಿದೆ.

ಇನ್ನು ಇದೇ  ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿರುವ  ರಸ್ತೆ ಅಗಲೀಕರಣಕ್ಕಾಗಿ  377 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ. ಮಾಗಡಿ ರಸ್ತೆಯಿಂದ – ನೈಸ್ ರಸ್ತೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕಾಗಿ ಧರಾಶಹಿಗೊಳ್ಳಲಿರುವ ಮರಗಳು ಬರೋಬ್ಬರಿ  1822.ಇನ್ನು ಕಾಡುಗೋಡಿ – ಕೆ.ಅರ್.ಪುರಂ ವರೆಗಿನ ನಮ್ಮ ಮೆಟ್ರೋ ಕಾಮಗಾರಿಗಾಗಿ  129 ಮರಗಳ‌ ಕಟಾವಿಗೆ ಸರ್ವೆ ಮಾಡಲಾಗಿದೆ.ಅನೇಕಲ್‌,ಯಲಹಂಕ,‌ಕೆ.ಅರ್.ಪುರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ  1116 ಮರಗಳನ್ನು ಕಡಿದುರುಳಿಸಲೇಬೇಕೆಂದು ಕಮಿಟಿ ರಿಪೋರ್ಟ್ ನೀಡಿದೆ.

ಹಾಗೆಯೇ ಪಾಲಿಕೆ ವ್ಯಾಪ್ತಿಯಲ್ಲೇ ವಿವಿಧ ಕಾಮಗಾರಿಗಳ ಉದ್ದೇಶಕ್ಕೆ  600ಕ್ಕೂ ಹೆಚ್ಚು ಮರಗಳ ಮಾರಣ ಹೋಮ ಕ್ಕೆ ಸದ್ದಿಲ್ಲದೆ ಸಿದ್ದತೆ ಮಾಡಿಕೊಳ್ಳಲಾಗ್ತಿದೆ.ಇದಕ್ಕೆ ಸರ್ಕಾರ ಒಪ್ಪಿಗೆ ಮಾತ್ರ ಬಾಕಿ ಇದ್ದು,ಸರ್ಕಾರ ಕೂಡ ಅಭಿವೃದ್ದಿ ನೆವದಲ್ಲಿ ಮರಗಳ ಮಾರಣ ಹೋಮಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ.ಈ ನಡುವೆ ನಮ್ಮದೂ ಒಂದು ಪ್ರಯತ್ನ ಇರಲಿ ಎಂದು ಪರಿಸರವಾದಿಗಳು ಕಾನೂನಾತ್ಮಕ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

 

ಬೆಂಗಳೂರಿನಲ್ಲಿ ಮಾರಣ ಹೋಮಕ್ಕೆ ಸಿದ್ಧವಾಗಿರುವ ಮರಗಳ ಸಂಖ್ಯೆ ಹಾಗೂ ಅದಕ್ಕೆ ಕಾರಣವಾಗಿರುವ ಯೋಜನೆಗಳ ವಿವರ ಕೆಳಕಂಡಂತಿದೆ.

ಮರಗಳು ಧರಾಶಹಿಗೊಳ್ಳಲಿರುವ ಪ್ರದೇಶ ವ್ಯಾಪ್ತಿ                      ಯೋಜನೆ ಉದ್ದೇಶ                               ಕೊಡಲಿಪೆಟ್ಟಿಗೆ ಸಿದ್ಧವಾಗಬೇಕಿರುವ ಮರ

 ಕಗ್ಗಲಿಪುರ                                                                               ನಮ್ಮ ಮೇಟ್ರೋ ಕಾಮಗಾರಿ                                   -115 ಮರ

ಕಗ್ಗಲಿಪುರ, ಕಾಡುಗೋಡಿ, ಅನೇ ಕಲ್, ಯಲಹಂಕ,                          ರಸ್ತೆ ಅಗಲೀಕರಣ                                                 -377 ಮರ

ಕೆ.ಅರ್ .ಪುರಂ ಮಾಗಡಿ ರಸ್ತೆ  

ಮಾಗಡಿ ರಸ್ತೆ ನೈಸ್ ರಸ್ತೆ                                                               ಸಂಪರ್ಕ ರಸ್ತೆ ನಿರ್ಮಾಣ                                      1822 ಮರ

ಕಾಡುಗೋಡಿ – ಕೆ.ಅರ್.ಪುರಂ                                                         ನಮ್ಮ ಮೆಟ್ರೋ ಕಾಮಗಾರಿ                                    129 ಮರ

ಅನೇಕಲ್‌,ಯಲಹಂಕ,‌ಕೆ.ಅರ್.ಪುರ                                               ರಸ್ತೆ ಅಗಲೀಕರಣ                                                    1116 ಮರ

ಬಿಬಿಎಂಪಿ ವ್ಯಾಪ್ತಿ                                                                         ವಿವಿಧ ಅಭಿವೃದ್ಧಿ ಕಾಮಗಾರಿ                                     600 ಮರ

Spread the love
Leave A Reply

Your email address will not be published.

Flash News