ಶತಮಾನದ ಸಂತ- ಮಹಾ ಮಾನವತಾವಾದಿ “ಕೃಷ್ಣೈಕ್ಯ”

0

ಉಡುಪಿ:ಶತಮಾನದ ಸಂತ..ಧಾರ್ಮಿಕ ಚೌಕಟ್ಟಿನಲ್ಲಿ ವೈಚಾರಿಕತೆಯ ಪ್ರತಿಪಾದಕ,ಹಲವು ಸಮಾನತೆಯ ವಿಚಾರಗಳನ್ನು ಮಠ ಪರಂಪರೆಯಲ್ಲಿ ಅಳವಡಿಸಿ ಅನುಷ್ಠಾನಕ್ಕೆ ತಂದ ಕ್ರಾಂತಿಕಾರಿ..ಹೀಗೆ ಹಲವು ಖ್ಯಾತಿಗಳನ್ನು ಪಡೆದಿದ್ದ ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀ ಇನ್ನಿಲ್ಲ.
ಅವರಿಗೆ 89 ವರ್ಷ ವಯಸ್ಸಾಗಿತ್ತು.ಧೀರ್ಘ ಕಾಲದ ಅನಾರೋಗ್ಯದಿಂದ ಬಳಲ್ತಿದ್ದ ಶ್ರೀಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರ ಅಗಲಿಕೆಗೆ ವಿಶ್ವಾದ್ಯಂತ ಇರುವ ಅಪಾರ ಭಕ್ತಗಣ ಶೋಕ-ಸಂತಾಪ-ದಿಗ್ಭ್ರಾಂತಿ ವ್ಯಕ್ತಪಡಿಸಿದೆ.

ಉಡುಪಿ ಅಷ್ಠಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಮುಖ್ಯಸ್ಥರಾಗಿ ಹಲವು ದಶಕಗಳ ಕಾಲ ಮಠ ಪರಂಪರೆಯನ್ನು ಮುನ್ನಡೆಸಿ ಪ್ರೇರಕ-ಚಾಲನ ಶಕ್ತಿಯಾಗಿದ್ದ ಶ್ರೀಗಳ ಅಗಲಿಕೆಯಿಂದ ಮಠ ಹಾಗೂ ಭಕ್ತರಲ್ಲಿ ಶೂನ್ಯ ಆವರಿಸಿದೆ.ಕೇವಲ ಮಠ ಪರಂಪರೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಅದರಾಚೆಗೂ ಅದನ್ನು ಉಳಿಸಿ ಬೆಳೆಸಿದ ವಿಶ್ವೇಶ್ವ ತೀರ್ಥರು ಹಿರಿಯ ವಿದ್ವಾಂಸರಷ್ಟೇ ಆಗಿರದೆ ಸಾಮಾಜಿಕ ಸೇವಾ ಕಳಕಳಿಯ ಮನೋಭಾವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ವೆಂಕಟರಮಣ ಇದು ಶ್ರೀ ಶ್ರೀ ವಿಶ್ವೇಶ ತೀರ್ಥರ ಪೂರ್ವಾಶ್ರಮದ ಹೆಸರು.ಅಂದ್ಹಾಗೆ ಅವರು ಹುಟ್ಟಿದ್ದು ಏಪ್ರಿಲ್ ೨೭, ೧೯೩೧ರಲ್ಲಿ. ಉಡುಪಿಯಿಂದ ೧೨೦ ಕಿ.ಮೀ ದೂರದಲ್ಲಿರುವ ಸುಬ್ರಮಣ್ಯದ ಸಮೀಪದ ಹಳ್ಳಿ ರಾಮಕುಂಜ ಅವರ ಹುಟ್ಟೂರು.ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ ಎನ್ನುವ ಪವಿತ್ರ ಸ್ಥಳ ಎನ್ನುವ ಖ್ಯಾತಿ ರಾಮಕುಂಜಕ್ಕಿದೆ.ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ ದಂಪತಿಯ ಎರಡನೇ ಗಂಡುಮಗುವೇ ವೆಂಕಟರಮಣ.ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣ ಹುಟ್ಟಿದರೆನ್ನುವ ಮಾತುಗಳಿವೆ.

ವಿದ್ಯಾಭ್ಯಾಸ:ವೆಂಕಟರಮಣರ ಪ್ರಾಥಮಿಕ ವಿದ್ಯಾಭ್ಯಾಸ ರಾಮಕುಂಜದ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಾಯ್ತು.ಏಳನೆ ವರ್ಷದಲ್ಲಿ ಗಾಯತ್ರಿ ಮಂತ್ರ ಉಪದೇಶವಾಯ್ತು. ಉಪನಯನವೇ ಆಗದ ಆರು ವರ್ಷ ವಯಸ್ಸಿನಲ್ಲಿ ಪೋಷಕರು ಮಗನನ್ನು ಉಡುಪಿಗೆ ಕರೆ ತಂದರು.ಆಗ ಪೇಜಾವರ ಮಠದಲ್ಲಿ ನಡೆಯುತ್ತಿದ್ದ ಪರ್ಯಾಯದಿಂದ ಪ್ರಭಾವಿತನಾದ ವೆಂಕಟರಮಣ ಅಂದೇ ಕೃಷ್ಣ ಭಕ್ತನಾಗುವ ಸಂಕಲ್ಪ ಮಾಡಿಬಿಟ್ಟ.

ಈ ಆಸಕ್ತಿಯನ್ನು ಗಮನಿಸಿದ ಹಿರಿಯ ಶ್ರೀಗಳು ಆ ಕ್ಷಣ ನೀನು ನನ್ನಂತೆಯೇ ಸ್ವಾಮಿ ಆಗುತ್ತಿಯ ಎಂದು ಕೇಳಿಬಿಟ್ರಂತೆ.ಮಗು ಕೂಡ ಒಂದ್ ಕ್ಷಣ ಆಲೋಚಿಸದೆ ಹ್ಞೂಂ ಅಂದ್ಬಿಟ್ಟ.ಆಮೇಲೆ ವೆಂಕಟರಮಣನ ಬದುಕಿನಲ್ಲಿ ನಡೆದದ್ದು ಮಹಾಪವಾಡ.ಪರ್ಯಾಯ ಮುಗಿದು,ಪೇಜಾವರ ಮಠಾಧೀಶರು ಸಂಚಾರಕ್ಕೆ ಹೊರಟು ಹಂಪೆ ತಲುಪಿದರು.ಅಲ್ಲಿಗೇ ವೆಂಕಟರಮಣನನ್ನು ಕರೆಸಿಕೊಂಡು ದೀಕ್ಷೆ ನೀಡಿಯೇ ಬಿಟ್ಟರು.

ಅವತ್ತು 1938,ಡಿಸೆಂಬರ್ 3.ಅದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ.ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ರಾಮಕುಂಜದ 7ರ ಹರೆಯದ ಮುಗ್ಧ ಬಾಲಕ ವೆಂಕಟರಮಣ,ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ್ರು.ಅಷ್ಟು ದಿನದ ವೆಂಕಟರಮಣ ಆ ಕ್ಷಣದಿಂದ್ಲೇ ‘ವಿಶ್ವೇಶ ತೀರ್ಥ’ರಾದರು.

ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು. ಮಠ ಪರಂಪರೆಯನ್ನು ತಮ್ಮ ಬದುಕಿನುದ್ದಕ್ಕೂ ಅನೇಕ ಕ್ರಾಂತಿಕಾರಿ ವಿಚಾರಗಳಿಗೆ ವೇದಿಕೆ ಮಾಡಿಕೊಂಡ ಪೇಜಾವರ ಶ್ರೀಗಳ ಮನಸಲ್ಲಿ ಸದಾ ಮಾನವೀಯತೆಯೊಂದು ತಾಯಿಜೀವದಂತೆ ಪುಟಿದೇಳುತ್ತಿತ್ತು.ಮಹಾತ್ಮ ಗಾಂಧೀಜಿಯ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರು, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ಮೂಲಕ ದೊಡ್ಡ ಸುದ್ದಿಯಾದ್ರು.ಹಾಗೆಯೇ ಇತರೆ ಮಠಪರಂಪರೆಗಳವ್ರ ಕೆಂಗಣ್ಣಿಗೂ ಗುರಿಯಾದ್ರು.

ಹಾಗೆಯೇ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿ ರದ್ದುಗೊಳಿಸಿದರು. ಎಲ್ಲರಂತೆ ಪಂಕ್ತಿಯಲ್ಲೇ ಉಂಡರು.ಜಾತಿ ವ್ಯವಸ್ಥೆ ಬಗ್ಗೆ ಅವರ ವಿಚಾರಧಾರೆ ಕ್ರಾಂತಿಯ ಕಿಡಿಯನ್ನೇ ಹಚ್ಚಿಸಿತು. ಜಾತಿಯನ್ನು ನಿರ್ಧರಿಸುವುದು ಸಾಮಾಜಿಕ ಪದ್ಧತಿ ಮಾತ್ರ.ಅದಕ್ಕೆ ಅಧ್ಯಾತ್ಮದಲ್ಲಿ ಮಾನ್ಯತೆ ಇಲ್ಲ.ಶೂದ್ರನ ಮಗ ಸ್ವಭಾವದಲ್ಲಿಯೂ ಬ್ರಾಹ್ಮಣನಿರಬಹುದು.ಹಾಗೆಯೇ ಬ್ರಾಹ್ಮಣನ ಮಗ ಸ್ವಭಾವದಲ್ಲಿ ಶೂದ್ರನೂ ಇರಬಹುದು ಎಂಬ ವಿಚಾರಧಾರೆ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತು.

ಜಾತಿ ವ್ಯವಸ್ಥೆಯನ್ನು ಬಲವಾಗಿ ಖಂಡಿಸಿದ ಪೇಜಾವರ ಶ್ರೀಗಳು ದಲಿತರ ಕೇರಿಗಳನ್ನು 40 ವರ್ಷಗಳ ಹಿಂದೆಯೇ ಪ್ರವೇಶಿಸುವ ಕ್ರಾಂತಿಯ ಕೆಲಸವನ್ನು ಮಾಡಿದ್ರು.ಇದಕ್ಕೆ ಮನ್ನಣೆ-ಮಾನ್ಯತೆ ಸಿಗದಿದ್ದಾಗ ನೊಂದುಕೊಂಡ ಅವರು ಒಂದ್ ಹಂತದಲ್ಲಿ ಪೀಠ ತ್ಯಾಗ ಮಾಡಿ ಸನ್ಯಾಸಿಯಾಗಿರೋ ನಿರ್ಧಾರಕ್ಕೂ ಬಂದಿದ್ರಂತೆ.ಅವರ ಜಾತ್ಯಾತೀತ ಮನಸ್ಥಿತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದು ಬೇಕಾ.. ಮೂರನೆಯ ಪರ್ಯಾಯದ ಅವಧಿಯಲ್ಲಿ ರಂಜಾನ್ ಆಚರಣೆಯನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಿ,ಸರ್ವಧರ್ಮ ಸಮಭಾವಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದು ಕಡ್ಮೆ ಸಾಧನೆಯೇನಲ್ಲ.

ಇದಿಷ್ಟೇ ಅಲ್ಲ, ಆಂಧ್ರದ ಚಂಡಮಾರುತಕ್ಕೆ ಬಲಿಯಾಗಿ ಮನೆ ಸೂರು ಕಳೆದುಕೊಂಡು ಬೀದಿಪಾಲಾದ ಹಂಸಲದೀವಿ ಜನರಿಗೆ ಮಠದ ಕಡೆಯಿಂದ 150 ಮನೆ ಕಟ್ಟಿಸಿದ್ರು.ಹಾಗೆಯೇ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಸಾವಿರಾರು ಮಂದಿ ಬೀದಿ ಪಾಲಾದಾಗ ಆಗಲೂ ಪೇಜಾವರ ಶ್ರೀ ಅವರ ಕಷ್ಟಕ್ಕೆ ಸ್ಪಂದಿ ಸಿದ್ರು.ಸಾಯೋ ಕ್ಷಣದವರೆಗೂ ಸಮಾಜಕ್ಕಾಗಿ ಅದರ ಶ್ರೇಯೋಭಿವೃದ್ದಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಪೇಜಾವರ ಶ್ರೀ ಇನ್ನಿಲ್ಲ ಎನ್ನು ವುದೇ ಅರಗಿಸಿಕೊಳ್ಳಲಿಕ್ಕಾಗದ ಸತ್ಯ..ಇಹ ಲೋಕ ತ್ಯಜಿಸಿದ ಪೇಜಾವರ ಶ್ರೀಗಳ ಅಗಲಿಕೆಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ತೀವ್ರ ಶೋಕ ಹಾಗೂ ಸಂತಾಪ ಸೂಚಿಸುತ್ತೆ. 

Spread the love
Leave A Reply

Your email address will not be published.

Flash News