“ಅವರೆ”ಮೇಳಕ್ಕೆ ನೋ ಪರ್ಮಿಷನ್ ಎಂದ ಕಮಿಷನರ್- ಗುಡುಗಿದ ಮೇಯರ್ -ಭಿನ್ನಮತ ಸ್ಪೋಟ!

0

ಬೆಂಗಳೂರು:ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಕಮಿಷನರ್ ಅನಿಲ್ ಕುಮಾರ್ ನಡುವೆ ಮುಸುಕಿನ ಗುದ್ದಾಟಕ್ಕೆ ಮತ್ತೊಂದು ವೇದಿಕೆ ಸಿಕ್ಕಿದೆ.ರಾಜಧಾನಿಯ ಸಜ್ಜನ್ ರಾವ್ ಸರ್ಕಲ್ ನಲ್ಲಿ ಪ್ರತಿ ವರ್ಷ ನಡೆಯುವ  ಇತಿಹಾಸ ಪ್ರಸಿದ್ಧ ಅವರೆ ಮೇಳಕ್ಕೆ ಈ ಬಾರಿ ಅನುಮತಿಯನ್ನು ಕಮಿಷನರ್ ಅನಿಲ್ ಕುಮಾರ್ ನಿರಾಕರಿಸಿದ್ದಾರೆ.ಅದ್ಹೇಗೆ ಪರ್ಮಿಷನ್ ಕೊಡಲ್ವೋ ನಾವೂ ನೋಡ್ತೇವೆ ಎಂದು ಮೇಯರ್ ಗೌತಮ್ ಕುಮಾರ್ ತೊಡೆ ತಟ್ಟಿದ್ದಾರೆ.

ಬೆಗಳೂರಿನ ಪ್ರಸಿದ್ಧ ಅವರೆಮೇಳ(ಸಂಗ್ರಹ ಚಿತ್ರ)
ಬೆಂಗಳೂರಿನ ಪ್ರಸಿದ್ಧ ಅವರೆಮೇಳ(ಸಂಗ್ರಹ ಚಿತ್ರ)
ಅವರೆಮೇಳ ಎಂದ್ರೆ ಅವರೆಯ ಬ್ರಹ್ಮಾಂಡ ದರ್ಶನ (ಸಂಗ್ರಹ ಚಿತ್ರ)
     ಅವರೆಮೇಳ ಎಂದ್ರೆ ಅವರೆಯ ಬ್ರಹ್ಮಾಂಡ ದರ್ಶನ  

ಅವರೆ ಮೇಳ ಪ್ರತಿ ವರ್ಷ ಜನವರಿ ತಿಂಗಳಾಂತ್ಯದಲ್ಲಿ ನಡೆಯುವ ಪ್ರಸಿದ್ಧ ಮೇಳ.ಅವರೆಯ ಬ್ರಹ್ಮಾಂಡ ಅನಾವರಣಗೊಳ್ಳುವ ಸಮಯ ಅದು. ಅವರೆಕಾಳನ್ನು ಬೆಳೆದ ರೈತರು ಇಲ್ಲಿಗೆ ಬಂದು ಪಾಲ್ಗೊಳ್ಳುವ ಮೂಲಕ ವ್ಯಾಪಾರ ಮಾಡ್ಕೊಂಡು ಒಂದಷ್ಟು ಹಣವನ್ನು ನೋಡ್ಲಿಕ್ಕೆ ಸಾಧ್ಯವಾಗುವಂಥ ಮೇಳ.ಅದಿಷ್ಟೇ ಅಲ್ಲ,ರಾಜಧಾನಿಯ ನಾನಾ ಕಡೆಗಳಿಂದ ಬರುವ ಜನ ಅವರೆ ಕಾಳನ್ನು ಕಡಿಮೆ ಬೆಲೆಯಲ್ಲಿ ಕೊಳ್ಳೋದ್ರ ಜತೆಗೆ ಅವರೆಕಾಳಿನಿಂದ ತಯಾರಿಸುವ ವಿವಿಧ ಭಕ್ಷ್ಯಗಳನ್ನು ಸವಿಯೊಕ್ಕೆ ಸಿಗುವ ಒಂದೇ ಒಂದು ಸಂದರ್ಭವೂ ಹೌದು.

ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್ ನಲ್ಲಿ ವಾರದವರೆಗೆ ನಡೆಯುವ ಅವರೆ ಮೇಳದ ವಹಿವಾಟೇ ದಿನಕ್ಕೆ ಕೋಟಿಗಳಷ್ಟು ಎಂದರೆ ಈ ಮೇಳದ ಪಾಪ್ಯುಲಾರಿಟಿಯನ್ನು ಅರ್ಥ ಮಾಡಿಕೊಳ್ಳಬಹುದು.ಆದ್ರೆ ಈ ಬಾರಿ ಅವರೆ ಮೇಳಕ್ಕೆ ಯಾವ್ದೇ ಕಾರಣಕ್ಕೂ ಪರ್ಮಿಷನ್ ಕೊಡೊಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.ಆದ್ರೆ ರೈತರು ಹಾಗೂ ಗ್ರಾಹಕರ ನಡುವೆ ಒಂದು ಬಾಂಧವ್ಯವನ್ನು ಮೂಡಿಸಿರುವ ಮೇಳಕ್ಕೆ ಅಡ್ಡ ಬಂದ್ರೆ ಸರಿಯಿರೊಲ್ಲ ಎಂದು ಮೇಯರ್ ಗೌತಮ್ ಹರಿಹಾಯ್ದಿದ್ದಾರೆನ್ನಲಾಗಿದೆ.

ಪರ್ಮಿಷನ್ ಯಾಕ್ ಕೊಡೊಲ್ಲ:ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಮಾತ್ನಾಡಿದ ಕಮಿಷನರ್ ಅನಿಲ್ ಕುಮಾರ್,ಅವರೆ ಮೇಳಕ್ಕೆ ಅನುಮತಿ ನಿರಾಕರಿಸ್ಲಿಕ್ಕೆ ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ.ಅವರೆ ಮೇಳ ಸರ್ಕಾರದ ಯಾವುದೇ ಏಜೆನ್ಸಿ ಆಯೋಜಿಸುವಂಥ ಮೇಳ ಅಲ್ಲ.ವಾಸವಿ ಕಾಂಡಿಮೆಂಟ್ಸ್  ಎನ್ನುವ ಖಾಸಗಿ ಸಂಸ್ಥೆಯವ್ರು ಆಯೋಜಿಸುವ ಮೇಳ.ಇದರಿಂದ ಅವರಿಗೆ ಮಾತ್ರ ಲಾಭವಾಗ್ತದೆಯೇ ಹೊರತು,ಬಿಬಿಎಂಪಿಗಾಗ್ಲಿ,ಜನರಿಗಾಗ್ಲಿ ಲಾಭವಿಲ್ಲ.ವಾರದವರೆಗೆ ಅವರೆ ಮೇಳ ನಡೆಸಿ ಹಣವನ್ನು ಮಾಡಿಕೊಳ್ಳುವ ವಾಸವಿ ಕಾಂಡಿಮೆಂಟ್ಸ್ ನವರ ಲಾಭಕ್ಕೇಕೆ ವಾರದವರೆಗೂ ಮೇಳಕ್ಕೆ ಅವಕಾಶ ಕೊಡ್ಬೇಕು.ಅದಲ್ದೇ ಅವರ ಲಾಭಕ್ಕೆ ಒಂದಿಡೀ ವಾರ ಸಜ್ಜನ್ ರಾವ್ ಸರ್ಕಲ್ ಪ್ರವೇಶಿಸ್ಲಿಕ್ಕಾಗದಷ್ಟು ಜನ-ವಾಹನ ದಟ್ಟಣೆಗೆ ಅವಕಾಶವನ್ನೇಕೆ ಮಾಡಿಕೊಡ್ಬೇಕು.ಆ ಟ್ರಾಫಿಕ್ಕು-ಆ ಧೂಳು-ಆ ಕಸ-ಆ ಪೊಲೀಸ್ ಬಂದೋಬಸ್ತ್-ಸುರಕ್ಷತೆ-ಭದ್ರತೆಗೆ ವ್ಯಾಪಕ ಖರ್ಚು,ಇದೆಲ್ಲಾ ನಿಜಕ್ಕೂ ಅವಶ್ಯಕತೆ ಇದೆಯಾ..ಇದನ್ನೆಲ್ಲಾ ಮನಗಂಡೇ ಅವರೆ ಮೇಳಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಒಂದ್ ಕಾರಣವಾದ್ರೆ,ವ್ಯಕ್ತಿಗತ ಲಾಭಕ್ಕೆ ವೇದಿಕೆ ಮಾಡಿಕೊಡ್ತಿರುವ ಅವರೆ ಮೇಳಕ್ಕೆ ಯಾವ್ದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದೆನ್ನುವ ಮನವಿಯನ್ನು ಆ ಭಾಗದ ಶಾಸಕ(ಚಿಕ್ಕಪೇಟೆ ಶಾಸಕ,ಉದಯ ಗರುಡಾಚಾರ್ ),ಸ್ಥಳೀಯ ವಾರ್ಡ್ ಕಾರ್ಪೊರೇಟರ್,ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳು ಮಾಡಿದ್ದಾವೆ.ಅವು ಕೊಡ್ತಿರುವ ರೀಸನ್ನು ಕೂಡ ಇದೇ.ಹಾಗಾಗಿ ಇದೆಲ್ಲವನ್ನು ಕ್ರೋಢೀಕರಿಸಿಯೇ ಅವರೆ ಮೇಳ ಆಯೋಜನೆಗೆ ಅನುಮತಿ  ನಿರಾಕರಿಸಲಾಗಿದೆ ಎಂದು ಕನ್ನಡ ಪ್ಲ್ಯಾಶ್  ನ್ಯೂಸ್ ಗೆ ತಿಳಿಸಿದ್ದಾರೆ.

ಕಮಿಷನರ್ ಧೋರಣೆಗೆ  ಡಿಸಿಎಂ-ಮೇಯರ್ ಗರಂ:ಆದರೆ ಕಮಿಷನರ್ ಅನಿಲ್ ಕುಮಾರ್ ಧೋರಣೆಗೆ ಮೇಯರ್ ಗೌತಮ್ ಕುಮಾರ್ ಸಖತ್ ಗರಂ ಆಗಿದ್ದಾರೆ.ಮೊದ್ಲೇ ಬಿಬಿಎಂಪಿ ಆಡಳಿತ ನಡೆಸ್ಲಿಕ್ಕೆ ಸಹಕಾರ ನೀಡದೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕಮಿಷನರ್ ಅನಿಲ್ ಕುಮಾರ್ ಬಗ್ಗೆ ತುಂಬಾ ಬೇಸರಗೊಂಡಿರುವ ಮೇಯರ್ ಗೌತಮ್ ಕುಮಾರ್ ಅವ್ರು ಅವರೆ ಮೇಳದ ಸಂಗತಿಗೆ ಮತ್ತಷ್ಟು ಉರಿದು ಹೋಗಿದ್ದಾರೆ.ಇತಿಹಾಸ ಪ್ರಸಿದ್ಧ ಮೇಳಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿರುವಾಗ ಅನುಮತಿ ನಿರಾಕರಿಸಿದ್ದೇಗೆ.ಯಾರ ಅಭಿಪ್ರಾಯ ಕೇಳಿ ಇಂಥ ನಿರ್ಧಾರ ಕೈಗೊಂಡ್ರಿ.ಇಂಥ ದೊಡ್ಡ ನಿರ್ದಾರ ತೆಗೆದುಕೊಳ್ಳುತ್ತಿರುವುದರ ಬಗ್ಗೆ ನಾನೂ ಸೇರಿದಂತೆ ಇದರ ಬಗ್ಗೆ ಹೆಚ್ಚು ಉತ್ಸುಕರಾಗಿರುವ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರನ್ನು ಸಂಪರ್ಕಿಸುವ ಕೆಲಸವನ್ನೇನಾದ್ರೂ ಮಾಡಿದ್ರಾ ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಮೂಲಕ ಪ್ರಶ್ನಿಸಿದ್ದಾರೆ.

ದಶಕಗಳ ಕಾಲ ನಡೆಸುತ್ತಿರುವ ಇಂಥ ಒಂದು ಮೇಳಕ್ಕೆ ಅವಕಾಶ ನಿರಾಕರಿಸುತ್ತಿರುವ ಬಗ್ಗೆ ಕಮಿಷನರ್ ತೆಗೆದುಕೊಂಡಿರುವ ನಿರ್ದಾರವೇನೋ ಸರಿಯಿಲ್ಲ.ಇದರಿಂದ ತನಗಷ್ಟೇ ಅಲ್ಲ,ಡಿಸಿಎಂ ಅಶ್ವತ್ಥನಾರಾಯಣ ಅವರಿಗೂ ಬೇಸರವಾಗಿದೆ.ವೈಯುಕ್ತಿಕವಾಗಿ ನಡೆಯುತ್ತಿರುವ ಮೇಳವನ್ನು ಹೇಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ರೂಪಿಸಿ ಅದರ ಮೂಲಕ ಬಿಬಿಎಂಪಿಗೆ ಆದಾಯ ಬರುತ್ತೆನ್ನುವ ಬಗ್ಗೆ  ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು.ಆದ್ರೆ ಏಕಾಏಕಿ ತಮಗಿಷ್ಟ ಬಂದ ರೀತಿಯಲ್ಲಿ ನಿರ್ದಾರ ತೆಗೆದುಕೊಳ್ಳುವುದೇನೋ ಸರಿ ಎನಿಸುವುದಿಲ್ಲ.

ಐಎಎಸ್ ಅಧಿಕಾರಿಗಳೇನೋ ಇಂಥ ನಿರ್ದಾರ ತೆಗೆದುಕೊಂಡ್ ಹೋಗಿಬಿಡ್ತಾರೆ.ಆದ್ರೆ ಇಲ್ಲಿ ಉತ್ತರ ಕೊಡಬೇಕಾದವ್ರು ನಾವು.ಅವರೆ ಮೇಳ ಕ್ಯಾನ್ಸಲ್ ಮಾಡುವ ತೀರ್ಮಾನದಿಂದ ಬಿಬಿಎಂಪಿ ಬಗ್ಗೆ ಜನರಿಗೆ ಆಕ್ರೋಶ ಮೂಡುವುದಿಲ್ಲವೇ,ಇದನ್ನೆಲ್ಲಾ ಅನಿಲ್ ಕುಮಾರ್ ಆಲೋಚಿಸಬಹುದಿತ್ತೇನೋ ಎಂದು ಮೇಯರ್ ಗೌತಮ್ ತಮ್ಮ ಬೇಸರ ತೋಡಿಕೊಂಡಿದ್ದಾಎ.ಅಷ್ಟೇ ಅಲ್ಲ, ಈ ಬಗ್ಗೆ ಡಿಸಿಎಂ ಜತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.ಅದಷ್ಟೇ ಅಲ್ಲ,ಕಮಿಷನರ್ ತೆಗೆದುಕೊಳ್ಳುತ್ತಿರುವ ನಿರ್ದಾರಗಳಿಂದ ಹಳಿ ತಪ್ಪುತ್ತಿರುವ ಸಮನ್ವಯ-ನನೆಗುದಿಗೆ ಬೀಳುತ್ತಿರುವ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಮೇಯರ್ ಹಾಗೂ ಕಮಿಷನರ್ ನಡುವೆ ಹೊಗೆಯಾಡುತ್ತಿದ್ದ ಭಿನ್ನಮತ-ಅಸಮಾಧಾನ ಅವರೆ ಮೇಳ ಅನುಮತಿ ವಿಚಾರದಲ್ಲಿ ದೊಡ್ಡ ಮಟ್ಟದ ಲಾವಾಗ್ನಿಯಾಗಿ ಸ್ಪೋಟಗೊಳ್ಳುವ ಸಾಧ್ಯತೆ ಸೃಷ್ಟಿಯಾಗಿದೆ.ಜೋಡೆತ್ತುಗಳೆಂದೇ ಕರೆಯಿಸಿಕೊಂಡಿದ್ದ ಮೇಯರ್ ಹಾಗೂ ಕಮಿಷನರ್ ತಮ್ಮದೇ ಹಾದಿಯನ್ನು ತುಳಿಯೊಕ್ಕೆ ಮುಂದಾಗ್ತಿದ್ದಾರೆ.ಆದ್ರೆ ಇದು ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದಲಂತೂ ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ.

Spread the love
Leave A Reply

Your email address will not be published.

Flash News