ಸಾವಿನ ಕೂಪವಾಗುತ್ತಿದೆ ಪರಪ್ಪನ ಅಗ್ರಹಾರ ಜೈಲ್:15 ದಿನಗಳಲ್ಲಿ ನಾಲ್ಕು ಸಾವು

0

ಬೆಂಗಳೂರು:ಪರಪ್ಪನ ಅಗ್ರಹಾರದ ಖೈದಿಗಳಲ್ಲಿ ಆತಂಕ ಮನೆ ಮಾಡಿದೆ.ಇದಕ್ಕೆ ಕಾರಣ ಅಲ್ಲಿ ಸಂಭವಿಸುತ್ತಿರುವ ಸರಣಿ ಸಾವು.ಯಾವ್ ಸಮಯದಲ್ಲಿ ಸಾವು ನಮ್ಮನ್ನು ಆವರಿಸಿಬಿಡುತ್ತೋ ಎನ್ನುವ ಭಯದಲ್ಲಿ ದಿನದೂಡುತ್ತಿರುವ ಖೈದಿಗಳಿಗೆ ಎದುರಾಗಿರುವ ಆರೋಗ್ಯ ಸಮಸ್ಯೆಯನ್ನು ಹೇಗೆ ತಹಬದಿಗೆ ತರೋದೆನ್ನೋದೇ ಜೈಲು ಅಧಿಕಾರಿಗಳಿಗೆ ಗೊತ್ತಾಗದೇ ಒದ್ದಾಡುತ್ತಿದ್ದಾರೆ.

ಕಳೆದ 15 ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾವನ್ನಪ್ಪಿರುವ ಖೈದಿಗಳ ಸಂಖ್ಯೆ ಬರೋಬ್ಬರಿ ನಾಲ್ಕು.ಇದು ಕಡ್ಮೆ ಸಂಖ್ಯೆ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯಿಸಬೇಕಿಲ್ಲ.ಏಕೆಂದ್ರೆ ಇವರೆಲ್ಲಾ ಅಸಹಜವಾಗಿ ಸಾವನ್ನಪ್ಪಿರೋರು.ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಸಾಕಷ್ಟಿದೆ ಎನ್ನುವ ಆತಂಕ ವ್ಯಕ್ತಪಡಿಸ್ತಿದ್ದಾರೆ ಜೈಲ್ ಅಧಿಕಾರಿಗಳು.

ಮೊದಲೆಲ್ಲಾ ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಹೀಗೆಲ್ಲಾ ಆಗುತ್ತಿರಲಿಲ್ಲ.ಸಾವುಗಳಾದರೂ ಅದಕ್ಕೊಂದು ಕಾರಣವಿರುತ್ತಿತ್ತು.ಆದ್ರೆ ಕಳೆದ 15 ದಿನಗಳಲ್ಲಿ ಸಂಭವಿಸುತ್ತಿರುವ ಸಾವುಗಳು,ಅದರ ಕಾರಣ ಜತೆಗೆ ಕಾಯಿಲೆಯ ಸೋಂಕಿನಿಂದ ಗಂಭೀರ ಸ್ಥಿತಿಗೆ ತಲುಪುತ್ತಿರುವವರ  ಸಂಖ್ಯೆ ಹೆಚ್ಚಾಗುತ್ತಿದೆ.ಇದು ಜೈಲಿನಲ್ಲಿರುವ  ಇತರೆ ಸಾವಿರಾರು ಖೈದಿಗಳ ಆತಂಕಕ್ಕೆ ಕಾರಣವಾಗ್ತಿದೆ.

ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಜೈಲಿನಲ್ಲಿ ಕೊಲೆ ಕೇಸಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೆಂಪಮ್ಮ ಎಂಬಾಕೆಯನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು.ಎಚ್ ಐವಿ ಸೋಂಕಿನಿಂದ ಬಳಲುತ್ತಿದ್ದ ಆಕೆಗೆ ಇಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು.ಆದ್ರೆ ಸೋಂಕಿನ ಪ್ರಮಾಣ ಹೆಚ್ಚಿದ್ದರಿಂದ  ಆಕೆ ಬದುಕುಳಿಯಲಿಲ್ಲ.ಅದರ  ಬೆನ್ನಲ್ಲೇ ಪ್ರತ್ಯೇಕ ಪ್ರಕರಣಗಳಲ್ಲಿ ಇತರೆ ಮೂವರು ಖೈದಿಗಳು ಕೂಡ ಸಾವನ್ನಪ್ಪಿದ್ದಾರೆ.ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ.ಕೆಲವರಲ್ಲಿ ಸೋಂಕಿರುವುದು ಕೂಡ ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ.

ವೈದ್ಯಕೀಯ ತಪಾಸಣೆ ವೇಳೆ ಜೈಲು ಅಧಿಕಾರಿಗಳಿಗೆ ಅಘಾತಕಾರಿ ಎನ್ನುವಂಥ ಸಂಗತಿ ಗೊತ್ತಾಗಿದೆ.ಅದೇ ಜೈಲಿನಲ್ಲಿರುವ ಖೈದಿಗಳ ಪೈಕಿ 70 ಜನರಿಗೆ ಮಾರಣಾಂತಿಕ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿವೆ ಎನ್ನೋದು.ಇದು  ಇತರೆ ಖೈದಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.ಎಲ್ಲಾ ರೋಗಿಗಳು ಪರಪ್ಪನ ಅಗ್ರಹಾರಕ್ಕೆ ಬಂದು ಶಿಫ್ಟ್ ಆಗುತ್ತಿರುವುದಕ್ಕೂ ಕಾರಣವಿದೆ.ಅದೇನೆಂದ್ರೆ ರಾಜ್ಯದ ಯಾವುದೇ ಜೈಲುಗಳಲ್ಲಿ ಖೈದಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆನೇ ಇಲ್ಲವಾಗಿದೆ.ಖೈದಿಗಳಿಗೆ ಎಲ್ಲಾ ರೀತಿಯ ಸವಲತ್ತು-ಸೌಲಭ್ಯ ಕೊಡಲಾಗುತ್ತೆ.ಆದ್ರೆ ಅದರಷ್ಟೇ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳೇ ಇಲ್ಲವಾಗಿದೆ.ಹಾಗಾಗಿನೇ ಅನಿವಾರ್ಯವಾಗಿ ಎಲ್ಲಾ ಅನಾರೋಗ್ಯಪೀಡಿತ ರೋಗಿಗಳನ್ನು ಪರಪ್ಪನ ಅಗ್ರಹಾರಕ್ಕೇನೆ ಕರೆತರಲಾಗುತ್ತೆ.ಇಲ್ಲಿ ಎಷ್ಟೇ ಚಿಕಿತ್ಸೆ ಕೊಟ್ಟರೂ ಅವರು ಕೊನೆಯುಸಿರೆಳೆಯುತ್ತಿದ್ದಾರೆ.ಆದ್ರೆ ಆ ಖೈದಿಗಳ ಕಾಯಿಲೆಯ ಸೋಂಕು ಆರೋಗ್ಯವಂತರಾದ ತಮಗೂ ಹರಡುತ್ತಿದೆಯೇ ಎನ್ನುವ ಆತಂಕ ಖೈದಿಗಳಲ್ಲಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹಾಲಿ 4800 ಕೈದಿಗಳಿದ್ದಾರೆ.ಆದ್ರೆ ದುರಂತ ನೋಡಿ ಇಷ್ಟೊಂದು ಖೈದಿಗಳ ಆರೋಗ್ಯ ಕಾಳಜಿಗೆ ಇರುವಂಥ ವೈದ್ಯರು ಕೇವಲ ಮೂವರು ಡಾಕ್ಟರ್ಸ್.ಇನ್ನು ಅತ್ಯಗತ್ಯವಾಗಿ ಬೇಕಿರುವ ಮನೋವೈದ್ಯರಿರುವುದು ಕೇವಲ ಒಬ್ಬರು ಮಾತ್ರ. ಅನೇಕ ವರ್ಷಗಳಿಂದ್ಲೂ ಈ ವೈದ್ಯ ಸಿಬ್ಬಂದಿಗಳ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಗೋಜಿಗೇನೇ ಜೈಲು ಅಧಿಕಾರಿಗಳು ಹೋಗಿಲ್ಲ. ಕಾರಾಗೃಹಕ್ಕೆ ಬೇಕಿರುವ  ಇನ್ನೂ ಹೆಚ್ಚುವರಿ ನಾಲ್ವರು ವೈದ್ಯರು ಹಾಗೂ ಐದು ಮಂದಿ ಮನೋ ವೈದ್ಯರು ಹಾಗೆಯೇ ನರ್ಸ್​ ಹಾಗೂ ವೈದ್ಯಕೀಯ ಸಿಬ್ಬಂದಿಗಳ  ನಿಯೋಜನೆಗೆ ತಲೆ ಕೆಡಿಸಿಕೊಂಡಿಲ್ಲ.ಇಂಥ ಪರಿಸ್ಥಿತಿಯಲ್ಲಿ  ಬೇರೆ ಕಡೆಯಿಂದ ರೋಗಿಗಳನ್ನ ತಂದು ಬಿಡ್ತಿರೋ ಜೈಲಾಧಿಕಾರಿಗಳ ಅಸಡ್ಡೆಯಿಂದಲೇ ಸಾವುಗಳಾಗ್ತಿವೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕಾರಾಗೃದಲ್ಲಿ ಬೇರೆಡೆ ಬಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸಧ್ಯಕ್ಕೆ 70.ಅದರಲ್ಲಿ 62 ಪುರುಷರಾದ್ರೆ ಎಂಟು ಮಂದಿ ಮಹಿಳಾ ಕೈದಿಗಳು.ದಿನಕ್ಕೆ ಇಬ್ಬರಿಂದ ಮೂವರು ಟ್ರೀಟ್​ಮೆಂಟ್​ ಗೋಸ್ಕರ ಬರುತ್ತಲೇ ಇರ್ತಾರೆ.ಅವರಲ್ಲಿ ಬಹುತೇಕರಿಗೆ ಹಾರ್ಟ್​ ಪ್ರಾಬ್ಲಂ,ಕ್ಯಾನ್ಸರ್ , ಎಚ್​ಐವಿಯಿಂದ ,ಕಿಡ್ನಿ ಪ್ರಾಬ್ಲಂ ಹೆಚ್ಚು. ಕಡಿಮೆ ವೈದ್ಯರಿಂದಲೇ ಸ್ಥಳೀಯ ಸಮಸ್ಯೆ ಬಗೆಹರಿಸಲಾಗುತ್ತಿಲ್ಲ.ಅಂತದ್ದರಲ್ಲಿ ಹೊರಗಡೆಯಿಂದ ರೋಗಿಗಳನ್ನು ಕರೆತಂದು ಅವರಿಗೆ ಚಿಕಿತ್ಸೆ ಕೊಡ್ತೇವೆನ್ನುತ್ತಿರುವ ಜೈಲು ಅಧಿಕಾರಿಗಳ ಬುದ್ಧಿಗೆ ಏನನ್ನಬೇಕೋ ಗೊತ್ತಾಗ್ತಿಲ್ಲ.ಯಾಕೆ ಸ್ವಾಮಿ ಹೀಗೆ ಎಂದು ಕೇಳಿದ್ರೆ ಗೃಹ ಇಲಾಖೆಗೆ ಸಮಸ್ಯೆ ಬಗೆಹರಿಸುವಂತೆ ಪತ್ರ ಬರೆದಿದ್ದೇವೆ.ಅಲ್ಲಿಂದ ಯಾವ್ದೇ ರಿಯಾಕ್ಷನ್ ಬಂದಿಲ್ಲ ಎನ್ನುತ್ತಾರೆ ಜೈಲು ಅಧಿಕಾರಿಗಳು.

ಪರಪ್ಪನ ಅಗ್ರಹಾರದಲ್ಲಿ ಎದುರಾಗಿರುವ ಅನಾರೋಗ್ಯದ ಸಮಸ್ಯೆ ಮತ್ತಷ್ಟು ದುರಂತಗಳಿಗೆ ಕಾರಣವಾಗಿ ಅದು ರಾಜ್ಯಾದ್ಯಂತ ಸರಣಿ ಸಾವಿನ ಕುಖ್ಯಾತಿಗೆ ಈಡಾಗುವ ಮೊದಲು ಗೃಹ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

Spread the love
Leave A Reply

Your email address will not be published.

Flash News