ಕನ್ನಡಿಗರ ಕಿಚ್ಚು-ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಾಗುತ್ತಾ ಫೆಬ್ರವರಿ 13ರ ಕರ್ನಾಟಕ ಬಂದ್:ಬಂದ್ ಗೆ ಅಭೂತಪೂರ್ವ ಬೆಂಬಲ

0

ಕನ್ನಡಪರ ಸಂಘಟನೆಗಳ ಕಿಚ್ಚು-ಒಗ್ಗಟ್ಟುಅದಕ್ಕೆ ಪುಷ್ಟಿ ನೀಡುವಂತೆ ಹತ್ತಲವು ಸಂಘಟನೆಗಳು ಘೋಷಿಸಿರುವ ಬೆಂಬಲ ಗಮನಿಸಿದ್ರೆ  ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇದೇ 13 ರಂದು  ನೀಡಿರುವ ಕರ್ನಾಟಕ ಬಂದ್ ಯಶಸ್ವಿಯಾಗುವ ಸಾಧ್ಯತೆ ದಟ್ಟವಾಗಿದೆ.ಅದೇ ವೇಳೆ ಬಂದ್ ಗೆ ಬೆಂಬಲ ನೀಡುವ ಬಗ್ಗೆ ಒಂದೇ ಒಂದು ಸೊಲ್ಲನ್ನೆತ್ತದ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್,ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರ ಮೌನದ ಬಗ್ಗೆ ವ್ಯಾಪಕವಾದ ಆಕ್ರೋಶವೂ ವ್ಯಕ್ತವಾಗಿದೆ.

ಖಾಸಗಿ ಕಂಪೆನಿಗಳದೇ ಆರ್ಭಟ-ಅಟ್ಟಹಾಸ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಕನ್ನಡದವರಿಗೆ ಖಾಸಗಿ ಸ್ವಾಮ್ಯದ  ಸಂಸ್ಥೆಗಳಲ್ಲಿ ಉದ್ಯೋಗ ನೀಡಲಾಗುತ್ತಿಲ್ಲ.ನಮ್ಮ ನೆಲದ ಎಲ್ಲಾ ಸಹಕಾರ-ಸೌಕರ್ಯ-ಸವಲತ್ತು ಪಡೆದ ಹೊರತಾಗ್ಯೂ ಕನ್ನಡದ ಮಕ್ಕಳಿಗೆ ಉದ್ಯೋಗ ಮೀಸಲಾತಿ ನೀಡದೆ ತಮ್ಮದೇ ಮಾನದಂಡ ಅನುಸರಿಸುತ್ತಿರುವುದರ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿಯೊಕ್ಕೆ ಸೃಷ್ಟಿಸಿಕೊಂಡಿರುವ ನಿರ್ಣಾಯಕ ಹೋರಾಟದ ವೇದಿಕೆಯೇ 13 ರ ಕರ್ನಾಟಕ ಬಂದ್ ಎನ್ನಲಾಗ್ತಿದೆ.ಕನ್ನಡ ಚಳುವಳಿಯ ಕೆ.ನಾಗೇಶ್  ನೇತೃತ್ವದಲ್ಲಿ ಅನೇಕ ಸಂಘಟನೆಗಳು ಇದಕ್ಕಾಗಿ 100 ದಿನಗಳ ಸತ್ಯಾಗ್ರಹ ಕೂಡ ನಡೆಸಿ ಸರ್ಕಾರಕ್ಕೆ ಕೊಟ್ಟ ಗಡುವು ಕೂಡ  ಕೊಟ್ಟಿದ್ದವು.ಆದ್ರೆ ಎಮ್ಮೆ ಚರ್ಮದ  ಸರ್ಕಾರ ಹೋರಾಟಕ್ಕೆ ಮಣಿಯದ ಹಿನ್ನಲೆಯಲ್ಲಿ ಕರ್ನಾಟಕ ಬಂದ್ ಅನಿವಾರ್ಯ ಅಸ್ತವಾಗಿದೆ ಎಂದು ಕೆ.ನಾಗೇಶ್ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಬಂದ್ ಗೆ 500 ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ:ಕೆ.ನಾಗೇಶ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.500ಕ್ಕೂ ಹೆಚ್ಚು ಸಂಘಟನೆ-ಸಂಘಸಂಸ್ಥೆಗಳು ಬೆಂಬಲ ನೀಡಿವೆ.ಜಯ ಕರ್ನಾಟಕ,ಕನ್ನಡ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ),ಚಲನ ಚಿತ್ರ ವಾಣಿಜ್ಯ ಮಂಡಳಿ,ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಸಂಘ ರಾಜ್ಯ ರೈತ ಸಂಘ-ಓಲಾ-ಊಬರ್,ಸಿಐಟಿಯು,ಜಯ ಕರ್ನಾಟಕ,ಕ್ಯಾಬ್ ಚಾಲಕರ ಸಂಘ-ಆಟೋ ಚಾಲಕರ ಸಂಘ..ಹೀಗೆ 500  ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.ಕೊನೇ ಘಳಿಗೆಯಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಕನ್ನಡ ಚಳುವಳಿಯ ಕೆ.ನಾಗೇಶ್ ನೇತೃತ್ವದಲ್ಲಿ ಕಳೆದ 3 ತಿಂಗಳಿಂದ್ಲೂ ದಿನಗಳಿಂದ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ 50ಕ್ಕೂ ಹೆಚ್ಚು ಸಂಘಟನೆಗಳು ನಿತ್ಯವೂ ಮೌರ್ಯ ಸರ್ಕಲ್ ನಲ್ಲಿ ಸತ್ಯಾಗ್ರಹ ನಡೆಸುತ್ತಲೇ ಇವೆ.ಕೇವಲ ಕನ್ನಡ ರಾಜ್ಯೋತ್ಸವ ಬಂದರಷ್ಟೇ ಸರೋಜಿನಿ ಮಹಿಷಿ ವರದಿ ಜಾರಿ ಬಗ್ಗೆ ಭಾವನಾತ್ಮಕವಾಗಿ ಮಾತನ್ನಾಡುವ ಸರ್ಕಾರಕ್ಕೆ 100 ದಿನಗಳ ಗಡುವುನ್ನು ಕನ್ನಡ ಪರ ಸಂಘಟನೆಗಳು ಕೊಟ್ಟಿದ್ದವು.100 ದಿನಗಳೊಳಗೆ ಜಾರಿ ಬಗ್ಗೆ ನಿಲುವು ವ್ಯಕ್ತಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗ್ತದೆ ಎಂದೂ ಎಚ್ಚರಿಸಿದ್ದರು.ಇದರ  ಭಾಗವಾಗೇ  ಇದೇ 13 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು.ಅದರನ್ವಯವೇ ಕರ್ನಾಟಕ ಬಂದ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಕಳೆದ ಒಂದೂವರೆ ತಿಂಗಳಿಂದ್ಲೂ ನಾಗೇಶ್ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು ರಾಜ್ಯಾದ್ಯಂತ ಸುತ್ತಾಡಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆಗಳು ಹಾಗೂ ಸಂಘಸಂಸ್ಥೆಗಳ ಬೆಂಬಲ ಕೇಳುತ್ತಲೇ ಇವೆ.ಬಹುತೇಕ ಸಂಘ-ಸಂಘಟನೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.ಇದೆಲ್ಲದರ ಪರಿಣಾಮವಾಗಿಯೇ ನಾಗೇಶ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆನ್ನಲಾಗಿದೆ.

ವಾಟಾಳ್-ನಾರಾಯಣ ಗೌಡರಿಗೆ ಕಿಚ್ಚಿಲ್ಲವೇ?:ಕನ್ನಡದ ಎಲ್ಲಾ ಸಂಘಟನೆಗಳು ಕನ್ನಡದ ಮಕ್ಕಳಿಗೆ ಈ ನೆಲದಲ್ಲಿ ಖಾಸಗಿ ಕಂಪೆನಿಗಳಿಂದ ಉದ್ಯೋಗ ಮೀಸಲು ವಿಚಾರದಲ್ಲಿ ಆಗ್ತಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡ್ತಿದ್ರೆ ವಾಟಾಳ್ ನಾಗರಾಜ್ ಹಾಗೂ ನಾರಾಯಣ ಗೌಡ ಹೋರಾಟಕ್ಕೆ ಬೆಂಬಲ ಕೊಡುವ ಮಾತು ಹಾಳಾಗಿ ಹೋಗ್ಲಿ,ಹೋರಾಟವನ್ನು ಬೆಂಬಲಿಸುವ ಒಂದೇ ಒಂದು ಮಾತನ್ನಾಡಿಲ್ಲ.ಇದು ಕನ್ನಡಪರ ಸಂಘಟನೆಗಳನ್ನು ಕೆಂಡಾಮಂಡಲಗೊಳಿಸಿವೆ.ಹೋರಾಟ ಎಂದ್ರೆ ಅವರಿಬ್ಬರು ಕಾವೇರಿ ಅಥವಾ ಮಹದಾಯಿ ಹೋರಾಟಗಳು ಎಂದುಕೊಂಡಂತಿದೆ. ಸರೋಜಿನಿ ಮಹಿಷಿ ವರದಿ ಜಾರಿಯ ಮಹತ್ವವೇ ತಿಳಿದಿಲ್ಲವೇನೋ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಕನ್ನಡದ ನೆಲ-ಜಲ-ಭಾಷೆಯ ಸ್ವಾಭಿಮಾನಕ್ಕೆ ಧಕ್ಕೆ ಬಂದರಷ್ಟೇ ಅವರ ಲ್ಲಿನ ಸ್ವಾಭಿಮಾನ ಜಾಗೃತವಾಗೋದು,ಅವರಿಗೆ ಮಾತ್ರ ಸೀಮಿತವಾಗಿರುವ  ಹೋರಾಟಗಳ ವಿಷಯದಲ್ಲಿ ಕುದಿಯುವ ಸ್ವಾಭಿಮಾನದ ರಕ್ತ  ಕನ್ನಡದ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗ್ಬೇಕೆನ್ನುವ ವಿಚಾರದಲ್ಲಿ ಏಕೆ ಕುದಿಯುತ್ತಿಲ್ವೋ ಗೊತ್ತಾಗ್ತಿಲ್ಲ.ಬಹುಷಃ ಅವರಿಗೆ ಬನ್ನಿ ಸ್ವಾಮಿ ಎಂದು  ರೆಡ್ ಕಾರ್ಪೆಟ್ ಹಾಸಿ ಹೋರಾಟಕ್ಕೆ ಆಹ್ವಾನಿಸ್ಬೇಕಿತ್ತೇನೋ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.ವಾಟಾಳ್ ನಾಗರಾಜ್ ಹಾಗೂ ನಾರಾಯಣ ಗೌಡ ಅವರ ಮಕ್ಕಳು ಅಥವಾ ಸಂಬಂಧಿಗಳಿಗೆ ಇಂಥಾ ಸಮಸ್ಯೆಗಳು ಎದುರಾಗಿದಿದ್ದರೆ ಮಾತ್ರ ಅವರು ಬೀದಿಗಿಳಿಯುತ್ತಿದ್ದರೇನೋ ಎಂದು ಸ್ವಾಭಿಮಾನಿ ಕನ್ನಡಿಗರು ಲೇವಡಿ ಮಾಡುತ್ತಿದ್ದಾರೆ.

ಹೋರಾಟ ಎಂದ್ರೆ ಕಾವೇರಿಯಲ್ಲ..ಚಳುವಳಿ ಎಂದ್ರೆ ಕೇವಲ ಮಹಾದಾಯಿ ಮಾತ್ರವಲ್ಲ.ನಮ್ಮ ಕನ್ನಡದ ಮಕ್ಕಳಿಗೆ ಉದ್ಯೋಗ ಮೀಸಲಾತಿ ಸಿಗ್ಬೇಕೆನ್ನುವ ವಾದವನ್ನು ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವೂ ಕೂಡ ಕನ್ನಡ ಸ್ವಾಭಿಮಾನದ ಭಾಗವಲ್ವೇ ಎಂದು ಅವರನ್ನು ಚುಚ್ಚಲಾಗ್ತಿದೆ.ಈ ವಿಷಯದಲ್ಲಿ ಅವರಿಬ್ಬರ ನಿರುತ್ಸಾಹ ಹಾಗೂ ಬೆಂಬಲ ನೀಡದ ನಿರಭಿಮಾನದ ಬಗ್ಗೆ ಕರ್ನಾಟಕಾದ್ಯಂತ ಟೀಕೆ ವ್ಯಕ್ತವಾಗುತ್ತಿರುವುದಂತೂ ಸತ್ಯ.ಆ ಮೂಲಕ ಅವರನ್ನು ಈವರೆಗೂ ಬೆಂಬಲಿಸುತ್ತಾ ಬಂದಿರೋ ಬಹು ದೊಡ್ಡ ಕನ್ನಡ ಅಭಿಮಾನಿಗಳ ನಂಬಿಕೆ ಹಾಗೂ ವಿಶ್ವಾಸವನ್ನು ಕಳಕೊಳ್ತಿರುವುದಂತೂ ಸತ್ಯ.

ಹೋರಾಟದ ಜಗತ್ತಿನಲ್ಲಿ ಹೊಸ ನಾಯಕನ ಸೃಷ್ಟಿ: ಹೋರಾಟ ಎಂದ್ರೆ ಅದು ಕೇವಲ  ವಾಟಾಳ್ ನಾಗರಾಜ್, ನಾರಾಯಣ ಗೌಡ ಮಾತ್ರ  ಎಂದಷ್ಟೇ ಅಂದುಕೊಂಡಿದ್ದವರಿಗೆ ಹೋರಾಟದ ಜಗತ್ತಿನಲ್ಲಿ ಮತ್ತೋರ್ವ ನಾಯಕನ ಸೃಷ್ಟಿಯಾಗಿದೆ ಎನ್ನುವ ಸತ್ಯ ಅರಿವಾಗಬೇಕಿದೆ.ಆ ಸತ್ಯವನ್ನು ಗಂಭೀರವಾಗಿ ಅರ್ಥೈಸಿಕೊಂಡು ತಮ್ಮ ಸ್ವಾರ್ಥ ಬಿಟ್ಟು ನಿಜವಾದ ಬದ್ಧತೆಯಲ್ಲಿ ಹೋರಾಟ ಮಾಡ್ಬೇಕಿದೆ.ಏಕೆಂದ್ರೆ ಬಹಳ ದಿನ ಜನರು ಹಾಗು ತಮ್ಮೊಂದಿಗಿರುವ ಅಮಾಯಕ ಕಾರ್ಯಕರ್ತರನ್ನು ಕನ್ನಡ ಹೋರಾಟಗಳ ಹೆಸರಲ್ಲಿ ಯಾಮಾರಿಸಲು ಸಾಧ್ಯವಿಲ್ಲ.ಒಂದಲ್ಲಾ ಒಂದು ದಿನ ಅಸಲೀಯತ್ತು ಹೊರ ಬರಬೇಕಿದೆ.

ಇದನ್ನು ಹೇಳೊಕ್ಕೆ ಕಾರಣವೂ ಇದೆ.ಏಕೆಂದ್ರೆ ವಾಟಾಳ್ ಹಾಗೂ ನಾರಾಯಣ ಗೌಡರ ಹೋರಾಟವನ್ನೂ ನೋಡಿದೆ ಈ ರಾಜ್ಯ.ಕಾವೇರಿ,ಮಹಾದಾಯಿ ವಿಚಾರಗಳಿಗೆ ಮಾತ್ರ ಹೋರಾಟ ಸೀಮಿತಪಡಿಸಿಕೊಂಡು ಪ್ರಚಾರ ಪಡೆದವ್ರು ಅವ್ರು.ಆದ್ರೆ ಇತ್ತೀಚಿನ ವರ್ಷಗಳಲ್ಲಿ ತೀವ್ರ ಕೆಳ ಹಂತದಿಂದ ಹೋರಾಟ ಆರಂಭಿಸಿದ ಕೆ.ನಾಗೇಶ್ ಎಲೆ ಮರೆ ಕಾಯಿಯಾಗಿದ್ದುಕೊಂಡೇ ಹೋರಾಟ ಮಾಡಿದವ್ರು.ಅವರು ಮಾಡದ ಹೋರಾಟಗಳಿಲ್ಲ.ಹೋರಾಟಕ್ಕೆ ತೆಗೆದುಕೊಳ್ಳದಿರುವ  ವಿಷಯಗಳೇ ಇಲ್ಲ.

ನಾಗೇಶ್  ಬಗ್ಗೆ ಹೇಳಲೇಬೇಕಾದ ಸಂಗತಿಯೊಂದಿದೆ.ಕನ್ನಡ ಹೋರಾಟಗಾರರು ಎನ್ನುವುದನ್ನೇ ಟ್ರಂಪ್ ಕಾರ್ಡನ್ನಾಗಿ ಮಾಡಿಕೊಂಡು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ವರ್ಷಕ್ಕೆ 50 ಲಕ್ಷದಿಂದ 1 ಕೋಟಿ ಹಣವನ್ನು ಅನುದಾನವಾಗಿ ಪಡೆದ ವಾಟಾಳ್ ನಾಗರಾಜ್ ಹಾಗೂ ನಾರಾಯಣ ಗೌಡರ ಕನ್ನಡದ ಕಾಳಜಿ!ಯನ್ನು ಬಯಲಿಗೆಳೆದು ಅವರ ವಿರುದ್ದವೇ ಹೋರಾಟ ಮಾಡಿದವರು.ಕನ್ನಡ ಚಳುವಳಿ ಕ್ಷೇತ್ರದಲ್ಲಿ ಪ್ರಶ್ನಾತೀತರಾಗಿದ್ದ ವಾಟಾಳ್ ಹಾಗೂ ನಾರಾಯಣ ಗೌಡರ ವಿರುದ್ಧ ಮೊದಲ ಬಾರಿಗೆ ಯಾವ ಹೋರಾಟಗಾರನಾದ್ರೂ ಬಹಿರಂಗವಾಗಿ ಸೊಲ್ಲೆತ್ತುವ ಧೈರ್ಯ ಮಾಡಿದ್ದಾನೆಂದ್ರೆ ಅದು ಒನ್ ಅಂಡ್ ಒನ್ಲಿ ಕೆ.ನಾಗೇಶ್ ಎನ್ನಬಹುದೇನೋ.ಈ ಕಾರಣಕ್ಕೇನೆ ಹಲವು ಸಂಘಟನೆಗಳು ನಾಗೇಶ್ ಜತೆ ಸೇರಿಕೊಂಡವು.ಇವತ್ತು ವಾಟಾಳ್-ನಾರಾಯಣ ಗೌಡ ಅವರಿಗೆ ಸರಿಸಮನಾಗಿ ನಿಲ್ಲಬಲ್ಲ ಹೋರಾಟಗಾರನಾಗಿ ನಾಗೇಶ್ ಗುರುತಿಸಿಕೊಂಡಿದ್ದಾನೆನ್ನವುದನ್ನು ಚಳುವಳಿಗಳ ಜಗತ್ತೇ ಒಪ್ಪಿಕೊಳ್ಳುತ್ತೆ.13ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್,ಅದಕ್ಕೆ ನಾಗೇಶ್ ಬೆನ್ನಿಗೆ 500ಕ್ಕೂ ಹೆಚ್ಚು ಸಂಘಟನೆಗಳು ನಿಂತುಕೊಂಡಿರುವುದನ್ನು ಇದನ್ನು ಮತ್ತಷ್ಟು ದೃಡೀಕರಿಸುತ್ತೆ.

ತಮ್ಮ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕನಾಗಿ ಬೆಳೆದು ನಿಲ್ಲುತ್ತಿರುವ ನಾಗೇಶ್ ಬೆಳವಣಿಗೆ ವಾಟಾಳ್ ಹಾಗೂ ನಾರಾಯಣ ಗೌಡ ಅವರನ್ನು ಕುದಿಯುವಂತೆ ಮಾಡಿದೆ ಎನ್ನಲಾಗಿದೆ.13ರ ಬಂದ್ ಯಶಸ್ವಿಯಾದರಂತೂ ಅದು ತಮ್ಮ ಅಸ್ಥಿತ್ವಕ್ಕೇನೆ ಮಹಾ ಹೊಡೆತ ಎಂದು ಭಾವಿಸಿದ್ದಾರೆನ್ನಲಾಗುತ್ತಿರುವ ವಾಟಾಳ್-ನಾರಾಯಣ ಗೌಡ ಆ ಕ್ರೆಡಿಟ್ ಯಾವ್ದೇ ಕಾರಣಕ್ಕೂ ನಾಗೇಶ್ ಗೆ ಹೋಗಬಾರದೆನ್ನುವ ಹಿನ್ನಲೆಯಲ್ಲಿ ಬಂದ್ ಯಶಸ್ವಿಯಾಗದಿರುವಂತೆ ತಂತ್ರ ಗಾರಿಕೆಯೊಂದನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಹಾದಾಯಿ ನಂತರ ಯಾವುದೇ ಹೋರಾಟ 100 ದಿನ ನಿರಂತರ   ನಡೆದ ಇತಿಹಾಸವೇ ಇಲ್ಲ:ವಾಟಳ್- ನಾರಾಯಣ ಗೌಡ ಅವರು ಅಪ್ರತಿಮ ಕನ್ನಡಾಭಿಮಾನಿಗಳು-ಹೋರಾಟಗಾರರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಆದ್ರೆ ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತೆ ಎನ್ನುವ ಸಂದರ್ಭ  ಬಂದಾಗ ಇಬ್ಬರೂ ಅಭಿಪ್ರಾಯ ಬೇಧಗಳಿಂದ ಒಗ್ಗೂಡಿರುವುದು ತೀರಾ ಕಡ್ಮೆ.ಇದು ಈಗಾಗ್ಲೇ ಬೇರೆ ತೆರನಾದ ಸಂದೇಶವನ್ನೇ ರವಾನಿಸಿಯಾಗಿದೆ.ಇದೆಲ್ಲಕ್ಕಿಂತ ಇವರಿಬ್ಬರು ತಮ್ಮ ಹೋರಾಟಗಳನ್ನು ಧೀರ್ಘಾವಧಿಗೆ ನಡೆಸಿರುವ ಇತಿಹಾಸವಿಲ್ಲ.

ಆದ್ರೆ ಕೆ.ನಾಗೇಶ್ ನೇತೃತ್ವದಲ್ಲಿನ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿ ಹೋರಾಟವನ್ನು 100 ದಿನಗಳವರೆಗೆ ನಿರಂತರವಾಗಿ ಕೊಂಡೊಯ್ದಿರುವಂತದ್ದು ಇವತ್ತಿನ ಕಾಲಘಟ್ಟದಲ್ಲಿ ಬಹುದೊಡ್ಡ ಸುದ್ದಿ.ಮಹಾದಾಯಿ ಬಿಟ್ಟರೆ ಒಂದು ಧೀರ್ಘ ಕಾಲದವರೆಗೆ ನಡೆದ  ಹೋರಾಟ ಯಾವುದಾದ್ರೂ ಇದೆ ಎಂದ್ರೆ ಅದು ಕೆ.ನಾಗೇಶ್ ನೇತೃತ್ವದ ಹೋರಾಟ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.ಇಲ್ಲದಿದ್ದರೆ ಅದು ಸ್ವಾಭಿಮಾನಿ ಕನ್ನಡ ಹೋರಾಟಗಾರರ ಆತ್ಮ ವಂಚನೆಯಾಗ್ಬೋದೇನೋ..

ಬಂದ್ ಗೆ ಅವಕಾಶ ಇಲ್ಲ..ಮುಷ್ಕರಕ್ಕೆ ಮಾತ್ರ:ಈ ನಡುವೆ ಬಂದ್ ಗೆ ಅವಕಾಶ ನೀಡಿಲ್ಲ ಎನ್ನುವುದಾಗಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಒಂದು ದಿನದ ಮುಷ್ಕರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.ಅದನ್ನು ಬಿಟ್ಟು ಅವತ್ತೇನಾದ್ರೂ ನಡುದ್ರೆ ಅದಕ್ಕೆ ಕೆ.ನಾಗೇಶ್ ನೇತೃತ್ವದ ಸಂಘಟನೆಗಳೇ ಕಾರಣವಾಗಿರುತ್ವೆ ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.ಹಾಗಾಗಿ ಪೊಲೀಸ್ ಎಚ್ಚರಿಕೆ ಹಿನ್ನಲೆಯಲ್ಲಿ ಅವತ್ತು ಕನ್ನಡ ಪರ ಸಂಘಟನೆಗಳು ಯಾವ್ ರೀತಿ ಬಂದ್ ಅಥವಾ ಮುಷ್ಕರ ನಡೆಸಲಿವೆ ಎನ್ನುವುದು ಕುತೂಹಲ ಮೂಡಿಸಿದೆ. 

Spread the love
Leave A Reply

Your email address will not be published.

Flash News