ಮಂಗನಕಾಯಿಲೆ ಆಯ್ತು.. ಹಕ್ಕಿ ಜ್ವರ ಹೋಯ್ತು..ಕೊರೊನಾ ಬಂತು:4 ಸಾವಿರ ಕೋಳಿಪಿಳ್ಳೆಗಳ ಸಜೀವ ಸಮಾಧಿ

0

ಶಿವಮೊಗ್ಗ: ಮಂಗನಕಾಯಿಲೆ ಹಾಗೂ ಹಕ್ಕಿ ಜ್ವರಕ್ಕೆ ಬೆಚ್ಚಿಬಿದ್ದಿರುವ ಮಲೆನಾಡು ಕೊರೊನಾ ಭೀತಿಗೆ ಮತ್ತಷ್ಟು ತತ್ತರಿಸಿದೆ.ಅದರಲ್ಲೂ ಮಾಂಸೋದ್ಯಮ ಈ ಕಾಯಿಲೆಗಳಿಂದ ಪಾತಾಳಕ್ಕಿಳಿದಿರುವ ನಡುವೆಯೇ ಕೊರೊನಾ ಬರಸಿಡಿಲಿಗೆ ಅದನ್ನೇ ನಂಬಿಕೊಂಡಿರುವ ವರ್ತಕರು ಕಂಗಾಲಾಗಿದ್ದಾರೆ.ಮಲೆನಾಡಿನಲ್ಲಿ ಕೆ.ಜಿಗೆ 170 ರೂ. ಬೆಲೆ ಇದ್ದ ಕೋಳಿ ಮಾಂಸದ ಬೆಲೆ 50-70 ರೂ. ಕೆಜಿಗೆ ಇಳಿದಿದೆ. ಇದರ ನಡುವೆ ಕೊರೊನಾ ಗಾಯದ ಮೇಲೆ ಬರೆ ಎಳೆದಂತೆ ಕುಕ್ಕುಟೋಧ್ಯಮವನ್ನು ಮತ್ತಷ್ಟು ಕುಗ್ಗಿಸಿದೆ.ಇದರ ಭಾಗವಾಗೇ ಕೋಳಿಗಳ ಸಜೀವಸಮಾಧಿಯಂಥ ಪ್ರಕ್ರಿಯೆಗಳು ಶುರುವಾಗಿದೆ.
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಅನ್ನುವಂಗೆ ಹಾಗಿದೆ ನಿಷ್ಪಾಪಿ ಕೋಳಿಗಳ ಸ್ಥಿತಿ.ಕೋಳಿಯಿಂದ ಕೊರೋನಾ ಹರಡುತ್ತೆ ಎಂದು ಯಾರೋ ತಲೆ ಮಾಸಿದವ್ರು ಹೇಳಿ,ಒಂದಷ್ಟ್ ಕಡೆ ಕೋಳಿಗಳ ಸಜೀವ ದಹನ ಆಗಿದ್ದೇ ಆಗಿದ್ದು ನೋಡಿ,ಅದೊಂದ್ ತರ ಸಾಮೂಹಿಕ ಸನ್ನಿಯಂತೆ ಆಗೋಗಿದೆ. ಶಿವಮೊಗ್ಗದ ಸಂತೆಕಡೂರಿನಲ್ಲಿ ಕೋಳಿ ಮಾಲೀಕರೋರ್ವರು ಎದೆ ಬಡಿದುಕೊಂಡು 4 ಸಾವಿರ ಕೋಳಿ ಮರಿಗಳಿಗೆ ಸಾವಿನ ಹಾದಿಯನ್ನು ತೋರಿಸಿದ್ದಾರೆ.ಅವುಗಳನ್ನು ಬದುಕಿರುವಾಗ್ಲೇ ಗುಂಡಿ ತೋಡಿ ನೆಲಸಮಾಧಿ ಮಾಡಿದ್ದಾರೆ.
ಕೊರೊನಾ ಭೀತಿಗೆ ರಾಜ್ಯ ಸರ್ಕಾರ ತತ್ತರಿಸಿರುವುದರಿಂದ ಯಾವುದೆ ರಿಸ್ಕ್ ತಗೊಳ್ಳಲು ಸಿದ್ಧವಿಲ್ಲ.ಹಾಗಾಗಿ ದೂರದಲ್ಲೆಲ್ಲೋ ಕೋಳಿಗಳಿಂದ ಕೊರೊನಾ ಹರಡುತ್ತೆ..ಅದಕ್ಕೆ ಕೋಳಿಗಳೂ ಕಾರಣ ಎಂಬ ವದಂತಿ ಹಬ್ಬುತ್ತಿದ್ದಂತೆ ಅದನ್ನೇ ನಂಬಿಕೊಂಡು ಕೋಳಿ ಹಾಗೂ ಮಾಂಸೋಧ್ಯಮಕ್ಕೆ ಬ್ರೇಕ್ ಹಾಕಲು ಮುಂದಾಗಿ ಫರ್ಮಾನ್ ಕೂಡ ಹೊರಡಿಸಿದೆ.ಇದರ ಭಾಗವಾಗಿ ಅನೇಕ ಕಡೆ ಕೋಳಿ ಫಾರ್ಮ್ ಮಾಲೀಕರು ಇಷ್ಟವಿಲ್ಲದಿದ್ದರೂ ಕೋಳಿಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡುತ್ತಿದ್ದಾರೆ.ಹತ್ಯೆಗೈಯುತ್ತಿದ್ದಾರೆ.ಅದರ ಮುಂದುವರೆದ ಭಾಗವಾಗಿ ಸಂತೆಕಡೂರಿನಲ್ಲಿ ಶ್ರೀನಿವಾಸ್ ಅವರು ತಮ್ಮ ಫಾರ್ಮ್ ನಲ್ಲಿ ಬೆಳೆಯುತ್ತಿದ್ದ 22 ದಿನಗಳ ಮರಿಗಳನ್ನು 12 ಅಡಿ ಗುಂಡಿ ತೋಡಿ ಕಣ್ಣೆದುರೇ ಸಮಾಧಿ ಮಾಡಿದ್ದಾರೆ.
ಶ್ರೀನಿವಾಸ್ ಅವರು ಹೇಳುವ ಪ್ರಕಾರವೇ, ಕೆ.ಜಿ ಕೋಳಿಗೆ 8 ರೂಪಾಯಿ ಮಾತ್ರ ಲಾಭ ಸಿಗುತ್ತಿತ್ತು. ಇದನ್ನ ಸಾಕಲು 16 ರೂ. ತಗಲುತ್ತದೆ.ಈಗಾಗಲೇ ಕೋಳಿ ಸಾಕಾಣಿಕೆಯಲ್ಲಿ ಎರಡೂವರೆ ಲಕ್ಷ ರೂ ಹಣ ಕಳೆದುಕೊಂಡಿದ್ದೇನೆ.ಕೊರೊನಾ ಭೀತಿಯ ನಡುವೆ ಇವುಗಳನ್ನು ಒಲ್ಲದ ಮನಸಿನಿಂದ ಸಾಕಲು ಮುಂದಾದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರಿತು ಕೋಳಿ ಮರಿಗಳನ್ನು ಜೀವಂತವಾಗಿ ಹೂತಿದ್ದಾರೆ. 

Spread the love
Leave A Reply

Your email address will not be published.

Flash News