ಬಿಬಿಎಂಪಿ ಬಜೆಟ್ “ಸಾಮ್ರಾಟ್” ಅಶೋಕ್ ಕೃಪಾಪೋಷಿತನಾ? ಬಜೆಟ್ ಬಗ್ಗೆ ಸ್ವಪಕ್ಷದವರೇ ಗರಂ!?

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2020-21 ನೇ ಸಾಲಿನ ಬಜೆಟ್ ಏನೋ ಮಂಡನೆಯಾಗಿದೆ. ಕೊರೊನಾ ಲಾಕ್ ಡೌನ್ ಗೆ ಸಿಲುಕಿ ದೇಶವೇ ನಲುಗುತ್ತಿರುವಾಗ  ತುರ್ತಾಗಿ ಬಜೆಟ್ ಮಂಡಿಸುವ  ಅವಸರವಾದ್ರೂ ಏನಿತ್ತು ಎನ್ನುವ ಪ್ರಶ್ನೆ ಸಹಜವಾಗಿ ಮೂಡಿದ್ದು ಸಹಜ.

ಸ್ಥಗಿತಗೊಂಡಿರುವ ಅಭಿವೃದ್ಧಿಯಂತ್ರಕ್ಕೆ ಸಾಣೆ ಹಿಡಿಯೊಕ್ಕೆ ಬಜೆಟ್ ಮಂಡನೆ ಅಗತ್ಯದಷ್ಟೇ ಅನಿವಾರ್ಯವೂ ಆಗಿತ್ತೆನ್ನುವ ವಾದ ಒಪ್ಪೊಣ ಬಿಡಿ..ಆದ್ರೆ ಈ ಬಜೆಟ್ ನ್ನು ಬೇರೆ ಪಕ್ಷದವ್ರು ಟೀಕಿಸೋದು ಒತ್ತಟ್ಟಿಗೆ ಇರಲಿ,ಸ್ವಪಕ್ಷದ ಸಚಿವರು-ಶಾಸಕರೇ  ಅನುದಾನ ಹಂಚಿಕೆಯ ಅಸಮತೋಲನದ ಬಗ್ಗೆ ಅಸಮಾಧಾನ-ಆಕ್ರೋಶ ವ್ಯಕ್ತಪಡಿಸಿ ದ್ದಾರೆ.ಇದು ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಹಾಗೂ ಅವರ ರಾಜಕೀಯ ಗುರು ಆರ್ .ಅಶೋಕ್ ಅವರ ಸ್ವಹಿತಾಸಕ್ತಿಯ ಬಜೆಟ್ ಎಂತಲೂ ವಿಶ್ಲೇಷಿಸಲಾಗ್ತಿರೋದು ಕೂಡ ಸುಳ್ಳಲ್ಲ.

10,895.84 ಕೋಟಿ ಗಾತ್ರದ ಬಜೆಟ್ ನ್ನು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಕೌನ್ಸಿಲ್ ಸಭಾಂಗಣದಲ್ಲಿ ಮಂಡಿಸಿದ್ರು.ಬಜೆಟ್ ಮಂಡನೆ ವೇಳೆ   ಆರ್.ಅಶೋಕ್ ಸೇರಿದಂತೆ ಒಂದಷ್ಟು ಸಚಿವ್ರು ಪಾಲ್ಗೊಂಡಿದ್ದರು.ಬಜೆಟ್ ನಲ್ಲಿನ ಸಾಕಷ್ಟು ಅಂಶಗಳ ಬಗ್ಗೆ ಬಜೆಟ್ ಮುಗಿಯುತ್ತಿದ್ದಂತೆ ಸ್ವಪಕ್ಷದವ್ರೇ ಆಕ್ರೋಶ ವ್ಯಕ್ತಪಡಿಸ್ತಾ ಹೋದ್ರು.ಅಶೋಕ್ ಜತೆ ಸೇರಿಕೊಂಡು ನಿಮಗಿಷ್ಟ ಬಂದಂತೆ ಬಜೆಟ್ ಮಂಡಿಸಿಕೊಂಡಿದ್ದೀರಾ ಎಂದು ಏರುದ್ವನಿಯಲ್ಲಿ ಸಚಿವರು ಮಾತ್ನಾಡಿ ತೆರಳಿದ್ದು ಸುಳ್ಳಲ್ಲ.ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಎಲ್.ಶ್ರೀನಿವಾಸ್  ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆ ಪ್ರೆಸ್ ಮೀಟ್ ಮಾಡಿ ತೆರಳಿದ್ರು.

ಎಲ್.ಶ್ರೀನಿವಾಸ್ ಬಗ್ಗೆ ಅಶೋಕ್ ಗೆ ಇನ್ನೂ ಆತಂಕ ಇದೆಯಾ?: ಎಲ್.ಶ್ರೀನಿವಾಸ್ ಹೇಳಿಕೇಳಿ ಆರ್.ಅಶೋಕ್ ಅವ್ರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕುಮಾರಸ್ವಾಮಿ ಲೇ ಔಟ್ ವಾರ್ಡ್ ಕಾರ್ಪೊರೇಟರ್.ಅವರ ರಾಜಕೀಯ ಗಳಸ್ಯ-ಕಂಟಸ್ಯ-ಮೈಮನಸ್ಯ ಎಲ್ಲರಿಗೂ ಗೊತ್ತಿದೆ. ಅಶೋಕ್ ಗೆ  ಮೂರು ಬಾರಿ ಗೆದ್ದು ಕಾರ್ಪೊರೇಟರ್ ಆಗಿರುವ ಶ್ರೀನಿವಾಸ್ ಬಗ್ಗೆ ಎಲ್ಲಿ ನನ್ನ ಪ್ರತಿಸ್ಪರ್ದಿಯಾಗ್ತಾರೋ ಎನ್ನುವ ಆತಂಕ ಇದ್ದೇ ಇದೆ ಎನ್ನೋದು ಕೂಡ ಗೊತ್ತಿರೋದೇ.ಹಾಗಾಗಿ  ಕಳೆದ ಬಾರಿಯ ಎಲೆಕ್ಷನ್ ವೇಳೆ ಕುಮಾರಸ್ವಾಮಿ ಲೇ ಔಟ್ ವಾರ್ಡ್ ಕೆಟಗರಿಯನ್ನು ಶ್ರೀನಿವಾಸ್ ಅನುಕೂಲಕ್ಕಂತೆನೇ ಮಾಡಿಸಿಕೊಟ್ಟು ತನ್ನ ವಿರುದ್ಧ ಬಂಡಾಯ ಹೇಳದಂತೆ ಬಾಯಿಮುಚ್ಚಿಸಿದ್ರು ಎಂದು ಇಡೀ ಕ್ಷೇತ್ರದ ಜನ ಮಾತ್ನಾಡಿಕೊಳ್ಳುತ್ತಿದ್ದಾರೆ.

ಇದೆಲ್ಲಾ ಅವರಿಬ್ಬರ ವೈಯುಕ್ತಿಕ ಹಾಗೂ ರಾಜಕೀಯ ಹೊಂದಾಣಿಕೆ ಎಂದ್ಕೊಂಡೇ ಬಿಟ್ಟುಬಿಡೋಣ.ಆದ್ರೆ ಈ ಬಾರಿಯ ಬಜೆಟ್ ಮೇಲೆ ಆರ್.ಅಶೋಕ್ ಮೇಲೆ ನೆರಳಿದ್ದುದು ಮಾತ್ರ ಸತ್ಯ.ಬಜೆಟ್ ಪ್ರಿಪೇರ್ ಆಗಿ ಫೈನಲೈಸ್ ಆಗಿದ್ದೇ ಅಶೋಕ್ ಮನೆಯಲ್ಲಿ ಎನ್ನಲಾಗ್ತಿದೆ.ಅಶೋಕ್ ಹೇಳಿದಂತೆ ಬಜೆಟನ್ನು ರೂಪಾಂತರಿಸಲಾಯ್ತೆಂದು ಬಿಜೆಪಿ ಪಕ್ಷದ ಅನೇಕ ಕಾರ್ಪೊರೇಟರ್ಸ್ ಹೇಳ್ತಾರೆ.ಯಾರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಬಜೆಟ್ ರೂಪಿಸಬೇಕಿತ್ತೋ,ಅದ್ಯಾವುದಕ್ಕೂ ಕಿಮ್ಮತ್ತು ನೀಡದೆ ಅಶೋಕ್ ಹೇಳಿದಂತೆಯೇ ಎಲ್ಲವನ್ನು ಮಾಡಿ ಮುಗಿಸಿದ್ರು ಎಲ್.ಶ್ರೀನಿವಾಸ್ ಎನ್ನುವ ಆರೋಪ ಕೇಳಿಬಂದಿದೆ.

ಅನುದಾನ ಹಂಚಿಕೆ ಬಗ್ಗೆ ಬಿಜೆಪಿ ಶಾಸಕರ ಅಸಮಾಧಾನ?: ಅನುದಾನ ಹಂಚಿಕೆಯೇ ಅನೇಕ ಶಾಸಕರು ದುರ್ಬೀನ್ ಇಟ್ಕೊಂಡು ಪರಿಶೀಲಿಸುವ ಅಂಶ.ಆದ್ರೆ ಈ ವಿಷಯದಲ್ಲೇ ಎಲ್.ಶ್ರೀನಿವಾಸ್ ಎಡವಿದ್ರಾ ಗೊತ್ತಾಗ್ತಿಲ್ಲ.ಹಿರಿಯ ಸಚಿವರೊಬ್ಬರು ಬಜೆಟ್ ಮುಗಿಯು ತ್ತಿದ್ದಂತೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ಬಗ್ಗೆ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸ್ತಾರೆ ಎಂದ್ರೆ ಬಜೆಟ್ ನ್ನು ಇನ್ನ್ಯಾವ ರೀತಿಯಲ್ಲಿ ಚರ್ಚಿಸಿ ಫೈನಲ್ ಮಾಡಿರ್ಬೋದು ನೀವೇ ಊಹಿಸಿ.ಅದಷ್ಟೇ ಅಲ್ಲ ಅನೇಕ ಕಾರ್ಪೊರೇಟರ್ಸ್,ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಕೂಡ ವಾರ್ಡ್ ಅನುದಾನದಲ್ಲಿ ಅನ್ಯಾಯವಾಗಿದೆ.ನಮ್ಮ ಪಕ್ಷದವ್ರೇ ಮೋಸ ಮಾಡಿದ್ದಾರೆಂದು ಕನ್ನಡ ಫ್ಲಾಶ್ ನ್ಯೂಸ್ ಜತೆ ಅಳಲು ತೋಡಿಕೊಂಡ್ರು.ಅಶೋಕ್ ಹಾಗೂ ಶ್ರೀನಿವಾಸ್ ಅವ್ರು ತಮಗಿಷ್ಟ ಬಂದಂತೆ ಕೂತ್ಕೊಂಡು ಬಜೆಟ್ ರೂಪಿಸಿ ಮಂಡಿಸಿದ್ದಾರೆ ಎನ್ನೋದು ಅನೇಕರ ಅಸಮಾಧಾನ.

ಬಜೆಟ್ ಪುಸ್ತಕದಲ್ಲಿ  ಮೇಯರ್ ಗೆ ಅವಮಾನ: ಬಜೆಟ್ ಪುಸ್ತಕದ ಪುಟಗಳನ್ನು ತಿರುಗಿಸಿ ನೋಡಿದ್ರೆ ಇಂತದ್ದೊಂದು ಅನುಮಾನ ಕಾಡುತ್ತೆ.ಬಜೆಟ್ ಪುಸ್ತಕದ ಮುಖಪುಟಗಳನ್ನು ಗಮನಿಸಿದ್ರೆ ಒಂದೇ ಒಂದು ಪುಟದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರದಾಗ್ಲಿ,ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರಾಗ್ಲಿ ಕಾಣಿಸೋದೇ ಇಲ್ಲ..ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತ್ರ ರಾರಾಜಿಸುತ್ತಿದ್ದಾರೆ.ಇದು ಮೇಯರ್ ಸ್ಥಾನಕ್ಕೆ ಮಾಡಲಾದ ಅಗೌರವ ಎನಿಸ್ದೆ ಇರೊಲ್ಲ.

ಬಿಬಿಎಂಪಿ ಮೇಲೆ ಹಿಡಿತ ಸಾಧಿಸಲು ಹರಸಾಹಸ:,ತಮ್ಮ ಯಡವಟ್ಟುಗಳಿಂದಾಗೇ ಪಕ್ಷದ ದೃಷ್ಟಿಯಲ್ಲಿ ನಂಬಿಕೆ ಕಳಕೊಂಡವ್ರು ಸಚಿವ ಆರ್.ಅಶೋಕ್.ಅವ್ರು ಮಾಡಿದ ತಪ್ಪಿಗೆ 4 ವರ್ಷ ಅಧಿಕಾರ ಸಿಗದೆ ವಿಪಕ್ಷದ ಸ್ಥಾನದಲ್ಲಿ ಕೂರುವಂತಾಗಿದ್ದು ಎಲ್ಲರಿಗೂ ಗೊತ್ತಿದೆ.ಆದ್ರೆ ಅಶೋಕ್ ಅವ್ರ ಆ ಯಡವಟ್ಟೇ ಪಕ್ಷದ ದೃಷ್ಟಿಯಲ್ಲಿ ಅವರ ಬಗ್ಗೆ ಇದ್ದ ನಂಬಿಕೆ-ವಿಶ್ವಾಸ ಕಳೆದುಕೊಳ್ಳೊಕ್ಕೆ ಕಾರಣವಾಯ್ತು.ಅದರ ಬಗ್ಗೆ ಅಶೋಕ್ ಈಗಲೂ ಪರಿತಪಿಸುತ್ತಿದ್ದಾರೆ ಕೂಡ.ಹಾಗಾಗಿನೇ ಬಿಬಿಎಂಪಿ ಮೇಲೆ ಹಿಡಿತ ಸಾಧಿಸೊಕ್ಕೆ ಎಲ್ಲಿಲ್ಲದ ಹರಸಾಹಸ ಮಾಡುತ್ತಿದ್ದಾರೆ.ಆದ್ರೆ ಅವರ ವಿಶೇಷಾಸಕ್ತಿ,ಬಿಬಿಎಂಪಿ ವಿಷಯದಲ್ಲಿ   ಅಗತ್ಯಕ್ಕಿಂತ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರಾ ಎನ್ನುವ ಸಂದೇಶ ರವಾನಿಸುತ್ತಿರುವುದು ಸುಳ್ಳಲ್ಲ.

ಅಶೋಕ್ ಏನು ಬೆಂಗಳೂರು ಉಸ್ತುವಾರಿನಾ? ಆರ್.ಅಶೋಕ್  ಸರ್ಕಾರದ ಸಚಿವರು ನಿಜ.ಆದ್ರೆ  ಬೆಂಗಳೂರು ಉಸ್ತುವಾರಿ ಅವರ ಬಳಿಯಿಲ್ಲ.ಅದನ್ನು  ಸಿಎಂ ಯಡಿಯೂರಪ್ಪ ಅವರೇ ನೋಡಿಕೊಳ್ತಿದ್ದಾರೆ.ಹೀಗಿರುವಾಗ  ಅಶೋಕ್ ಬಿಬಿಎಂಪಿ ವಿಷಯದಲ್ಲಿ ಅತಿಯಾದ ಆಸಕ್ತಿಯನ್ನೇಕೆ ತೋರುತ್ತಿದ್ದಾರೋ ಗೊತ್ತಾಗ್ತಿಲ್ಲ ಎನ್ನುವ ಅನುಮಾನವನ್ನು ಪಕ್ಷದವ್ರೇ ವ್ಯಕ್ತಪಡಿಸ್ತಿದ್ದಾರೆ.ಬಜೆಟ್ ವಿಷಯವನ್ನೇ ತೆಗೆದುಕೊಂಡ್ರೆ, ಬಜೆಟ್ ಮುಗಿದ ಮೇಲೆ ಅಷ್ಟೇ ಅದನ್ನೆಲ್ಲಾ ವಿವರಿಸೊಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರಿನಿವಾಸ್,ಮೇಯರ್-ಡೆಪ್ಯುಟಿ ಮೇಯರ್ ಹಾಗೂ ಆಡಳಿತ ಪಕ್ಷದ ನಾಯಕರಿದ್ದರು.

ಆದ್ರೆ ಅವರನ್ನೆಲ್ಲಾ ಬಿಟ್ಟು ಅಶೋಕ್ ವಿವರಣೆ ಕೊಟ್ಟಿದ್ದು ಕೂಡ ಪಕ್ಷದ ಮುಖಂಡರಲ್ಲೇ ಅಸಮಾಧಾನಕ್ಕೆ ಕಾರಣವಾಯ್ತು.ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಹಾಗೂ ಸಚಿವ ವಿ.ಸೋಮಣ್ಣ ಬಜೆಟ್ ಗೆ ಬಂದವರು ಬಜೆಟ್ ನಲ್ಲಿ ತಮ್ಮ ಕ್ಷೇತ್ರಗಳಿಗಾಗಿರುವ ಅನ್ಯಾಯಕ್ಕೆ ಬೇಸರ-ಆಕ್ರೋಶ ವ್ಯಕ್ತಪಡಿಸಿ ಹೊರಟು ಹೋದ್ರು.ಇದೆಲ್ಲವನ್ನು ನೋಡಿದ್ರೆ ಆರ್.ಅಶೋಕ್ ಕಳೆದೋದ ತಮ್ಮ ವರ್ಚಸ್ಸನ್ನು ಮತ್ತೆ ಪಡೆದುಕೊಳ್ಳುವ ಹುನ್ನಾರ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.ಆದ್ರೆ ಅಶೋಕ್ ಅವರ ನಡುವಳಿಕೆ ಹಾಗೂ ಬಿಬಿಎಂಪಿ ವಿಷಯದಲ್ಲಿ ಅತಿಯಾದ ಹಸ್ತಕ್ಷೇಪ ಪಕ್ಷದೊಳಗೇ ಬೇಗುದಿಯೊಂದನ್ನು ಸೃಷ್ಟಿಸ್ತಿದೆ ಎನ್ನೋದಂತೂ ಸುಳ್ಳಲ್ಲ..  

Spread the love
Leave A Reply

Your email address will not be published.

Flash News