ವಿಶಿಷ್ಟ ಮ್ಯಾನರಿಸಂನ ಅಭಿಜಾತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಗೆ ಬಲಿ

0

ಮುಂಬೈ:ಹಿಂದಿ ಚಿತ್ರರಂಗ ಕಂಡ ವಿಭಿನ್ನ-ವಿಶಿಷ್ಟ ಹಾಗೂ ಅತ್ಯಾಕರ್ಷಕ ಮ್ಯಾನಿರಿಸಂ ನಟ ಇರ್ಫಾನ್ ಖಾನ್ ಇನ್ನು ಕೇವಲ ನೆನಪು.ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದೇ ಬಿಟ್ಟೇ ಎನ್ನುವ ಜೀವನೋತ್ಸಾಹದಲ್ಲಿ ಸೆಟೆದುನಿಲ್ಲುವಾಗ್ಲೇ ಕಾಲನ ಉರುಳಿಗೆ ಕೊರಳೊಡ್ಡಿದ್ದಾರೆ.ಕೇವಲ 53ರ ಹರೆಯದಲ್ಲಿ ಚಿತ್ರರಂಗಕ್ಕೆ ಶಾಶ್ವತವಾದ ವಿದಾಯ ಹೇಳಿ 30 ವರ್ಷದ ನಟನೆಯ ಅಗಾಧ ನೆನಪುಗಳನ್ನು ಉಳಿಸಿ ಹೋಗಿದ್ದಾರೆ.ಮುಂಬೈನ ಪ್ರತಿಷ್ಟಿತ ಕೋಕಿಲಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.ಮುದ್ದಾದ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಇರ್ಫಾನ್ ಖಾನ್ ಅಗಲಿದ್ದಾರೆ.

1967ರ ಜನವರಿ 7 ರಂದು ರಾಜಸ್ತಾನದಲ್ಲಿ ಜಾಗಿರ್ದಾರ್ ಖಾನ್ ಹಾಗೂ ಬೇಗಮ್ ಖಾನ್ ಅವರ ಮಗನಾಗಿ ಜನಿಸಿದ ಇರ್ಫಾನ್ ಖಾನ್  ಬಾಲ್ಯದಲ್ಲಿ ಕ್ರಿಕೆಟ್ ಬಗ್ಗೆ ಅತ್ಯಾಸಕ್ತಿ ಹೊಂದಿದ್ದರು.ಎಲ್ಲವೂ ನಿರೀಕ್ಷೆಯಂತೆ ಆಗಿದಿದ್ದರೆ ಒಬ್ಬ ಅತ್ಯುತ್ತಮ ಕ್ರಿಕೆಟಿಗನಾಗಿ ಅವರು ಹೊರಹೊಮ್ಮಬೇಕಿತ್ತು.ಆದರೆ ಕ್ರಿಕೆಟ್ ನಲ್ಲಿ ಹೆಸರು ಮಾಡಿದ್ದ ಬಾಲ್ಯ ಸ್ನೇಹಿತ ಸತೀಶ್ ಶರ್ಮಾ ಇರ್ಫಾನ್ ನಲ್ಲಿ ಕ್ರಿಕೆಟ್ ಆಸಕ್ತಿ ತುಂಬಿದ್ರು.23 ವರ್ಷ ವಯೋಮಾನದ ಸಿಕೆ ನಾಯ್ಡು ಕ್ರಿಕೆಟ್ ಟೂರ್ನಿಗೂ ಇವ್ರು ಸೆಲೆಕ್ಟ್ ಆಗಿದ್ದರು ಎನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ.ಆದ್ರೆ ಹಣದ ಕೊರತೆಯಿಂದಾಗಿ ಅವರು ಆ ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.

ಎಂಎ ಪದವಿ ಪೂರೈಸಿದ ಬಳಿಕ 1984 ರಲ್ಲಿ ಇರ್ಫಾನ್ ತಮ್ಮ ಆಸಕ್ತಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿಕೊಂಡ್ರು ನಂತರ ಮುಂಬೈಗೆ ತೆರಳಿದ್ರು.ಅಲ್ಲಿ ಅವರಿಗೆ ಒಂದೊಂದಾಗೇ ಅವಕಾಶಗಳು ದೊರೆಯುತ್ತಾ ಹೋಗುತ್ವೆ.ಚಾಣಕ್ಯ,ಭಾರತ್ ಏಕ್ ಖೋಜ್,ಬನೆಂಗಿ ಅಪ್ನಿ ಬಾತ್, ಚಂದ್ರಕಾಂತ,ಶ್ರೀಕಾಂತ,ಅನೂಗೂಂಜ್,ಸ್ಟಾರ್ ಬೆಸ್ಟ್ ಸೆಲ್ಲರ್ಸ್, ಸ್ಪರ್ಷ್ ನಂಥ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ದೊರೆಯಿತು.ಇವು ಅವ್ರ ಪ್ರತಿಭೆಯನ್ನು ಓರೆಗೆ ಹಚ್ಚಲು ಸಹಕಾರಿಯಾದ್ವು.

ರಂಗಭೂಮಿಯನ್ನು  ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಇರ್ಫಾನ್ ಖಾನ್ ಗೆ ಚಿತ್ರರಂಗಕ್ಕೆ ಪ್ರವೇಶಿಸೊಕ್ಕೆ ಕಾರಣವಾದದ್ದು ಕೂಡ ರಂಗಭೂಮಿನೆ,ಇವರ ನಟನೆಯನ್ನು ನೋಡಿದ ಮೀರಾ ನಾಯರ್ 1988ರಲ್ಲಿ ಸಲಾಮ್ ಬಾಂಬೆ ಚಿತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸ್ತಾರೆ.ಅಲ್ಲಿಂದ ಇರ್ಫಾನ್ ಮತ್ತೆ ತಿರುಗಿ ನೋಡಲೇ ಇಲ್ಲ.1990ರಲ್ಲಿ ಏಕ್ ಡಾಕ್ಟರ್ ಕೆ ಮೌತ್, ಸಚ್ ಎ ಲಾಂಗ್ ಜರ್ನಿ ರೋಡ್ ಟು ಲಡಾಕ್,ವಾರಿಯರ್ ನಂತ ಡಾಕ್ಯುಮೆಂಟರಿ ಚಿತ್ರಗಳಲ್ಲಿ ನಟಿಸಿದ್ರೂ ಅವರಿಗೆ ಪೂರ್ಣ ಪ್ರಮಾಣದಲ್ಲಿ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು  2005ರಲ್ಲಿ ರೋಗ್ ಎನ್ನುವ ಚಿತ್ರದಲ್ಲಿ. ವಿಮರ್ಷಕರಿಂದ ಪ್ರಶಂಸೆಗೆ ಪಾತ್ರವಾದ ಆ ಚಿತ್ರದ ನಂತರ  ಅನೇಕ  ಅವಕಾಶಗಳು ಸಿಗುತ್ತಾ ಹೋದ್ವು.

ಕೇವಲ ಹಿಂದಿ ಮಾತ್ರವಲ್ಲ ತಮ್ಮ ಮ್ಯಾನರಿಸಂ ಹಾಗೂ ಅತ್ಯದ್ಭುತ ನಟನೆಯಿಂದಾಗಿ ಬ್ರಿಟಿಷ್ ಹಾಗೂ ಅಮೆರಿಕಾದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.2004ರಲ್ಲಿ ಇರ್ಫಾನ್ ನಟನೆಯ ಹಾಸಿಲ್ ಚಿತ್ರ ಅವರಿಗೆ ಫಿಲ್ಮ್ ಫೇರ್  ಉತ್ತಮ ವಿಲನ್ ಪ್ರಶಸ್ತಿ ಸಿಗುತ್ತೆ.ನೆಗೆಟಿವ್ ಶೇಡ್ ಇದ್ದ ಆ ಚಿತ್ರದ ಬಳಿಕೆ ಅನೇಕ ಚಿತ್ರಗಳಲ್ಲಿ ವಿಲನ್ ಪಾತ್ರಗಳನ್ನು ಮಾಡ್ತಾರೆ. ತೆಲುಗಿನ ಸೈನಿಕುಡು ಚಿತ್ರದಲ್ಲೂ ಇರ್ಫಾನ್ ವಿಲನ್ ಪಾತ್ರದಲ್ಲಿ ನಟಿಸಿದ್ರು.2007ರಲ್ಲಿ ಬಂದ ಮೆಟ್ರೋ ಚಿತ್ರ ಇರ್ಫಾನ್ ವೃತ್ತಿ ಬದುಕಿನಲ್ಲಿ ಹೊಸ ತಿರುವನ್ನೇ ಕೊಡ್ತು.ಕೊಂಕಣ್ ಸೇನ್ ಜತೆಗಿನ ಇವರ ಕೆಮಿಸ್ಟ್ರಿ ಇಡೀ ಚಿತ್ರರಂಗದಿಂದ ಪ್ರಶಂಸೆ ಪಡೆಯುತ್ತೆ.ಆ ಚಿತ್ರದಲ್ಲಿನ ನಟನೆಗೆ ಇರ್ಫಾನ್ ಉತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿ ಪಡೆಯುತ್ತಾರೆ. ನಟನೆಯ ಜತೆಗೆ ರಂಗಭೂಮಿ ಹಾಗೂ ಕಿರುತೆರೆ ನಟನೆಯನ್ನು ಎಂದೂ ಬಿಡದ ಇರ್ಫಾನ್ ಖಾನ್ ಗೆ ಹೆಸರು ತಂದುಕೊಟ್ಟ ಮತ್ತೊಂದು ಚಿತ್ರವೇ ಆಸ್ಕರ್ ಪ್ರಶಸ್ತಿ ವಿಜೇತ ಸ್ಲಂ ಡಾಗ್ ಮಿಲೇನಿಯರ್ ಈ ಚಿತ್ರದಲ್ಲಿನ ನಟನೆಗೆ “”ಸ್ಕ್ರೀನ್ ಆಕ್ಟರ್ ಗಿಲ್ಡ್ ಅವಾರ್ಡ್ ಫಾರ್ ಔಟ್ ಸ್ಟ್ಯಾಂಡಿಂಗ್ ಫರ್ಫಾಮೆನ್ಸ್ ಬೈ ಎ ಕಾಸ್ಟ್ ಮೋಷನ್ ಪಿಕ್ಚರ್ಸ್”” ಪುರಸ್ಕಾರ ಸಿಗುತ್ತೆ.

ಅದರ ಬೆನ್ನಲ್ಲೇ ಅವರು 2009 ರಲ್ಲಿ ಆಸಿಡ್ ಫ್ಯಾಕ್ಟರಿ ಸಿನೆಮಾ ಮಾಡ್ತಾರೆ,ಅದು ಕೂಡ ವಿಮರ್ಷಕರ ಪ್ರಶಂಸೆಗೆ ಪಾತ್ರವಾಗುತ್ತೆ. 2013 ರಲ್ಲಿ ನಟಿಸಿದ ಲಂಚ್ ಬಾಕ್ಸ್ ಸಿನೆಮಾದಲ್ಲಿ ನಟಿಸ್ತಾರೆ.ವಿಮರ್ಷಕರ ಮೆಚ್ಚುಗೆಗಷ್ಟೇ ಆ ಚಿತ್ರ ಪಾತ್ರವಾಗಲಿಲ್ಲ.ಭಾರತೀಯ ಸಿನೆಮಾ ಇತಿಹಾಸದಲ್ಲೇ ಅತೀ ಹೆಚ್ಚು ಗಳಿಕೆಯ ಸಿನೆಮಾಗಳಲ್ಲೊಂದು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗುತ್ತೆ. 2014ರಲ್ಲಿ ಗೂಂಡೆ,ಎಕ್ಸ್ ;ಪೋಸ್,ಹೈದರ್, 2015ರಲ್ಲಿ ಫಿಕು,ಜುರಾಸಿಕ್ ವರ್ಡ್ಲ್, ತಲ್ವಾರ್,ಜಝ್ಬಾ, 2017 ರಲ್ಲಿ ಹಿಂದಿ ಮೀಡಿಯಂ(ಈ ಚಿತ್ರ ಅವರಿಗೆ ಫಿಲ್ಮ್ ಫೇರ್  ಅತ್ಯುತ್ತಮ ನಟ ಪ್ರಶಸ್ತಿ ದೊರಕಿಸಿಕೊಡುತ್ತೆ),  2018 ರಲ್ಲಿ ಕಾರ್ವಾ,ಬ್ಲ್ಯಾಕ್ ಮೇಲ್,ಹಿಂದಿ ಮೀಡಿಯಂ-2 ಚಿತ್ರಗಳಲ್ಲೂ ನಟಿಸಿ ಮೆಚ್ಚುಗೆಗೆ ಪಾತ್ರವಾದರು.

ರಾಯಭಾರಿಯಾಗಿಯೂ ಕಾರ್ಯನಿರ್ವಹಣೆ: ರಾಜಸ್ತಾನದಲ್ಲಿ ಹುಟ್ಟಿದ ಪುಣ್ಯಕ್ಕೆ ಆ ಮಣ್ಣಿಗೆ ಏನಾದ್ರೊಂದಿಷ್ಟು ಕೊಡುಗೆ ಕೊಡುವ ಉದ್ದೇಶದಲ್ಲಿ ರಿಸರ್ಜೆಂಟ್ ರಾಜಸ್ತಾನ್ ಅಭಿಯಾನದ ರಾಯಭಾರಿಯಾಗಿ ಕೆಲಸ ಮಾಡಿದ್ದರು ಇರ್ಫಾನ್,

ವೈಯುಕ್ತಿಕ ಜೀವನದಲ್ಲಿ ಅತ್ಯಂತ ಸುಖಿಯಾಗಿದ್ದ ಇರ್ಫಾನ್ ಖಾನ್: ವೈಯುಕ್ತಿಕ ಜೀವನ ನೋಡೋದಾದ್ರೆ 1995 ರಲ್ಲಿ ಇರ್ಫಾನ್ ಬರಹಗಾರ್ತಿ ಹಾಗೂ ಡ್ರಾಮಾ ಸ್ಕೂಲ್ ನಲ್ಲಿ ತನ್ನ ಸಹವರ್ತಿಯಾಗಿದ್ದ ಸುತಾಪ ಸಿಕ್ದರ್ ಅವರನ್ನು ಮದುವೆಯಾದ್ರು.ಬಾಬಿಲ್ ಹಾಗೂ ಅಯಾನ್ ಎನ್ನುವ ಇಬ್ಬರು ಮಕ್ಕಳ ಸುಖಿಸಂಸಾರ ಇವರದಾಗಿತ್ತು.  ಹೀಗಿರುವಾಗ್ಲೇ ಫೆಬ್ರವರಿ 2018 ರಲ್ಲಿ ಇರ್ಫಾನ್ ಆಸ್ಪತ್ರೆಗೆ ದಾಖಲಾಗ್ತಾರೆ.ಮಾದ್ಯಮಗಳು ಅವರಿಗೆ ಬ್ರೈನ್ ಕ್ಯಾನ್ಸರ್ ಇದೆ ಬಿಂಬಿಸಿದ್ದವು,ಮಾನಸಿಕವಾಗಿ ಕುಗ್ಗೋಗಿದ್ದ ಇರ್ಫಾನ್ ತನಗೆ ಇರುವುದು ಬ್ರೈನ್ ಕ್ಯಾನ್ಸರ್ ಅಲ್ಲ,ನ್ಯೂರೋ ಎಂಡೋ ಕ್ರೈನ್ ಟ್ಯೂಮರ್ ಎಂದು ಉತ್ತರಿಸಿ ಬಾಯಿ ಮುಚ್ಚಿಸಿದ್ರು.ಒಂದಷ್ಟು ದಿನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದ ಇರ್ಫಾನ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದ್ರು,ಆದ್ರೆ ವಿಧಿಯ ಬರಹವೇ ಬೇರೆ ಇತ್ತು ಎನ್ಸುತ್ತೆ ಇಂದು ಬೆಳಗ್ಗೆ(ಏಫ್ರಿಲ್ 29-2020) ಕೊನೆಯುಸಿರೆಳೆದಿದ್ದಾರೆ.

ನೆನಪಿನಲ್ಲುಳಿಯುವ ಚಿತ್ರಗಳು: 1988ರಲ್ಲಿ ಸಲಾಮ್ ಬಾಂಬೆಯಿಂದ ವೃತ್ತಿ ಜೀವನ ಆರಂಭಿಸಿದ ಇರ್ಫಾನ್ ಖಾನ್ ಅವರ ನಟನೆಯ ನೆನಪಿಸಿಕೊಳ್ಳಲೇಬೇಕಾದ ಕೆಲವು ಚಿತ್ರಗಳ ಪಟ್ಟಿ ಮಾಡೋದಾದ್ರೆ ಕಮಲಾ ಕಿ ಮೌತ್, ಜಜೀರೆ, ದೃಷ್ಟಿ, ಏಕ್ ಡಾಕ್ಟರ್ ಕಿ ಮೌತ್, ಮುಜ್ ಸೆ ದೋಸ್ತಿ ಕರೋಗೆ, ಕರಾಮತಿ ಕೋರ್ಟ್, ಕ್ಲೌಡ್ ಡೋರ್ ,ಪುರುಷ್, ಬಡಾ ದಿನ್, ದಿ ಗೋಲ್,ಕಸೂರ್, ಖಾಲಿ ಸಲ್ವಾರ್, ಗುನಾ, ಫುಟ್ ಪಾತ್, ಮಕ್ಬೂಲ್, ಚಾಕಲೇಟ್, ರೋಗ್, ಬ್ಲಾಕ್ ಮೇಲ್, ಅಂಗ್ರೇಜಿ ಮೀಡಿಯಂ,ಫಸಲ್, ಕಾರ್ವಾ, ಹಿಂದಿ ಮೀಡಿಯಂ, ಜಸ್ಬಾ, ತಲ್ವಾರ್, ಹೈದರ್, ಗುಂಡೆ ,ಪಿಕು, ಲೈಫ್ ಆಫ್ ಪಿ

ಪ್ರಶಸ್ತಿಗಳ ಮಹಾಪೂರವನ್ನೇ ಪಡೆದಿದ್ದ ಅಭಿಜಾತ ನಟ: ಪ್ರಶಸ್ತಿಗಳ ವಿಷಯಕ್ಕೆ ಬಂದ್ರೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ  ಪದ್ಮಶ್ರೀ ಪ್ರಶಸ್ತಿಯೂ ಇರ್ಫಾನ್ ಖಾನ್ ಕೊರಳನ್ನು ಅಲಂಕರಿಸಿತ್ತು.ರಾಷ್ಟ್ರೀಯ ಪ್ರಶಸ್ತಿ,ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು.ಇನ್ನು ಇರ್ಫಾನ್ ಖಾನ್ ಅವರಿಗೆ ಪ್ರಶಸ್ತಿ ಹಾಗೂ ಹೆಸೆರು ತಂದುಕೊಟ್ಟ ಚಿತ್ರಗಳ ಪಟ್ಟು ಮಾಡೋದಾದ್ರೆ, ಹಾಸಿಲ್, ಮಕ್ಬೂಲ್, ನೇಮ್ ಸೇಕ್, ಲೈಫ್ ಇನ್ ಎ ಮೆಟ್ರೊ ,ಸ್ಲಮ್ ಡಾಗ್ ಮಿಲೇನಿಯರ್, ಮುಂಬೈ ಮೇರಿ ಜಾನ್ ,ನ್ಯೂಯಾರ್ಕ್ ,ಸಾತ್ ಕೂನ್ ಮಾಫ್, ಪಾನ್ ಸಿಂಗ್ ತೋಮಾರ್, ಲಂಚ್ ಬಾಕ್ಸ್, ಕಿಸ್ಸಾ ,ಡೆತ್ ಡೇ, ಗುಂಡೆ ,ತಲ್ವಾರ್, ಪಿಕೂ, ಹಿಂದಿ ಮೀಡಿಯಂ, ಖರೀಬ್ ಖರೀಬ್ ಸಿಂಗಲ್.

ಗುಟುಕು ಉಸಿರಿರುವವರೆಗೂ ಬದುಕನ್ನು ಹೆಚ್ಚೆಚ್ಚು ಪ್ರೀತಿಸುತ್ತಿದ್ದ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ಭಾರತೀಯ ಚಿತ್ರರಂಗದ ಅತೀ ದೊಡ್ಡ ದುರಂತ.ನಟನೆಯ ಜತೆಗೆ ಮ್ಯಾನರಿಸಂ ಬಗ್ಗೆ ಸಾಕಷ್ಟು ಹೇಳಿಕೊಟ್ಟು ಹೋಗಿರುವ ನಟನಾಗುರುವಿಗೆ ಕನ್ನಡ ಫ್ಲಾಶ್ ನ್ಯೂಸ್ ಬಳಗದ ನುಡಿ ಶೃದ್ಧಾಂಜಲಿ.

Spread the love
Leave A Reply

Your email address will not be published.

Flash News