“ಮನಸು ಗಾಂಧೀಬಜಾರಿ”ನಲ್ಲಿ ಶಾಶ್ವತವಾಗಿ ಕಳೆದೋದ ನಿತ್ಯೋತ್ಸವ ಕವಿ ನಿಸಾರ್ ಅಹಮದ್

0

ಬೆಂಗಳೂರು:ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್ ಅಲಿಯಾಸ್ ಪ್ರೊ.ಕೆ.ಎಸ್.ನಿಸಾರ್ ಅಹಮದ್ (84)  ಇನ್ನಿಲ್ಲ.

ಕನ್ನಡ ಸಾಹಿತ್ಯ ಲೋಕಕ್ಕೆ ನಿತ್ಯೋತ್ಸವ ಕವಿ ಎಂದೇ ಚಿರಪರಿಚಿತವಾಗಿದ್ದ ಪ್ರೋ.ಕೆ.ಎಸ್ ನಿಸಾರ್ ಅಹಮದ್ ಧೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.1936ರ ಫೆಬ್ರವರಿ 5 ರಂದು ದೇವನಹಳ್ಳಿಯಲ್ಲಿ ಜನಿಸಿದ ನಿಸಾರ್ ಅಹಮದ್ ಓದಿದ್ದು ಭೂ ವಿಜ್ಞಾನವಾದ್ರೂ ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ಕಂಡುಕೊಂಡಿದ್ದು ಕನ್ನಡ ಸಾಹಿತ್ಯದಲ್ಲಿ.ಮುಸ್ಲಿಂರಿಗೂ ಸಾಹಿತ್ಯಕ್ಕೂ ಎಲ್ಲಿಯ ನಂಟು ಎನ್ನುವ ಪ್ರಶ್ನೆಗೆ ತಮ್ಮ ಅತ್ಯದ್ಭುತ ಕನ್ನಡ ಭಾಷಾ ಪಾಂಡಿತ್ಯ-ಸಾಹಿತ್ಯದ ಲಾಲಿತ್ಯದಿಂದಲೇ ಟೀಕಾಕಾರಿಗೆ ಉತ್ತರ ಕೊಟ್ಟವರು.ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅಜಾತಶತೃವಾಗಿ ಬದುಕಿ ಬಾಳಿದವ್ರು.

ಉಪನ್ಯಾಸಕ ವೃತ್ತಿಯನ್ನು ತುಂಬಾ ಇಷ್ಟಪಟ್ಟು ಆಯ್ದುಕೊಂಡ ನಿಸಾರ್ ಅಹಮದ್ ಕೆಲಸ ಮಾಡಿದ ಕಡೆಯಲ್ಲೆಲ್ಲಾ ತಮ್ಮ ಸಾಹಿತ್ಯದ ಮೂಲಕ ಜನಮನ ಗೆದ್ದವರು,ಅವರ ಒಂದೊಂದು ಅಪೂರ್ವ ರಚನೆಗಳು ಜನ್ಮ ತಳೆದದ್ದು ಕೂಡ ಈ ಅಲೆಮಾರಿತನದಿಂದ್ಲೇ ಎಂದು ನಿಸಾರ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು.

ಹಾಗೆ ನೋಡಿದ್ರೆ ನಿಸಾರ್ ಅಹಮದ್ ಅವರಿಗೆ ಸಾಹಿತ್ಯಪ್ರೇಮ ಚಿಗುರೊಡೆದದ್ದು 10ರ ಹರೆಯದಲ್ಲಿ.ಆ ವಯಸ್ಸಿನಲ್ಲಿ ಬರೆದ ಜಲಪಾತ ಎನ್ನುವ ಪದ್ಯ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟವಾದಾಗ ಬಾಲಕ ನಿಸಾರ್ ಗೆ ಎಲ್ಲಿಲ್ಲದ ಹಿಗ್ಗು.ಅದೇ ಆಸಕ್ತಿಯನ್ನು ಮುಂದುವರೆಸಿಕೊಂಡು ಸಾಹಿತ್ಯದಲ್ಲಿ ಮಾಡಿದ ಕೃಷಿ ಅವರನ್ನು ನಿತ್ಯೋತ್ಸವ ಕವಿ ಮಟ್ಟಕ್ಕೆ ಬೆಳೆಸಿದ್ದು ಅವರ ಸಾಮರ್ಥ್ಯ ಹಾಗು ಪ್ರತಿಭಾ ಕೌಶಲ್ಯಕ್ಕೆ ಹಿಡಿದ ಕೈ ಗನ್ನಡಿ.ಸಾಯುವ ಎರಡು ವರ್ಷದ ಮುನ್ನ ಅಂದ್ರೆ 2018ರವರೆಗೂ ಅವರು ಬರೆದ ಕವನ ಸಂಕಲನ 10.14 ವೈಚಾರಿಕ ಕೃತಿ,5 ಮಕ್ಕಳ ಸಾಹಿತ್ಯ,5 ಅನುವಾದಿತ ಕೃತಿ ಹಾಗೂ 13 ಸಂಪಾದನಾ ಗ್ರಂಥಗಳನ್ನು ರಚಿಸಿದ್ದರು.

ನಿಸಾರ್ ಅಹಮದ್ ಎಂದಾಕ್ಷಣ ನೆನಪಿಗೆ ಬರುವಂಥ ಕೆಲವು ರಚನೆಗಳ ಬಗ್ಗೆ ಹೇಳೋದಾದ್ರೆ ಸದಾ ನಿಸಾರ್ ಅವ್ರನ್ನು ನೆನಪಿಸುವ ನಿತ್ಯೋತ್ಸವ,,ಮನಸು ಗಾಂಧೀ ಬಜಾರು ಕವನ ಸಂಕಲನ.ನಿತ್ಯೋತ್ಸವ ಅವರ ಜನಪ್ರಿಯತೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಿತೆಂದ್ರೆ 1978ರಲ್ಲಿ ಅದು ಸುಗಮ ಸಂಗೀತ ಧ್ವನಿಮುದ್ರಿಕೆಯಾಗೂ ಹೊರಬಂದು ದೊಡ್ಡ ಸಂಖ್ಯೆಯ ಸಾಹಿತ್ಯಾಸಕ್ತರನ್ನು ತಲುಪಿತು.ಅವರ ಭಾವಗೀತೆಗಳ 134 ಧ್ವನಿಮುದ್ರಿಕೆಗಳು ಕೂಡ ನಿಸಾರ್ ಜನಪ್ರಿಯತೆಯನ್ನು ಹೆಚ್ಚಿಸಿದ್ವು.

ಅದರ ಬೆನ್ನಲ್ಲೇ ರಾಜಕೀಯ ವಿಡಂಬನೆಯ ಕುರಿಗಳು ಸಾರ್ ಕುರಿಗಳು, ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ನಿಸಾರ್ ಅಹಮದ್ ಅವರ ಸೃಜನಶೀಲತೆಗೆ ಕೈಗನ್ನಡಿಯಾಯ್ತು.ಹಾಗೆಯೇ “”ಮನಸು ಗಾಂಧಿ ಬಜಾರು”” (1960)ನೆನೆದವರ ಮನದಲ್ಲಿ (1964,), ಸುಮಹೂರ್ತ (1967),ಸಂಜೆ ಐದರ ಮಳೆ (197೦),ನಾನೆಂಬ ಪರಕೀಯ (1972),ಆಯ್ದ ಕವಿತೆಗಳು (1974),ನಿತ್ಯೋತ್ಸವ (1976) ಸ್ವಯಂ ಸೇವೆಯ ಗಿಳಿಗಳು (1977) ಅನಾಮಿಕ ಆಂಗ್ಲರು(1982),,ಬರಿರಂತರ (1990),ಸಮಗ್ರ ಕವಿತೆಗಳು (1991),ನವೋಲ್ಲಾಸ (1994),ಆಕಾಶಕ್ಕೆ ಸರಹದ್ದುಗಳಿಲ್ಲ (1998),ಅರವತ್ತೈದರ ಐಸಿರಿ(2001),ಸಮಗ್ರ ಭಾವಗೀತೆಗಳು(2001)ಪ್ರಾತಿನಿಧಿಕ ಕವನಗಳು(2002).

 

ನಿಸಾರ್ ಅಹಮದ್ ಅವರ ಸಾಹಿತ್ಯ ಕೃಷಿಗೆ ಸಿಕ್ಕ ಪ್ರಶಸ್ತಿ-ಪುರಸ್ಕಾರಗಳು ಹತ್ತು ಹಲವು,.ಅದರಲ್ಲಿ 2006ರಲ್ಲಿ ಮಾಸ್ತಿ,ಪಂಪ ಪ್ರಶಸ್ತಿ,ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ನಾಡೋಜ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ,ಅರಸು ಪ್ರಶಸ್ತಿ,ಅನಕೃ ಪ್ರಶಸ್ತಿ ಪ್ರಮುಖವಾದಂತವು.ನಿಸಾರ್ ಅಹಮದ್ ಅವರ ಅಚ್ಚುಮೆಚ್ಚಿನ ಊರು ಹಾಗೂ ನಿತ್ಯೋತ್ಸವ ಕವಿತೆ ಸ್ಪುರಿಸಲು ಕಾರಣವಾದ ಶಿವಮೊಗ್ಗ ಜಿಲ್ಲೆಯಲ್ಲಿ 2006 ರಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡ ಹೆಗ್ಗಳಿಕೆ ನಿಸಾರ್ ಅಹಮದ್ ಅವರದು. ಧೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ  ನಿಸಾರ್ ಅಹಮದ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.ಅವರ ಅಗಲಿಕೆಗೆ ಕನ್ನಡ ಫ್ಲಾಶ್ ನ್ಯೂಸ್ ಶೃದ್ಧಾಂಜಲಿ ಸಲ್ಲಿಸುತ್ತೆ.

ಕವಿ ನಿಸಾರ್ ಅಹಮದ್ ಅವರೆಂದಾಕ್ಷಣ ನೆನಪಾಗುವ ನಿತ್ಯೋತ್ಸವ ಹಾಡು,..ನುಡಿಶೃದ್ಧಾಂಜಲಿಗೆ ಈ ಹಾಡಿಗಿಂತ ಮಹೋನ್ನತವಾದ ಆಯ್ಕೆ ಮತ್ತೊಂದಿರಲು ಸಾಧ್ಯವೇ ಇಲ್ಲ..

Spread the love
Leave A Reply

Your email address will not be published.

Flash News