ಮೈಸೂರು ಅನಂತಸ್ವಾಮಿ ಇರದಿದ್ರೆ “ನಿತ್ಯೋತ್ಸವ” ಮಾಮೂಲು ಕವನವಾಗುತ್ತಿತ್ತು ಎಂದಿದ್ರು ನಿಸಾರ್ ಅಹಮದ್.

0
ಪ್ರೊ.ನಿಸಾರ್ ಅಹಮದ್ ಅವರ ನಿತ್ಯೋತ್ಸವ ಕವನ ಸೃಷ್ಟಿಗೆ ಸ್ಪೂರ್ತಿಯೇ ವಿಶ್ವವಿಖ್ಯಾತ ಜೋಗ ಜಲಪಾತ
ಪ್ರೊ.ನಿಸಾರ್ ಅಹಮದ್ ಅವರ ನಿತ್ಯೋತ್ಸವ ಕವನ ಸೃಷ್ಟಿಗೆ ಸ್ಪೂರ್ತಿಯೇ ವಿಶ್ವವಿಖ್ಯಾತ ಜೋಗ ಜಲಪಾತ….

ಬೆಂಗಳೂರು/ಶಿವಮೊಗ್ಗ:ಒಂದು ಕವನ ಒಂದಿಡೀ ವ್ಯಕ್ತಿತ್ವವನ್ನು ಬದುಕಿಸುತ್ತೆ…ಮುನ್ನಡೆಸುತ್ತೆ…ವಿಶ್ವಮಾನ್ಯಗೊಳಿಸಿಕೊಡೋದು ತೀರಾ ಅಪರೂಪ…ಅಷ್ಟೇ ಅಲ್ಲ ಆಶ್ಚರ್ಯಕರ ಕೂಡ.ಕವಿ ನಿಸಾರ್ ಅಹಮದ್ ಇಂಥದ್ದೊಂದು ಉದಾಹರಣೆಯಾಗಿ ನಿಲ್ಲುತ್ತಾರೆ.ಅದಕ್ಕೆ ಕಾರಣವಾಗಿದ್ದು ಅವರ ನಿತ್ಯೋತ್ಸವ ಕವನ.ತನಗೆ ಹಾಗೂ ತನ್ನ ಸಾಹಿತ್ಯಕೃಷಿಗೆ ದೊಡ್ಡ ಅಸ್ಥಿತ್ವ-ಹೆಗ್ಗುರುತು ನೀಡಿದ್ದೇ ನಿತ್ಯೋತ್ಸವ ಕವನ ಎನ್ನುವುದನ್ನು ನಿಸಾರ್ ಅವರೇ ಹೇಳಿಕೊಂಡಿದ್ದರು.ಹಾಗಾಗಿ ನಿತ್ಯೋತ್ಸವ ಬಿಟ್ಟು ನಿಸಾರ್ ಇಲ್ಲ..ನಿಸಾರ್ ಅವರನ್ನು ನಿತ್ಯೋತ್ಸವದ ಹೊರತಾಗಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ ಎನ್ನೋದು ಉತ್ಪ್ರೇಕ್ಷೆಯಾಗಿರಲಿಲ್ಲ ಬಿಡಿ.

ನಿಸಾರ್ ಅಹಮದ್ ಗೆ ಇಷ್ಟವಾಗ್ತಿದ್ದ ಎರಡು ಸ್ಥಳಗಳಲ್ಲಿ ಲಾಲ್ ಭಾಗ್ ಹಾಗೂ ಶಿವಮೊಗ್ಗದ ಮಲೆನಾಡು ಪ್ರಮುಖವಾದದ್ದು.ತಮ್ಮ ಬಾಲ್ಯದ ಆಟಗಳಿಗೆ ನೆಲೆ ಕೊಟ್ಟಿದ್ದೆನ್ನುವ ಕಾರಣಕ್ಕೆ ಲಾಲ್ ಭಾಗ್ ಇಷ್ಟವಾದ್ರೆ ತನ್ನ ಕಾವ್ಯ ಕೃಷಿಗೆ ಬೇಕಾದ ಕಸುವನ್ನು ಮೊಗೆ ಮೊಗೆ ಕೊಟ್ಟ ಕಾರಣಕ್ಕೆ ಶಿವಮೊಗ್ಗದ ಮಲೆನಾಡು ಅವರಿಗೆ ಇಷ್ಟವಾಗ್ತಿದ್ದುದು,.ವೃತ್ತಿಯಲ್ಲಿ ಭೂಗರ್ಭಶಾಸ್ತ್ರದ ಉಪನ್ಯಾಸಕರಾಗಿದ್ದ ನಿಸಾರ್ ಅವರು ಹೆಚ್ಚು ಕಾಲದ ಉಪನ್ಯಾಸಕ ವೃತ್ತಿ ಮಾಡಿದ್ದು ಶಿವಮೊಗ್ಗದಲ್ಲೇ ಎನ್ನುವುದು ಗಮನಿಸ್ಬೇಕಾದ ಸಂಗತಿ.ಹಾಗಾಗಿನೇ ಶಿವಮೊಗ್ಗ ಎಂಬ ಹೆಸರು ಕೇಳ್ತಿದ್ದಂಗೆ ನಿಸಾರ್ ಅವರ ಕಿವಿ-ಕಣ್ ಮನಸುಗಳೆಲ್ಲಾ ಪುಳಕಗೊಳ್ತಿದ್ವು.

ನಿತ್ಯೋತ್ಸವ ಕವನ ಹುಟ್ಟಿದ್ಹೇಗೆ ಎನ್ನುವ ಪ್ರಶ್ನೆ ಸಾವಿರ ಬಾರಿ ಅವರನ್ನು ಕೇಳಿದ್ದಿದೆ.ಎಷ್ಟೇ ಬಾರಿ ಕೇಳಿದ್ರೂ ಅದೇ ಮುಗ್ದತೆ-ಭಾವುಕತೆ-ಭಾವಪರವಶತೆಯಲ್ಲಿ ನೆನಪುಗಳನ್ನು ತಾಜಾಗೊಳಿಸಿಕೊಳ್ತಿದ್ರು ನಿಸಾರ್.ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿತ್ಯೋತ್ಸವ ಕವನ ಹುಟ್ಟಿದ ಪರಿಯನ್ನು ಅವರೇ ವಿವರಿಸಿದ್ದಾರೆ ಕೇಳಿ.

ನಿಸಾರ್  ಅಹಮದ್  ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳವು.ನವೆಂಬರ್ ಕನ್ನಡ ರಾಜ್ಯೋತ್ಸವದ ಸಂದರ್ಭ ಅದು(ಇವತ್ತಿನ ರಾಜಕೀಯ ಉದ್ದೇಶದ ರಾಜ್ಯೋತ್ಸವಗಳ ಬಗ್ಗೆ ನಿಸಾರ್ ಗೆ ಸಾಕಷ್ಟು ಬೇಸರವಿತ್ತು.)ಅದಾಗ್ಲೇ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿ ಹೆಸರು ಮಾಡಿದ್ದ ನಿಸಾರ್ ಅಹಮದ್ ಅವರನ್ನು ಮೈಸೂರು ಆಕಾಶವಾಣಿ ಅವ್ರು ಸಂಪರ್ಕಿಸಿ ರಾಜ್ಯೋತ್ಸವಕ್ಕೆ ಒಂದು ಕವನ ಬರೆದುಕೊಡಿ ಎಂದು ವಿನಂತಿಸಿದ್ರು.ಅದನ್ನು ತಿಂಗಳಪೂರ್ತಿ ಆಕಾಶವಾಣಿಯಲ್ಲಿ ಹಾಡಿಸಬೇಕು ಎಂಬ ವಿನಂತಿಯನ್ನೂ ಮಾಡಿದ್ರಂತೆ.

ಪ್ರೊ.ಕೆ.ಎಸ್ ನಿಸಾರ್ ಅಹಮದ್ ನಿತ್ಯೋತ್ಸವ ಕವನ ಹುಟ್ಟಲು ಕಾರಣವಾದ ಸ್ಥಳಗಳಲ್ಲಿ ಅವರು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ ಸಹ್ಯಾದ್ರಿ ಕಾಲೇಜ್ ಕೂಡ ಒಂದು
ಪ್ರೊ.ಕೆ.ಎಸ್ ನಿಸಾರ್ ಅಹಮದ್ ನಿತ್ಯೋತ್ಸವ ಕವನ ಹುಟ್ಟಲು ಕಾರಣವಾದ ಸ್ಥಳಗಳಲ್ಲಿ ಅವರು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ ಸಹ್ಯಾದ್ರಿ ಕಾಲೇಜ್ ಕೂಡ ಒಂದು

ಹಾಗೆ ಕೇಳಿಕೊಂಡ ಮನವಿಯನ್ನು ನಿಸಾರ್ ಮರೆತಿದ್ದರಂತೆ.ಅದನ್ನು ಮತ್ತೆ ನೆನಪಿಸ್ಲಿಕ್ಕೆ ಆಕಾಶವಾಣಿಯವರು ಮತ್ತೆ ಸಂಪರ್ಕಿಸಿದಾಗ ಶಿವಮೊಗ್ಗದಿಂದ ರಜೆಗೆಂದು ಬೆಂಗಳೂರಿನ ಜಯನಗರದಲ್ಲಿನ ತಮ್ಮ ಮನೆಗೆ  ಬಂದ್ರು.ತಲೆಗೆ ಕೆಲಸ ಕೊಟ್ಟ ಕೆಲ ಕ್ಷಣಗಳಲ್ಲೇ ಅಪ್ರಯತ್ನಪೂರ್ವಕವಾಗಿ ಹುಟ್ಟಿಕೊಂಡ ಕವನವೇ ಇದು.

ಬರೆಯಬೇಕು..ಆದ್ರೆ ಏನ್ ಬರೆಯಬೇಕು ಎಂದು ತಲೆಗೆ ಹುಳ ಬಿಟ್ಟುಕೊಂಡ ನಿಸಾರ್ ಗೆ ಆ ಕ್ಷಣಕ್ಕೆ ನೆನಪಾಗಿದ್ದೇ  ಶಿವಮೊಗ್ಗ. ಈಗಿನ ಶಿವಮೊಗ್ಗ ಆಗ ಇಷ್ಟು ಬೆಳೆದೇ ಇರಲಿಲ್ಲ ಬಿಡಿ..ಹಳೆಯ ಸೇತುವೆ ದಾಟಿ ಹೋಗಲು ಹೇಳಿಕೊಳ್ಳುವಂಥ ವ್ಯವಸ್ಥೆಗಳಿರಲಿಲ್ಲ.ಜನ ಹೆದರುವಂತ ನಿರ್ಜನತೆ. ಸಹ್ಯಾದ್ರಿ ಕಾಲೇಜಿಗೆ ಹೋಗುವ ಮಾರ್ಗದ ಇಕ್ಕೆಲಗಳಲ್ಲೂ ಬರೀ ಹಸಿರು..ಬೃಹತ್ ಮರಗಳು..ಜನ ವಸತಿಯೇ ಇಲ್ಲದ ವಾತಾವರಣ,ಅಂಥಾ ವಾತಾವರಣವನ್ನು ಕವಿ ನಿಸಾರ್ ಮಾತ್ರ ನಿತ್ಯವೂ ಎಂಜಾಯ್ ಮಾಡುತ್ತಿದ್ದರಂತೆ. ಹಳೆಯ ಸೇತುವೆ ದಾಟಿ ಸಹ್ಯಾದ್ರಿ ಕಾಲೇಜಿಗೆ ನಿತ್ಯ ನಡೆದು ಹೋಗುತ್ತಿದ್ದ ಆ ಕ್ಷಣಗಳು ನೆನಪಾದ್ವಂತೆ.ತತ್ ಕ್ಷಣಕ್ಕೆ ಲೇಖನಿ ಹಿಡಿದ ಅವರ ತಲೆಯಲ್ಲಿ ಅಪ್ರಯತ್ನಪೂರ್ವಕವಾಗಿ ಹೊಳೆದ ಸಾಲುಗಳೇ “”ನಿತ್ಯೋತ್ಸವ ತಾಯೇ ನಿತ್ಯೋತ್ಸವ”” ವಂತೆ.

ಶತಶತಮಾನಗಳಿಂದ್ಲೂ ಪ್ರಕೃತಿ ಮಾತೆಗೆ ನಿರಂತರ ಹಾಗೂ ಶಾಶ್ವತವಾಗಿ ನಡೆಯುತ್ತಿರುವ ಉತ್ಸವವನ್ನು ಮೆಲುಕಾಕಿ ಬರೆದ ಸಾಲುಗಳೇ ಕವನವಾಯ್ತು. ಭೂಗರ್ಭ ಶಾಸ್ತ್ರದ ಉಪನ್ಯಾಸಕರಾಗಿದ್ದರಿಂದ ಕವನದಲ್ಲಿ ಲೋಹದದಿರು ಪದದ ಉಲ್ಲೇಖವಾಯ್ತಂತೆ.ಹೊಳೆದಾಗ್ಲೆಲ್ಲಾ ತಮ್ಮ ಮನೆಯ ಅಟ್ಟದ ಮೇಲೆ ಹೋಗಿ ಎರೆಡೆರೆಡೇ ಸಾಲುಗಳನ್ನು ಬರೆದು ಪೂರ್ಣಗೊಳಿಸಿದ ಕವನವೇ ನಿತ್ಯೋತ್ಸವ ತಾಯೇ ನಿತ್ಯೋತ್ಸವ ಎಂದು ನಿಸಾರ್ ಹೇಳಿಕೊಂಡಿದ್ದಾರೆ.

ಪ್ರಕೃತಿ,ಇತಿಹಾಸ ಹಾಗೂ ನಮ್ಮ ಸಾಮಾಜಿಕ ವ್ಯವಸ್ಥೆಯ ಈ ಮೂರು ಆಯಾಮಗಳನ್ನಿಟ್ಟುಕೊಂಡು ಬರೆದ ಈ ಕವನ ಅಷ್ಟೊಂದು ಜನಪ್ರಿಯವಾಗುತ್ತೆ..ತಮ್ಮನ್ನು ನಿತ್ಯೋತ್ಸವ ಕವಿ ಎಂದೇ ಹಾಡಿ ಹೊಗಳುವಂತೆ ಮಾಡುತ್ತೆ ಎನ್ನುವ ಸಣ್ಣ ಕಲ್ಪನೆಯೂ ನಿಸಾರ್ ಅವರಿಗೆ ಇರಲಿಲ್ಲವಂತೆ.ಪ್ರತಿ ಬಾರಿ ಕೇಳಿದಾಗ್ಲೂ ಅವರಿಗೆ ತಮ್ಮ ನೆಚ್ಚಿನ ಶಿವಮೊಗ್ಗ..ಮಲೆನಾಡು..ಹಸಿರಶೃಂಗ…ಸಹ್ಯಾದ್ರಿ ಕಾಲೇಜ್,ಪ್ರಕೃತಿ ಮಾತೆಯ ನೆನಪುಗಳು ಉಮ್ಮಳಿಸಿ ಬರುತ್ತವೆ ಎಂದಿದ್ರು ನಿಸಾರ್

ನಿತ್ಯೋತ್ಸವ ಜನಪ್ರಿಯ ಗೀತೆಯಾಗಿ..ಧ್ವನಿಸುರುಳಿಯಾಗಿ ವಿಶ್ವಮನ್ನಣೆ ಪಡೆಯೊಕ್ಕೆ ಕಾರಣವೇ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಮೈಸೂರು ಅನಂತಸ್ವಾಮಿ
ನಿತ್ಯೋತ್ಸವ ಜನಪ್ರಿಯ ಗೀತೆಯಾಗಿ..ಧ್ವನಿಸುರುಳಿಯಾಗಿ ವಿಶ್ವಮನ್ನಣೆ ಪಡೆಯೊಕ್ಕೆ ಕಾರಣವೇ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಮೈಸೂರು ಅನಂತಸ್ವಾಮಿ

ಕೆಲವೇ ಕ್ಷಣಗಳಲ್ಲಿ ನೆನಪಾಗಿ ಬರೆದು ಮುಗಿಸಿದ ಈ ಕವನವನ್ನು ಆಕಾಶವಾಣಿಗೆ ಕಳುಹಿಸಿದ್ದಾಯ್ತು,ಅದನ್ನು ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಲೀಲಾವತಿ ಅವರು ಕಾಂಪೋಸ್ ಮಾಡಿಸಿ ತಮ್ಮ ಶಿಷ್ಯೆಯಂದಿರಾದ ಕೃಪಾ ಹಾಗೂ ಆಶಾ ಅವರ ಮೂಲಕ ಹಾಡಿಸಿದ್ದು ಆಯ್ತು.ತಿಂಗಳಪೂರ್ತಿ ಅದು ಆಕಾಶವಾಣಿಯಲ್ಲಿ ಬಿತ್ತರವಾಯ್ತು ಕೂಡ.ಆದ್ರೆ ಆಕಾಶವಾಣಿಯಲ್ಲಿ ತಮ್ಮ ಕವನ ಹಾಡಾಗಿ ಮೂಡಿಬಂದ ರೀತಿ ಅಷ್ಟೇನೂ ನಿಸಾರ್ ಗೆ ಇಷ್ಟವಾಗಿರಲಿಲ್ಲ.ಆದ್ರೆ ಅದೊಂದು ಸಂದರ್ಭ ಎದುರಾಯ್ತು ನೋಡಿ..ನಿಸಾರ್ ಹಾಗೂ ಅವರ ನಿತ್ಯೋತ್ಸವ ಕವನ ರಾತ್ರೋರಾತ್ರಿ ಜನಪ್ರಿಯವಾಯ್ತು..ದಾಖಲೆ ನಿರ್ಮಿಸ್ತು..ಇತಿಹಾಸವೇ ಸೃಷ್ಟಿಯಾಯ್ತು ಅದಕ್ಕೆ ಕಾರಣವಾದವ್ರೇ ಖ್ಯಾತ ಗಾಯಕ-ನಿರ್ದೇಶಕ ಮೈಸೂರು ಅನಂತಸ್ವಾಮಿ.

ಮೈಸೂರಿನ ಬಾನುಲಿಯಲ್ಲಿ ಅದಾಗ್ಲೇ ನಿಸಾರ್ ಅವರ ಕವನವನ್ನು ಕೇಳಿದ್ದ ಮೈಸೂರು ಅನಂತಸ್ವಾಮಿ ಅವರು ಈ ಹಾಡನ್ನು ತಮ್ಮದೇ ಆದ ಶೈಲಿಯಲ್ಲಿ ಕಾಂಪೋಸ್ ಮಾಡಿಟ್ಟುಕೊಂಡಿದ್ದರಂತೆ.ಆದ್ರೆ ಎಲ್ಲೂ ಸಾರ್ವಜನಿಕವಾಗಿ ಅದನ್ನು ಹಾಡಿರಲಿಲ್ಲ..ಅದನ್ನು ನಿಸಾರ್ ಮುಂದೆಯೇ ಹಾಡಬೇಕೆನ್ನುವುದು ಕೂಡ ಮೈಸೂರು ಅನಂತಸ್ವಾಮಿ ಅವರ ಆಸೆ ಹಾಗೂ ಉದ್ದೇಶವಾಗಿತ್ತಂತೆ..ಅದಕ್ಕೆ ಕಾಲ ಕೂಡಿ ಬಂದಿದ್ದು ಕೂಡ ಶಿವಮೊಗ್ಗದಲ್ಲೇ.

ಮನೆಯ ಗೃಹಪ್ರವೇಶವೊಂದಕ್ಕೆ  ಶಿವಮೊಗ್ಗಕ್ಕೆ  ಬಂದಿದ್ದ ಮೈಸೂರು ಅನಂತಸ್ವಾಮಿ ನಿಸಾರ್ ಅಹಮದ್ ಅವರನ್ನು ಅಲ್ಲಿಯೇ ಕರೆಯಿಸಿಕೊಂಡು  ರೇವತಿ ರಾಗದಲ್ಲಿ ಕಾಂಪೋಸ್ ಮಾಡಿದ್ದ  ಆ ಹಾಡನ್ನು ಹಾಡಿದಾಗ ನಿಸಾರ್ ಆಶ್ಚರ್ಯಚಕಿತರಾಗಿದ್ರಂತೆ.  ಅಕ್ಷರಶಃ ಭಾವುಕರಾಗಿದ್ರಂತೆ. ಆಕಾಶವಾಣಿಯಲ್ಲಿ ಹಾಡಿದಾಗ ಅಷ್ಟೇನೂ ಇಷ್ಟವಾಗಿರದಿದ್ದ ನಿಸಾರ್, ಅನಂತಸ್ವಾಮಿ ಅವರನ್ನು ಬಿಗಿದಪ್ಪಿ ಆನಂದಭಾಷ್ಪವನ್ನೇ ಸುರಿಸಿದ್ದರಂತೆ.ನಂತರ  ನಡೆದದ್ದೆಲ್ಲಾ ಇತಿಹಾಸ ಬಿಡಿ..ಆ ನಿತ್ಯೋತ್ಸವ ಹಾಡು…ಗಾಯಕ ಅನಂತಸ್ವಾಮಿ ಅವರ ಕಾಂಪೋಸಿಷನ್..ನಿಸಾರ್ ಅಹಮದ್ ಅವರ ಕಾವ್ಯಕುಸುರಿತನಕ್ಕೆ ತಲೆಬಾಗದವರೇ ಇರಲಿಲ್ಲ. ಅಷ್ಟರ ಮಟ್ಟಿಗಿನ ಶಕ್ತಿ-ಸಾಮರ್ಥ್ಯ-ಕಸವು-ಹದಗಾರಿಕೆ-ಲಾಲಿತ್ಯವಿತ್ತು ನಿತ್ಯೋತ್ಸವ ತಾಯಿ ನಿತ್ಯೋತ್ಸವ ಕವನಕ್ಕೆ..

 

ನಿತ್ಯೋತ್ಸವ ಕವನ ಹುಟ್ಟಿದ್ದೇ ಸೋಜಿಗ: ಸಂದರ್ಶನದಲ್ಲಿ ಕವನ ಹುಟ್ಟಿದ ಪರಿಯನ್ನು ಅನಾವರಣಗೊಳಿಸಿದ್ದ ಕವಿ ನಿಸಾರ್ ಅಹಮದ್  (ವೀಡಿಯೋ ಕೃಪೆ:ಆರ್ ಕೆ ನ್ಯೂಸ್)

Spread the love
Leave A Reply

Your email address will not be published.

Flash News