ಚಿರನಿದ್ರೆಗೆ ಜಾರಿದ ಸರ್ಜಾ ಕುಟುಂಬದ ಕುಡಿ ಚಿರು..ಚಂದನವನದಲ್ಲಿ ಮಡುಗಟ್ಟಿದ ಶೋಕ

0

ಬೆಂಗಳೂರು:ಕನ್ನಡ ಚಿತ್ರರಂಗದ ನಾಯಕ ನಟ,ಸರ್ಜಾ ಕುಟುಂಬದ ಕುಡಿ “ಚಿರು” ತೀವ್ರ ಎದೆ ನೋವಿನ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.39 ವರ್ಷದ ಚಿರಂಜೀವಿ ಸರ್ಜಾ ಕೆಲ ನಿಮಿಷಗಳ ಮುನ್ನ ಜಯನಗರ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಪತ್ನಿ ಮೇಘನಾರಾಜ್ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳನ್ನು ಚಿರಂಜೀವಿ ಸರ್ಜಾ ಅಗಲಿದ್ದಾರೆ.

ನಿನ್ನೆ ಮನೆಯಲ್ಲಿರುವ ವೇಳೆ ಚಿರಂಜೀವಿ ಸರ್ಜಾಗೆ ತೀವ್ರ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ಈ ವೇಳೆ ಅದನ್ನು ಕುಟುಂಬದವ್ರು ಗಂಭೀರವಾಗಿ ತೆಗೆದುಕೊಂಡಿಲ್ಲ.ಸ್ವಲ್ಪ ಹೊತ್ತು ಒದ್ದಾಡಿದ  ನಂತರ ಯತಾಸ್ಥಿತಿಗೆ ಬಂದ್ಮೇಲೆ ಇದೊಂದು ಸಾಮಾನ್ಯ ಸಮಸ್ಯೆ ಎಂದುಕೊಂಡು ನೆಗ್ಲೆಕ್ಟ್ ಮಾಡಿದ್ದಾರೆ.ಆದ್ರೆ ಅದೇ ನಿರ್ಲಕ್ಷ್ಯ ಬಾಳಿ ಬದುಕಬೇಕಿದ್ದ ಯುವನಟನ ಅಂತ್ಯಕ್ಕೆ ಕಾರಣವಾದದ್ದು ವಿಪರ್ಯಾಸ.

ಕೊರೋನಾ ಇರುವಂಥ ಸಮಯದಲ್ಲಿ ಸ್ವಲ್ಪ ಆರೋಗ್ಯದಲ್ಲಿ ಏರುಪೇರು ಕಂಡ್ರೂ ಉದಾಸೀನ ಮಾಡಬಾರದು ಎಂದು ವೈದ್ಯರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ.ಆ ಪರಿಜ್ಞಾನ ಇಲ್ಲದ ಕುಟುಂಬವೇನಲ್ಲ ಅದು.ಇಷ್ಟಿದ್ರೂ ನಿನ್ನೆ ಮಾಡಿದ ನಿರ್ಲಕ್ಷ್ಯ ಮಾತ್ರ ಚಿರಂಜೀವಿ ಸರ್ಜಾ ಅವರ ಬದುಕನ್ನೇ ಆಪೋಷನ ತೆಗೆದುಕೊಂಡಿದೆ.ಕೆಲ ಮೂಲಗಳು, ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರುವುದ್ರ ಹಿಂದೆ ಕೊರೋನಾ ಸೋಂಕಿನ ಶಂಕೆ ಇತ್ತಾ ಎಂದು ಅನುಮಾನ ವ್ಯಕ್ತಪಡಿಸಿವೆ.

1980 ರಲ್ಲಿ ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ ತಂದೆ ಬಿಎಂಟಿಸಿ ಸಿಬ್ಬಂದಿ.ಮಗನನ್ನು ಬೆಂಗಳೂರಿನ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ಓದಿಸಿದ್ರು. ಜಯನಗರದ ವಿಜಯ ಕಾಲೇಜ್ ನಲ್ಲಿ ಪದವಿ. ಮುಗಿಸಿದ ನಂತರ ಸಿನೆಮಾದ ಗೀಳು ಇದ್ದುದ್ದರಿಂದ ಚಿಕ್ಕಪ್ಪ ಅರ್ಜುನ್ ಸರ್ಜಾ ಅವರೊಂದಿಗೆ ಸೇರಿಕೊಂಡರು. ಅವರ ಮನೆಯಲ್ಲೆ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.ಚಿಕ್ಕಪ್ಪನ ನೆರವಿನಿಂದಾಗಿ  2009 ರಲ್ಲಿ ತೆರೆಕಂಡ “ವಾಯುಪುತ್ರ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಒಂದು ದಶಕದ ಸಿನಿಪಯಣದಲ್ಲಿ ಹಲವಾರು ಭಿನ್ನ-ಭಿನ್ನ  ಪಾತ್ರಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನಸಲ್ಲಿ ಬೇರೂರಿದ್ದರು. 2018 ಮೇ 3 ರಂದು ನಟಿ ಮೇಘನಾ ರಾಜ್ ಜೊತೆ ವಿವಾಹವಾದ ಚಿರಂಜೀವಿ ಸರ್ಜಾ ದಂಪತಿಗೆ  ಒಂದು ಮಗುವಿದೆ.

ವಾಯುಪುತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಿರಂಜೀವಿ ಸರ್ಜಾ ಅವರ ಸಿನೆಮಾಗಳು ಹೇಳಿಕೊಳ್ಳುವಂಥ ಹೆಸರೇನು ಮಾಡಲಿಲ್ಲವಾದ್ರೂ ನಿರ್ಮಾಪಕರ ಕೈಯನ್ನಂತೂ ಕಚ್ಚಲಿಲ್ಲ. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ 22 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.ಶಿವಾರ್ಜುನ ಅವರ ನಟನೆಯ ಕೊನೆ ಚಿತ್ರ ಎನ್ನಲಾಗ್ತಿದೆ. ಚಿರಂಜೀವಿ ಸರ್ಜಾ ಅವರ ಅಗಲಿಕೆಗೆ ಚಂದನವನ ಕಂಬನಿ ಮಿಡಿದಿದೆ.

ಕೊರೋನಾ ಸೋಂಕಿನ ಶಂಕೆ:ಈ ನಡುವೆ ಅವರಿಗೆ ಇದ್ದ ಆರೋಗ್ಯದ ಸಮಸ್ಯೆಗಳ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.ಹಾಗಾಗಿನೇ ರಕ್ತಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ರಿಪೋರ್ಟ್ ಬಂದ ಮೇಲೆ ಅದರ ಬಗ್ಗೆ ಸ್ಪಷ್ಟತೆ ಸಿಗಲಿದೆ.ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿರುವ ಮನೆಗೆ ಶವವನ್ನು ಕೊಂಡೊಯ್ಯಲಾಗುತ್ತೆ.ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲು ಕುಟುಂಬ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕೇವಲ 39 ವರ್ಷ ವಯಸ್ಸಿನಲ್ಲಿಯೇ ವಿಧಿ ಸರ್ಜಾ ಅವರನ್ನು ಬಾರದ ಲೋಕಕ್ಕೆ ಕೊಂಡೊಯ್ದದ್ದು ವಿಪರ್ಯಾಸಕರ.ಚಿರು ನಿಧನಕ್ಕೆ ಕನ್ನಡ ಫ್ಲಾಶ್ ನ್ಯೂಸ್ ಬಳಗ ಅತೀವ ಸಂತಾಪ ಸೂಚಿಸಿ,ಕಂಬನಿ ಮಿಡಿದಿದೆ.  

ಲಾಕ್ ಡೌನ್ ಸಂದರ್ಭದಲ್ಲಿ ಒಂದೇ ಮನೆಯಲ್ಲಿ ನಗುನಗುತ್ತಾ ಜೀವನ ನಡೆಸಿದ್ದ ಸರ್ಜಾ ಸಹೋದರರ ಕುಟುಂಬ

 

Spread the love
Leave A Reply

Your email address will not be published.

Flash News