ಐಎಎಸ್ ಅಧಿಕಾರಿ ವಿಜಯಶಂಕರ್ ಬದುಕಿಗೆ ದುರಂತ ವಿದಾಯ ಹೇಳಿಸ್ತಾ IMA ಅಕ್ರಮ?!

0

ಬೆಂಗಳೂರು: ಹೀಗಾಗಬಾರದಿತ್ತು..ಹಿರಿಯ ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅಪಮಾನಗಳಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.ಐಎಂಎ ಪ್ರಕರಣದಲ್ಲಿ ಕೇಳಿಬಂದ ಆರೋಪಗಳೇ ವಿಜಯಶಂಕರ್ ಕೆರಿಯರ್ ಗೆ ಅಷ್ಟೇ ಅಲ್ಲ ಬದುಕಿಗೆ ಉರುಳಾಗಿದ್ದು ದುರಾದೃಷ್ಟಕರ.

ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ವಿಜಯಶಂಕರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಅನೇಕ ತಿಂಗಳವರೆಗೆ ಜೈಲಿನಲ್ಲಿದ್ದು ನಂತರ ವಾಪಸ್ಸಾದ ಮೇಲೂ ಹುದ್ದೆ ನಿಯೋಜನೆ ಇಲ್ಲದೆ,ತಮ್ಮ ಮೇಲಿನ ಆರೋಪ ದೂರವಾಗದ ಕಾರಣಕ್ಕೆ ವಿಜಯಶಂಕರ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ.ಆದ್ರೆ ಅದೊಂದೇ ಸಂಗತಿಯೇ ಅವರ ಆತ್ಮಹತ್ಯೆಗೆ ಕಾರಣವಾಯ್ತಾ ಎನ್ನೋದು ಮಾತ್ರ ಸ್ಪಷ್ಟವಾಗಿಲ್ಲ.

ಐಎಂಎ  ಅಕ್ರಮ ಪ್ರಕರಣದಲ್ಲಿ ಲಂಚ ಪಡೆದ ಆರೋಪಕ್ಕಾಗಿ ಸಸ್ಪೆಂಡ್ ಆಗಿ ಜೈಲುವಾಸವನ್ನೂ  ಐಎಎಸ್ ಅಧಿಕಾರಿ ವಿಜಯಶಂಕರ್  ಅನುಭವಿಸಿದ್ದರು.ಹಣದಾಸೆಗೆ ಹೇಸಿಗೆ ತಿನ್ನುವ ಕೆಲಸ ಮಾಡಿದ್ದಕ್ಕೆ ತೀವ್ರ ಪಾಶ್ಚಾತ್ತಾಪವನ್ನು ಅವರು ಪಟ್ಟಿದ್ದರು.ಹಾಗಾಗಿಯೇ ಜೈಲುವಾಸದ ನಂತರ ಕೆಲಸವಿಲ್ಲದೆ ಮನೆಯಲ್ಲಿದ್ದ ವಿಜಯಶಂಕರ್ ಎಲ್ಲರಿಂದ್ಲೂ ದೂರವಾಗಿ ಅನ್ಯಮನಸ್ಕರಾಗಿಯೇ ಇರುತ್ತಿದ್ದರು.ಯಾರೊಬ್ಬರನ್ನೂ ಮಾತನಾಡಿಸಲು,ಅವರೊಂದಿಗೆ ಬೆರೆಯೊಕ್ಕೆ ತೀವ್ರ ಹಿಂಜರಿಕೆ ಹಾಗೂ ಮುಜುಗರ ಪಡುತ್ತಿದ್ದರು.ಇತ್ತೀಚೆಗೆ ಮನೆಯವರ ಜೊತೆಗೆ ಅವರ ಮಾತುಕತೆ ಹಾಗೂ ಒಡನಾಟ ಅಷ್ಟಕ್ಕಷ್ಟೇ ಎನ್ನುವಂತಿತ್ತು.

ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿದ್ದ ವೇಳೆ ಒಂದಷ್ಟು ಒಳ್ಳೆ ಕೆಲಸಗಳ ಮೂಲಕ ಹೆಸರಾಗಿದ್ದರು.ಇದನ್ನು ಗಮನಿಸಿಯೇ ಸರ್ಕಾರ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನಿಯೋಜನೆ ಮಾಡ್ತು.ಆರಂಭದಲ್ಲಿ ಉತ್ತಮ ರೀತಿಯಲ್ಲೇ ಕೆಲಸ ಮಾಡಿದ್ದ ಅವರು,ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗವನ್ನು ಉಳಿಸಿಕೊಟ್ಟಿದ್ದರು.ಶಂಕರ್ ನಂತ್ರ ಅಂತದ್ದೊಂದು ಕೆಲಸ ಮಾಡಿದ ಜಿ್ಲ್ಲಾಧಿಕಾರಿ ಎನ್ನುವ ಹೆಸರನ್ನೂ ಪಡೆದಿದ್ದರು.ಅಷ್ಟೇ ಅಲ್ಲ ಅನೇಕ ಸಮಸ್ಯೆಗಳನ್ನು ಇಟ್ಟುಕೊಂಡು ಬರುತ್ತಿದ್ದ ಸಾರ್ವಜನಿಕರೊಂದಿಗೂ ಉತ್ತಮವಾದ ಬಾಂಧವ್ಯವನ್ನೇ ಅವರು ಹೊಂದಿದ್ದರು.ಹಾಗಾಗಿ ಅವರಿಗೆ ಜನಾನುರಾಗಿ ಜಿಲ್ಲಾಧಿಕಾರಿ ಎಂಬ ಹೆಸರಿತ್ತು.

ಆದ್ರೆ ಅದೇ ಸಂದರ್ಭದಲ್ಲಿ ನಡೆದೋದ ಆ ಹಗರಣ ಅವರ ವೃತ್ತಿಜೀವನವನ್ನೇ ಬರ್ಬಾದ್ ಮಾಡಿ ವೈಯುಕ್ತಿಕ ಬದುಕಿಗೆ ಕೊಳ್ಳಿ ಇಡುವಂಥ ಘಟನೆಗೆ ಸಾಕ್ಷಿಯಾಗಿದ್ದು ದುರಂತ.  ಜಿಲ್ಲಾಧಿಕಾರಿಯಾಗಿದ್ದ ವೇಳೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ  ಐಎಂಎ ಅಕ್ರಮ  ಪ್ರಕರಣದಲ್ಲಿ ಸರ್ಕಾರ ಇವರನ್ನು ವಿಚಾರಣಾಧಿಕಾರಿಯಾಗಿ ನಿಯೋಜನೆ ಮಾಡ್ತು.ಇವರಿಗೆ ಸಹಾಯಕರನ್ನಾಗಿ ಉಪವಿಭಾಗಾಧಿಕಾರಿಯಾಗಿ ಎಲ್ ಸಿ ನಾಗರಾಜ್ ಅವರನ್ನು ನಿಯೋಜಿಸಿತ್ತು.ಅದ್ಯಾವ ವಿಷಮಗಳಿಗೆಯೋ ಗೊತ್ತಿಲ್ಲ.

ಐಎಂಎ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡ್ಲಿಕ್ಕೆ ಮನ್ಸೂರ್ ಅಲಿಖಾನ್ ನಿಂದ ಕೋಟ್ಯಾಂತರ ಲಂಚ ಪಡೆದ ಆರೋಪಕ್ಕೆ ಸಿಲುಕಿ ಅದು ಸಾಬೀತಾದ ಹಿನ್ನಲೆಯಲ್ಲಿ ಸಸ್ಪೆಂಡ್ ಆಗಿದ್ದರು.ಅಲ್ಲದೇ ಜೈಲುವಾಸವನ್ನು ಅನುಭವಿಸಿದ್ದರು.ಇದರಿಂದ ತೀವ್ರ ನೊಂದಿದ್ದ ಅವರು ಅವಮಾನದಿಂದಾಗಿ ತಿಂಗಳುಗಳ ನಂತರ ಜಯನಗರದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

Spread the love
Leave A Reply

Your email address will not be published.

Flash News