“ಕ್ಷೇತ್ರ ಕಳಕೊಂಡ್ರೂ ಪರ್ವಾಗಿಲ್ಲ-ಮುನಿರತ್ನಗೆ ಮಾತ್ರ ಟಿಕೆಟ್ ಕೊಡೊಲ್ಲ:” ಸಂತೋಷ್ ಜೀ ಪಟ್ಟು-“ಮುನಿ” ಪಾಲಿಗೆ ಬಿಜೆಪಿ, ಶಾಶ್ವತವಾಗಿ ಮುಚ್ಚಿದ ಬಾಗಿಲಾ..

0

       ವಿಶೇಷ ವರದಿ: ಶಮಂತಕ್ ಹೆಗ್ಡೆಆಶೀಸರ

ಬೆಂಗಳೂರು: ಚುನಾವಣೆಗೆ ಗ್ರೀನ್ ಸಿಗ್ನಲ್ ದೊರೆಯದಿದ್ದರೂ ರಾಜರಾಜೇಶ್ವರಿ ನಗರ ಕ್ಷೇತ್ರದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ..  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜತೆಗಿದ್ದವರೆಲ್ಲಾ ಅಧಿಕಾರ ಅನುಭವಿಸುತ್ತಿದ್ದರೆ, ಶಾಸಕನಾಗುವ ಆಸೆಯಲ್ಲೇ ಇನ್ನೂ ಚಾತಕಪಕ್ಷಿಯಂತಾಗಿರುವ ಮಾಜಿ ಶಾಸಕ ಮುನಿರತ್ನ ಸ್ಥಿತಿ ಹೇಗಾಗಿರಬೇಡ.ಎಮ್ಮೆಲ್ಲೆಯಾದ್ರೆ ಅಧಿಕಾರ ಗ್ಯಾರಂಟಿ ಎನ್ನುವುದು ಖುದ್ದು ಮುನಿರತ್ನಗೆ ಗೊತ್ತಿದ್ರೂ,ಸ್ಥಾನಮಾನ ಸಿಗೊಕ್ಕೆ ಬೇಕಿರುವ ಎಮ್ಮೆಲ್ಲೆ ಅವಕಾಶ ದಕ್ಕೋದೇ ಅನುಮಾನವಾಗೋಗಿದೆ.ಇದಕ್ಕೆ ಕಾರಣ ಬಿಜೆಪಿಯ ಚಿಂತಕರ ಚಾವಡಿ ಹಾಗೂ ಸಂಘಪರಿವಾರ.ಹಾಗಾಗಿನೇ ಶಾಸಕ ಸ್ಥಾನದ ಮೇಲೆ ಕಣ್ನಿಟ್ಟಿರುವ ಮುನಿರತ್ನಗೆ ಎದೆಯಲ್ಲಿ ನಡುಕ ಹಾಗೂ ನಿರಾಶೆ ಶುರುವಾಗಿದೆ.

ಬಿಜೆಪಿ ಪಕ್ಷದ ಚಿಂತಕರ ಚಾವಡಿ ಹಾಗೂ ಸರ್ಕಾರದ ನಡೆ ಹಾಗು ನಿಲುವುಗಳನ್ನು ನಿರ್ಧರಿಸುವ ಸಂಘಪರಿವಾರ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ್ರೂ ಎನ್.ಮುನಿರತ್ನಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಒಂದ್ವೇಳೆ ಬಿಜೆಪಿ,ಸರ್ಕಾರ ರಚನೆಂiiಲ್ಲಿ ಸಹಕರಿಸಿದರು ಎನ್ನುವ ಕಾರಣಕ್ಕೆ ಮುನಿರತ್ನಪರ ಸಾಫ್ಟ್ ಆಗಿ ಆಲೋಚಿಸಿ ಟಿಕೆಟ್ ನೀಡಲು ಒಪ್ಪಿದ್ರೂ,ಸಂಘಪರಿವಾರ ಮಾತ್ರ ನಾವು ಕ್ಷೇತ್ರ ಕಳಕೊಂಡ್ರೂ ಪರ್ವಾಗಿಲ್ಲ,ಮುನಿಗೆ ಮಾತ್ರ ಟಿಕೆಟ್ ಕೊಡದಂತೆ ಸರ್ಕಾರಕ್ಕೆ ಅಂಕುಶ ಹಾಕಲು ನಿರ್ಧರಿಸಿದೆಯಂತೆ.

ಬಿಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮುನಿರತ್ನ: ಮೈತ್ರಿ ಸರ್ಕಾರ ಪತನ ಹಾಗೆಯೇ ಬಿಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರವರಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಮುನಿರತ್ನ ಪ್ರಮುಖರು. ಅವರ ಜತೆಗಿದ್ದವರೆಲ್ಲಾ ಎಮ್ಮೆಲ್ಲೆ-ಎಮ್ಮೆಲ್ಸಿಗಳಾಗಿ,ಸಚಿವರೂ ಆಗಿ ಅಧಿಕಾರ ಅನುಭವಿಸುತ್ತಿದ್ದಾರೆ.ಇದೆಲ್ಲವನ್ನು ನೋಡಿ ಒಳಗೊಳಗೆ ಅಸಮಾಧಾನದಿಂದ ಕುದಿಯುತ್ತಿರುವ ಮುನಿರತ್ನ ಬಿಜೆಪಿ ವರಿಷ್ಠರು ಹಾಗು ಸಂಘಪರಿವಾರದ ಪ್ರಮುಖರ ಮನವೊಲಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.ಆರಂಭದಲ್ಲಿ ಅವರ ಬೆನ್ನಿಗಿದ್ದಂತೆ ಭರವಸೆ ನೀಡಿದ್ದ ಮುಖಂಡರೇ ಈಗ ನಾಟ್ ರೀಚಬಲ್.ವರಿಷ್ಠರ ಧೋರಣೆ ಬಗ್ಗೆ ಕೋಪಾ ತಾಪಗಳಿದ್ದರೂ ಟಿಕೆಟ್ ಸಿಗುವವರೆಗೂ ಬಾಯಿ ಮುಚ್ಚಿಕೊಂಡಿರಲು ನಿರ್ಧರಿಸಿದ್ದಾರೆ.ಆದ್ರೆ ಬಿಜೆಪಿ ಚಿಂತಕರ ಚಾವಡಿ ಹಾಗು ಸಂಘಪರಿವಾರ,ಟಿಕೆಟನ್ನೇ ನಿರಾಕರಿಸಿದ್ರೆ ಖೇಲ್ ಖತಂ..ನಾಟಕ್ ಬಂದ್ ಆಗೋಗ್ತದೆ ಎನ್ನುವ ಲೆಕ್ಕಾಚಾರದಲ್ಲಿದೆ.

ಮುನಿರತ್ನ ಟಿಕೆಟ್ ಆಕಾಂಕ್ಷೆಗೆ ತೊಡರುಗಾಲು ಹಾಕಿರುವ ತುಳಸಿ ಮುನಿರಾಜುಗೌಡ
ಮುನಿರತ್ನ ಟಿಕೆಟ್ ಆಕಾಂಕ್ಷೆಗೆ ತೊಡರುಗಾಲು ಹಾಕಿರುವ ತುಳಸಿ ಮುನಿರಾಜುಗೌಡ
ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ ಇದೀಗ ಟಿಕೆಟ್ ಗೆ ಪರಿತಪಿಸುತ್ತಿರುವ ಮುನಿರತ್ನ
ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ ಇದೀಗ ಟಿಕೆಟ್ ಗೆ ಪರಿತಪಿಸುತ್ತಿರುವ ಮುನಿರತ್ನ

ಬಿಜೆಪಿಯ ಉನ್ನತ ಮೂಲಗಳಿಂದ ಕನ್ನಡ ಪ್ಲಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿಗಳು ಕೂಡ,ಮುನಿರತ್ನಗೆ ಆರ್.ಆರ್ ನಗರ ಟಿಕೆಟ್ ನಿರಾಕರಣೆಯ ವಿಷಯವನ್ನೇ ಸಾರಿ ಹೇಳುತ್ವೆ.ಮುನಿರತ್ನಗೆ ಟಿಕೆಟ್ ಕೊಟ್ಟರೆ ಗೆಲ್ಲೋದು ಖಚಿತ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಹಾಗೂ ಆಂತರಿಕ ಸರ್ವೇ ಮೂಲಕ ಗೊತ್ತು ಮಾಡಿಕೊಂಡಿದ್ರೂ ಮುನಿರತ್ನಗೆ ಮಾತ್ರ ಟಿಕೆಟ್ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಅರರೆ…ಬಿಜೆಪಿಗೆ ಬೇಕಿರುವುದು ಗೆಲುವಲ್ವೇ..ಅದು ಮುನಿರತ್ನ ಸ್ಪರ್ಧೆಯಿಂದ ಅನಾಯಾಸವಾಗುತ್ತೆ ಎಂದ್ರೆ ಅದನ್ನೇಕೆ ಕೈಚೆಲ್ಲುವ ಮಾತನ್ನಾಡುತ್ತಿದ್ದಾರೆ ವರಿಷ್ಠರು ಎನ್ನುವ ಪ್ರಶ್ನೆ ಸಹಜವಾಗೇ ಮೂಡಬಹುದು.ಆದ್ರೆ ಪೂರ್ಣಾವಧಿಗೆ ಅಧಿಕಾರ ನಡೆಸಲಿಕ್ಕೆ ಸರ್ಕಾರಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲ-ಬಹುಮತ ಇರುವಾಗ ಆರ್.ಆರ್ ನಗರ ಕ್ಷೇತ್ರದ ಗೆಲುವನ್ನು ಇಟ್ಕೊಂಡು ಏನ್ ಮಾಡೋದು ಬಿಡಿ ಎನ್ನುವ ಮಟ್ಟದ ಮಾತುಗಳು ಚಿಂತಕರ ಚಾವಡಿಯಲ್ಲಿ ಚರ್ಚೆಯಾಗುತ್ತಿವೆಯಂತೆ.

ಮುನಿಗೆ ಟಿಕೆಟ್ ಕೊಡೊಲ್ಲ ಎನ್ತಿರೋದು ಸಂತೋಷ್ ಜೀ..: ವ ಪಕ್ಷ ತಾನೇ ಅನಾಯಾಸವಾಗಿ ಸಿಗಬಹುದಾದ ಗೆಲುವನ್ನು ಕಳೆದುಕೊಳ್ಳಲು ಸಿದ್ಧವಿರುತ್ತೆ ಹೇಳಿ..ಆದ್ರೆ ಮುನಿರತ್ನ ವಿಷಯದಲ್ಲಿ ಇಂತದ್ದೊಂದು ಆಲೋಚನೆಗೆ ಬಂದಿದೆ ಎನ್ನಲಾಗಿದೆ.ಸಂಘಪರಿವಾರ ಹಾಗು ಬಿಜೆಪಿಯ ಚಿಂತಕರ ಚಾವಡಿ ಇಂಥಾ ಚಿಂತನೆ ನಡೆಸಲು ಕಾರಣ ಯಾರ್ ಗೊತ್ತಾ…ತುಳಸಿ ಮುನಿರಾಜುಗೌಡ.ಸಂಘಪರಿವಾರದ ಅತ್ಯಂತ ಪ್ರಭಾವಿ ನಾಯಕ ಬಿ.ಎಲ್ ಸಂತೋಷ್ ಅವರ ನೀಲಿಗಣ್ಣಿನ ಹುಡುಗ ಎಂದೇ ಕರೆಯಿಸಿಕೊಳ್ಳುವ ಮುನಿರಾಜುಗೌಡ ಅವರಿಗಾಗಿಯೇ ಬಿಜೆಪಿ ಅನಾಯಾಸ ಗೆಲುವನ್ನು ಕೈಚೆಲ್ಲೊಕ್ಕೆ ಬೇಕಾದ್ರೂ ಸಿದ್ದವಾಗಿದೆ ಎನ್ನಲಾಗಿದೆ.ಇದು ಮೇಲ್ನೋಟಕ್ಕೆ ಬಿಜೆಪಿಯ ಅತ್ಯಂತ ಕೆಟ್ಟ ನಿರ್ಧಾರ ಎಂದು ಎಂಥವರಿಗೂ ಅನ್ನಿಸದೆ ಇರದು.ಆದ್ರೆ ತುಳಸಿಮುನಿರಾಜುಗೌಡ ಅವರಿಗಾಗಿ ಇಂಥ ನಿರ್ಧಾರ ತೆಗೆದುಕೊಂಡೇ ತೀರಲು ನಿರ್ಧರಿಸಿದೆಯಂತೆ.

ಕಳೆದ ಬಾರಿಯ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಸ್ಪರ್ಧಿಸಿ ಸೋತಿದ್ದ ತುಳಸಿ ಮುನಿರಾಜುಗೌಡ ಹೇಳಿಕೇಳಿ ಬಿ.ಎಲ್ ಸಂತೋಷ್ ಅವರಿಗೆ ಪ್ರೀತಿಪಾತ್ರ ಯುವಮುಖಂಡ.ಕಳೆದ ಬಾರಿಯ ಟಿಕೆಟ್ ಸಿಗೊಕ್ಕೆ ಕಾರಣವೂ ಇದೇ ಸಂತೋಷ್.ತುಳಸಿ ಅವರಿಗೆ ಮಾನಸಿಕ ಹಾಗೂ ರಾಜಕೀಯ ಗುರುವೇ ಸಂತೋಷ್.ಅವರು ಹೇಳಿದ ಮಾತನ್ನು ಮೀರದಷ್ಟು ನಿಷ್ಠೆ ಹಾಗೂ ಗುರುಭಕ್ತಿ.ಆ ನಿಷ್ಠೆಯಿಂದಾಗಿಯೇ ಸಂತೋಷ್ ತನ್ನ ಶಿಷ್ಯೋತ್ತಮನಿಗೆ ಹೇಳಿದ್ದನ್ನು ಇಲ್ಲ ಎನ್ನೋದೆ ಇಲ್ಲ.ಯಾವ್ ಟೈಮ್ನಲ್ಲಿ ಏನೇ ಕೇಳಿದ್ರೂ ಮರುಕ್ಷಣ ಆಲೋಚಿಸದೆ ತಥಾಸ್ತು ಎನ್ನುವಷ್ಟು ಪ್ರೀತಿ-ಅಕ್ಕರೆ.ತನ್ನ ಶಿಷ್ಯೋತ್ತಮನೊಂದಿಗೆ ಇರುವ ಇದೇ ಸಲುಗೆ-ವಿಶ್ವಾಸದಿಂದಲೇ ಸಂಕಷ್ಟದ ಕಾಲದಲ್ಲಿ ಪಕ್ಷಕ್ಕೆ ಆಸರೆಯಾಗಿದ್ದ ಮುನಿರತ್ನಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಲು ನಿರಾಕರಿಸುವಂತಾಗಿದೆ.

ತನ್ನ ಶಿಷ್ಯೋತ್ತಮನಿಗಾಗಿ ಮುನಿರತ್ನ ಗೆ ಟಿಕೆಟ್ ನೀಡದಿರಲು ನಿರ್ಧರಿಸಿರುವ ಸಂಘಪರಿವಾರದ ಸಂತೋಷ್ ಜೀ.
ತನ್ನ ಶಿಷ್ಯೋತ್ತಮನಿಗಾಗಿ ಮುನಿರತ್ನ ಗೆ ಟಿಕೆಟ್ ನೀಡದಿರಲು ನಿರ್ಧರಿಸಿರುವ  ಸಂತೋಷ್ ಜೀ.

ಮುನಿ ಪಕ್ಷೇತರರಾಗಿ ನಿಂತ್ರೂ ಗೆಲ್ಲೋದು ಬಹುತೇಕ ನಿಶ್ಚಿತ ಎನ್ನೋದು ಬಿಜೆಪಿ ವರಿಷ್ಠರಿಗೂ ಗೊತ್ತು: ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಮುನಿರತ್ನ ಅತ್ಯಧಿಕ ಅಂತರದ ಗೆಲುವು ಸಾಧಿಸೋದು ಎಷ್ಟು ಸತ್ಯವೋ..ಟಿಕೆಟ್ ನಿರಾಕರಿಸಿದ್ರೆ ಕಡಿಮೆ ಅಂತರದಿಂದಲಾದ್ರೂ ವಿಜಯಿಯಾಗುತ್ತಾರೆನ್ನುವುದು ಕೂಡ ಅಷ್ಟೇ ನಿಶ್ಚಿತ.ಇದು ಬಿಜೆಪಿ ಮುಖಂಡರಿಗೆ ಸ್ಪಷ್ಟವಾಗಿ ಗೊತ್ತಿದೆ.ಅಷ್ಟಿದ್ರೂ ತನ್ನ ಶಿಷ್ಯೋತ್ತಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕಾದ ಕಾರಣಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳಿರುವ ಮುನಿರತ್ನಗೆ ಟಿಕೆಟ್ ಕೊಡದಿರಲು ಖುದ್ದು ಸಂತೋಷ್ ಜೀ ಅವರೇ ಮಂಚೂಣಿಯಲ್ಲಿ ನಿಂತಿದ್ದಾರೆನ್ನುವುದು ಜಗಜ್ಜಾಹೀರಾದ ಸತ್ಯ.ಮುನಿರತ್ನ ಗೆದ್ದು ಪಕ್ಷ ಆರ್ ಆರ್ ನಗರದಂಥ ಅತೀ ದೊಡ್ಡ ಕ್ಷೇತ್ರದಲ್ಲಿ ಅಸ್ಥಿತ್ವ ಕಳೆದುಕೊಂಡ್ರೂ ಪರ್ವಾಗಿಲ್ಲ,ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕಾದ ಹಠಕ್ಕೆ ಬಿದ್ದಿದ್ದಾರಂತೆ ಸಂತೋಷ್ ಜೀ.ಮುನಿರತ್ನ ವಿರುದ್ದ ತೊಡೆತಟ್ಟಿರುವ ತುಳಸಿಮುನಿರಾಜುಗೌಡ ಹೋರಾಟವನ್ನು ಮುಂದುವರೆಸುವಂತೆ ಸಲಹೆ-ಮಾರ್ಗದರ್ಶನ ಕೊಟ್ಟಿರೋದು ಕೂಡ ಇದೇ ಸಂತೋಷ್ ಜೀ ಅಂತೆ.ಹೇಗಿದೆ ನೋಡಿ…ಗುರುಶಿಷ್ಯರ ಅನೂಹ್ಯ ಸಂಬಂಧ.ಮೆಚ್ಚಲೇಬೇಕು ಕಣ್ರಿ..

ಸಂತೋಷ್ ಜೀ ಹಠದ ಮುಂದೆ ಸಿಎಂಗೂ ಮಂಡಿಯೂರಬೇಕಾದ ಅಸಹಾಯಕತೆ :ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪಕ್ಷದ ವರಿಷ್ಠರನೇಕರು ಕೊಟ್ಟ ಮಾತಿಗೆ ಕಟ್ಟುಬಿದ್ದು ಮುನಿರತ್ನ ಪರ ಬ್ಯಾಟಿಂಗ್ ಆಡಿದ್ರೂ ಸಂತೋಷ್ ಜೀ ಅವರ ಹಠದ ಮುಂದೆ ಮಂಡಿಯೂರಿದ್ದಾರೆ. ಮುನಿರತ್ನ ಅವರನ್ನು ವಹಿಸಿಕೊಂಡು ಸಂಘಪರಿವಾರದ ಅತ್ಯಂತ ಪ್ರಭಾವಿ ನಾಯಕ ಸಂತೋಷ್ ಜೀ ಜತೆ ನಿಷ್ಠೂರ ಕಟ್ಟಿಕೊಳ್ಳೊಕ್ಕೆ ಯಡಿಯೂರಪ್ಪರಾದಿಯಾಗಿ ಯಾರಿಗೂ ಇಷ್ಟವಿಲ್ಲ.ಇವರಷ್ಟೇ ಅಲ್ಲ ತನ್ನ ಬೆನ್ನಿಗೆ ನಿಂತಿದ್ದ ಭೈರತಿ ಬಸವರಾಜ್,ಎಸ್.ಟಿ ಸೋಮಶೇಖರ್ ಅವರಂಥವ್ರೂ ಮುನಿರತ್ನಗೆ ಟಿಕೆಟ್ ಕೊಡಿ ಎಂದು ಶಿಫಾರಸ್ಸು ಮಾಡಲಾರದಂಥ ಸ್ಥಿತಿಯಲ್ಲಿದ್ದಾರೆ.ಏಕೆಂದರೆ ಸಂಘಪರಿವಾರದ ಹಿಡಿತವೇ ಅಂತದ್ದು.

ಮುನಿರತ್ನಗೆ ಎಮ್ಮೆಲ್ಸಿ ಮಾಡೊಕ್ಕೆ ನಡೆದಿದೆಯೇ ಚಿಂತನೆ: ಈ ಎಲ್ಲಾ ಕಾರಣಗಳಿಂದಲೇ ಎಮ್ಮೆಲ್ಲ ಟಿಕೆಟ್ ಗೆ ಪರ್ಯಾಯವಾಗಿ ಮುನಿರತ್ನಗೆ ಏನಾದ್ರೊಂದು ಮಾಡಬಹುದಾ ಎಂದು ಪಕ್ಷ ಆಲೋಚಿಸುತ್ತಿದೆಯಂತೆ.ಎಮ್ಮೆಲ್ಸಿ ಮಾಡಿ ಯಾವುದಾದ್ರೂ ಸಚಿವ ಸ್ಥಾನ ನೀಡಿ ಕೈತೊಳೆದುಕೊಳ್ಳುವ ಪ್ಲ್ಯಾನ್ ಕೂಡ ನಡೆಯುತ್ತಿದೆಯಂತೆ.ಆದ್ರೆ ಸದಾ ಮುಂಬಾಗಿಲಿಂದ ರಾಜಕಾರಣ ಮಾಡಿ ಗೊತ್ತಿರುವ ತನಗೆ ಎಮ್ಮೆಲ್ಸಿಯಂಥ ಹಿಂಬಾಗಿಲಿನ ಪ್ರವೇಶದ ರಾಜಕಾರಣ ಅಗತ್ಯವಿಲ್ಲ.ಕೊಟ್ಟರೆ ಎಮ್ಮೆಲ್ಲೆ ಟಿಕೆಟ್ ಕೊಡಿ..ಗೆದ್ದು ಬರೋದು ನನಗೆ ಗೊತ್ತಿದೆ.ಅದನ್ನು ಬಿಟ್ಟು ಎಮ್ಮೆಲ್ಸಿ ಎಂದ್ರೆ ಒಪ್ಪೊಲ್ಲ ಎನ್ನುವ ಅಭಿಪ್ರಾಯವನ್ನು ಪಕ್ಷದ ವರಿಷ್ಠರ ಮುಂದೆ ಮಂಡಿಸಿದ್ದಾರಂತೆ ಮುನಿರತ್ನ.ಆದರೆ ಅದಕ್ಕೆ ವರಿಷ್ಠರು ಸೊಪ್ಪಾಕಿಲ್ಲ ಎನ್ನುವ ಮಾತು ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.

ಕೈ ಪಕ್ಷಕ್ಕೆ ಗುಡ್ ಬೈ ಹೇಳಿ..ಬಿಜೆಪಿ ತೆಕ್ಕೆಯಲ್ಲಿ ಸಿಕ್ಕಿ ನಲುಗುತ್ತಿರುವ ಮುನಿರತ್ನ ಪಾಡು ಹೇಳತೀರದಂತಾಗಿದೆ.ಶತಗತಾಯ ಟಿಕೆಟ್ ಪಡೆದೇ ತೀರುವ ಸಂಕಲ್ಪದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ವರಿಷ್ಠರ ಮನೆಯನ್ನು ಎಡತಾಕುವುದೇ ಅವರ ನಿತ್ಯದ ಕಾಯಕವಾಗೋಗಿದೆ.ಅವ್ರು ಕೊಡೊಲ್ಲ..ಮುನಿರತ್ನ ತಾಬ್ ಪಡೆಯದೆ ಬಿಡೊಲ್ಲ ಎನ್ನುವ ಹಠಕ್ಕೆ ಬಿದ್ದಿದ್ದಾರೆ.ಈ ರಾಜಕೀಯ ದೊಂರಾಟ ಕೆಲವರಿಗೆ ಮನರಂಜನೆಯಾದ್ರೆ…ಅಧಿಕಾರ ಕಳಕೊಂಡಿರುವ ಮುನಿರತ್ನಗೆ ವಿಲವಿಲ ಒದ್ದಾಡುವಂತಾಗಿದೆ.ಕ್ಲೈಮ್ಯಾಕ್ಸ್ ಏನಾಗಲಿದೆಯೋ ತೆರೆ ಮೇಲೆ ಕಾದು ನೋಡ್ಬೇಕಿದೆಯಷ್ಟೆ.

Spread the love
Leave A Reply

Your email address will not be published.

Flash News