ಕೊರೊನಾ ಬಿಟ್ಟು ಬೇರೆ ರೋಗಿಗಳಿಗೆ ಚಿಕಿತ್ಸೆ ಕೊಡೊಲ್ವಂತೆ ಧನದಾಹಿ ಖಾಸಗಿ ಆಸ್ಪತ್ರೆಗಳು-ನರಳಾಡಿ ನರಳಾಡಿ ಪ್ರಾಣಬಿಡ್ತಿವೆ ಜೀವಗಳು-ಇದೆಂಥಾ ಅನ್ಯಾಯ.

0

ವಿಶೇಷ ವರದಿ: ದೇವದ್ರತ ಪಡಿಕಲ್

ಬೆಂಗಳೂರು: ಕೊರೋನಾ ಬಿಟ್ಟರೆ ಬೇರೆ ಇನ್ನೇನಕ್ಕೂ ಚಿಕಿತ್ಸೆ ಕೊಡಬಾರದೆಂದೇನಾದ್ರೂ ಆಸ್ಪತ್ರೆಗಳು ಡಿಸೈಡ್ ಮಾಡಿವೆಯಾ?.ಕೊರೊನೇತರ ಸಮಸ್ಯೆಗಳಿಂದ ಜನ ಆಸ್ಪತ್ರೆಗೆ ಹೋಗಬಾರದಾ…ಹಾಗೊಮ್ಮೆ ಹೋಗುವುದಾದಲ್ಲಿ ಅವರು ತಮ್ಮ ಜೀವಕ್ಕೆ ಯಾವ್ದೇ ಗ್ಯಾರಂಟಿ ಇಟ್ಟುಕೊಳ್ಳಬಾರದಾ.. ಸಚಿವರಾದ ಅಶೋಕ್… ಅಶ್ವತ್ಥನಾರಾಯಣ ಅವರೇ ಏನ್  ನಡೆಯುತ್ತಿದೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎನ್ನೋ ಕಾಮನ್ ಸೆನ್ಸ್ ನಿಮಗಿದೆಯಾ ಎಂದು ಜನರ ಪರವಾಗಿ ಪ್ರಶ್ನಿಸ್ಲೇಬೇಕಿದೆ.ಏಕೆಂದ್ರೆ ಕೊರೊನಾ ಇಲ್ಲದಿದ್ದರೂ ಆರೋಗ್ಯದ ಸಮಸ್ಯೆಗಳಿಂದ ಆಸ್ಪತ್ರೆಗೆ ತೆರಳಿದವರನ್ನು ಅಲೆದಾಡಿಸಿ..ಅಲೆದಾಡಿಸಿ ಕೊಂದ ಆರೋಪಕ್ಕೆ ಬೆಂಗಳೂರಿನ ಆಸ್ಪತ್ರೆಗಳು ತುತ್ತಾಗಲಾರಂಭಿಸಿದೆ.ಅದರ ಮೇಲೆ ಬೆಳಕು ಚೆಲ್ಲೋ ಪ್ರಯತ್ನ ಮಾಡ್ತಿದೆ ಕನ್ನಡ ಫ್ಲಾಶ್ ನ್ಯೂಸ್.

ಚಂದ್ರಶೇಖರ್
ಮಂಜುನಾಥನಗರದ  ಚಂದ್ರಶೇಖರ್

ಪ್ರಕರಣ-1:ಅಂದ್ಹಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ರಾಜಾಜಿನಗರದ ಮಂಜುನಾಥನಗರದಲ್ಲಿ.ಸುಮಾರು 52 ವರ್ಷದ ಚಂದ್ರಶೇಖರ್ ಅವರಿಗೆ ಮನೆಯಲ್ಲಿ ವಯೋವೃದ್ಧ ತಾಯಿಯಿದ್ದಾರೆ.ಅವರ ಜತೆ ವಾಸವಿದ್ದ ಚಂದ್ರಶೇಖರ್ ಅವರಿಗೆ  ಮೊನ್ನೆ ಎದೆನೋವು..ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ತತ್ ಕ್ಷಣ ಕಾರ್ಪೊರೇಟರ್ ಕೃಷ್ಣಮೂರ್ತಿ ಅವರನ್ನು ಸಂಪರ್ಕಿಸಿದ್ದಾರೆ.ಅವರು ತಮ್ಮ ಪರಿಚಯದ ಆಸ್ಪತ್ರೆಗಳ ಮಾಹಿತಿಯನ್ನೆಲ್ಲಾ ಕೊಟ್ಟಿದ್ದಾರೆ.ಉಸಿರಾಟದ ಸಮಸ್ಯೆ ತೀವ್ರವಾಗುತ್ತಿದ್ದಂತೆ ಮೊದಲು,ರಾಜಾಜಿನಗರ ಕಾಡೇ ಆಸ್ಪತ್ರೆಗೆ ತೆರಳಿದ್ದಾರೆ.

ಅಲ್ಲಿ ನೋ ಬೆಡ್… ಅಲ್ಲಿಂದ ಮಲ್ಲೇಶ್ವರಂನ  ಕೆಸಿ ಜನರಲ್.ಅಲ್ಲಿಯೂ ಅದೇ ಆನ್ಸರ್..ನೆಕ್ಸ್ಟ್   ಮಲ್ಲೇಶ್ವರಂನ ಮಣಿಪಾಲ್,ತದನಂತರ  ಅಪೋಲೋ ಆಸ್ಪತ್ರೆ,ಬಳಿಕ  ಸುಗುಣ ಆಸ್ಪತ್ರೆ..ಅಲ್ಲಿಯೂ ಆಗದೆ  ಕಾಮಧೇನು ಆಸ್ಪತ್ರೆ ನಂತರ  ಪುಣ್ಯ ಆಸ್ಪತ್ರೆ,ತರುವಾಯ  ರಂಗದೊರೈ ಆಸ್ಪತ್ರೆ ಗೆ ಅಲೆದಿದ್ದಾರೆ.ಅಷ್ಟರಲ್ಲಾಗ್ಲೇ ರಾತ್ರಿಯಾಗದೆ..ಸಂಪೂರ್ಣ ನಿತ್ರಾಣವಾಗಿದ್ದ ಚಂದ್ರಶೇಖರ್ ಪರಿಸ್ಥಿತಿ ಕಂಡು ಯಾವುದೇ ಆಸ್ಪತ್ರೆಗಳಿಗೂ ಕನಿಕರ ಹುಟ್ಟಿಯೇ ಇಲ್ಲ ಕಣ್ರಿ.ಕೊರೊನಾ ಇಲ್ಲದಿದ್ದರೂ ಹೆದರಿ ಆತನನ್ನು ವಾಪಸ್ ಕಳುಹಿಸಿದ್ದಾರೆ.ತೀವ್ರ ಬೇಸರದಿಂದ ವಾಪಸ್ಸಾದ ಚಂದ್ರಶೇಖರ್ ಅವರು ರಾತ್ರಿಯೆಲ್ಲಾ ನರಳಾಡಿ ನರಳಾಡಿ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಕೊರೊನಾ ಇಲ್ಲದಿದ್ದರೂ ಆಸ್ಪತ್ರೆಗಳ ಕ್ರೌರ್ಯ ಚಂದ್ರಶೇಖರ್ ಅವರನ್ನು ಬಲಿ ತೆಗೆದುಕೊಳ್ತು.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ನಿಷ್ಪಾಪಿ ಕಂದಮ್ಮ
ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ನಿಷ್ಪಾಪಿ ಕಂದಮ್ಮ..ಸಾವಿಗೆ ಯಾರು ಹೊಣೆ?

ಪ್ರಕರಣ-2: ಇದೊಂದು ಎಂಥಾ ಕಲ್ಲು ಮನಸನ್ನು ಕರಗಿಸುವ ಸ್ಟೋರಿ ಕಣ್ರಿ.ಒಂದು ತಿಂಗಳ ಹಸುಳೆಯನ್ನೇ ಕೆಲ ಪಾಪಿ ವೈದ್ಯರು ಬೆಡ್ ನೀಡದೆ ಸತಾಯಿಸಿ ಸತಾಯಿಸಿ ಕೊಂದಾಕಿದ್ದಾರೆ. ಇದು ಕೂಡ ರಾಜಾಜಿನಗರದ ಮಂಜುನಾಥ ನಗರದಲ್ಲಿಯೇ ನಡೆದ ಘಟನೆ.ಒಂದು ತಿಂಗಳ ಮಗುವಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಒಂದ್ ಕ್ಷಣನೂ  ನೆಗ್ಲೆಕ್ಟ್ ಮಾಡದೆ ಆಸ್ಪತ್ರೆಗಳಿಗೆ ಕೊಂಡೊಯ್ದಿದ್ದಾರೆ.ಕೊರೊನಾ ಇಲ್ಲ ಅಡ್ಮಿಟ್ ಮಾಡಿಕೊಳ್ಳಿ ಎಂದ್ರೆ ಸೌಜನ್ಯಕ್ಕೂ ಆಸ್ಪತ್ರೆಯವರು ಅದಕ್ಕೆ ಕೇರ್ ಮಾಡಿಲ್ಲ.

ಬಸವೇಶ್ವರನಗರದ ಕಾರ್ಡ್ ರೋಡ್ ಆಸ್ಪತ್ರೆ, – ಶೇಷಾದ್ರಿಪುರಂನ ಅಫೊಲೋ ಆಸ್ಪತ್ರೆ ,ಜಯದೇವ ಆಸ್ಪತ್ರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕಾಡೇ ಆಸ್ಪತ್ರೆ, ಪಿಪಲ್ಸ್ ಟ್ರೀ ಆಸ್ಪತ್ರೆ,ಸ್ಪರ್ಷ ಆಸ್ಪತ್ರೆ,ಎಂ.ಎಸ್  ರಾಮಯ್ಯ ಆಸ್ಪತ್ರೆಗಳಿಗೆಲ್ಲಾ ಮಗುವನ್ನು ಕರಕೊಂಡು ಹೋಗಿದ್ದಾರೆ.ಆದ್ರೆ ಎಲ್ಲೂ ಅಡ್ಮಿಷನ್ ಸಿಕ್ಕಿಲ್ಲ.ಕೊನೆಗೇ ಮಾರತ್ ಹಳ್ಳಿಯ ರೈನ್ ಬೋ ಆಸ್ಪತ್ರೆಗೆ ಸೇರಿಸಲಾಗಿದೆ.ಆದ್ರೆ ಅಷ್ಟೊತ್ತಿಗಾಗ್ಲೇ ಮಗುವಿನ ಹೃದಯಬಡಿತದಲ್ಲಿ ಸಿಕ್ಕಾಪಟ್ಟೆ ಏರುಪೇರಾಗಿ ಆಸ್ಪತ್ರೆಗೆ ಸೇರಿಸಿದ ಕೆಲ ಘಂಟೆಗಳಲ್ಲೇ ಕೊನೆಯುಸಿರೆಳೆದಿದೆ. ವೈದ್ಯರು  ಸ್ವಲ್ಪ ಮನುಷ್ಯತ್ವ ತೋರಿಸಿದ್ರೆ ನನ್ನ ಮಗು ಬದುಕುಳಿಯುತ್ತಿತ್ತು.ವೈದ್ಯರು ಧನದಾಹಿ ರಾಕ್ಷಸರಾಗಿದ್ದಾರೆ.ಕೊರೊನಾ ಬಿಟ್ಟರೆ ಬೇರೆ ರೋಗಗಳೇ ಜನರಿಗೆ ಬರಬಾರದೇ ಎಂದು ಪ್ರಶ್ನಿಸ್ತಾರೆ ಹೆತ್ತ ಕರುಳನ್ನು ಕಳಕೊಂಡ ತಾಯಿ.ಇದಕ್ಕೆ ಆರ್.ಅಶೋಕ್..ಡಾ.ಅಶ್ವತ್ಥನಾರಾಯಣ ಉತ್ತರಿಸ್ಬೇಕಿದೆ.

ವೆಂಕಟೇಶ್.
ಮಾವಳ್ಳಿಯ ವೃದ್ಧ ವೆಂಕಟೇಶ್.

ಪ್ರಕರಣ-3:ಇದು ಕಣ್ಣೀರು ತರಿಸುವ ಮತ್ತೊಂದು ಕಥೆ.ವೈದ್ಯರ ಧನದಾಹ-ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿಯಂಥ ಸ್ಟೋರಿ.ಲಾಲ್ ಭಾಗ್ ವ್ಯಾಪ್ತಿಯ ಮಾವಳ್ಳಿಯ 72 ರ ನಿವಾಸಿ ಅವ್ರ ಹೆಸರು ವೆಂಕಟೇಶ್.ಅಡುಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದ ಮುಖ್ಯಸ್ಥ.ವಯೋಸಹಜ ಸಮಸ್ಯೆ ಜತೆ ಉಸಿರಾಟದ ಪ್ರಾಬ್ಲಂ ಇದ್ದ ಅವರಿಗೆ ಮೊನ್ನೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ತಡಮಾಡದೆ ಕುಟುಂಬದವರು ವೆಂಕಟೇಶ್ ಅವರನ್ನು ಆಸ್ಪತ್ರೆಗಳಿಗೆ ಕರೆದೋಯ್ದರೆ,ಉಸಿರಾಟದ ಸಮಸ್ಯೆನಾ,ಮೊದ್ಲು ತರಬೇಡಿ ವಾಪಸ್ ತೆಗೆದುಕೊಂಡ್ ಹೋಗಿ ಎಂದು ಗಾಂಚಾಲಿಯ ಮಾತನ್ನಾಡಿದ್ದಾರೆ.

ಅಂದ್ಹಾಗೆ ಆ ಕುಟುಂಬ ವೆಂಕಟೇಶ್ ಅವರನ್ನು  ಸೌತ್ ಸಿಟಿ ಹಾಸ್ಪಿಟಲ್..ಬೆಂಗಳೂರು‌ ಮೆಡಿಕಲ್ ಹಾಸ್ಪಿಟಲ್,ಗಿರಿನಗರದ ಪಲ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ಪರದಾಡಿದೆ.ಆದ್ರೆ ಎಲ್ಲೂ ಅಡ್ಮಿಟ್ ಮಾಡಿಸಿಕೊಳ್ಳಲಿಲ್ಲ.

ಕೊನೆಗೆ ತಲಘಟ್ಟ ಪುರದ ಶಂಕರ ಆಸ್ಪತ್ರೆ ಅವ್ರು 40 ಸಾವಿರ ಫಿಕ್ಸ್ ಮಾಡಿ ಅದರಲ್ಲಿ 15 ಸಾವಿರ ಅಡ್ವಾನ್ಸ್ ಪಡೆದು ವೃದ್ಧರನ್ನು ಅರ್ಧ ಗಂಟೆ ನಂತರ ಅಡ್ಮಿಟ್ ಮಾಡಿಸಿಕೊಂಡಿದ್ದಾರೆ.ಆದ್ರೆ ಪ್ರಯೋಜನವೇನು,ಬೆಳಗ್ಗೆಯ ಅಲೆದಾಟದಿಂದ ತೀವ್ರ ಬಳಲಿ ಅಸ್ವಸ್ಥರಾಗಿದ್ದ ವೆಂಕಟೇಶ್ ಕೆಲವೇ ನಿಮಿಷಗಳ ತರುವಾಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಕಿ ಹಣವನ್ನು ಪಡೆದೇ ಬಾಡಿಯನ್ನು ಮನೆಯವರಿಗೆ  ಹಸ್ತಾಂತರ ಮಾಡಲಾಗಿದೆ.

ಪ್ರಕರಣ-4:ಈ ಸ್ಟೋರಿ ಕೂಡ ವೈದ್ಯರ ನಿರ್ಲಕ್ಷ್ಯದ ಪರಮಾವಧಿಯನ್ನು ಎತ್ತಿ ತೋರಿಸುತ್ತದೆ.ಪೌರ ಕಾರ್ಮಿಕರಿಗೆ ಕೊರೊನಾ ವಾರಿಯರ್ಸ್ ಎಂದು ಕರೆದಿದ್ದ ಬಿಬಿಎಂಪಿ, ಕೊರೊನಾ ಬಂದು ನರಳುತ್ತಿದ್ದರೂ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡದೆ ಅಮಾಯಕ ಪೌರ ಕಾರ್ಮಿಕೆಯ ಸಾವಿಗೆ ಕಾರಣವಾಗಿದೆ. 28 ವರ್ಷದ ಶಿಲ್ಪಾ , ಮಹಿಳೆ ಪೌರಕಾರ್ಮಿಕರಾಗಿ ಹೆಬ್ಬಾಳ ಕ್ಷೇತ್ರದ ವಾರ್ಡ್ 22 ವಿಶ್ವನಾಥ ನಾಗೇನಹಳ್ಳಿ ಯಲ್ಲಿ ಕೆಲಸ ಮಾಡುತ್ತಿದ್ದರು.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಪೌರ ಕಾರ್ಮಿಕೆ ಶಿಲ್ಪಾ..
ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಪೌರ ಕಾರ್ಮಿಕೆ ಶಿಲ್ಪಾ..

ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರೂ ,ಕೆಲಸ ಮಾಡಿದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆ ವೇಳೆಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ, ಬಳಿಕ ವಿಕ್ಟೋರಿಯಾ, ರಾಮಯ್ಯ, ಮಣಿಪಾಲ್, ವಿಕ್ರಮ್ ಆಸ್ಪತ್ರೆ ಎಲ್ಲಾ ಕಡೆ ವಿಚಾರಿಸಿದರೂ ಬೆಡ್ ಇಲ್ಲ ಎಂದಿದ್ದಾರೆ. ಆರೋಗ್ಯಾಧಿಕಾರಿ ಸಿದ್ದಪ್ಪಾಜಿ ಫೋನ್ ಕರೆಗೆ ಸಿಕ್ಕಿಲ್ಲ. ಎಷ್ಟೇ ಕಾಲ್ ಮಾಡಿದ್ರೂ ಸ್ಪಂದಿಸಿಲ್ಲ. ಎಮ್ ಒ ಹೆಚ್ ಸತ್ಯವತಿ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ,

ಕಡೆಗೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಸೇರಿಸಲಾಯಿತು. ಆದ್ರೆ ವೆಂಟಿಲೇಟರ್ ಇಲ್ಲದೆ ಬೆಳಗ್ಗೆ ಐದು ಗಂಟೆಗೆ ಮೃತಪಟ್ಟಿದ್ದಾರೆ, ಪಾಲಿಕೆಯ ನಿರ್ಲಕ್ಷ್ಯದಿಂದ ಈ ಸಾವಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಸಂಘದ ಮುಖಂಡರು ಪ್ರತಿಭಟನೆ ಮಾಡಿದ್ರು.ಆದ್ರೆ ಹೋದ ಜೀವ ಮತ್ತೆ ಬಂತಾ..ಖಂಡಿತಾ ಇಲ್ಲ..

ಇದೆಲ್ಲಾ ಒಂದೇ ದಿನ ಸಂಭವಿಸಿದ ಸಾವುಗಳು..ಇದಕ್ಕೆ ವೈದ್ಯರ ನಿರ್ಲಕ್ಷ್ಯ-ಹೊಣೆಗೇಡಿತನ-ಕ್ರೌರ್ಯವೇ ಮೂಲ ಕಾರಣ.ಸರ್ಕಾರ ಕೊರೊನಾ ಚಿಕಿತ್ಸೆ ನಿರಾಕರಿಸಿದ್ರೆ ಅದು ಎಂಥದ್ದೇ ಆಸ್ಪತ್ರೆ ಇರಲಿ,ಅವುಗಳ ಲೈಸೆನ್ಸನ್ನು ರದ್ದು ಮಾಡ್ತೇವೆ ಎಂದು ಹೇಳುತ್ತಲೇ ಬಂದಿದೆ.ಆದ್ರೆ ಒಂದೇ ಒಂದು ಆಸ್ಪತ್ರೆಯನ್ನು ಶಿಕ್ಷಿಸುವ ಕೆಲಸ ಮಾಡಿದೆಯೇ? ಖಂಡಿತಾ ಇಲ್ಲ..ಮನಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ..

ಆದ್ರೆ ಅಂಥಾ ಗಂಡಸುತನ ಪ್ರದರ್ಶಿಸುವವರೇ ಸರ್ಕಾರದಲ್ಲಿಲ್ಲವಾಗಿದ್ದಾರೆ.ಸರ್ಕಾರ ಬಾಯಿ ಬಡಿದುಕೊಳ್ಳುತ್ತಿರುವ ಬೆನ್ನಲ್ಲಿ ಅಂತದ್ದೇ ಆಸ್ಪತ್ರೆಗಳನ್ನು ಬೆಂಬಲಿಸುವ ಕೆಲಸ ಮಾಡುತ್ತಿರುವುದರಿಂದ್ಲೇ ಎಷ್ಟೇ ಎಚ್ಚರಿಕೆ ಹೊರತಾಗ್ಯೂ ತಮ್ಮ ನಿರ್ಲಕ್ಷ್ಯ-ತಾತ್ಸಾರವನ್ನು ಮುಂದುವರೆಸಿಕೊಂಡೇ ಹೋಗುತ್ತಿವೆ.

Spread the love
Leave A Reply

Your email address will not be published.

Flash News