ಕೊರೊನಾ ಹಬ್ ಆಗ್ತಿದೆಯೇ ಕಬ್ಬನ್ ಪಾರ್ಕ್ ?? :: ವಾಕ್ ಗೆ ಬರುತ್ತಿರುವ ಸೋಂಕಿತರಿಂದ ವಾಯುವಿಹಾರಿಗಳಲ್ಲಿ ಢವಢವ…!!

0

ಬೆಂಗಳೂರು:ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡ್ತಿದೆ.. ಶತಾಯಗತಾಯ ಮೂಲೋತ್ಪಾಟನೆ ಮಾಡಿಯೇ ತೀರುವ ಸಂಕಲ್ಪ ತೊಟ್ಟು,ಇದಕ್ಕಾಗಿ ನಿಯಂತ್ರಣದ ಕ್ರಮ ಕೈಗೊಂಡಿದೆ.

ಆದ್ರೆ ಬೆಂಗಳೂರಿನ ಹೃದಯಭಾಗವಾದ ಕಬ್ಬನ್ ಪಾರ್ಕ್ ನಲ್ಲಿ ಮಾತ್ರ ಕೊರೊನಾ ಸೋಂಕು ಹರಡೊಕ್ಕೆ ಅಲ್ಲಿನ ಆಡಳಿತ ಮಂಡಳಿಯೇ ಅವಕಾಶ ಮಾಡಿಕೊಟ್ಟಿದೆ ಎನ್ನುವ ಅನುಮಾನ ಮೂಡಿದೆ.ಕೊರೊನಾ ಸೋಂಕಿತರೇ ಹೆಚ್ಚಾಗಿರುವ ಪ್ರದೇಶಗಳಿಗೆ ಹೊಂದಿಕೊಂಡಿರುವ ಪಾರ್ಕ್ ನಲ್ಲಿ ವಾಯುವಿಹಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿರುವುದು ವಾಯುವಿಹಾರಿಗಳನ್ನು ಕೆಂಡಾಮಂಡಲಗೊಳಿಸಿದೆ.

ಕಬ್ಬನ್ ಪಾರ್ಕ್ ನ್ನು  ವಾಯುವಿಹಾರಕ್ಕೆ  ಮುಕ್ತಗೊಳಿಸಿರುವುದು ಸಾವಿರಾರು ವಾಯುವಿಹಾರಿಗಳ ಆತಂಕಕ್ಕೆ ಕಾರಣವಾಗಿದೆ.ಪಾರ್ಕ್ ನಲ್ಲಿ ಬೆಳಗ್ಗೆ ವಾಕಿಂಗ್ ಗೆ ಬರುವ ಸಾವಿರಾರು ವಾಯುವಿಹಾರಿಗಳಿಗೆ ಕೊರೊನಾ ಸೋಂಕಿನ ಪ್ರದೇಶಗಳಿಂದ ವಾಯುವಿಹಾರಿಗಳು ಬರುತ್ತಿರುವುದು ಭಯ ಹುಟ್ಟಿಸಿದೆ ಕೊರೊನಾ ಸೋಂಕಿತರು ಹಾಗು ಸಂಪರ್ಕಿತರು ಕೂಡ ಪಾರ್ಕ್ ಗೆ ವಾಯುವಿಹಾರಕ್ಕೆ ಬರುತ್ತಿರುವ ಸಾಧ್ಯತೆಗಳಿರುವುದರಿಂದ ಸೋಂಕಿನ ಸಾಂಕ್ರಾಮಿಕತೆ ಉಳಿದವರಿಗು ಹರಡಬಹುದೆನ್ನುವುದು ಕಬ್ಬನ್ ಪಾರ್ಕ್ ವಾಯುವಿಹಾರಿಗಳ ಸಂಘದ ಉಮೇಶ್ ಆತಂಕ.

ಕಬ್ಬನ್ ಪಾರ್ಕ್ ಗೆ ಬೆಂಗಳೂರಿನ ನಾನಾ ಕಡೆಗಳಿಂದ ಶುದ್ದ ಗಾಳಿ ಪಡೆಯೊಕ್ಕೆ ವಾಯುವಿಹಾರಿಗಳು ಬರುತ್ತಾರೆ.ಇವರ ಜತೆಯಲ್ಲಿ   ಕಬ್ಬನ್ ಪೇಟೆ, ಚಿಕ್ಕಪೇಟೆ, ಕಾಟನ್ ಪೇಟೆ, ಸಂಪಂಗಿರಾಮನಗರ, ಶಿವಾಜಿನಗರ,ಅಕ್ಕಿಪೇಟೆ,ವಸಂತನಗರದ ನಿವಾಸಿಗಳು ಕೂಡ ವಾಕ್ ಗೆ ಬರುತ್ತಾರೆ.ಇವರು ಬರುವ ಏರಿಯಾಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿದೆ.ಎಷ್ಟೇ ಪ್ರಯತ್ನ ಮಾಡಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ..ಕೊರೊನಾ ಸೋಂಕು ಕಡಿಮೆ ಇರುವ ಏರಿಯಾಗಳಿಂದ ಬರುವ ವಾಯುವಿ ಹಾರಿಗಳಿಗೆ ಮೇಲ್ಕಂಡ ಏರಿಯಾಗಳ ವಾಯುವಿಹಾರಿಗಳಿಂದ ದೊಡ್ಡ ಆತಂಕ ಸೃಷ್ಟಿಯಾಗಿದೆ.ಈ ಏರಿಯಾಗಳಿಂದ ಬರುವ ಅದೆಷ್ಟು ಮಂದಿಗೆ ಕೊರೊನಾ ಸೋಂಕಿದೆಯೋ..ಸೋಂಕಿತರೊಂದಿಗೆ ಸಂಪರ್ಕಿತರು ಬರುತ್ತಾರೋ ಎನ್ನುವ ಶಂಕೆ ಇದೆ. ಸೋಂಕಿತರು ಹಾಗೂ ಸಂಪರ್ಕಿತರಿಂದ ಸೋಂಕು ತಮಗು ಎಲ್ಲಿ ಹರಡಿಬಿಡುತ್ತೋ..ವಾಯುವಿಹಾರಕ್ಕೆ ಬಂದು ಕೊರೊನಾ ಸೋಂಕನ್ನು ಪುಕ್ಕಟೆಯಾಗಿ ಬರಿಸಿಕೊಳ್ಳಬೇಕಾಗುತ್ತದಲ್ಲ ಎನ್ನುವುದು ವಾಯುವಿಹಾರಿ ಶಮಂತ್ ಉಪಾಧ್ಯಾಯ ಅವರ ಪ್ರಶ್ನೆ.

ಕಬ್ಬನ್ ಪಾರ್ಕ್ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಉಮೇಶ್
ಕಬ್ಬನ್ ಪಾರ್ಕ್ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಉಮೇಶ್

ಇಂಥಾ ಸಂದರ್ಭವನ್ನು ಹೇಗೆ ಟ್ಯಾಕಲ್ ಮಾಡಬೇಕೆನ್ನುವುದು ಕೂಡ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.ವಾಯುವಿಹಾರಿಗಳನ್ನು ತಪಾಸಣೆ ಮಾಡುವ ಕೆಲಸವಂತೂ ಕಬ್ಬನ್ ಪಾರ್ಕ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕೆ ಇಲಾಖೆಯಿಂದ ಆಗುತ್ತಿಲ್ಲ..ಬರುವ ಎಲ್ಲರನ್ನೂ ಪಾರ್ಕ್ ನೊಳಗೆ ವಾಕಿಂಗ್ ಗೆ ಬಿಡಲಾಗುತ್ತಿದೆ.ಅದೇ ಸೋಂಕು ಹರಡುವ ಆತಂಕವನ್ನು ಹೆಚ್ಚಿಸಿದೆ.ಹಾಗಾಗಿ ಒಂದಾ ಚೆಕ್ ಮಾಡಿ ಒಳಗೆ ಬಿಡುವ ವ್ಯವಸ್ಥೆ ಮಾಡಬೇಕು.ಇಲ್ಲವಾದಲ್ಲಿ ಪಾರ್ಕ್ ನ್ನೇ ಒಂದಷ್ಟು ಅವಧಿಗೆ ಮುಚ್ಚಬೇಕು ಎನ್ನುವುದು ವಾಯುವಿಹಾರಿಗಳ ಸಂಘದ ಉಮೇಶ್ ಆಗ್ರಹ.

ಕೊರೊನಾ ಭಯದ ಹಿನ್ನಲೆಯಲ್ಲಿ ಲಾಲ್ ಭಾಗ್ ವಾಯುವಿಹಾರಿಗಳ ಪ್ರವೇಶಕ್ಕೆ ನಿರ್ಭಂಧ ಹೇರಿದೆ
ಕೊರೊನಾ ಭಯದ ಹಿನ್ನಲೆಯಲ್ಲಿ ಲಾಲ್ ಭಾಗ್ ವಾಯುವಿಹಾರಿಗಳ ಪ್ರವೇಶಕ್ಕೆ ನಿರ್ಭಂಧ ಹೇರಿದೆ

ಕಬ್ಬನ್ ಪಾರ್ಕ್ ನೊಳಗಿನ ಆರೋಗ್ಯವನ್ನು ಕಾಪಾಡಬೇಕಾದ ಅಧಿಕಾರಿ ಚಂದ್ರಶೇಖರ್ ಅವರಿಗೇನೇ ಕೊರೊನಾ ಬಂದಿದೆ.ಇದರ ಉಸ್ತುವಾರಿ ನೋಡಿಕೊಳ್ಳಲು ಯಾರೂ ಇಲ್ಲವಾಗಿದೆ.ಯಾರ್ ಬೇಕಾದ್ರೂ ಬರಬಹುದು..ಏನ್ ಬೇಕಾದ್ರೂ ಮಾಡಬಹುದು ಎನ್ನುವಂಥ ಸ್ಥಿತಿಯನ್ನು ಹೊತ್ತುಕೊಂಡು ಕೂತಿರುವ ಕಬ್ಬನ್ ಪಾರ್ಕ್ ನ ವ್ಯವಸ್ಥೆ ಹಾಗೂ ವಾಯುವಿಹಾರಿಗಳ ಆರೋಗ್ಯ ರಕ್ಷಿಸಬೇಕಾದ್ರೆ ಲಾಲ್ ಭಾಗ್ ಮಾದರಿಯಲ್ಲೇ ಕಬ್ಬನ್ ಪಾರ್ಕ್ ನ್ನು ಕೂಡ ಅನಿರ್ಧಿಷ್ಟಾವಧಿಗೆ ಕ್ಲೋಸ್ ಮಾಡಬೇಕೆನ್ನುವ ಉಮೇಶ್ ವಾದವನ್ನು ವಾಯುವಿಹಾರಿಗಳು ಸಮರ್ಥಿಸುತ್ತಾರೆ.

ಲಾಲ್ ಭಾಗ್ ನ್ನು ಇದೇ ಕಾರಣಕ್ಕೆ ಕ್ಲೋಸ್ ಮಾಡಲಾಗಿದೆ.ಹಾಗಾಗಿ ಅಲ್ಲಿಗೆ ಹೋಗುತ್ತಿದ್ದ ವಾಯುವಿಹಾರಿಗಳು ಕೂಡ ಕಬ್ಬನ್ ಪಾರ್ಕ್ ಗೆ ಬರುತ್ತಿದ್ದಾರೆ.ಇದರಿಂದ ವಾಯುವಿಹಾರಿಗಳ ದಟ್ಟಣೆ ಹೆಚ್ಚಿದೆ.ಸಾಮಾಜಿಕ ಅಂತರವೂ ದಿಕ್ಕರಿಸಲ್ಪಟ್ಟಿದೆ.ಇಂಥಾ ಪರಿಸ್ಥಿತಿಯಲ್ಲಿ ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳುತ್ತಿಲ್ಲ.ಈ ಚಿತ್ರಣಕ್ಕೆ ಬ್ರೇಕ್ ಹಾಕದಿದ್ರೆ ಕೊರೊನಾ ಸೋಂಕು ಹರಡೊಕ್ಕೆ ಕಬ್ಬನ್ ಪಾರ್ಕ್ ಹೇಳಿ ಮಾಡಿಸಿದ ತಾಣವಾಗುವ ಆತಂಕವಿದೆ.ಕಬ್ಬನ್ ಪಾರ್ಕ್ ಸ್ವಾಸ್ಥ್ಯವನ್ನು ಕಾಪಾಡಬೇಕಾದ್ರೆ ಕೊರೊನಾ ಸೋಂಕು ಹತೋಟಿಗೆ ಬರೋವರೆಗು ಲಾಲ್ ಭಾಗ್ ನಂತೆ ಕಬ್ಬನ್ ಪಾರ್ಕನ್ನು ಮುಚ್ಚುವುದು ಒಳ್ಳೇದೆನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಈ ಬಗ್ಗೆ  ಕನ್ನಡ ಫ್ಲಾಶ್ ನ್ಯೂಸ್ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ರೆ ಯಾವೊಬ್ಬ ಅಧಿಕಾರಿನೂ ಸಂಪರ್ಕಕ್ಕೆ ಸಿಗಲಿಲ್ಲ..ಉಸ್ತುವಾರಿ ನೋಡಿಕೊಳ್ಳಬೇಕಾದವ್ರು ಕೊರೊನಾ ಹರಡೊಕ್ಕೆ ಬಿಟ್ಟು ಸುಮ್ಮನಿದ್ದಾರೆ.ಯಾರೊಬ್ಬರೂ ಕಬ್ಬನ್ ಪಾರ್ಕ್ ನಲ್ಲಿ ಏನಾಗುತ್ತಿದೆ ಎಂದು ನೋಡುವವರಿಲ್ಲವಾಗಿದೆ.ಇದಕ್ಕಿಂತ ದುರಂತ ಮತ್ತೊಂದಿದೆಯೇ..

ಅದೇನೇ ಆಗಲಿ,ಕೊರೊನಾ ಸಾಂಕ್ರಾಮಿಕತೆಯಿಂದ ದೂರವಿರೊಕ್ಕೆ ಕಬ್ಬನ್ ಪಾರ್ಕ್ ಗೆ ಬರುವ ವಾಯುವಿಹಾರಿಗಳಿಗೇನೇ ಕೊರೊನಾ ಹರಡುವಂಥ ವಾತಾವರಣ ಪಾರ್ಕ್ ನಲ್ಲಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ..ಪರಿಸ್ಥಿತಿ ಕೈ ಮೀರುವ ಮುನ್ನ ತೋಟಗಾರಿಕೆ ಇಲಾಖೆ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮ ಕೈಗೊಳ್ಳಬೇಕು..ಇಲ್ಲವಾದ್ರೆ ಕಬ್ಬನ್ ಪಾರ್ಕ್ ನ್ನು ಅನಿರ್ಧಿಷ್ಟಾವಧಿಗೆ ಮುಚ್ಚಬೇಕು..ಇದೇ ತೋಟಗಾರಿಕೆ ಇಲಾಖೆ ಮುಂದಿರುವ ಎರಡು ಆಯ್ಕೆಗಳು..   

Spread the love
Leave A Reply

Your email address will not be published.

Flash News