ಸಾಫ್ಟ್ ವೇರ್ ಕಂಪೆನಿಗಳಿಗೂ-ಮಾಸ್ಕ್ ಪೂರೈಸುವ ಗುತ್ತಿಗೆಗೂ ಎತ್ತಣಿಂದೆತ್ತಣ ಏನ್ ಸಂಬಂಧ.? ಕೋಟಿಗಟ್ಟಲೇ ಗುಪ್ತ್ ಗುಪ್ತ್..ವ್ಯವಹಾರದಲ್ಲಿ “ಕಿಕ್ ಬ್ಯಾಕ್” ನ ಶಂಕೆ  

0

ಬೆಂಗಳೂರು:ಕೊರೊನಾ ಟೈಮ್ನಲ್ಲಿ ಅದರ ನಿಯಂತ್ರಣಕ್ಕೆ ಸರ್ಕಾರ ಕಷ್ಟಪಟ್ಟಿದೆಯೋ ಇಲ್ಲವೋ ಗೊತ್ತಿಲ್ಲ,ಆದ್ರೆ ದಂಡಿ ದಂಡಿಯಾಗಿ ಅಕ್ರಮ ನಡೆಸಿದೆ.ಇದಕ್ಕೆ ಪೂರಕವಾದ ವ್ಯಾಪಕ ಪುರಾವೆಗಳು ಕೂಡ ಲಭ್ಯವಾ ಗಿದೆ.ದಿ ಫೈಲ್ ನಡೆಸಿರುವ ಸತ್ಯಶೋಧನೆಯಲ್ಲಿ ಬಹಿರಂಗವಾಗಿರುವ ಕೊರೊನಾ ಅಕ್ರಮದ ಝಲಕ್ ಕನ್ನಡ ಫ್ಲಾಶ್ ನ್ಯೂಸ್ ನಲ್ಲಿ..

ಮಾಸ್ಕ್ ಕಡ್ಡಾಯ ಮಾಡಿದ್ದರ ಹಿಂದಿನ ಉದ್ದೇಶ ಕೊರೊನಾ ಸಾಂಕ್ರಾಮಿಕತೆಗೆ ಬ್ರೇಕ್ ಹಾಕೋದೆಂದೇ ಜನ ತಿಳಿದುಕೊಂಡಿದ್ರು.ಆದ್ರೆ ಅದು ಸುಳ್ಳು ಎನ್ನೋದನ್ನು ಸರ್ಕಾರ ನಡೆಸಿರುವ ಅಕ್ರಮಗಳೇ ಸಾರಿ ಹೇಳುತ್ವೆ. ಮಾಸ್ಕ್ ಗಳ ಬಳಕೆಯನ್ನು ಕಡ್ಡಾಯ ಮಾಡಿದ್ರೆ ಅದರ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಬಹುದೆನ್ನುವ ಲೆಕ್ಕಾಚಾರ ಸರ್ಕಾರದ್ದೆನ್ನುವುದು ಮಾಸ್ಕ್ ಖರೀದಿಯಲ್ಲಿ ಆಗಿರುವ ಅಪರಾತಪರವೇ ಸಾಕ್ಷಿ.ಇದನ್ನೆಲ್ಲಾ ದಿ ಫೈಲ್ ಮಾಡಿದ ವರದಿಯನ್ನಾಧರಿಸಿ  ಈ EXCLUSIVE ಸುದ್ದಿ ಪ್ರಕಟಿಸುತ್ತಿದೆ.

ಮಾಸ್ಕ್ ಗಳನ್ನು ಸರ್ಕಾರದಿಂದ ಅಧೀಕೃತವಾಗಿ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ಪೂರೈಸಬೇಕು.ಸರ್ಕಾರ ಕೂಡ ಇದನ್ನು ಫಾಲೋ ಮಾಡಬೇಕೆನ್ನುವ ನಿಯಮ ಮಾಡಲಾಗಿತ್ತು.ಆದ್ರೆ ಹೀಗೆಲ್ಲಾ ರೂಲ್ಸ್ ಫ್ರೇಮ್ ಮಾಡಿದ ಸರ್ಕಾರವೇ ಅಕ್ರಮ ನಡೆಸೋದೆಂದ್ರೆ ಏನು?ಮಾಸ್ಕ್ ಖರೀದಿಯಲ್ಲಿ ಆದದ್ದು ಅದೇ.ಮಾಸ್ಕ್ ತಯಾರಿಕೆಗೂ ತಮಗೂ ಸಂಬಂಧವೂ ಇಲ್ಲದ  ಕೆಲ ಸಾಫ್ಟ್ ವೇರ್ ಕಂಪೆನಿಗಳಿಂದಲೂ ಸರ್ಕಾರ ಮಾಸ್ಕ್ ಖರೀದಿಸಿರುವುದು ಬೆಳಕಿಗೆ ಬಂದಿದೆ.

ಮೂರು ಪದರವನ್ನೊಳಗೊಂಡ ಎನ್-95 ಮಾಸ್ಕ್ ಗಳ ಖರೀದಿಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದು ಸಚಿವರಾದ ಶ್ರಿರಾಮುಲು,ಡಾ.ಕೆ ಸುಧಾಕರ್ ಘಂಟಾಘೊಷವಾಗಿ ಹೇಳ್ತಿದ್ದಾರೆ.ಆದ್ರೆ ಕೆಲವು ಕಂಪೆನಗಿಳ ಹೆಸರುಗಳನ್ನು ಉಲ್ಲೇಖಿಸದೆ ಬಿಟ್ಟಿರುವುದು ಅಕ್ರಮದೊಳಗೆ ಸರ್ಕಾರ ಶಾಮೀಲಾಗಿರುವುದನ್ನು ಸಾರಿ ಹೇಳುತ್ತೆ.ಏಕೆಂದ್ರೆ ಮಾಸ್ಕ್ ಖರೀದಿಸಲಾಗಿರುವ ಕಂಪೆನಿಗಳ ಹೆಸರನ್ನು ಉಲ್ಲೇಖಿಸುವ ವೇಳೆ ಈ ಸಾಫ್ಟ್ ವೇರ್ ಕಂಪೆನಿಗಳ ಹೆಸರನ್ನೇ ಇವ್ರು ಕೈ ಬಿಟ್ಟಿದ್ದಾರೆ.ಆದ್ರೆ ಸತ್ಯ ಎನ್ನೋದು ಬಸಿರಿದ್ದಂತೆ.ಅದನ್ನು ಹೆಚ್ಚು ಕಾಲ ಬಚ್ಚಿಡಲಾಗದು ಎನ್ನುವುದು ಈ ಮಹಾಷಯರಿಗೆ ಗೊತ್ತಿದ್ದಂತೆ ಇಲ್ಲ.

ಕೊರೊನಾ ಹಾವಳಿ ರಾಜ್ಯದಲ್ಲಿ ಕಾಣಿಸಿಕೊಂಡ ಅವಧಿ ಎಂದ್ರೆ  ಮಾರ್ಚ್ 21 ರಂದು ಕೇಂದ್ರ ಸರ್ಕಾರ ಮಾಸ್ಕ್ ಗಳ ಖರೀದಿಗೆ ಒಂದು ದರ ಫಿಕ್ಸ್ ಮಾಡುತ್ತೆ.ಎರಡು ಪದರಗಳುಳ್ಳ ಮಾಸ್ಕ್ ಗೆ 8 ರೂ,ಮೂರು ಪದರುಗಳುಳ್ಳ ಎನ್-95 ಮಾಸ್ಕ್ ಗೆ 10 ರೂ ದರಕ್ಕಿಂತ ಹೆಚ್ಚಿನ ರೇಟ್ ಫಿಕ್ಸ್ ಮಾಡಬಾರದೆನ್ನುವ ಆದೇಶವನ್ನೂ ಹೊರಡಿಸುತ್ತೆ.ಆದ್ರೆ ಮಾರ್ಗಸೂಚಿ ಹೊರಡಿಸಿದ ಸರ್ಕಾರವೇ 12 ರೂ,16 ರೂ ಹಾಗೂ 20 ರೂ ನಲ್ಲಿ ಮಾಸ್ಕ್ ಗಳನ್ನು ಖರೀದಿಸಿದೆ ಎನ್ನೋದು ಮುಖಕ್ಕೆ ರಾಚಿದಂತೆ ಬಹಿರಂಗವಾಗಿದೆ.

ಕರ್ನಾಟಕ ಸ್ಟೇಟ್ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಕೇಂದ್ರ ಸರ್ಕಾರ ನಿಗಧಿಪಡಿಸಿದ್ದ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಗಳನ್ನು ಖರೀದಿಸಿರೋದು ಪತ್ತೆಯಾಗಿದೆ.ಸಾಫ್ಟ್ ವೇರ್ ಕಂಪೆನಿಗಳಿಂದ್ಲೂ ಮಾಸ್ಕ್ ಖರೀದಿಸಿರುವುದು ದಾಖಲೆ ಸಮೇತ ಹೊರಬಿದ್ದಿದೆ.ಬೆಂಗಳೂರಿನ ಎಚ್.ಬಿ.ಆರ್ ಬಡಾವಣೆಯಲ್ಲಿ ಹರ್ಷಿಕಾ ಲಾಜಿಸ್ಟಿಕ್ಸ್ ಪ್ರವೈಟ್ ಕಂಪೆನಿಯಿಂದ ಮಾರ್ಚ್ 30 ರಂದು  12.99 ರೂ ದರದಂತೆ 5 ಲಕ್ಷ ಮಾಸ್ಕ್ ಗಳನ್ನು ಖರೀದಿಸಲಾಗಿದೆ.ಇದಕ್ಕೆ ನೀಡಿರುವ ಹಣ 64.95 ಲಕ್ಷ.ಇದು ಅಕ್ರಮವಲ್ದೇ ಇನ್ನೇನ್ ಸಚಿವ್ರೇ..

ಮಾಸ್ಕ್ ನಲ್ಲಿ   ಸರ್ಕಾರ ನಡೆಸಿರುವ ಗೋಲ್ಮಾಲ್ ಹಾಗೂ  ಕರಾಮತ್ತು ಇಷ್ಟಕ್ಕೆ ನಿಲ್ಲೊಲ್ಲ,ಸಾಫ್ಟ್ ವೇರ್-ವೆಬ್ ಸೈಟ್ ತಯಾರಿಸುವ  ಅಟೆಕ್ ಟ್ರಾನ್ ಎನ್ನುವ ಸಂಸ್ಥೆಯಿಂದಲೂ ಮಾಸ್ಕ್ ಖರೀದಿಸಿದೆ. ಪ್ರತಿ ಮಾಸ್ಕ್ ಗೆ 140 ರೂ ದರದಲ್ಲಿ 1 ಲಕ್ಷದಷ್ಟು ಮಾಸ್ಕ್ ಗಳನ್ನು ಸಾಫ್ಟ್ ವೇರ್ ಕಂಪೆನಿಯಿಂದ 1.56 ಕೋಟಿಗೆ ಖರೀದಿಸಿದೆ. ಈಗಾಗ್ಲೇ 30,57,600 ರೂಗಳನ್ನು ಪಾವತಿಸಿಯಾಗಿದೆ. ಇದೇ ಸಂಸ್ಥೆಯಿಂದ ನಿಯಮಬಾಹೀರವಾಗಿ 2ಕೋಟಿ ಯಷ್ಟು ಪಿಪಿಇ ಕಿಟ್ ಗಳನ್ನು ಖರೀದಿಸಿರುವುದನ್ನು ದಾಖಲೆಗಳೇ ಸಾರಿ ಹೇಳುತ್ವೆ.

ಅದರಂತೆಯೇ   2.94 ಕೋಟಿ ರೂ ವೆಚ್ಚದಲ್ಲಿ  ಮೆಡಿ ಅರ್ಥ್ ಲೈಫ್ ಪ್ರೈವೇಟ್ ಲಿಮಿಟೆಡ್ ನಿಂದ್ಲು 147 ರೂ ದರದಲ್ಲಿ 2 ಲಕ್ಷದಷ್ಟು ಮಾಸ್ಕ್  ಖರೀದಿಸುವ ಪ್ಲ್ಯಾನ್ ಕೂಡ ಸರ್ಕಾರ ಮಾಡಿತ್ತೆನ್ನುವುದು ಬಯಲಾಗಿದೆ.  ಆದ್ರೆ ವಿಪಕ್ಷಗಳು ಎಬ್ಬಿಸಿದ ಗದ್ದಲದ ಪರಿಣಾಮ ಅಂಥ ಧೈರ್ಯವನ್ನು ಸರ್ಕಾರ   ಮಾಡಿಲ್ಲ. ಈ ಸಂಸ್ಥೆಗಿನ್ನೂ ಆ ಟೆಂಡರನ್ನು ನೀಡಿಲ್ಲ. ಆಸ್ಕೋ ಏಜೆನ್ಸಿಯಿಂದಲೂ 18.74 ರೂ ದರದ ಅನ್ಚಯ 3 ಲಕ್ಷ ಮಾಸ್ಕ್ ಗಳನ್ನು 56.22 ಲಕ್ಷ ವೆಚ್ಚದಲ್ಲಿ ಖರೀದಿಸಲು ಆದೇಶ ಹೊರಡಿಸಿದೆ.`

ಅಂತದ್ದೇ  ಮತ್ತೊಂದು ಸಂಸ್ಥೆಯಾದ  ಪ್ಲಾಸ್ಟಿ ಸರ್ಜಿ ಏಜೆನ್ಸಿಯಿಂದ 147 ರೂ ದರದ ಅನ್ವಯ 2.10 ಕೋಟಿ ವೆಚ್ಚದಲ್ಲಿ1 ವರೆ ಲಕ್ಷದಷ್ಟು ಮಾಸ್ಕ್  ಖರೀದಿಸಲು ಮಾರ್ಚ್ 9 ರಂದು ಆದೇಶ ಹೊರಡಿಸಿರುವುದು  ತಿಳಿದುಬಂದಿದೆ. ಹೀಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ನಿಪುಣತೆ-ಅನುಭವ ಇಲ್ಲದ ಸಾಫ್ಟ್ ವೇರ್ ಸಂಸ್ಥೆಗಳಿಂದ ಕೇಂದ್ರ ಸರ್ಕಾರದ ನಿಯಮಗಳನ್ನು ಧಿಕ್ಕರಿಸಿ ಎನ್-95 ಮಾಸ್ಕ್ ಗಳ ಖರೀದಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕಿರುವ ದಾಖಲೆ ಹಾಗೂ ಸಾಕ್ಷ್ಯಗಳನ್ನು ಕ್ರೋಢೀಕರಿಸಿ ನೋಡಿದಾಗ  ಮಾಸ್ಕ್ ಖರೀದಿ ವಿಷಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತದೆ.

 

 

Spread the love
Leave A Reply

Your email address will not be published.

Flash News