ಸರ್ಕಾರಿ ಸೇವೆಗೂ ಸೈ..ಜನರ ಸ್ಪಂದನೆಗೂ ಜೈ…”ಅಜಾತಶತೃ” ನಿವೃತ್ತ ಐಎಎಸ್-ಮಾಜಿ ಸಚಿವ ಜೆ.ಅಲೆಕ್ಸಾಂಡರ್ ಗೆ 82ರ ಸಂಭ್ರಮ..

0

ಬೆಂಗಳೂರು:ಸರ್ಕಾರಿ ವಲಯದಲ್ಲಿ ಪ್ರಭಾವಳಿ ಉಳಿಸಿಕೊಂಡವರು ರಾಜಕೀಯದಲ್ಲಿ ಅಸ್ಥಿತ್ವ ಕಂಡುಕೊಂಡಿದ್ದು ತೀರಾ ವಿರಳ.ಅದರಲ್ಲೂ ಪ್ರಬಲ ಜಾತಿ ವ್ಯವಸ್ಥೆ ನಡುವೆ ಅಂತದ್ದೊಂದು ಮಹತ್ವದ ಸ್ಥಾನಕ್ಕೇರುವಂತಿದ್ದೆದೆಯೆಲ್ಲಾ ಅದು ಕಡಿಮೆ ಸಾಧನೆಯೇನಲ್ಲ. .ಅಂಥ ಸಾಧಕರ ಪೈಕಿ ದಕ್ಷ ಐಎಎಸ್ ಅಧಿಕಾರಿಯಾಗಿ,ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಲ್ಲಿಂದ ಶಾಸಕರಾಗಿ,ಸಚಿವರಾಗಿ ಮುಂಬಡ್ತಿ ಪಡೆದು ಯಶಸ್ವಿ ರಾಜಕಾರಣಿಯಾಗಿಯು ಗುರುತಿಸಿಕೊಂಡ ಜೆ.ಅಲೆಕ್ಸಾಂಡರ್ ಒಬ್ಬರು.ಅವರಿಗೆ ಇಂದು 82 ರ ಸಂಭ್ರಮ.

ಅಲೆಕ್ಸಾಂಡರ್.ಜೆ, ಅವರದು ಮೂಲ ಕೇರಳಾ..ಹುಟ್ಟಿದ್ದು 1938ರ ಆಗಸ್ಟ್ 8 ರಂದು. ಕೇರಳಾದ ಕೊಲ್ಲಂ ಜಿಲ್ಲೆಯ ಮಂಗಡ್ ಎನ್ನುವ ಗ್ರಾಮದಲ್ಲಿ.ಜಾನ್ ಜೋಸೆಫ್-ಎಲಜಬೆತ್ ದಂಪತಿಯ ಮಗನಾಗಿ ಮದ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜೆ.ಅಲೆಕ್ಸಾಂಡರ್,7 ಮಕ್ಕಳ ತುಂಬುಕುಟುಂಬದಲ್ಲಿ ಬೆಳೆದರು.ಬಾಲ್ಯದಲ್ಲೇ ತುಂಬಾ ಚೂಟಿ-ಬುದ್ದಿವಂತನಾಗಿದ್ದ ಮಗನನ್ನು ಸ್ಥಳೀಯ ಶಾಲೆಗೆ ದಾಖಲಿಸಿದ್ರು.ಓದಿನಲ್ಲಿ ಮುಂದಿದ್ದ ಮಗ ಪೋಷಕರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಬಿಎನಲ್ಲಿ ಇಂಗ್ಲೀಷ್ ಹಾಗೂ ಸಾಹಿತ್ಯ ಅಧ್ಯಯನ ಮಾಡಿದ್ರು.ಟ್ರಿವೆಂಡ್ರಮ್ ವಿವಿಯಲ್ಲಿ ಎಂಎ ಮುಗಿಸಿದ ನಂತ್ರ ಕರ್ನಾಟಕ ವಿವಿಯಲ್ಲಿ ಪಿಎಚ್ ಡಿ ಪದವಿ ಪೂರೈಸಿದರು.

ಬಾಲ್ಯದಿಂದ್ಲೂ ಬಡವರು-ನಿರ್ಗತಿಕರು-ಶೋಷಣೆಗೆ ಒಳಗಾದವ್ರು-ಸಾಮಾಜಿಕ ಅಸಮಾನತೆಯಿಂದ ಅವಕಾಶ ಕಳೆದುಕೊಂಡವರ ಕಷ್ಟ-ಬವಣೆ-ಸಂಕಟ-ಸಮಸ್ಯೆಗಳನ್ನೆಲ್ಲಾ ಹತ್ತಿರದಿಂದ ನೋಡಿದವ್ರು ಅಲೆಕ್ಸಾಂಡರ್.ಬಹುಷಃ ಸಾರ್ವಜನಿಕರ ಸೇವೆಯ ಆಸೆ-ಮಹತ್ವಾಕಾಂಕ್ಷೆ-ಗುರಿ ಚಿಗುರೊಡೆಯಲು ಕಾರಣವೇ ಅದಾಗಿತ್ತೇನೋ.ಅಂದೇ ಏನಾದ್ರೊಂದು ಸಾಧನೆ ಮಾಡ್ಬೇಕು.ಜನಸೇವೆಗೆ ತನ್ನ ಅಧಿಕಾರ-ಸ್ಥಾನಮಾನ ಬಳಕೆಯಾಗ್ಬೇಕೆಂದು ದೃಢಸಂಕಲ್ಪ ಮಾಡಿದ ಅಲೆಕ್ಸಾಂಡರ್ ಕೊಲ್ಲಂನ ಫಾತಿಮಾ ಕಾಲೇಜಿನಲ್ಲಿ ಆಂಗ್ಲ ಭಾಷೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುವಾಗ್ಲೇ ಭಾರತೀಯ ನಾಗರಿಕ ಸೇವೆ(UPSC)ಗೆ ಸಿದ್ಧತೆ ನಡೆಸಲಾರಂಭಿಸಿದ್ರು.ಅದು 1963ರಲ್ಲಿ ಸಾಕಾರವೂ ಆಯ್ತು.

ಕರ್ನಾಟಕ ಕೆಡರ್ ಐಎಎಸ್ ಅಧಿಕಾರಿಯಾಗಿ ನಿಯೋಜನೆಗೊಂಡ ಅಲೆಕ್ಸಾಂಡರ್ ಅವರು ಧಾರವಾಡ,ಬೆಂಗಳೂರು ಸೇರಿದಂತೆ ಅನೇಕ ಕಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು.ಕಂದಾಯ ಇಲಾಖೆ,ಬೆಂಗಳೂರು ಮುನ್ಸಿಪಲ್ ಕಾರ್ಪೊರೇಷನ್.ಬಿಡಿಎ,ಬೆಂಗಳೂರು ಜಲಮಂಡಳಿ,ಕೊಳಚೆ ನಿರ್ಮೂಲನಾ ಮಂಡಳಿ,ಗೃಹಮಂಡಳಿ,ಕೆಎಸ್ ಅರ್ ಟಿಸಿ,ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ನಿಗಮಗಳಂಥ ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡಿ ಸರ್ಕಾರದ ಮಟ್ಟದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದರು. ಆನಂತರ ಪ್ರತಿಯೋರ್ವ ಐಎಎಸ್ ಅಧಿಕಾರಿಯ ಪರಮೋಚ್ಛ ಗುರಿಯಾದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸರ್ಕಾರ ಅಲೆಕ್ಸಾಂಡರ್ ಅವರನ್ನು ನೇಮಕಗೊಳಿಸಿತು.ಈ 33 ವರ್ಷಗಳ ಅವಧಿಯಲ್ಲಿ ಅವರ ಅನೇಕ ಮಹತ್ವದ ಹಾಗೂ ಕ್ರಾಂತಿಕಾರಿ ಆದೇಶಗಳು ಇವತ್ತಿಗೂ ದಾಖಲಾರ್ಹ.

ಕ್ರೈಸ್ತ ಸಮುದಾಯದ ಮುಖಂಡ ಹಾಗು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಜೆ.ಅಲೆಕ್ಸಾಂಡರ್ ಕಳೆದ ಕ್ಷಣಗಳ ಫೋಟೋ..
ಕ್ರೈಸ್ತ ಸಮುದಾಯದ ಮುಖಂಡ ಹಾಗು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಜೆ.ಅಲೆಕ್ಸಾಂಡರ್ ಕಳೆದ ಕ್ಷಣಗಳ ಫೋಟೋ..

ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕವೂ ಜನರು ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕೆಂದು ಅವರ ಮನಸು ತುಡಿಯುತ್ತಲೇ ಇತ್ತು.ಅದಕ್ಕೆ ವೇದಿಕೆಯಾಗಿದ್ದು ರಾಜಕೀಯ.ಅವರ ಸೇವೆಯನ್ನು ಹತ್ತಿರದಿಂದ ನೋಡಿದ್ದ ಎಲ್ಲಾ ಪಕ್ಷಗಳು ಅವರಿಗೆ ಆಹ್ವಾನ ನೀಡಿದ್ವು.ಎಲ್ಲವನ್ನೂ ನಯವಾಗೇ ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರಿನ ಭಾರತಿನಗರ(ಈಗ ಅದು ಸರ್ವಜ್ಞನಗರ ಕ್ಷೇತ್ರವಾಗಿ ಬದಲಾಗಿದೆ) ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾದ್ರು. ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಂಡ ಕಾಂಗ್ರೆಸ್ ಸರ್ಕಾರ ಅಲೆಕ್ಸಾಂಡರ್ ಅವರಿಗೆ ಪ್ರವಾಸೋದ್ಯಮ ಸಚಿವ ಹುದ್ದೆ ನೀಡಿತು.ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ದಕ್ಷತೆ ಹಾಗು ಪ್ರಾಮಾಣಿಕತೆಯಿಂದ ನಿರ್ವಹಿಸಿ ರಾಜಕೀಯದಲ್ಲೂ ಸೈ ಎನಿಸಿಕೊಂಡರು.

ಅನೇಕ ಮಹತ್ವದ ಯೋಜನೆಗಳು ಅಲೆಕ್ಸಾಂಡರ್ ಅವರ ಅವಧಿಯಲ್ಲಿ ಜಾರಿಯಾದ್ವು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾವಣಾ ರಾಜಕಾರಣದಿಂದ ಸ್ವಲ್ಪ ವಿಶ್ರಾಂತಿ ಪಡೆದ ಅಲೆಕ್ಸಾಂಡರ್ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದಾರೆ.ಕ್ತೈಸ್ತ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾದ ವೈಎಂಸಿಎ ನ ಅಧ್ಯಕ್ಷಗಾದಿಯ ಚುಕ್ಕಾಣಿಯನ್ನು ಕಳೆದ 30 ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ. , Global Organization of People of Indian Origin(GOPIO) ನ ಸಲಹಾ ಮಂಡಳಿ ಸದಸ್ಯರಾಗಿದ್ದಾರೆ., Xavier Institute of Management and Entrepreneurship Bangalore ಹಾಗು ಅದರ ಕೊಚ್ಚಿ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತೀಚೆಗೆ ಪ್ರಸಿದ್ಧ ಆಭರಣ ಮಳಿಗೆಯಾದ ಚೆಮ್ಮನೂರು ಜುವೆಲರ್ಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಜೆ,ಅಲೆಕ್ಸಾಂಡರ್ ಅವರ ದಕ್ಷತೆ-ಪ್ರಾಮಾಣಿಕತೆ-ಹಿರಿತನಕ್ಕೆ ಸಂದ ಗೌರವ.
ಪತ್ನಿ ಡೆಲ್ಫಿನ್ ಹಾಗೂ ಮಕ್ಕಳಾಧ ಜೋಸ್ ಮತ್ತು ಜಾನ್ಸನ್ ಅವರೊಂದಿಗೆ ಸುಖಿ ಹಾಗೂ ಸಂತೃಪ್ತ ಜೀವನ ನಡೆಸುತ್ತಿರುವ ಜೆ.ಅಲೆಕ್ಸಾಂಡರ್ ನೂರ್ಕಾಲ ಬಾಳುವ ಮೂಲಕ ಅವರ ಸೇವೆ ಸಮಾಜಕ್ಕೆ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.

-ರಾಜೇಂದ್ರ ಪಿಳ್ಳೈ
ಜೆ.ಅಲೆಕ್ಸಾಂಡರ್ ಅಭಿಮಾನಿ ಬಳಗ,ಕ್ರೈಸ್ತ ಯುವ ಮುಖಂಡ

 

 

Spread the love
Leave A Reply

Your email address will not be published.

Flash News