ಭೋರ್ಗರೆಯುವ ತುಂಗೆಯ ಅಲೆಗಳ ರಭಸಕ್ಕೆ ಎದುರಾಗಿ ತೇಲಿ ಯಶಸ್ವಿಯಾದ ಶಿವಮೊಗ್ಗದ ಸಾಹಸಿಗಳು..

0

ಶಿವಮೊಗ್ಗ: ಅಪಾಯಗಳೆಂದ್ರೆ ಈ ಉತ್ಸಾಹಿಗಳಿಗೆ ಎಲ್ಲಿಲ್ಲದ ಖುಷಿ..ರೋಮಾಂಚನ..ಏನಾದ್ರೊಂದಿಷ್ಟು ಅಪೂರ್ವ-ವಿಶೇಷ-ವಿಶಿಷ್ಟ ಎನ್ನುವಂಥದ್ದು ಸಾಧನೆಯಾಗಿ ಪರಿಗಣಿಸಲ್ಪಡಬೇಕೆಂದ್ರೆ ಅದು ದುರ್ಗಮ-ದುಸ್ತರ ಎನಿಸುವಂಥ ಅಪಾಯಕಾರಿ ಸಂದರ್ಭಗಳನ್ನೇ ಸವಾಲಾಗಿಸಿಕೊಂಡಾಗ ಮಾತ್ರ ಎನ್ನೋದನ್ನು ಚೆನ್ನಾಗಿ ಅರಿತ ಸಮಾನಮನಸ್ಕರ ತಂಡ ಅದು.ಹಾಗಾಗಿ ಮಲೆನಾಡಿನ ಜೀವನದಿ ತುಂಗೆ ಭೋರ್ಗರೆಯಲಾರಂಭಿಸಿದಳೆಂದ್ರೆ ಸಾಕು ಈ ತಂಡ ಸಾಹಸಕ್ಕೆ ಸನ್ನದ್ಧವಾಗುತ್ತೆ.ಅದು ಅಂತಿಂಥ ಸಾಹಸವಲ್ಲ ಸ್ವಾಮಿ,ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಪ್ರಕೃತಿ ವಿರುದ್ಧವೇ ಸೆಣೆಸುವಂಥ ಸಾಹಸ.ಆದ್ರೆ ಅದೃಷ್ಟವಶಾತ್ ಹಾಗೂ  ಸುದೈವದಿಂದ ಈ ತಂಡ ಪ್ರತಿಬಾರಿಯ ಸಾಹಸವನ್ನು ಯಶಸ್ವಿಯಾಗಿ ಮಾಡುತ್ತಲೇ ಬಂದಿದೆ.ಎಷ್ಟೇ ಕಠಿಣತೆ ಎದುರಾದ್ರೂ ಎದೆಗುಂದದೆ ಗಮ್ಯವನ್ನು ಕ್ರಮಿಸುತ್ತಲೇ ಬಂದಿದೆ.

ಅ.ನಾ.ವಿ ಅರ್ಥಾತ ಅ.ನಾ ವಿಜಯೇಂದ್ರ ಎಂದ್ರೆ ಇಡೀ ಶಿವಮೊಗ್ಗಕ್ಕೆ ಪರಿಚಿತ ಹೆಸರು. ನೀಳಕಾಯದ ವಾಮನಮೂರ್ತಿ ಸ್ವರೂಪದ ಈ ಅ.ನಾ.ವಿ ಪ್ರ ತುಂಗಾ ನದಿ ಅಪಾಯದ ಮಟ್ಟಕ್ಕೆ ಬಂದು ತಲುಪಿದಾಗ್ಲೆಲ್ಲಾ ನದಿಯನ್ನು ಈಜುವ ಉತ್ಸಾಹ ಪ್ರದರ್ಶಿಸುತ್ತಲೇ ಬಂದಿದ್ದಾರೆ.ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಸಹ.ಆರಂಭದಲ್ಲಿ ರಿಸ್ಕ್ ಎದುರಾದ್ರೆ ತನಗೊಬ್ಬನಿಗೆ ಬರಲಿ ಎಂಬ ಧೈರ್ಯದಿಂದ ಏಕಾಂಗಿಯಾಗಿ ಯಾರ ನೆರವೂ ಇಲ್ಲದೆ ಇಂಥಾ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದುಂಟು ಅನಾವಿ.ಆನಂತರ ತನ್ನ ಜತೆ ಸೇರಿದ  ಉತ್ಸಾಹಿಗಳನ್ನು ಜೊತೆಗೆ ಸೇರಿಸಿಕೊಂಡು ಸಾಹಸ ಮುಂದುವರೆಸಿಕೊಂಡು ಬಂದಿದ್ದಾರೆ.

ಇದೇ ಸಾಹಸ ಹಾಗೂ ಉತ್ಸಾಹದ ಮುಂದುವರೆದ ಭಾಗವಾಗೇ ಅನಾವಿ ಪ್ರತಿನಿಧಿಸುತ್ತಾ ಬಂದಿರುವ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಹಾಗೂ ಇತರೆ ಮೂವರು ಸಮಾನಮನಸ್ಕ ಸಾಹಸಿಗಳ ತಂಡ ತುಂಗೆಯನ್ನು ಕಯಾಕಿಂಗ್(ನೀರಿನಲ್ಲಿ ದೋಣಿ ಚಲಾಯಿಸುವ ವಿಭಿನ್ನ ಸಾಹಸಮಯ ಕ್ರೀಡೆ) ಮೂಲಕ ಕ್ರಮಿಸುವ ಕೆಲಸವನ್ನು ಮಾಡಿತು.ಶಿವಮೊಗ್ಗದ ಮಂಟಪ ಇದನ್ನು ಕೋರ್ಪಾಲಯ್ಯ ಛತ್ರ ಎಂದೂ ಕರೆಯಲಾಗುತ್ತೆ.ಈ ಮಂಟಪದಿಂದ ತಮ್ಮ ಸಾಹಸ ಪಯಣಕ್ಕೆ  ಶ್ರೀನಾಥ್ ನಗರಗದ್ದೆ,ಹರೀಶ್ ಪಟೇಲ್,ಅ.ನಾ ಶ್ರೀಧರ್,ಸಾಸ್ವೆ ಹಳ್ಳಿ ಸತೀಶ್  ಸಾಥ್ ಕೊಟ್ಟರು.

ಇಬ್ಬರು ಕೂರುವ ಸಾಮರ್ಥ್ಯ ಇರುವ 2  ಬೋಟ್ ಗಳಲ್ಲಿ ನಾಲ್ವರು ಕಯಾಕಿಂಗ್ ಆರಂಭಿಸಿದ್ರು.ಇನ್ನೊಬ್ಬರು ಸಿಂಗಲ್ ಬೋಟಿಂಗ್ ನಲ್ಲಿ ಕಯಾಕಿಂಗ್ ಶುರುಮಾಡಿದ್ರು.ಕೋರ್ಪಾಲಯ್ಯ ಛತ್ರದಿಂದ ಹೊರಟ ಈ ಅಪಾಯಕಾರಿ ಅಷ್ಟೇ ರೋಮಾಂಚನಕಾರಿಯಾದ ಕಯಾಕಿಂಗ್ ಸಾಹಸ ಪಯಣ ಹೊನ್ನಾಳಿ ತಾಲೂಕು ರಾಂಪುರದವರೆಗೂ ಕ್ರಮಿಸಲಿದೆ.ಇದರ ಮಧ್ಯೆ ನೀರಿನ ಅಪಾಯಕಾರಿ ಸೆಳವಿನ ಸಾಕಷ್ಟು ಸ್ಥಳಗಳು ಈ ತಂಡಕ್ಕೆ ಎದುರಾದ್ರೂ ಕೊಂಚವೂ ವಿಚಲಿತವಾಗದೆ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೆ ಯಶಸ್ವಿಯಾಗಿ ತಮ್ಮ ಗಮ್ಯವನ್ನು ಕ್ರಮಿಸಿ ಶಿವಮೊಗ್ಗದ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿತು.ಅಂದ್ಹಾಗೆ ಈ ಕಯಾಕಿಂಗ್ 50 ಕಿಲೋಮೀಟರ್ ನೀರಿನ ಹಾದಿಯನ್ನು ಕ್ರಮಿಸಿತು.ಇದಕ್ಕೆ ತಗುಲಿದ ಅವಧಿ ಬರೋಬ್ಬರಿ 5 ಗಂಟೆ.

ಭೋರ್ಗರೆಯುವ ನದಿಯನ್ನು ದಿಟ್ಟಿಸಿ ನೋಡಿಯೇ ಹೌಹಾರುವ ನಾವು,ಅಲೆಗಳ ರಭಸವನ್ನು ಸೀಳಿ 50 ಕಿಲೋಮೀಟರ್ ಮಾರ್ಗ,..5 ಗಂಟೆಯ ನಿರಂತರ ಪ್ರಯಾಣ.. ಊಹಿಸಿಕೊಂಡ್ರೆ ಎದೆ  ಝಲ್ಲೆನ್ನುತ್ತದೆ.ಆದ್ರೆ ಅನಾವಿ ನೇತೃತ್ವದಲ್ಲಿ ಐವರ ತಂಡ ಯಶಸ್ವಿಯಾಗಿ ತುಂಗೆಯಲ್ಲಿ ದೋಣಿ ಪಯಣ ಮಾಡಿ ಸೈ ಎನಿಸಿಕೊಂಡಿತು.ಅನಾವಿ ವಿಜಯಯಾತ್ರೆಗೆ ನಿನ್ನೆಯ ಕಯಾಕಿಂಗ್ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದ್ದು ವಿಶೇಷ.ಅನಾವಿ ಅವರ ಈ ಸಾಧನೆಗೆ ಮೊದಲಿಂದ್ಲೂ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಸಚಿವ ಕೆ.ಎಸ್.ಈಶ್ವರಪ್ಪ,ಸಂಸದ ರಾಘವೇಂದ್ರ ಹಾಗೂ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅ.ನಾ.ವಿ ಸಾಧನೆಗೆ ಕನ್ನಡ ಫ್ಲಾಶ್ ನ್ಯೂಸ್ ಕೂಡ ಅಭಿನಂದನೆ ಸಲ್ಲಿಸುತ್ತೆ. 

Spread the love
Leave A Reply

Your email address will not be published.

Flash News