ಕಲಾವಿದ ಜಾನ್ ದೇವರಾಜ್ ಗೆ ಮಾಡಿದ ಅವಮಾನ, “ಶಂಕರ್ ” ಗೂ ತೋರಿದ ಅಗೌರವಕ್ಕಿಂತ ಕಡ್ಮೆಯೇನಿಲ್ಲ..

0
ಮಾಲ್ಗುಡಿ ರೈಲ್ವೆ ನಿಲ್ದಾಣದ ಮರುಸೃಷ್ಟಿಕರ್ತ ಕಲಾವಿದ ಜಾನ್ ದೇವರಾಜ್.
“ಮಾಲ್ಗುಡಿ” ರೈಲ್ವೆ ನಿಲ್ದಾಣದ ಮರುಸೃಷ್ಟಿ ಕರ್ತ ಕಲಾವಿದ ಜಾನ್ ದೇವರಾಜ್.

ಬೆಂಗಳೂರು:ಈ ಕಲಾವಿದನ ಬಗ್ಗೆ ಹೇಳಲೇಬೇಕೆನಿಸುತ್ತೆ..ಹೇಳಲೇಬೇಕು ಕೂಡ..ಇಲ್ಲಾಂದ್ರೆ ಕಲಾಸರಸ್ವತಿಗೆ ಅಪಮಾನಿಸಿದಂತೆ..ಈ ಕಲಾವಿದನ ಬಗ್ಗೆ ಹೇಳಲೇಬೇಕೆನಿಸುವುದಕ್ಕೆ ಕಾರಣವೂ ಇದೆ..ಆ ಕಾರಣವೇ ಚರಿತ್ರಾರ್ಹ ಮಾಲ್ಗುಡಿ ಡೇಸ್ ಧಾರಾವಾಹಿ ಹಾಗೂ  ಅದರ ಕಲಾನಿರ್ದೇಶಕ ಜಾನ್ ದೇವರಾಜ್.

ಕಿರುತೆರೆ ಇತಿಹಾಸದಲ್ಲಿ ದಾಖಲಾರ್ಹ ಧಾರಾವಾಹಿ ಎನಿಸಿದಂತದ್ದು ಕನ್ನಡದ ಶೋ ಮ್ಯಾನ್ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್.ಕಾಮನ್ ಮ್ಯಾನ್ ಖ್ಯಾತಿಯ ಕಾರ್ಟೂನಿಸ್ಟ್  ಆರ್.ಕೆ,ನಾರಾಯಣ್ ಅವರ ಕೃತಿಯನ್ನಾಧರಿಸಿ ಶಂಕರ್ ನಾಗ್ ನಿರ್ದೇಶಿಸಿದ್ದ ಈ ಧಾರಾವಾಹಿ ಕನ್ನಡದ ಹಿರಿಮೆ-ಗರಿಮೆಯನ್ನು ರಾಷ್ಟ್ರಮಟ್ಟಕ್ಕೇರಿಸಿತ್ತು.ದಶಕಗಳು ಕಳೆದ್ರೂ ಮಾಸದ ಘಮಲನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ಮಾಲ್ಗುಡಿ ಡೇಸ್ ನ್ನು ಪುನರ್ ಸೃಷ್ಟಿಯ ಹೊಣೆ ಹೊತ್ತು,ಅದನ್ನುಪೂರ್ಣಗೊಳಿಸಿದವ್ರೇ ಜಾನ್ ದೇವರಾಜ್.. ಆದ್ರೆ ದುರಂತ ಏನ್ ಗೊತ್ತಾ,ಮಾಲ್ಗುಡಿಯ ಗತವೈಭವವನ್ನು ಮೆಲುಕಾಕುವಂಥ ದೃಶ್ಯವೈಭವವನ್ನು ಕಣ್ಣಿಗೆ ಕಟ್ಟುವಂತೆ ಕಡೆದ ಶಿಲ್ಪಿ ಜಾನ್ ದೇವರಾಜ್ ಅವರನ್ನೇ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವರ ಕಲೆ ಹಾಗೂ ವ್ಯಕ್ತಿತ್ವವನ್ನು ಅವಮಾನಿಸಲಾಗಿದೆ.

ಮಾಲ್ಗುಡಿ ಡೇಸ್ ಶಂಕರ್ ನಾಗ್ ಅವರ  ಅದ್ಭುತ ಹಾಗೂ ಮಹಾನ್  ಕಲ್ಪನೆಯ ಮೇರುಶಿಖರ.ಶಂಕರ್ ಅವರಲ್ಲಿ ಇದ್ದಂಥ ಒಬ್ಬ ಅಸಾಧಾರಣ-ಅಪ್ರಮೇಯ ನಿರ್ದೇಶಕನ ಕಲಾವಂತಿಕೆಯ ಅತ್ಯದ್ಭುತ ಅನಾವರಣ. ಕನ್ನಡವೇ ಅಲ್ಲ,ಹಿಂದಿ ಹಾಗೂ ಇತರೆ ಪ್ರಾದೇಶಿಕ ಭಾಷೆಗಳ ನಿರ್ದೇಶಕರೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ ಶಂಕರ್ ಅವರ ಅತ್ಯದ್ಭುತ ಕಲಾಸಿರಿವಂತಿಕೆಗೆ ಸಮನಾಗುವಂಥ ಮಾಲ್ಗುಡಿ ಡೇಸ್ ದು “ನಾ ಭೂತೋ ನಾ ಭವಿಷ್ಯತಿ ಎನ್ನುವಂಥ ದೃಶ್ಯಕಾವ್ಯ ಬಿಡಿ..

ಇಂತದ್ದೊಂದು ಮಾಲ್ಗುಡಿ ಡೇಸ್ ಕಿರುತೆರೆಯ ಮೇಲೆ ಶಂಕರ್ ಕಲ್ಪನೆಗೆ-ನಿರೀಕ್ಷೆಗೆ ತಕ್ಕಂತೆ ಕೆಲವೊಮ್ಮೆ ಅದಕ್ಕೂ ಮೀರಿದ ರೀತಿಯಲ್ಲಿ ಹೊರಹೊಮ್ಮೊಕ್ಕೆ ಕಾರಣವೇ ಕಲಾನಿರ್ದೇಶನ.ಶಂಕರ್ ಯಾವುದೇ ನಿರ್ಭಿಡೆಯಿಲ್ಲದೆ  ಒಪ್ಪಿಕೊಳ್ಳುತ್ತಿದ್ದ ಸತ್ಯವಿದು.ಅಂಥಾ ತೆರೆದ ಮನಸಿತ್ತು ಶಂಕರ್ ನಾಗ್ ಗೆ.

ಕಲಾನಿರ್ದೇಶಕನ ಪ್ರತಿಭೆ ಹಾಗೂ ಸಾಮರ್ಥ್ಯ ಅನಾವರಣಗೊಳ್ಳದೇ ಹೋಗಿದ್ರೆ ಮಾಲ್ಗುಡಿ ಡೇಸ್ ಶತಮಾನದ ದೃಶ್ಯ ಕಾವ್ಯಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತಲೇ ಇರಲಿಲ್ಲ ಎಂದು ಹೇಳುತ್ತಿದ್ದ ಶಂಕರ್,ಇದರ ಶ್ರೇಯಸ್ಸನ್ನು ನೀಡುತ್ತಿದ್ದುದೇ ಧಾರಾವಾಹಿಯ ಕಲಾನಿರ್ದೇಶಕ ಜಾನ್ ದೇವರಾಜ್ ಅವರಿಗೆ.ಶಂಕರ್ ನಾಗ್ ಕೊಟ್ಟ ಸ್ವತಂತ್ರವೇ ಮಾಲ್ಗುಡಿ ಡೇಸ್ ಅಷ್ಟೊಂದು ನೈಜವಾಗಿ,ಅದ್ಭುತವಾಗಿ ಸೃಷ್ಟಿಯಾಗೊಕ್ಕೆ ಕಾರಣವಾಯ್ತು ಎಂದು ಆ ದಿನಗಳನ್ನು ಮೆಲುಕಾಕುತ್ತಾರೆ ಜಾನ್ ದೇವರಾಜ್.

ಮಾಲ್ಗುಡಿ ಡೇಸ್ ನಂತ ಅದ್ಭುತ ದೃಶ್ಯಕಾವ್ಯಕ್ಕೆ ಕಾರಣರಾದ ಜಾನ್ ದೇವರಾಜ್ ಅವರಿಗೇನೆ ಹೊಸನಗರ ತಾಲೂಕಿನ ಅರಸಾಳು( ಮೂಲ ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡ ಸ್ಥಳ)ವಿನಲ್ಲಿ ಮಾಲ್ಗುಡಿ ಮ್ಯೂಸಿಯಂ ಪುನರ್ ರೂಪಿಸುವ ಹೊಣೆ ನೀಡಲಾಗಿತ್ತು.ಸದಾ ಮಾನವಮುಖಿ-ಸಮಾಜಮುಖಿಯಾಗೇ ಆಲೋಚಿಸುವ ವ್ಯಕ್ತಿತ್ವದ ಜಾನ್ ದೇವರಾಜ್ ಯಾವ ಪ್ರಾಜೆಕ್ಟ್ ಗಳನ್ನು ಅಷ್ಟು ಸಲೀಸಾಗಿ ಒಪ್ಪಿಕೊಳ್ಳುವವರಲ್ಲ.ವರ್ಷಪೂರ್ತಿ ಬ್ಯುಸಿಯಾಗಿರುವ ಜಾನ್ ದೇವರಾಜ್ ಮಾಲ್ಗುಡಿ ವಿಚಾರ ಪ್ರಸ್ತಾಪವಾಗ್ತಿದ್ದಂಗೆ ಒಂದ್ ಕ್ಷಣ ಆಲೋಚಿಸದೆ ಓ.ಕೆ ಅಂದ್ಬಿಟ್ರು.ಅದಕ್ಕೆ ಕಾರಣ ಹಣ ಖಂಡಿತಾ ಅಲ್ಲ..ಶಂಕರ್ ಬಗ್ಗೆ ಅವರಿಗಿರುವ ಪ್ರೀತಿ,ಶಂಕರ್ ಕನಸಿನ ಮಾಲ್ಗುಡಿಯ ಮೂಲ ಆಶಯ-ಸ್ವರೂಪ ಮತ್ತೊಬ್ಬರಿಂದ ವಿರೂಪವಾಗಬಾರದೆನ್ನುವ ಉದ್ದೇಶಕ್ಕೆ.ಪ್ರಾಜೆಕ್ಟ್ ನ ಹೊಣೆ ಹೆಗಲೇರುತ್ತಿದ್ದಂತೆ ಹಳೆಯ ನೆನಪುಗಳೊಂದಿಗೆ ಅರಸಾಳುವಿನತ್ತ ತನ್ನ ತಂಡದೊಂದಿಗೆ ದೌಡಾಯಿಸಿ ನೆಲೆಯೂರಿದ ದೇವರಾಜ್,ಮಾಸಲಾದ ನೆನಪುಗಳನ್ನೆಲ್ಲಾ ರಿಕಾಲ್ ಮಾಡಿಕೊಂಡು ಒಂದು ಅತ್ಯದ್ಭುತ ಮಾಲ್ಗುಡಿಯನ್ನೇ ಸೃಷ್ಟಿಸಿ ತನಗೆ ಒಪ್ಪಿಸಿದ ಹೊಣೆಯನ್ನು ಶಂಕರ್ ಗಾಗಿ,ಅವರ ನೆನಪಿಗಾಗಿ ಮುಗಿಸಿಕೊಟ್ಟು ಬೆಂಗಳೂರಿಗೆ ಹೊರಟುಬಿಟ್ರು.

ಚರಿತ್ರಾರ್ಹ ಮಾಲ್ಗುಡಿ ಡೇಸ್ ಧಾರಾವಾಹಿಯ ಒಂದು ಚಿತ್ರ
ಚರಿತ್ರಾರ್ಹ ಮಾಲ್ಗುಡಿ ಡೇಸ್ ಧಾರಾವಾಹಿಯ ಒಂದು ಚಿತ್ರ

ಅಂದ್ಹಾಗೆ ಜಾನ್ ಗೆ ವಹಿಸಿಕೊಟ್ಟ ಪ್ರಾಜೆಕ್ಟ್ 130 ವರ್ಷಗಳಷ್ಟು ಹಳೆಯದಾದ ರೈಲ್ವೆ ನಿಲ್ದಾಣದ ಮರು ಸೃಷ್ಟಿ.ಧಾರಾವಾಹಿಯಲ್ಲಿ ಅನೇಕ ಸಂದರ್ಭಗಳಲ್ಲಿ ಈ ರೈಲ್ವೆ ನಿಲ್ದಾಣ ಬಂದೋಗುತ್ತೆ.ಆ ರೈಲ್ವೆ ನಿಲ್ದಾಣದ ಮರುಸೃಷ್ಟಿಗೆ 1.3 ಕೋಟಿ ಹಣ ಖರ್ಚು ಮಾಡಲಾಗಿತ್ತು.ಮಾಲ್ಗುಡಿಯ ಆ ಸಂದರ್ಭವನ್ನೇ ಕಟ್ಟಿಕೊಡುವ ರೀತಿಯ ನಿಲ್ದಾಣವನ್ನು ನಿರ್ಮಿಸಿ,ತನಗಿತ್ತ   ಜವಾಬ್ದಾರಿಯನ್ನು ಶಂಕರ್ ನೆನಪಿಗೆ-ಸಲಿಗೆಗಾಗಿ ನಿರ್ವಹಿಸಿ ಬೆಂಗಳೂರಿಗೆ ಬಂದ ಮೇಲೆ ನಿರ್ಲಿಪ್ತವಾಗುಳಿದುಬಿಟ್ಟರು ಜಾನ್ ದೇವರಾಜ್.

ಆದ್ರೆ ಕೃತಘ್ನ ಹಾಗೂ ಮಾನವೀಯತೆ ಇಲ್ಲದ ಜಿಲ್ಲಾಡಳಿತ ಹಾಗೂ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಈ ರೈಲ್ವೆ ನಿಲ್ದಾಣವನ್ನು ಸಂಸದ ರಾಘವೇಂದ್ರ ಅವರನ್ನು ಕರೆಯಿಸಿ ಉದ್ಘಾಟಿಸಿದ್ದಾರೆ.ಸೌಜನ್ಯಕ್ಕೂ ಅದರ ಸೃಷ್ಟಿಕರ್ತ ಹಾಗೂ ಕಲಾನಿರ್ದೇಶಕ ಜಾನ್ ದೇವರಾಜ್ ಅವರಿಗೆ ಒಂದು ಆಮಂತ್ರಣವನ್ನೂ ನೀಡಿಲ್ಲ.ಮಾದ್ಯಮಗಳಿಂದ ಈ ಸುದ್ದಿ ತಿಳಿದು ಕಣ್ಣೀರಾಗಿದ್ದಾರೆ ಜಾನ್ ದೇವರಾಜ್.ರೈಲ್ವೆ ನಿಲ್ದಾಣ ನಿರ್ಮಿಸಿಕೊಟ್ಟ ನನ್ನನ್ನು ಯಾರೊಬ್ಬರೂ ಆಮಂತ್ರಿಸಿಯೇ ಇಲ್ಲ..ಸಮಾಜ  ಇಷ್ಟೊಂದು ಸಂವೇದನಾರಹಿತವಾದ್ರೆ ಹೇಗೆ..ಅದು ನಾನು ಹಣಕ್ಕಾಗಿ ಮಾಡಿದ ಕೆಲಸ ಅಲ್ಲವೇ ಅಲ್ಲ,ಶಂಕರ್ ಮೇಲಿನ ಪ್ರೀತಿಗಾಗಿ ಮಾಡಿದ ಕೆಲಸ.ನನ್ನನ್ನು ಕರೆಸಿದ್ರೆ ನಾನು ಶಂಕರ್ ಸ್ಮರಣೆ ಮಾಡ್ಬೋದಿತ್ತು..ಆತನ ಋಣ ಸಂದಾಯ ಮಾಡಬಹುದಿತ್ತು..ಮಾಲ್ಗುಡಿ ಡೇಸ್ ನ ದಿನಗಳನ್ನು ಪರಿಚಯಿಸಿಕೊಡಬಹುದಿತ್ತು.ಆ ಅವಕಾಶವನ್ನೇ ಕಸಿದುಕೊಂಡ್ ಬಿಟ್ರಲ್ಲ ಎಂದು ಕೊರಗಲಾರಂಭಿಸಿದ್ದಾರೆ ಜಾನ್ ದೇವರಾಜ್.

ಹೌದು..ಮಾಲ್ಗುಡಿ ಡೇಸ್ ಧಾರಾವಾಹಿಯ ಕಲಾನಿರ್ದೇಶಕರಾಗಿ ಕೆಲಸ ಮಾಡಿ ಶಂಕರ್ ಅವರಿಂದ ಮೆಚ್ಚುಗೆ ಗಳಿಸಿಕೊಂಡಿದ್ದ ಜಾನ್ ದೇವರಾಜ್ ಅವರನ್ನು ಅವರ ಕಲಾಕುಸುರಿ-ಕಲ್ಪನಾಶಕ್ತಿಯಲ್ಲಿ ಅತ್ಯದ್ಭುತವಾಗಿ ಮೂಡಿಬಂದ  ಮಾಲ್ಗುಡಿ ರೈಲ್ವೆ ನಿಲ್ದಾಣದ ಉದ್ದ್ಘಾಟನೆಗೆ ಆಹ್ವಾನಿಸಿದೆ ಅಗೌರವ ತೋರಿಸಿರುವುದು ಕೇವಲ ಕಲಾವಿದನಿಗೆ ಮಾಡಿದ ಅವಮಾನವಲ್ಲ..ಶಂಕರ್ ನಾಗ್ ಅವರಿಗೆ ತೋರಿದ ಅಗೌರವ ಎಂದೇ ವಿಶ್ಲೇಷಿಸಲಾಗ್ತಿದೆ..ಇದು ನಿಜವೂ ಹೌದು..  

Spread the love
Leave A Reply

Your email address will not be published.

Flash News