ಕೊರೊನಾತಂಕದ ನಡುವೆ ರಾಜಧಾನಿಯಲ್ಲಿ ಸರಳ ಸ್ವಾತಂತ್ರ್ಯೋತ್ಸವ-ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ

0

ಬೆಂಗಳೂರು:ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ಎಲ್ಲೆಡೆ ಭಾರಿ ಸಂಭ್ರಮ ಸಡಗರ ಮೈಳೈಸುತ್ತಿತ್ತು. ಆದರೆ 74 ನೇ ಸ್ವಾತಂತ್ರ್ಯೋತ್ಸವ  ಸರಳ ರೀತಿಯಲ್ಲಿ ಆಚರಿಸಲ್ಪಟ್ಟಿತ್ತು.

ಕೊರೊನಾ ಜಾಗತಿಕ ಮಟ್ಟದಲ್ಲಿ ಸಮಸ್ಯೆ ತಂದಿದೆ. ಇದನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ. ಹೀಗಾಗಿ ಇದರ ಜತೆಗೆ ಅಭಿವೃದ್ಧಿಯ ಚಕ್ರವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ  ಬಿಎಸ್‌ವೈ ತಿಳಿಸಿದರು. ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಅವರು, ರಾಷ್ಟ್ರದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆಯೊಂದಿಗೆ ವಿಶ್ವದಲ್ಲಿ ಭಾರತದ ಹೆಸರನ್ನು ಪ್ರಜ್ವಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರಿಸೋಣ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದರು.

ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಹಲವೆಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 10,000 /- ರೂ.ಗಳು, ಪೂರ್ಣ ಮನೆ ಹಾನಿಯಾಗಿದ್ದರೆ ಹೊಸ ಮನೆ ನಿರ್ಮಾಣಕ್ಕೆ ೫ ಲಕ್ಷ ರೂ.ಗಳನ್ನು ವಿತರಿಸಲು ಆದೇಶಿಸಲಾಗಿದೆ ಎಂದು ಬಿಎಸ್‌ವೈ ತಿಳಿಸಿದರು.

ವಿಪತ್ತು ಪರಿಹಾರ ನಿಧಿಯಡಿ ನೆರೆ ಸಂತ್ರಸ್ತರಿಗೆ ಸೂಕ್ತ ಹಾಗೂ ತುರ್ತು ಪರಿಹಾರವನ್ನು ನೀಡಲು ಸೂಚಿಸಲಾಗಿದೆ. ಕೊಡಗು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಸುಮಾರು ೧೧ ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು 984  ಕೋಟಿ ರೂ ಅನುದಾನ ಲಭ್ಯವಿದೆ.ಇನ್ನು ಕೊರೊನಾ ವಿರುದ್ಧ ಹೋರಾಡಲು  ಬೆಂಗಳೂರು ನಗರವಷ್ಟೇ ಅಲ್ಲದೆ, ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲೂ ಈಗಾಗಲೇ ಫೀವರ್ ಕ್ಲಿನಿಕ್, ಕೊರೋನಾ ಆಸ್ಪತ್ರೆ ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಿದರು.

ಇನ್ನು ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ವಿವಿಧ ಇಲಾಖೆಯ ಸ್ತಬ್ಧಚಿತ್ರಗಳು ಕೋವಿಡ್ ಬಗ್ಗೆ ಅರಿವು, ಸ್ವಚ್ಛತೆ ಬಗ್ಗೆ ಪ್ರತಿಬಿಂಬಿಸಿದವು. ಡಿಎಆರ್, ಕೆಎಸ್‌ಆರ್‌ಪಿ, ಸಿವಿಲ್ ಪೊಲೀಸ್, ಕಾರಾಗೃಹ, ಹೋಂಗಾರ್ಡ್ ಮತ್ತು ಎನ್‌ಸಿಸಿ ತಂಡ ಪಥಸಂಚಲನ ನಡೆಸಿದವು. ಆದರೆ ಕರೊನಾ ಹಿನ್ನೆಲೆ ಬಹುತೇಕ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸದ ಕಾರಣ ಮೈದಾನ ಭಣಗುಡುತ್ತಿತ್ತು.

ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದ್ವಜಾರೋಹಣ ನೆರವೇರಿಸಿದರು.ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಐಸಿಸಿ‌ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್ ಪಾಟೀಲ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪಾಲ್ಗೊಂಡಿದ್ದರು.

ಬಿಜೆಪಿ ಕಚೇರಿಯಲ್ಲಿ ದ್ವಜಾರೋಹಣ:ಇನ್ನು ಬಿಜೆಪಿ ಕಚೇರಿಯಲ್ಲೂ 74ನೇ ಸ್ವಾತಂತ್ರ್ಯೋತ್ಸವನ್ನು ಸರಳವಾಗಿ ಆಚರಿಸಲಾಯಿತು.ರಾಜ್ಯ ಘಟಕದ ಮುಖಂಡರು ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು.

ಬಿಬಿಎಂಪಿಯಲ್ಲಿ ಸ್ವಾತಂತ್ರ್ಯೋತವ: ಹಾಗೆಯೇ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ಆಯುಕ್ತ ಮಂಜುನಾಥ್ ಪ್ರಸಾದ್ ರವರು ಧ್ವಜಾರೋಹಣ ನೆರವೇರಿಸಿದರು. ಮಹಾಪೌರ ಗೌತಮ್ ಕುಮಾರ್, ಉಪಮಹಾಪೌರ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ  ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ವಿಶೇಷ ಆಯುಕ್ತ ಡಿ.ರಂದೀಪ್, ರಾಜೇಂದ್ರ ಚೋಳನ್, ಮಂಜುನಾಥ್, ಶ್ರೀ ಅನ್ಬುಕುಮಾರ್  ಹಾಜರಿದ್ದರು.

Spread the love
Leave A Reply

Your email address will not be published.

Flash News