ರಾಜಕಾಲುವೆಗಳಿಗೇನೆ ಸೆನ್ಸರ್ಸ್ ಅಳವಡಿಸಿ ಪ್ರವಾಹದ ಬಗ್ಗೆ ಜನರನ್ನು ಅಲರ್ಟ್ ಮಾಡ್ತದಂತೆ ಬಿಬಿಎಂಪಿ..! ಇದೊಂದ್ ರೀತಿ ಚಂದಾಮಾಮ ಕಥೆಯಂತಿಲ್ವೇ…!!

0

ಬೆಂಗಳೂರು:ಬಿಬಿಎಂಪಿ ಎನ್ನೋ ಭ್ರಷ್ಟಾಚಾರದ ಕೊಂಪೆಯಲ್ಲಿ ಮತ್ತೊಂದು ಹಗರಣದ ಕಮಟು ಮೂಗಿಗೆ ಬಡಿಯುತ್ತಿದೆ.ಈ ಬಾರಿ ಹಣದ ಲೂಟಿಗೆ ರೆಡಿಯಾಗ್ತಿದೆ ಎನ್ನಲಾಗ್ತಿರುವ ಪ್ರಾಜೆಕ್ಟ್ ಯಾವ್ದ್ ಗೊತ್ತಾ, ರಾಜಕಾಲುವೆಗಳಿಗೆ ಸೆನ್ಸರ್ಸ್ ಅಳವಡಿಕೆ.ಈಗಾಗ್ಲೇ ಇದಕ್ಕೆ ಪ್ಲ್ಯಾನ್ ರೆಡಿಯಾಗಿದ್ದು ಕೆಲ ಕಡೆ ಪ್ರಾಯೋಗಿಕವಾಗಿಯೂ ಸೆನ್ಸರ್ಸ್ ಗಳನ್ನೂ ಅಳವಡಿಸಲಾಗಿದೆ ಎನ್ನುವ ಮಾತುಗಳು ಪಾಲಿಕೆ ಕ್ಯಾಂಪಸ್ ನಲ್ಲಿ ಕೇಳಿಬರುತ್ತಿವೆ.ಆದ್ರೆ ಯಾವ್ ರಾಜಕಾಲುವೆಗಳ ಬುಡದಲ್ಲಿ ಅವನ್ನು ಅಳವಡಿಸಲಾಗಿದೆ ಎನ್ನುವುದಕ್ಕೆ ಉತ್ತರ ಮಾತ್ರ ಸಿಗ್ತಿಲ್ಲ.

ಕುಣಿಯಲಾರದವಳು ನೆಲ ಡೊಂಕು ಅಂದ್ಲು ಎನ್ನುವಂತಿದೆ ಬಿಬಿಎಂಪಿ ಧೋರಣೆ. ಮಳೆಗಾಲವನ್ನು ಸಮರ್ಥವಾಗಿ ಎದುರಿಸ್ಲಿಕ್ಕೆ ಯೋಗ್ಯತೆ ಇಲ್ಲದವರು,ಪ್ಲ್ಯಾನ್ ರೂಪಿಸ್ಲಿಕ್ಕೆ ಬದ್ಧತೆ ಇಲ್ಲದ ಬಿಬಿಎಂಪಿ ಮಳೆ ನೀರುಗಾಲುವೆ ವಿಭಾಗ ರಾಜಕಾಲುವೆಗಳಿಗೇನೆ ಸೆನ್ಸರ್ಸ್ ಅಳವಡಿಸಿ ಬೆಂಗಳೂರಿಗರನ್ನು ಮಳೆ ಹಾಗೂ ಪ್ರವಾಹದಿಂದ ಅಲರ್ಟ್ ಮಾಡ್ತೇವೆ..ಜೀವಹಾನಿ ಜೊತೆಗೆ ಆಸ್ತಿಪಾಸ್ತಿ ನಷ್ಟವನ್ನೂ ತಪ್ಪಿಸ್ತೇವೆಂದು ಹೊರಟಿದೆ.ಆದ್ರೆ ಪ್ರಾಕ್ಟಿಕಲ್ಲಾಗಿ ಇದು ಸಾಧ್ಯವೇ..ಎನ್ನುವುದರ ಬಗ್ಗೆ ಆಲೋಚನೆಯನ್ನೂ ಮಾಡಿದಂಗಿಲ್ಲ ಈ ವಿಭಾಗದಲ್ಲಿ ಕೆಲಸ ಮಾಡುವವರು.ಹಾಗಾಗಿ ಎರಡು ಪ್ರಮುಖ ಇಲಾಖೆಗಳ ಜೊತೆ ಕೈ  ಜೋಡಿಸಿ ಈ ಪ್ರಾಜೆಕ್ಟ್ ಕಂಪ್ಲೀಟ್ ಮಾಡ್ಲಿಕ್ಕೆ ಹೊರಟಿ್ದ್ದಾರೆ.

ಸಣ್ಣ ಮಳೆಗೂ ಅದುರುವ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಗೆ ಕಾರಣವೇ ರಾಜಕಾಲುವೆಗಳು.ಮಳೆ ಬಿದ್ದಾಗ ಕೋಡಿಬೀಳುವ ಈ ಕಾಲುವೆಗಳ ನೀರಿನಿಂದ ಪ್ರವಾಹ ಸೃಷ್ಟಿಯಾಗ್ತಿದೆ.ಪ್ರತಿ ಬಾರಿ ಮಳೆಯನ್ನು ದೂಷಿಸಿ ತಮ್ ತಪ್ಪುಗಳಿಂದ ತಪ್ಪಿಸಿಕೊಳ್ಳುತ್ತಲೇ ಬಂದಿರುವ ಮಳೆನೀರುಗಾಲುವೆ(SWD) ಕಾಲುವೆ ವಿಭಾಗದ ಕೆಲ ಭ್ರಷ್ಟರು, ಇದೀಗ ಹಣ ಹೊಡಿಲಿಕ್ಕೆ ಮತ್ತೊಂದು ಪ್ಲ್ಯಾನ್ ಮಾಡ್ಕೊಂಡು ಕೆಲವೆಡೆ ಅದನ್ನು ಅನುಷ್ಠಾನ ಕ್ಕೂ ತಂದಿರುವುದಾಗಿ ಹೇಳ್ತಿದ್ದಾರಂತೆ.ಇದು  ಸೂರ್ಯಂಗೆ ಟಾರ್ಚ್ ಹಿಡಿದ್ರು ಎನ್ನುವ ಮಾತನ್ನುನೆನಪಿಸುತ್ತೆ ಎನ್ನುತ್ತಾರೆ ಪ್ರವಾಹಗ್ರಸ್ಥ ಪ್ರದೇಶಗಳಿಗೆ ಹೊಂದಿಕೊಂಡಿರುವ ವಾರ್ಡ್ ಗಳ ಕಾರ್ಪೊರೇಟರ್ಸ್

ಪ್ರವಾಹಕ್ಕೆ ಕಾರಣವಾಗುವ ರಾಜಕಾಲುವೆಗಳಿಗೇನೆ ಸೆನ್ಸರ್ಸ್ ಅಳವಡಿಸಿ ಪ್ರವಾಹ ಕಂಡುಹಿಡಿದು ಬೆಂಗಳೂರಿಗರನ್ನು ಅಲರ್ಟ್ ಮಾಡ್ತಾರಂತೆ.ಇದರಲ್ಲಿ ಬೆಂಗಳೂರಿಗರ ರಕ್ಷಣೆಗಿಂತ ಹಣ ಹೊಡೆಯುವ ದುರುದ್ದೇಶವೇ ಅಡಗಿದೆ ಎನ್ನುವುದು ಎಂಥಾ ಶತಮೂರ್ಖನಿಗೂ ಅರ್ಥವಾಗಬಹುದೇನೊ.. ಪ್ರವಾಹ ಸೃಷ್ಟಿಸಬಲ್ಲ ಸ್ಥಳಗಳನ್ನು ಈಗಾಗ್ಲೇ ಬಿಬಿಎಂಪಿ ಗುರುತಿಸಿ ಆ 180 ಸ್ಥಳಗಳಲ್ಲಿ ಸೆನ್ಸರ್ಸ್
ಅಳವಡಿಸ್ತಿದ್ದಾರಂತೆ.ಈಗಾಗ್ಲೇ ಕೆಲವು ಕಡೆ ಅದನ್ನು ಅಳವಡಿಸಿದ್ದಾರಂತೆ ಕೂಡ.ಅದನ್ನು ಯಾರ್ ನೋಡಿದ್ದಾರೋ ಆ ದೇವ್ರೇ ಬಲ್ಲ….ಈ ಸೆನ್ಸರ್ಸ್ ಪ್ರವಾಹ ಬರುತ್ತೋ ಇಲ್ಲವೋ ಎನ್ನುವುದನ್ನು 15 ನಿಮಿಷ ಮುನ್ನವೇ ತಿಳಿಸುತ್ತಂತೆ.ಆ ಮಾಹಿತಿ ಮೇಲೆ ಬಿಬಿಎಂಪಿ ಆ ಭಾಗದ ಜನರನ್ನು ಅಲರ್ಟ್ ಮಾಡಿ ಅಪಾಯವನ್ನು ತಪ್ಪಿಸುತ್ತದಂತೆ.ಇದೆಲ್ಲಾ ಒಂದ್ರೀತಿಯ ಚಂದಾಮಾಮದ ಕಥೆ ಮಕ್ಕಳಿಗೆ ಹೇಳಿದಂತಿದೆ ಅಲ್ವೇ..ಇದನ್ನು ಬೆಂಗಳೂರಿಗರು ನಂಬಬೇಕಾ..ನಂಬುವಷ್ಟು ಮೂರ್ಖರು ಎಂದು ಬಿಬಿಎಂಪಿ ತಿಳಿದುಕೊಂಡಿದಂತಿದೆ.

ಸೆನ್ಸರ್ ಅಳವಡಿಕೆಯ "ಮಾಸ್ಟರ್ ಮೈಂಡ್" ಮುಖ್ಯ ಎಂಜಿನಿಯರ್ ಪ್ರಹ್ಲಾದ್
ಸೆನ್ಸರ್ ಅಳವಡಿಕೆಯ “ಮಾಸ್ಟರ್ ಮೈಂಡ್” ಮುಖ್ಯ ಎಂಜಿನಿಯರ್ ಪ್ರಹ್ಲಾದ್

ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ,ಭಾರತೀಯ ವಿಜ್ಞಾನ ಸಂಸ್ಥೆಗಳ ಸಹಯೋಗವನ್ನು ಇದಕ್ಕಾಗಿ ಪಡೆದುಕೊಳ್ಳಲಾಗಿದೆ ಎಂದೂ ಹೇಳಲಾಗ್ತಿದೆ.ಈ ಎರಡು ಸಂಸ್ಥೆಗಳ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯಗಳಿವೆ.ಮಳೆ ಸೇರಿದಂತೆ ಪ್ರವಾಹಕ್ಕೆ ಸಂಬಂಧಿಸಿದಂತೆ ಜನರನ್ನು ಅಲರ್ಟ್ ಮಾಡಿ ಅಪಾಯದಿಂದ ಮುಕ್ತಗೊಳಿಸುವಂಥ ಕೆಲಸವನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡ್ತಿವೆ.
ಆದ್ರೆ ಮಳೆ ನೀರುಗಾಲುವೆಯಲ್ಲಿರುವ ಕೆಲವು ಭ್ರಷ್ಟರು ತಮ್ಮ ಲಾಭಕ್ಕಾಗಿ ಈ ಸಂಸ್ಥೆಗಳ ಹೆಸರನ್ನು ದುರುಪಯೋಗ ಮಾಡಿ ಕೊಳ್ತಿರುವುದು ಎಷ್ಟು ಸರಿ..ಈ ಎರಡೂ ಸಂಸ್ಥೆಗಳು ಸೆನ್ಸರ್ಸ್ ಅಳವಡಿಸುವ ವಿಚಾರದಲ್ಲಿ ಬಿಬಿಎಂಪಿ ನಿಜವಾಗ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿವೆ ಎನ್ನೋದೇನಾದ್ರೂ ಖಾತ್ರಿ ಮಾಡಿಕೊಂಡಿವೆಯಾ ಗೊತ್ತಾಗ್ತಿಲ್ಲ..ಇದನ್ನು ಈ ಕಾನ್ಸೆಪ್ಟ್ ನ ರೂವಾರಿ ಪ್ರಹ್ಲಾದ್ ಅವ್ರೇ ಹೇಳ್ಬೇಕು..

ಮಳೆನೀರುಗಾಲುವೆ ವಿಭಾಗದ ಕೆಲ ಭ್ರಷ್ಟರ ಹಣ ಲೂಟಿ ಸ್ಕೀಂನಲ್ಲಿ ರಾಜಕಾಲುವೆಗಳಿಗೆ ಅಳವಡಿಸ್ತೀವಿ ಎಂದು ಹೇಳುತ್ತಿರುವ ಪ್ರತಿ ಸೆನ್ಸರ್ಸ್ ಗೂ ಆಗುವ ಖರ್ಚು ಎಷ್ಟು ಗೊತ್ತಾ,35-40 ಸಾವಿರ.200 ಸೆನ್ಸರ್ಸ್ ಎಂದ್ರೆ ಹತ್ತಿರತ್ತಿರ 60-70 ಲಕ್ಷ ಹಣವನ್ನು ಈ ಸೆನ್ಸರ್ಸ್ ಗಳಿಗೇನೆ ಖರ್ಚು ಮಾಡಲಾಗ್ತಿದೆ.ಆದ್ರೆ ಈವರೆಗೂ ಆ ಸೆನ್ಸರ್ಸ್ ಗಳನ್ನು ಈವರೆಗು ನೋಡಿದವರಿಲ್ಲ,ತೋರಿಸಿ ಎಂದು ಅನೇಕ ಬಾರಿ ಕಾರ್ಪೊರೇಟರ್ಸ್ ಗಳು ಒತ್ತಾಯಿಸ್ತಾ ಬಂದ್ರು ಕಾಗೆ ಹಾರಿಸುವ ಕೆಲಸ ನಡೆಯುತ್ತಿದೆಯೇ ಹೊರತು,ಈವರೆಗೂ ಒಂದೇ ಒಂದು ಸೆನ್ಸರ್ ಕೂಡ ತೋರಿಸಿಲ್ಲ..ಹೇಗೆ ಕೆಲಸ ಮಾಡ್ತಿವೆ ಎನ್ನೋದ್ರ ಡೆಮೋವನ್ನು ಕೂಡ ಈವರೆಗೆ ನೀಡಿಲ್ಲವಂತೆ.ಇದೆಲ್ಲಾ ಏನ್ಸೆ ಸೂಚಿಸುತ್ತೆ ಎನ್ನುವುದನ್ನು ಕೂಡ ಅವ್ರೇ ಹೇಳಬೇಕು.

ರಾಜಕಾಲುವೆಗಳಲ್ಲಿನ ಹೂಳನ್ನು ತೆಗೆಸಿ ಮಳೆಗಾಲದಲ್ಲಿ ನೀರು ಹರಿಯೊಕ್ಕೆ ವ್ಯವಸ್ಥೆ ಮಾಡಿಸೋ ಕೆಲಸ ಮಾಡಿಸಬೇಕಿತ್ತುಅಧಿಕಾರಿಗಳು. ಆದ್ರೆ ಅದ್ಯಾವುದನ್ನು ಮಾಡದೆ ಕಾಲುವೆಗಳಲ್ಲಿ ಅದೆಷ್ಟೋ ಲಕ್ಷ ಟನ್ ಹೂಳನ್ನು ಹಾಗೆಯೇ ಇಟ್ಟುಕೊಂಡು ಪ್ರವಾಹವನ್ನು ಸೆನ್ಸರ್ಸ್ ಅಳವಡಿಸುವ ಮೂಲಕ ತೆಗೆಯುತ್ತೇವೆ ಎಂದು ಹೊರಟಿದ್ದಾರಲ್ಲಾ,ಇದಕ್ಕಿಂತ ಹಾಸ್ಯಾಸ್ಪದವಾದ ವಿಚಾರ ಮತ್ತೊಂದಿದೆಯೇ ಎಂದು ಪ್ರಶ್ನಿಸ್ತಾರೆ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಗುರುಶಾಂತಪ್ಪ.ಸೆನ್ಸರ್ಸ್ ಅಳವಡಿಸುವ ಉದ್ದೇಶದ ಹಿಂದೆ ಲೂಟಿ ಹುನ್ನಾರ ಅಡಗಿದೆ ಎನ್ನುವುದು ಅವರ ನೇರ ಆರೋಪ.

ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಾಕ್ಟಿಕಲ್ಲಾಗೇ ನೋಡುವುದಾದ್ರೆ ಪ್ರವಾಹದ ಬಗ್ಗೆ ಜನರಿಗೆ ಮುನ್ಸೂಚನೆ ಸಾಧ್ಯವಾಗ್ತದೆಯೇ ಹೊರತು,ಪ್ರವಾಹಕ್ಕೆ ಸಿಲುಕಿ ತತ್ತರಿಸುವ ಜನರಿಗೆ ಆಗುವ ನಷ್ಟವನ್ನು ತಪ್ಪಿಸ್ಲಿಕ್ಕೆ ಆಗುತ್ತದೆಯೇ? ..15 ನಿಮಿಷಗಳ ಮುನ್ನ ಪ್ರವಾಹದ ಮುನ್ಸೂಚನೆ ಕೊಡೊಕ್ಕೆ ಬಿಬಿಎಂಪಿನೇ ಬೇಕಾ.. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವೇ ಕ್ಷಣ ಕ್ಷಣಕ್ಕು ಮಾಹಿತಿ ಅಪ್ಡೇಟ್ ಮಾಡುತ್ತಿರುತ್ತೆ.ಎಲ್ಲಕ್ಕಿಂತ ಅಭಾಸವಾದ ವಿಚಾರ ಏನ್ ಗೊತ್ತಾ,ಪ್ರವಾಹದ ಮಾಹಿತಿಯನ್ನು 15 ನಿಮಿಷಗಳ ಮುನ್ನ ನೀಡ್ತೇವೆ ಎಂದೇನು ಹೇಳದ್ತಿದೆ.ಈ 15 ನಿಮಿಷಗಳಲ್ಲಿ ಅಪಾಯವನ್ನು ಪ್ರಾಕ್ಟಿಕಲ್ಲಾಗಿ ತಪ್ಪಿಸಲಾಗ್ತದಾ..ಈ 15 ನಿಮಿಷಗಳಲ್ಲಿ ಜನ ಹೇಗೆ ಸುರಕ್ಷಿತರಾಗ್ಲಿಕ್ಕೆ ಸಾಧ್ಯ..ಇದೆಲ್ಲವನ್ನು ನೋಡಿದಾಗ ಇದರಿಂದ ಸಾಸಿವೆ ಕಾಳಿನಷ್ಟು ಪ್ರಯೋಜನವಾಗಬಹುದೇ ಹೊರತು ಬಿಬಿಎಂಪಿ ಹೇಳುವಷ್ಟು ಪರಿಣಾಮಕಾರಿಯಾದ ಸೆಲ್ಯೂಷನ್ ಆಗ್ಲಿಕ್ಕೆ ಸಾಧ್ಯವೇ ಇಲ್ಲ.

ಪ್ರವಾಹಕ್ಕೆ ಕಾರಣವಾಗುವ ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸುವ ಕೆಲಸವನ್ನು ಮಳೆನೀರುಗಾಲುವೆ ಅಧಿಕಾರಿಗಳು ನೀಯತ್ತಾಗಿ ಮಾಡಿದ್ರೆ ಸಾಕು,ಪ್ರವಾಹ ತನ್ನಿಂತಾನೇ ಕಡ್ಮೆಯಾಗುತ್ತೆ..ಅಪಾಯ-ಜೀವಹಾನಿ-ಆಸ್ತಿಪಾಸ್ತಿ ನಷ್ಟ ವಾಗೊಲ್ಲ.ಬಿಬಿಎಂಪಿಗೂ ಇದಕ್ಕೆಂದೇ ಹಣ ಹೊಡೆಯುವ ಸ್ಕೀಂ ಹಾಕ್ಕೊಳ್ಳುವ ಹಾಗೂ ಜಾರಿಗೊಳಿಸುವ ಅವಶ್ಯಕತೆ ಇರೊಲ್ಲ.ಅದನ್ನು ಬಿಟ್ಟು ಗುತ್ತಿಗೆದಾರರ ಲಾಭಕ್ಕೋಸ್ಕರ-ಇಡಿಗಂಟು ಮಾಡಿಕೊಳ್ಳುವ ದುರಾಲೋಚನೆಗೋಸ್ಕರ ಅವೈಜ್ಞಾನಿಕ-ಅನಾವಶ್ಯಕ ಸ್ಕೀಂಗಳನ್ನು ಹಾಕ್ಕೊಳ್ಳುವುದರಿಂದ ಬೆಂಗಳೂರಿಗರಿಗಂತೂ ನಯಾಪೈಸೆ ಪ್ರಯೋಜನವಿಲ್ಲ.

Spread the love
Leave A Reply

Your email address will not be published.

Flash News