ಮೂರಾಮಟ್ಟೆಯಾದ ಬದುಕುಗಳಿಗೆ ಆಸರೆಯಾದ  “ಕೃಷಿ”-ಹಳ್ಳಿಗಳತ್ತ ಮುಖಮಾಡಿದ ಜನ:ಕೃಷಿ-ಹೈನುಗಾರಿಕೆಗೆ ಹೆವೀ ಡಿಮ್ಯಾಂಡ್-ಜಮೀನ್ ರೇಟ್ ಕೇಳುದ್ರೆ ಶಾಕ್..!

0

ಬೆಂಗಳೂರು:ಕರೋನಾ ಮನುಕುಲವನ್ನು ತಲ್ಲಣಿಸಿದ್ದು ಒಂದ್ಕಡೆಯಾದ್ರೆ,ದೇಶದ ಹೃದಯವಾದ ಹಳ್ಳಿಗಳ ಮಹತ್ವ-ಪ್ರಾಮುಖ್ಯತೆ ಅರಿಯೊಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮತ್ತೊಂದು ವಿಶೇಷ.ಈ ಆರು ತಿಂಗಳ ಅವಧಿಯಲ್ಲಿ ಏನೇನೋ ಬದಲಾಗಿದೆ.ನಮ್ಮ ಬದುಕು- ಜೀವನಶೈಲಿಗಳೆಲ್ಲಾ  ಸಾಕಷ್ಟು ಬದಲಾಗಿದೆ.

ಕೊರೊನಾ ಕಾರಣಕ್ಕೆ ಲಾಗೂ ಆದ ಲಾಕ್ ಡೌನ್ ನಿಂದಾಗಿ ಅದೆಷ್ಟೋ ಮಂದಿ ಕೆಲಸ ಕಳೆದು ಕೊಂಡಿದ್ದಾರೆ… ಅದೆಷ್ಟೋ ಜನರ ಜೀವನ ಅಸಹಜ ಸ್ಥಿತಿ ತಲುಪಿದೆ.. ಕೆಲಸ ಕಾರ್ಯ ಇಲ್ಲದೇ ಮುಂದೇನು ಮಾಡೋದು ಎಂಬ ಪ್ರಶ್ನೆ ಈಗಲೂ ಸಾಕಷ್ಟು ಜನರ ಮನಸಿನಲ್ಲಿ ಕಾಡುತ್ತಿದೆ.ಈ ಸಮಯದಲ್ಲೇ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳ ಕಾರ್ಯ ಬರದಿಂದ ಸಾಗಿದೆ… ಇಷ್ಟು ದಿನ ವ್ಯವಸಾಯ ಅಂದ್ರೆ ಮೂಗು ಮುರಿಯುತ್ತಿದ್ದ ಹಲವು ಯುವಕರು ಈಗ ತಮ್ಮ ಕುಲಕಸುಬು ಉತ್ತಮ ಎಂಬ ಸತ್ಯ ತಿಳಿದು ಊರಿಗೆ ತೆರಳಿ ಭೂಮಿ ತಾಯಿಯ ಸೇವೆ ಮಾಡುತ್ತಿದ್ದಾರೆ.

ಅಂದ್ಹಾಗೆ, ಹಲವು ವರ್ಷಗಳಿಂದ ತಮ್ಮ ಸ್ವಂತ ಊರು ಬಿಟ್ಟು ಅದೆಷ್ಟೋ ಯುವಕರು ಬೆಂಗಳೂರು ಸೇರಿದ್ದಾರೆ. ಇಲ್ಲಿ ಹೋಟೆಲ್, ಬಾರು, ಖಾಸಗಿ ಸಂಸ್ಥೆಗಳಲ್ಲಿ ವಿವಿಧ ಕೆಲಸಗಳನ್ನ ಮಾಡಿಕೊಂಡು ಹಬ್ಬಕ್ಕೆ ಮಾತ್ರ ಊರಿಗೆ ತೆರಳುತ್ತಿದ್ರು. ಹಬ್ಬ ಮುಗಿಯುತ್ತಿದ್ದಂತೆ ಮತ್ತೆ ರಾಜಧಾನಿಗೆ ಬಂದು ತಮ್ಮ ಕೆಲಸಗಳಲ್ಲಿ ನಿರತಾಗುತ್ತಿದ್ರು. ಆದ್ರೆ ಕರೋನಾ ವಕ್ಕರಿಸಿದ್ರಿಂದ ಸಾಕಷ್ಟು ಜನರ ಉದ್ಯೋಗಕ್ಕೆ ಕತ್ತರಿ ಬಿತ್ತು. ಮನೆ ಬಾಡಿಗೆ ಕಟ್ಟಲು ಹೆಣಗಾಡಬೇಕಾದ ಪರಿಸ್ಥಿತಿ ಎದುರಾಯ್ತು. ಪರಿಣಾಮ ಸಾಕಷ್ಟು ಮಂದಿಯ ಜನರು ಬೆಂಗಳೂರಿನಲ್ಲಿ ಬದುಕು ಸಾಗಿಸುವುದು ಕಷ್ಟಕರವಾಗಿ ಈಗ ತಮ್ಮ ತಮ್ಮ ಊರುಗಳಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಭತ್ತ, ರಾಗಿ, ಅಡಿಕೆ,ಬಾಳೆ, ಕಾಳು ಮೆಣಸು, ಏಲಕ್ಕಿ ಸೇರಿದಂತೆ ವಿವಿಧ ಬಗೆಯ ಕೃಷಿ ಚಟುವಟಿಕೆಗಳಲ್ಲಿ ಸಾಕಷ್ಟು ಜನರು ನಿರತ ರಾಗಿದ್ದಾರೆ. ಇಷ್ಟು ದಿನ ಹಳ್ಳಿಗಳ ಕಡೆ ಪಾಳು ಬಿದ್ದಿದ್ದ ಜಮೀನು ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಬೆಂಗಳೂರು ಸೇರಿದ್ದ ಹಲವು ಮಂದಿ ತಮ್ಮ ಊರುಗಳಲ್ಲಿ ಸಾಕಷ್ಟು ಶ್ರಮ ವಹಿಸಿ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದಾರೆ.

‘ಕರೋನಾ ಬಂದ ಮೇಲೆ ಹಣಕ್ಕಾಗಿ ಸಾಕಷ್ಟು ಸಮಸ್ಯೆ ಎದುರಾಯ್ತು. ಮನೆ ಬಾಡಿಗೆ ಕಟ್ಟೋದಕ್ಕೂ ಆಗುತ್ತಿರಲಿಲ್ಲ. ಸರಿಯದ ಉದ್ಯೋಗ ಇಲ್ಲದೆ ಮುಂದೆನೂ ಮಾಡೋದು ಅಂತ ಕೆಲ ದಿನಗಳು ಯೋಚಿಸಿದೆ. ಈ ವೇಳೆ ಊರಿಗೆ ತೆರಳಿ ತಂದೆಯ ಜಮೀನಿ ನಲ್ಲಿ ವ್ಯವಸಾಯ ಮಾಡಲು ನಿರ್ಧರಿಸಿದೆ. ಇದಕ್ಕೆ ನಮ್ಮ ಮನೆಯವರು ಸಹಕಾರ ಕೊಟ್ರು…. ಭೂಮಿ ತಾಯಿ ಕೈ ಬಿಡಲಿಲ್ಲ… ಈಗ ಉತ್ತಮ ಬಾಳೆ ಫಸಲು ಬಂದಿದೆ. ಸದ್ಯ ಜೀವನ ತಕ್ಕ ಮಟ್ಟಿಗೆ ಸುಧಾರಿಸಿದೆ’ ಎಂದು ಬೆಂಗಳೂರು ಬಿಟ್ಟು ಊರು ಸೇರಿದ ಟೆಕ್ಕಿ  ಸುರೇಶ್ ಕುಮಾರ್  ಕನ್ನಡ ಫ್ಲಾಶ್ ನ್ಯೂಸ್  ಜೊತೆ ತಮ್ಮ ಅನುಭವವನ್ನ ಹಂಚಿಕೊಂಡರು.ಈ ನಡುವೆ ಗ್ರಾಮೀಣ ಭಾಗದಲ್ಲಿ ರೈತರು ಈಗಾಗಲೇ ಹಲವು ಬೆಳೆಗಳನ್ನ ಬೆಳೆದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ ಎನ್ನುತ್ತಾರೆ ಬೆಂಗಳೂರಿನಿಂದ ತನ್ನೂರಾದ ಸಕಲೇಶಪುರಕ್ಕೆ ತೆರಳಿ ಕೃಷಿ ಚಟುವಟಿಕೆಯನ್ನು ಖುಷಿ ಖುಷಿಯಾಗಿ ಮಾಡ್ತಿರುವ ಸರ್ಕಾರಿ ನೌಕರ ಯೋಗೇಶ್ ಗೌಡ.

ಹೀಗೆ ಒಬ್ಬೊಬ್ಬರು ಒಂದ್ ರೀತಿಯ ಕೆಲಸಗಳನ್ನು ಹಳ್ಳಿಗಳಲ್ಲಿ ಮಾಡುತ್ತಿದ್ದಾರೆ.ಹೈನುಗಾರಿಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದೆ.ಇದರಿಂದ ಹಾಲಿನ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಕೃಷಿ ಚಟುವಟಿಕೆ ಹೆಚ್ಚುತ್ತಿರುವುದರಿಂದ ಕೆಲ ತಿಂಗಳವರೆಗೂ ಕೊಳ್ಳೋರೇ ಇಲ್ಲದ ಕೃಷಿ ಭೂಮಿಗೆ ಡಿಮ್ಯಾಂಡ್ ಕುದುರಿಬಿಟ್ಟಿದೆ.ಜಮೀನು ಮಾರೊಕ್ಕೆ  ಅಡ್ವಾನ್ಸ್ ಪಡೆದಿದ್ದ ಅದೆಷ್ಟೋ ರೈತರು ಅದರ ಜೊತೆಗೆ ಮತ್ತಷ್ಟನ್ನು ಸೇರಿಸಿ ಅದನ್ನು ಹಿಂದುರಿಗಿಸಿ ಜಮೀನು ಹಸನುಗೊಳಿಸಿ ಕೃಷಿಯನ್ನು ಆರಂಭಿಸಿದ್ದಾರೆ. ಕೃಷಿ ಭೂಮಿಯ ಬೆಲೆ ಕೂಡ ಗಗನಕ್ಕೇರಿದೆ.ಜಮೀನು ಮಾರೊಕ್ಕೆ ಮುಗಿಬೀಳುತ್ತಿದ್ದವರೆಲ್ಲಾ ಒಂದಕ್ಕೆ ಎರಡ್ಮೂರು ಪಟ್ಟು ಹೆಚ್ಚಿಗೆ ಕೊಡುತ್ತೇವೆನ್ನುತ್ತಿದ್ದರೂ ಸುತಾರಾಂ ಒಪ್ಪುತ್ತಿಲ್ಲ ಎಂದ್ರೆ ಕೊರೊನಾ ಕೃಷಿ ಚಟುವಟಿಕೆಗೆ ಸೃಷ್ಟಿಸಿರುವ ಬೇಡಿಕೆ ಎಂತದ್ದೆನ್ನುವುದು ಗೊತ್ತಾಗುತ್ತೆ.

ಒಟ್ಟಾರೆ ಕರೋನಾ ಮಾಹಾಮಾರಿಯ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ…ಸಾಕಷ್ಟು ಜನರು ಬೆಂಗಳೂರು ಬಿಟ್ಟು ಹುಟ್ಟಿದ ಊರು ಸೇರಿ ಕೃಷಿಯತ್ತ ವಾಲಿದ್ದಾರೆ. ಸರ್ಕಾರ ಇವರಿಗೆ ಪ್ರೋತ್ಸಾಹ ನೀಡಿ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿ ಮಾಡಿದ್ರೆ ಇವರ ಬದುಕು ಮತ್ತಷ್ಟು ಹಸನಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಮೂರಾಮಟ್ಟೆಯಾದ ಬದುಕುಗಳಿಗೆ ಆಸರೆಯಾದ  “ಕೃಷಿ”-ಹಳ್ಳಿಗಳತ್ತ ಮುಖಮಾಡಿದ ಜನ:ಕೃಷಿ-ಹೈನುಗಾರಿಕೆಗೆ ಹೆವೀ ಡಿಮ್ಯಾಂಡ್-ಜಮೀನ್ ರೇಟ್ ಕೇಳುದ್ರೆ ಶಾಕ್..!

Spread the love
Leave A Reply

Your email address will not be published.

Flash News