ಕೇಳೋರಿಲ್ಲ…ಕೋವಿಡ್ ವಾರಿಯರ್ಸ್ ಸಂಕಷ್ಟ-ವೈದ್ಯ ಸಿಬ್ಬಂದಿಗಿಲ್ಲ ಸಂಬಳ-ಭತ್ಯೆ:ಕಾರ್ಯಸ್ಥಗಿತಗೊಳಿಸಲು ವಾರಿಯರ್ಸ್ ಚಿಂತನೆ..!

0

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಮಹಾಮಾರಿಯ ಕಾಟ ಇನ್ನು ನಿಂತಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಮತ್ತೊಂದೆಡೆ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಕರೋಡ್ ವಾರಿಯರ್‍ಸ್ ಆಗಿ ಸಾಕಷ್ಟು ವೈದ್ಯರು, ಆರೋಗ್ಯ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಕರೋನಾ ಸೋಂಕಿತರ ಆರೈಕೆ ಮಾಡುತ್ತಿದ್ದಾರೆ. ಈಗಷ್ಟೇ ವೈದ್ಯಕೀಯ ಶಿಕ್ಷಣ ಮುಗಿಸಿದ ಸಾಕಷ್ಟು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಆದ್ರೆ ಹಲವು ದಿನಗಳು ಕಳೆದ್ರೂ ಅದೆಷ್ಟೊ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಇನ್ನೂ ಸಂಬಳ ಸಿಕ್ಕಿಲ್ಲ..

ಹೌದು, ಕರೋನಾ ಕಾಲಿಟ್ಟ ದಿನದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿತ್ತು. ಹೀಗಾಗಿ ಬಿಬಿಎಂಪಿಯ ಆರೋಗ್ಯ ಇಲಾಖೆ ಪತ್ರಿಕೆ ಹಾಗೂ ಮತ್ತಿ ತ್ತರೆಡೆ ಜಾಹೀರಾತು ನೀಡಿ ಈಗಷ್ಟೇ ವೈದ್ಯಕೀಯ ಪದವಿ ಪೂರೈಸಿದ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳನ್ನ ನೇಮಿಸಿಕೊಂಡಿತ್ತು. ಇವರಿಗೆ ಅವರ ಅರ್ಹತೆ ಮೇರೆಗೆ ಸಂಬಳವನ್ನೂ ಕೂಡ ನಿಗದಿ ಮಾಡಿತ್ತು.

ಹೊಸ ವೈದ್ಯರಿಗೆ  60 ಸಾವಿರದಿಂದ 80ಸಾವಿರವರೆಗೂ ವೇತನವನ್ನ ನೀಡುವುದಾಗಿ ಹೇಳಿತ್ತು. ಹೀಗಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಹೊಸ ವೈದ್ಯರು ಬಿಬಿಎಂಪಿ ವಲಯದ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಆರಂಭಿಸಿದ್ರು. ಕೆಲಸಕ್ಕೆ ಸೇರಿ ಹಲವು ತಿಂಗಳು ಕಳೆದ್ರೂ ಇವರಿಗೆ ಸಂಬಳ ಅನ್ನೋದು ದೂರದ ಮಾತಾಗಿದೆ.

ಹೊಸದಾಗಿ ವೈದ್ಯಕೀಯ ವೃತ್ತಿ ಆರಂಭಿಸಿರುವ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳ ವೇತನ ನೀಡುವಂತೆ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳನ್ನ ಸಂಪರ್ಕಿಸಿದ್ದಾರೆ. ಆದ್ರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಬಳ ಇಲ್ಲದೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಹೊಸ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಎದುರಾಗಿದೆ. ಈಗಾಗಲೇ ಕೆಲ ವೈದ್ಯರು ಹಾಗೂ ಮೆಡಿಕಲ್ ಸ್ಟೂಡೆಂಟ್ಸ್ ಸಂಬಳ ಸಿಗದ ಹಿನ್ನೆಲೆಯಲ್ಲಿ ಕೆಲಸವನ್ನು ತೊರೆದಿದ್ದಾರೆ.

ಅಂದಹಾಗೆ ಹೊಸ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ವೇತನ ನೀಡಲು ಪಾಲಿಕೆಯ ಬೊಕ್ಕಸದಲ್ಲಿ ಹಣವ ಅಭಾವ ಇದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಸರಿಯಾದ ಸಮಯಕ್ಕೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಹಣ ನೀಡಲು ಆಗುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

Spread the love
Leave A Reply

Your email address will not be published.

Flash News