ಸತ್ಯ..! ಹೇಳಿದ ಇಂದ್ರಜಿತ್ ಲಂಕೇಶ್ ವಿಲನ್ ಆಗೋದ್ರಾ.. ವಿರೋಧಿಸೋದನ್ನು ಬಿಟ್ಟು ನಿಷ್ಪಕ್ಷಪಾತ ತನಿಖೆಗೇಕೆ ಆಗ್ರಹಿಸುತ್ತಿಲ್ಲ ಸ್ಯಾಂಡಲ್ ವುಡ್..??

0

-ಸುನೀಲ್ ಕುಮಾರ್

ಬೆಂಗಳೂರು:ಕಳೆದೆರಡು ದಿನಗಳಿಂದ ಎಲ್ಲಡೆ ಬರೀ ಗಾಂಜಾದ್ದೇ ಮಾತು… ಚಂದನವನದ ಸಾಕಷ್ಟು ಮಂದಿ ಗಾಂಜಾ ಸೇರಿದಂತೆ ಬಗೆಬಗೆಯ ಡ್ರಗ್ಸ್ ಸೇವಿಸಿ ನಶೆ ಲೋಕದಲ್ಲಿ ಮುಳುಗಿ ಎಂಜಾಯ್ ಮಾಡ್ತಿದ್ದಾರೆ ಅನ್ನೋ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ… ಇದಿಷ್ಟೇ ಅಲ್ದೇ, ಕೆಲ ಸ್ಟಾರ್ ನಟ ನಟಿಯರು ಡ್ರಗ್ಸ್ ದಂಧೆ ಮೈಗೂಡಿಸಿಕೊಂಡು ಹಣ ಸಂಪಾದನೆ ಮಾಡ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ.. ಈ ಎಲ್ಲಾ ಬೆಳವಣಿಗೆಗಳ ಕಂಪ್ಲೀಟ್ ರಿಪೋಟ್  ಇಲ್ಲಿದೆ ನೋಡಿ…

ಕಳೆದ ಗುರುವಾರ  ಬೆಂಗಳೂರಿನಲ್ಲಿ ಎನ್ ಸಿಬಿ ಅಧಿಕಾರಿಗಳು ಭರ್ಜರಿಯಾಗಿ ಬೇಟೆಯಾಡಿದ್ರು . ಮೂವರು ಹೈಟೆಕ್ ಡ್ರಗ್ ದಂಧೆಕೋರರ ಹೆಡೆಮುರಿಕಟ್ಟಿದ್ರು. ಇದು ಅವತ್ತು ಭಾರಿ ಮಟ್ಟದಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ಸದ್ದು ಮಾಡ್ತು. ಇದಾದ ಬೆನ್ನಲ್ಲೇ,  ವಿಚಾರಣೆ ವೇಳೆ ಬಂಧನಕ್ಕೊಳಗಾಗಿದ್ದ ಈ ಮೂವರು ಸ್ಫೋಟಕ ಮಾಹಿತಿಯನ್ನ ಹೊರಕಾಕಿದ್ರು. ಅದ್ರಲ್ಲೂ ಅನಿಕಾ ಎಂಬಾಕೆ ಹೇಳಿದ ಮಾತುಗಳು ಭಾರಿ ತಲ್ಲಣವನ್ನ ಹುಟ್ಟಿಸಿತು.  ಕಳೆದ ಆರು ವರ್ಷಗಳಿಂದ ನಾನು ಡ್ರಗ್ಸ್ ಡೀಲ್ ಮಾಡ್ತಿದ್ದೀನಿ, ಕಾಲೇಜುಗಳ ಬಳಿ ಡ್ರಗ್ಸ್ ಪೂರೈಕೆ ಮಾಡಲಾಗುತ್ತದೆ, ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯೊಬ್ಬಳು ತನ್ನ ಸಹಪಾರ್ಟಿ ಅಂತನೂ ಬಾಯ್ಬಿದ್ಲು. ಇನ್ನೂ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದ ಮತ್ತೊಬ್ಬ ಡ್ರಗ್ ಪೆಡ್ಲರ್ ಅನೂಪ್, ನಟರಿಗಿಂತ ಹೆಚ್ಚಾಗಿ ನಟಿಯರೇ ತನ್ನ ಬಳಿ ಡ್ರಗ್ಸ್ ಖರೀದಿ ಮಾಡ್ತಿದ್ರು ಅಂತ ಸ್ಫೋಟಕ ಮಾಹಿತಿ ಹೊರಹಾಕಿದ.

ಇದಾದ ಬೆನ್ನಲ್ಲೇ ನಟ, ನಿರ್ದೇಶಕ ಹಾಗು ಪತ್ರಕರ್ತ ಇಂದ್ರಜಿತ್ ಲಂಕೇಶ್, ಕೆಲ ನಟ ನಟಿಯರಿಂದ ಸ್ಯಾಂಡಲ್ ವುಡ್ ಮಾನ ಮರ್ಯಾದೆ ಹರಾಜಾಗ್ತಿದೆ.. ಡ್ರಗ್ ದಂಧೆಯನ್ನ ಮೈಗೂಡಿಸಿಕೊಂಡಿರೋ ಕೆಲ ಸ್ಟಾರ್ ನಟಿಯರು ಜಾಗ್ವಾರ್, ಮರ್ಸಿಡಿಸ್ ಬೆನ್ಜ್ ಕಾರು ಖರೀದಿ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಕೆಲ ಕಡೆ ಸ್ಟಾರ್ ನಟ ನಟಿಯರು ರೇವ್ ಪಾರ್ಟಿ ಮಾಡ್ತಾರೆ, ಕನ್ನಡ ಚಿತ್ರರಂಗದ ಹಿರಿಯ ನಟರ ಪುತ್ರರು ಇದರಲ್ಲಿ ಭಾಗಿಯಾಗ್ತಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಹಾಗೂ ಡ್ರಗ್ ಅಡಿಕ್ಟ್ ಆಗಿರೋ ನಟನಟಿಯರ ಬಗ್ಗೆ ನನ್ನಗೆ ತಿಳಿದಿದೆ. ಪೊಲೀಸರು ನನಗೆ ರಕ್ಷಣೆ ನೀಡಿದ್ರೆ ಎಲ್ಲಾ ಮಾಹಿತಿಯನ್ನ ಬಹಿರಂಗ ಪಡಿಸಲು ಸಿದ್ದ ಅಂತ ಬಾಂಬ್ ಸಿಡಿಸಿದ್ರು. ಇದಿಷ್ಟೇ ಅಲ್ಲದೇ ಇತ್ತೀಚಿಗೆ ಸಾವನಪ್ಪಿದ ಸ್ಯಾಂಡಲ್ ವುಡ್ ನಟ ಮೃತದೇಹವನ್ನ ಯಾಕೆ ಮರಣೋತ್ತರ ಪರೀಕ್ಷೆ ಮಾಡಿಲ್ಲ ಅಂತಾನೂ ದಿವಂಗತ ಚಿರಂಜೀವಿ ಸರ್ಜಾ ಬಗ್ಗೆನೂ ಇಂದ್ರಜಿತ್ ಮಾತನಾಡಿದ್ರು.

ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ ಮೇಲೆ ಸ್ಯಾಂಡಲ್ ವುಡ್ ನಿಜಕ್ಕೂ ಮಾದಕ ಲೋಕದಲ್ಲಿ ಮುಳುಗಿದ್ಯಾ….? ಗಂಧದ ಗುಡಿ ಗಾಂಜಾ ಗುಡಿ ಆಗಿದ್ಯಾ…? ಅನ್ನೋ ಪ್ರಶ್ನೆ ಮೂಡೋದು ಸಹಜ…ಅಂದಹಾಗೆ, ಚಂದನವನದಲ್ಲಿ ಕೆಲ ಗಾಂಜಾವ್ಯಸನಿಗಳು ಇರೋದು ಸತ್ಯ.. ತೆರೆಮರೆಯಲ್ಲಿ ಇದು ಎಲ್ಲರಿಗೂ ಗೊತ್ತಿರುವ ಸಂಗತಿ..ಕೆಲ ನಿರ್ದೇಶಕರು, ಕೆಲ ಸಂಗೀತ ನಿರ್ದೇಶಕರು, ಕೆಲ ನಟನಟಿಯರು ಗಾಂಜಾ ಗಮ್ಮತ್ತನ್ನ ಎಂಜಾಯ್ ಮಾಡ್ತಾರೆ.. ಗಾಂಜಾ ಮತ್ತಿನಲ್ಲೇ ತಮ್ಮ ಕೆಲಸ ಕಾರ್ಯಗಳನ್ನ ಮಾಡ್ತಾರೆ…ಇಲಿ ಗಮನಿಸಬೇಕಾದ ಪ್ರಮುಖ ಅಂಶ ಏನೆಂದ್ರೆ ಕೆಲವೇ ಕೆಲವು ಮಂದಿ ಮಾತ್ರ ಗಾಂಜಾ ಸೇರಿದಂತೆ ಮತ್ತಿತರ ಡ್ರಗ್ಸ್ ಸೇವನೆ ಮಾಡ್ತಾರೆ. ಆದ್ರೆ ಇಡೀ ಸ್ಯಾಂಡಲ್ ವುಡ್ ಡ್ರಗ್ಸ್ ನಲ್ಲಿ ಮುಳುಗಿದೆ ಅನ್ನೋದು ಸತ್ಯಕ್ಕೆ ದೂರದ ಮಾತು. ಯಾರೋ ಕೆಲವೇ ಕೆಲವು ಸ್ಟಾರ‍್ಸ್ ಮಾತ್ರ ಡ್ರಗ್ಸ್ ಗೆ ದಾಸರಾಗಿದ್ದಾರೆ. ಹಾಗಾಗಿ ಇಡೀ ಸ್ಯಾಂಡಲ್ ವುಡ್ ನಶೆಯಲ್ಲಿ ಮುಳುಗಿದೆ ಅಂತ ಆರೋಪ ಮಾಡೋದು ಎಷ್ಟು ಸರಿ….?

ಡ್ರಗ್ ಡೀಲ್ ಅನಿಕಾ ವಿಚಾರಣೆ ಇನ್ನೂ ಕೂಡ ಸಂಪೂರ್ಣವಾದ್ದಂತೆ ಕಾಣ್ತಿಲ್ಲ. ಕೆ ಅರೆ ಬರೆ ಸುದ್ದಿಗಳಷ್ಟೇ ಹೊರ ಬಿದ್ದಿದೆ. ಆದರೆ ಸಂಪೂರ್ಣವಾದ ಸ್ಪಷ್ಟವಾದ ಚಿತ್ರಣ ಇನ್ನೂ ಸಿಕ್ಕಿಲ್ಲ. ಆಕೆ ಈವೆಗರೂ ವಿಚಾರಣೆಯಲ್ಲಿ ಹೇಳಿರೋ ಮಾತುಗಳೆಲ್ಲಾ ಎಷ್ಟು ಸತ್ಯ… ಒಂದು ವೇಳೆ ಆಕೆ ದಿಕ್ಕುತಪ್ಪಿಸಲು ಸುಳ್ಳು ಹೇಳ್ತಿರಬಹುದಲ್ವಾ..?

ಈ ನಡುವೆ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯನ್ನು  ಸಕಾರಾತ್ಮಕವಾಗಿ ಪರಿಗಣಿಸಬೇಕಿದ್ದ ಚಿತ್ರರಂಗ ಅದೇಕೋ ತಾಳ್ಮೆ ಕಳೆದುಕೊಂಡಂತೆ ರಿಯಾಕ್ಟ್ ಮಾಡ್ತಿದೆ.ಕೆಲವು ನಟ-ನಟಿಯರಂತೂ ಇಂದ್ರಜಿತ್ ಹೇಳಿಕೆಯಿಂದ ತಮ್ಮ ಹಾಗು ಚಿತ್ರರಂಗದ ಮಾನ-ಮರ್ಯಾದೆ-ಘನತೆ ಎಲ್ಲಾ ಮಣ್ಣು ಪಾಲಾಯ್ತು ಎನ್ನುವ ರೇಂಜ್ ನಲ್ಲಿ ಪ್ರತಿಭಟಿಸುತ್ತಿದ್ದಾರೆ.ಇಂದ್ರಜಿತ್ ಅವರ ಆರೋಪದ ಧ್ವನಿ ಅದೇಕೋ ಒಂಟಿಯಾಗಿ ಹೋಗುತ್ತಿದೆ.ಅವರ ಧ್ವನಿಯನ್ನು ಅಡಗಿಸುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿವೆಯೇ ಹೊರತು,ನೈಜತೆಯನ್ನು ಸಮಾಧಿ ಮಾಡುವ ಷಡ್ಯಂತ್ರವೂ ನಡೆಯುತ್ತಿದೆ ಎನಿಸುತ್ತದೆ.ಇಂದ್ರಜಿತ್ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅವರಿಗೆ ಸೂಕ್ತ ರಕ್ಷಣೆ ಕೊಡುವ ವ್ಯವಸ್ಥೆ ಆಗಬೇಕಿದೆ.ಒಂದ್ವೇಳೆ ಇಂದ್ರಜಿತ್ ಹೇಳುವ ಸತ್ಯದಿಂದ ಅಸಲೀಯತ್ತು ಅನೇಕರ ಮುಖವಾಡ ಬಯಲಾಗುವ ಅವಕಾಶಗಳೂ ಇವೆ.ಈ ಆಯಾಮದಲ್ಲಿ ಯಾಕೆ ಚಿತ್ರರಂಗ ಯೋಚಿಸುತ್ತಿಲ್ಲ..ಕಾರ್ಯಪ್ರವೃತ್ತವಾಗುತ್ತಿಲ್ಲವೋ ಗೊತ್ತಿಲ್ಲ..

ಇನ್ನೂ ನಟ ಚಿರಂಜೀವಿ ಸರ್ಜಾ ಸಾವನಪ್ಪಿದ ರೀತಿಯ ಬಗ್ಗೆ ಪ್ರಶ್ನೆ ಮಾಡಿರುವುದು ಕೂಡ ಸಾಕಷ್ಟು ವಿವಾದ ಸೃಷ್ಟಿಸಿದೆ.ಚಿರಂಜೀವಿ ಸರ್ಜಾ ಸತ್ತು ಹಲವು ತಿಂಗಳುಗಳು ಕಳೆದಿವೆ. ಆದ್ರೆ ಈಗ ಅವರ ಮೃತದೇಹ ಯಾಕೆ ಮರಣೋತ್ತರ ಪರೀಕ್ಷೆ ಆಗ್ಲಿಲ್ಲ ಅಂತ ಸತ್ತ ನಟನೊಬ್ಬನ ವಿರುದ್ಧ ವಿವಾದ ಸೃಷ್ಟಿಸೋದು ಎಷ್ಟು ಸರಿ.. ಚಿರಂಜೀವಿ ಸರ್ಜಾ ಸಾವನಪ್ಪಿದ ಆ ದಿವನೇ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಮಾತನಾಡ ಬಹುದಿತಲ್ವಾ..? ಈಗ ಮಾತನಾಡಿ ಅವರ ಕುಟುಂಬಸ್ಥರಿಗೆ ನೋವು ತರೋದು ಎಷ್ಟು ಸರಿ..? ಎನ್ನುವ ರೀತಿಯಲ್ಲಿ ಪ್ರಶ್ನೆ ಮಾಡಲಾಗ್ತಿದೆ.ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಪ್ರಶ್ನೆ ಎತ್ತಿರುವುದರ ಹಿಂದಿನ ಸತ್ಯವನ್ನು ಯಾಕೆ ಅರಿಯುವ ಪ್ರಯತ್ನವನ್ನು ಸ್ಯಾಂಡಲ್ ವುಡ್ ಮಾಡುತ್ತಿಲ್ಲ..ಚಿತ್ರರಂಗದಲ್ಲೂ ಹೀಗೂ ಕೆಲವ್ರು ಪ್ರಶ್ನಿಸ್ತಿದ್ದಾರೆ.

ಒಟ್ಟಾರೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಇಂದ್ರಜಿತ್ ಅವರಿಗೆ ಅಭಯ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿರುವ ಇಂದ್ರಜಿತ್ ಅವ್ರಿಗೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಲಿದೆ ಅಂತ ಕಮಲ್ ಪಂತ್ ತಿಳಿಸಿದ್ದಾರೆ..ಈಗಾಗಲೇ  ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿ ಅವರನ್ನ ವಿಚಾರಣೆಗೆ ಒಳಪಡಿಸಲು ಬೆಂಗಳೂರು ಪೊಲೀಸರು ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ  ಡ್ರಗ್ಸ್ ದಂಧೆ ಕಿಂಗ್ ಪಿನ್  ಅನಿಕಾ ವಿಚಾರಣೆ  ಕೂಡ ತೀವ್ರಗತಿಯಲ್ಲಿ ಸಾಗುತ್ತಿದೆ. ಯಾವ ಯಾವ ನಟ ನಟಿಯರಿಗೆ ಯಾವ ಯಾವ ಮಾದಕ ವಸ್ತುಗಳನ್ನಪೂರೈಕೆ ಮಾಡಲಾಗುತ್ತಿತ್ತು. ಯಾವ ನಟ ನಟಿಯರು ಈಕೆಯ ಸಂಪರ್ಕದಲ್ಲಿದ್ದರು ಎಂಬದರ ಬಗ್ಗೆ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಡ್ರಗ್ಸ್ ಹಗರಣ ಮತ್ಯಾವೆಲ್ಲಾ ಸ್ವರೂಪವನ್ನ ಪಡೆದುಕೊಳ್ಳಿದೆ ಅನ್ನೋದನ್ನ ಕಾದುನೋಡಬೇಕು.

Spread the love
Leave A Reply

Your email address will not be published.

Flash News