ಕಸರತ್ತು ಮಾಡದೆ-ಬೆವರು ಹರಿಸದೆ ಆಕರ್ಷಕ ಅಂಗಸೌಷ್ಠವಕ್ಕೆ ಸ್ಟಿರಾಯ್ಡ್ ಬಳಕೆ: ರಾಜಧಾನಿಯ ಜಿಮ್ ಗಳಿಗೂ ಡ್ರಗ್ಸ್ ಮಾಫಿಯಾ ಲಿಂಕ್..?

0

ಬೆಂಗಳೂರು:ಸ್ಯಾಂಡಲ್ ವುಡ್ ಗೆ ಮಾತ್ರ  ಡ್ರಗ್ಸ್ ಲಿಂಕ್ ಇರೋದಾ.. ಖಂಡಿತಾ ಇಲ್ಲ…ಚಂದನವನಕ್ಕೆ ಡ್ರಗ್ಸ್ ಮಾಫಿಯಾ ಲಿಂಕ್ ಇದೆ ಎನ್ನೋದು ಬಯಲಾದ್ಮೇಲೆ  ಮಾದಕ ವ್ಯಸನದೊಂದಿಗೆ ಥಳಕು ಹಾಕ್ಕೊಂಡಿರುವ ಮತ್ತಷ್ಟು ಕರಾಳ ಮುಖಗಳು ಅನಾವರಣಗೊ ಳ್ಳಲಾರಂಭಿಸಿದೆ.ಅವೇ ಜಿಮ್ ಗಳು.ಜಿಮ್  ಅಥವಾ  ವ್ಯಾಯಾಮ ಶಾಲೆಗಳಲ್ಲಿಯೂ  ಡ್ರಗ್ಸ್(ಮಾದಕ ದ್ರವ್ಯ) ಬಳಕೆಯಾಗ್ತದೆ.ಅಪಾಯಕಾರಿ ಡ್ರಗ್ಸ್ ಬಳಸೊಕ್ಕೆ ಸಲಹೆ ನೀಡಲಾಗ್ತದೆ  ಎನ್ನುವ ಸ್ಪೋಟಕ ಸತ್ಯ ಬಯಲಾಗಿದೆ. ಯಾರಿಗೆ ತಾನೇ ತಮ್ಮ ದೇಹವನ್ನು ಚೆನ್ನಾಗಿ ಹುರಿಗೊಳಿಸಿಕೊಳ್ಳಬೇಕು..ಕಟ್ಟು ಮಸ್ತಾದ ಅಂಗಸೌಷ್ಠವ ಬೇಕೆಂಬ ಇರೊಲ್ಲ  ಹೇಳಿ.ಅದಕ್ಕಾಗಿ ಎಷ್ಟೆಲ್ಲಾ ರಿಸ್ಕ್.. ಏನೆಲ್ಲಾ ಕಸರತ್ತು ಮಾಡ್ತಾರೆ ಜನ.ಕೆಲವ್ರು ಮನೆಯಲ್ಲೇ ಈ ಕೆಲಸ ಮಾಡಿದ್ರೆ ಬಹುತೇಕರು ಶಿಸ್ತುಬದ್ಧವಾಗಿ ದೇಹವನ್ನು ಕಟ್ಟುಮಸ್ತಾಗಿಸಿಕೊಳ್ಳೊಕ್ಕೆ ಜಿಮ್ ಗೆ ಹೋಗ್ತಾರೆ.ಅಲ್ಲಿ ಟ್ರೈನರ್ಸ್ ಗಳ ತರಬೇತಿ-ಮಾರ್ಗದರ್ಶನದಲ್ಲಿ ಕಸರತ್ತು ಶುರು ಹಚ್ಚಿಕೊಳ್ತಾರೆ.

ನೈಸರ್ಗಿಕವಾಗಿ ದೇಹವನ್ನು ಕಟ್ಟು ಮಸ್ತಾಗಿಸಿಕೊಳ್ಳುವುದು ಒಂದ್ ರೀತಿಯಾದ್ರೆ,ಕಷ್ಟಪಡದೆ ಬೆವರು ಹರಿಸದೆ ದಿಢೀರ್ ಬಾಡಿ ಬಿಲ್ಡ್  ಆಗಬೇಕು..ಇದಕ್ಕೆ ಎಷ್ಟ್ ಹಣ ಬೇಕಾದ್ರೂ ಖರ್ಚು ಮಾಡೊಕ್ಕೆ ಸಿದ್ಧವಿರುವ  ಮತ್ತೊಂದು ಕೆಟಗರಿ ಜನರಿರುತ್ತಾರೆ.ಅಂಥವ್ರನ್ನು ಟಾರ್ಗೆಟ್ ಮಾಡ್ಕಂಡು ಕೆಲವು ಜಿಮ್ ಟ್ರೈನರ್ಸ್ ಅವರಿಗೆ ಟ್ಯಾಬ್ಲೆಟ್ಸ್-ಪೌಡರ್ಸ್-ಸ್ಟಿರಾಯ್ಡ್ಸ್ ಗಳನ್ನು ನೀಡಿ ಅವರಿಂದ ಹಣ ಪೀಕುವ ದೊಡ್ಡ ದಂಧೆಯನ್ನೇ ನಡೆಸುತ್ತಿದ್ದಾರೆ.

ಜಿಮ್ ಗಳಲ್ಲಿ ಕೃತಕವಾಗಿ ಬಾಡಿ ಬಿಲ್ಡ್ ಮಾಡುವಂಥದ್ದಕ್ಕೆ ಟ್ರೈನರ್ಸ್ ಗಳು ಅಪಾಯಕಾರಿ ಸ್ಟಿರಾಯ್ಡ್  ನೀಡುತ್ತಿರುವ ಸಂಗತಿಯೂ ಹೊಸದೇನಲ್ಲ.ಬೃಹತ್ ಪ್ರಮಾಣದಲ್ಲಿ ಜಿಮ್ ನಡೆಸುವ ಮಾಲಿಕರು ಡ್ರಗ್ಸ್ ಗಂಥ ಅಪಾಯಕಾರಿ ದಂಧೆ ನಡೆಸುವವರೊಂದಿಗೆ ನೇರ-ಪರೋಕ್ಷವಾದ ಲಿಂಕ್ ಇಟ್ಟುಕೊಂಡಿದ್ದಾರೆನ್ನುವುದು ಸುಳ್ಳಲ್ಲ..45 ವರ್ಷದೊಳಗೆ ದೇಹವನ್ನು ನೈಸರ್ಗಿಕವಾಗಿ ಬೆಳೆಸೊಕ್ಕೆ ಎಲ್ಲಾ  ರೀತಿಯಅವಕಾಶಗಳಿರುತ್ವೆ.

45 ರ ನಂತ್ರ ದೇಹಕ್ಕೆ  ದಣಿದ ಅನುಭವವಾಗುವುದು ವಯೋಸಹಜ ಬೆಳವಣಿಗೆ.ಆದ್ರೆ 45 ರ  ನಂತ್ರವೂ ಎಲ್ಲರ ಕಣ್ ಕುಕ್ಕುವಂತೆ ದೇಹವನ್ನು ಹುರಿಗೊಳಿಸಿಕೊಳ್ಳೋ ಖಯಾಲಿ ಇರುವಂಥವ್ರೇ ಜಿಮ್ ಮಾಲೀಕರು ಹಾಗೂ ಟ್ರೈನರ್ಸ್ ಗಳ ಟಾರ್ಗೆಟ್.ಟ್ರೈನಿಂಗ್ ನೀಡದೆ ಕೇವಲ ಸ್ಟಿರಾಯ್ಡ್ಸ್ ಬಳಸುವಂತ ಹೇಳಿ ಹಣಕ್ಕೆ ಹಣ,ಅವರ ತರಬೇತಿಗೆ ನೀಡಬೇಕಾದ ಟೈಮ್ ಎರಡನ್ನೂ ಸೇವ್ ಮಾಡುವ ಕೆಟ್ಟ ಸಂಪ್ರದಾಯವನ್ನು ಕೆಲವ್ರು ಮಾಡುತ್ತಿದ್ದಾರೆನ್ನುವುದು ಆತಂಕಕಾರಿ.

ನೈಸರ್ಗಿಕವಾಗಿ ದೇಹ ಹುರಿಗೊಳಿಸಿಕೊಳ್ಳೊಕ್ಕೆ ತರಬೇತಿ ನೀಡುವಂಥ ಪ್ರಾಮಾಣಿಕ ಹಾಗೂ ಬದ್ಧತೆಯ ಜಿಮ್ ಸೆಂಟರ್ ಹಾಗೂ ಟ್ರೈನರ್ಸ್ ಗಳು ಇದ್ದಾರೆ.ಇದರ ನಡುವೆ ನಾಯಿಕೊ ಡೆಗಳಂತೆ ತಲೆ ಎತ್ತಿರುವ ಬಹುತೇಕ ಸೆಂಟರ್ಸ್ ಇವತ್ತು ಕೃತಕ ಹಾಗು ಅಪಾಯಕಾರಿ ರಾಸಾಯನಿಕ ಗಳನ್ನು ನೀಡುವ ಹಾಗೂ ಅದನ್ನು ಬಳಸುವಂತೆ ಸಲಹೆ ನೀಡುವ ಕೆಲಸ ಮಾಡುತ್ತಿವೆ.ಅಷ್ಟೇ ಅಲ್ಲ,ಒಂದ್ ಹೆಜ್ಜೆ ಮುಂದ್ಹೋಗಿ ಆ ರಾಸಾಯನಿಕಗಳನ್ನು ಪೂರೈಸುವ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.ಇದರಿಂದ ಕಷ್ಟಪಟ್ಟು ಹಾಗೂ  ಪ್ರಾಮಾಣಿಕತೆಯಿಂದ  ಜಿಮ್ ನಡೆಸುತ್ತಿರುವ ಅದೆಷ್ಟೋ  ಮಾಲಿಕರಿಗೆ ಕೆಟ್ಟ ಹೆಸರು ಬರುತ್ತಿದೆ.

ಕಮ್ಮನಹಳ್ಳಿ,ಬಾಣಸವಾಡಿ,ಸರ್ವಜ್ಞ ನಗರ,ಮನೋರಾಯನಪಾಳ್ಯ,ಕಾಚರಕನಹಳ್ಳಿ ಸುತ್ತಮುತ್ತ ಡ್ರಗ್ಸ್ ದಂಧೆಯನ್ನೇ ಬದುಕಿನ ಬಂಡವಾಳವಾಗಿಸಿಕೊಂಡ ಪೆಡ್ಲರ್ಸ್ ಗಳು ಬೀಡುಬಿಟ್ಟಿದ್ದಾರೆ ಎನ್ನುವ ಸುದ್ದಿಯಿದೆ.ಇದು ಪೊಲೀಸರಿಗೆ ಗೊತ್ತಿಲ್ಲ ಎಂದೇನಲ್ಲ..ಅವರಿಗೆ ಎಲ್ಲೆಲ್ಲಿ ಡ್ರಗ್ಸ್ ಸಿಗ್ತದೆ..ಯಾರ್ಯಾರು ಈ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ.ಅದರ ವ್ಯವಹಾರದ ಮೂಲ-ಅದು ಎಲ್ಲೆಲ್ಲಿ ಪೂರೈಕೆಯಾಗ್ತದೆ ಎನ್ನುವ  ಎಲ್ಲಾ ಒಳಸುಳಿಗಳು ಪೊಲೀಸರಿಗೆ ಚೆನ್ನಾಗಿ ಗೊತ್ತು.ಯಾರ ಜುಟ್ಟನ್ನು ಹಿಡಿದ್ರೆ ದಂಧೆಯ ಮಾಹಿತಿಗಳು ಸಿಗುತ್ತವನ್ನೋ  ಇಂಚಿಂಚೂ ಮಾಹಿತಿಯೂ ಅವರಿಗಿದೆ.

ಆದ್ರೆ ಅದು ಬಹಿರಂಗವಾಗಿ ತಮಗೆ ಬರುತ್ತಿರೋ ಪರ್ಸಂಟೇಜ್ ಗೆಲ್ಲಿ ಹೊಡೆತ ಬೀಳ್ತದೋ ಎನ್ನುವ ಕಾರಣಕ್ಕೆ ಬಾಯಿ ಮುಚ್ಚಿಕೊಂಡಿದ್ದಾರೆ ಪೊಲೀಸರು. ನೈಜೀರಿಯಾ..ಕೀನ್ಯಾ…ಉಗಾಂಡ.,ಸೂಡಾನ್ ನಂತ ದಟ್ಟದಾರಿದ್ರ್ಯ ದೇಶಗಳಿಂದ ವ್ಯಾಸಂಗಕ್ಕಾಗಿ ಬಂದು ಈ ಭಾಗದಲ್ಲಿ ಬೀಡು ಬಿಟ್ಟಿರುವ ಪ್ರಜೆಗಳು ಡ್ರಗ್ಸ್ ಮಾರಾಟವನ್ನೇ ಬಂಡವಾಳವಾಗಿಸಿಕೊಂಡು ದಂಧೆ ಕರಾಳ ಸ್ವರೂಪ ಪಡೆಯೊಕ್ಕೆ ಕಾರಣವಾಗಿದ್ದಾರೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ಪ್ರೂವ್ ಆಗಿದೆ.ಅಲ್ಲದೇ,ನಮ್  ಪೊಲೀಸ್ರು ಮನಸು ಮಾಡಿದ್ರೆ ಈ ದಂಧೆಯನ್ನು ಬೇರು ಸಮೇತ ಕಿತ್ತೆಸೆಯುವುದು ಕಷ್ಟದ ಕೆಲಸನಾ.,,ಆದ್ರೆ ಟ್ರ್ಯಾಜಿಡಿ ಏನಂದ್ರೆ ಅವ್ರು ಆ ಕೆಲಸವನ್ನು ಅವ್ರು ಮಾಡಿಲ್ಲ..ಮಾಡುತ್ತಿಲ್ಲ..ಮುಂದೆಯೂ ಮಾಡೋದಿಲ್ವೇನೋ..

ಕಳೆದ ವರ್ಷ ಅಂದ್ರೆ 2019 ರ ಆಗಸ್ಟ್ ನಲ್ಲಿ ಚಾಮರಾಜಪೇಟೆ ಅಲ್ಟಿಮೇಟ್ ಫಿಟ್ನೆಸ್ ಎನ್ನುವ ಜಿಮ್ ಮೇಲೂ ಇದೇ ಕಾರಣಕ್ಕೆ ರೇಡ್ ಆಗಿತ್ತು.ಜಿಮ್ ಗೆ ಬಂದವ್ರಿಗೆ ಆಕರ್ಷಕ ಬಾಡಿ ಬಿಲ್ಡ್ ಮಾಡೊಕ್ಕೆ ಹಾನಿಕಾರಕ  ಔಷಧಿ ಸೇವಿಸುವಂತೆ ಶಿಫಾರಸ್ಸು ಮಾಡುತ್ತಿದ್ದ ಟ್ರೈನರ್ ಶಿವಕುಮಾರ್ ಎನ್ನುವನನ್ನು ಬಂಧಿಸಿದ್ದರು.ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಾತೊರೆಯುತ್ತಿದ್ದ ಅದೆಷ್ಟೋ ಅಮಾಯಕರು ಈತನ ಮಾತನ್ನು ಕೇಳಿ ಸಾವಿರಾರು ಹಣವನ್ನು ಶಿವಕುಮಾರ್ ಗೆ ನೀಡಿ ಅಪಾಯಕಾರಿ ವಸ್ತುಗಳನ್ನು ಕೊಂಡು ಸೇವಿಸಿದ್ದನ್ನು ಶಿವಕುಮಾರೇ ಬಾಯ್ಬಿಟ್ಟಿದ್ದನು.ಅಪಾರ ಪ್ರಮಾಣದ ಸ್ಟಿರಾಯ್ಡ್ಸ್ ನ್ನು ವಶಪಡಿಸಿಕೊಂಡಿದ್ದರು.ಇದು ಕೇವಲ ಒಂದು ಉದಾಹರಣೆ ಅಷ್ಟೇ..ಇಂಥ ದಂಡಿ ಉದಾಹರಣೆಗಳು ಸಿಗ್ತವೆ.ಕೆಲವು ಬಹಿರಂಗವಾಗ್ತವೆ,ಇನ್ನು ಕೆಲವು ಒಳಗೊಳಗೇ ಮುಚ್ಚಿ ಹಾಕಲ್ಪಡುತ್ತವೆ.

ಆದ್ರೆ ಕೃತಕವಾಗಿ ರಾಸಾಯನಿಕಗಳನ್ನು ಬಳಸಿ ದೇಹವನ್ನು ಹುರಿಗೊಳಿಸಿಕೊಳ್ಳುವಿಕೆಯಿಂದ ಆಗುತ್ತಿರುವ ದೈಹಿಕ ಹಾಗೂ ಮಾನಸಿಕ ನಷ್ಟ ಅಷ್ಟಿಷ್ಟಲ್ಲ. ಸ್ಟಿರಾಯ್ಡ್​ ಬಳಕೆಯಿಂದ ಗಂಡಸರ ಪುರುಷತ್ವಕ್ಕೇ ತೊಂದರೆ ಉಂಟಾಗುತ್ತದೆ. ಈ ಸ್ಟಿರಾಯ್ಡ್​ ಗಳು ರಕ್ತಕ್ಕೆ ಸೇರುವುದರಿಂದ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಫಿಟ್​ನೆಸ್​ ಬೇಕೆಂದು ಸ್ಟಿರಾಯ್ಡ್​ ಸೇವಿಸಿದರೆ ಪುರುಷತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎನ್ತಾರೆ ತಜ್ಞರು.

 ಅಪಾಯಕಾರಿ ರಾಸಾಯನಿಕಗಳ ಮಾರಾಟದಲ್ಲಿ ಸಿಕ್ಕಿಬೀಳೋರ ವಿರುದ್ಧ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣವೂ ದಾಖಲಾಗುತ್ತದೆ.ನಿಷೇಧಿತ ಸ್ಟಿರಾಯ್ಡ್​ಗಳ ದುರ್ಬಳಕೆ ವಿರುದ್ಧ ಸಮರ ಸಾರಬೇಕಾದ ಔಷಧ ನಿಯಂತ್ರಣ ಇಲಾಖೆಯೂ ಅದ್ಹೇಕೆ ಮೌನ ವಹಿಸಿದೆಯೋ ಗೊತ್ತಾಗ್ತಿಲ್ಲ..ಪೊಲೀಸ್ರು ಜಿಮ್ ಗಳ ಮೇಲೆ ಹದ್ದುಗಣ್ಣಿನ ನಿಗಾ ಇಟ್ಟು ಬೆಲ್ಟ್ ಟೈಟ್ ಮಾಡ್ಕೊಂಡು ಬಾಯಿ ಬಿಡಿಸಿದ್ರೆ ಜಿಮ್ ಗಳೊಂದಿಗೆ ಥಳಕು ಹಾಕ್ಕೊಂಡಿರುವ ಡ್ರಗ್ಸ್ ನ ಮತ್ತೊಂದು ಕರಾಳ ಮುಖ ಬಯಲಾಗಬಹುದು. 

Spread the love
Leave A Reply

Your email address will not be published.

Flash News