ಕೊರೊನಾ ಮಹಾಮಾರಿಗೆ ಬಲಿಯಾದ ಭದ್ರಾವತಿಯ ಜನಪ್ರಿಯ ಮಾಜಿ ಶಾಸಕ ಎಂ.ಜೆ ಅಪ್ಪಾಜಿ(ಗೌಡ).

0

ಶಿವಮೊಗ್ಗ(ಭದ್ರಾವತಿ):ರಾಜ್ಯದ ಉಕ್ಕಿನ ನಗರಿ ಎಂದೇ ಖ್ಯಾತಿ ಪಡೆದಿದ್ದ ಭದ್ರಾವತಿ ತಾಲೂಕನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂಥ ನಗರವನ್ನಾಗಿ ರೂಪಿಸಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ(ಗೌಡ) ಕೊರೊನಾಗೆ ಬಲಿಯಾಗಿದ್ದಾರೆ.

ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದ ಅವರಿಗೆ ಕಳೆದೆರಡು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದಾಗಿ ಉಸಿರಾಟದಲ್ಲಿ ಏರುಪೇರಾಗಿತ್ತು.ಕೊರೊನಾ ಪರೀಕ್ಷೆ ಮಾಡಿಸಿದಾಗ ಸೋಂಕುಇರುವುದು  ದೃಢಪಟ್ಟಿತ್ತು.ಈ ಹಿನ್ನಲೆಯಲ್ಲಿ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಆದ್ರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಅಗಲಿರುವ ಅಪ್ಪಾಜಿ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ,ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ, ಸಂಸದ ರಾಘವೇಂದ್ರೆ,ಸಚಿವ ಕೆ.ಎಸ್ ಈಶ್ವರಪ್ಪ,ಶಾಸಕ ಸಂಗಮೇಶ್ವರ್ ಸೇರಿದಂತೆ ಹಲವು ಹಾಲಿ,ಮಾಜಿ ಶಾಸಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಮೈಸೂರು ಕಾಗದ ಕಾರ್ಖಾನೆಗಳ ಪುನಶ್ಚೇತನಕ್ಕೆ ಸಾಕಷ್ಟು ಹೋರಾಡಿದ್ದ ಅಪ್ಪಾಜಿ ಹಲವಾರು ಬಾರಿ ಶಾಸಕರಾಗಿ ಕೆಲಸ ಮಾಡಿದ್ದರು.ಕಳೆದ ಬಾರಿ ಜೆಡಿಎಸ್ ನಿಂದ ಗೆದ್ದು ಶಾಸಕರಾಗಿದ್ದ ಅಪ್ಪಾಜಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ.ಇದರಿಂದ ಅವರು ತೀವ್ರ ಬೇಸರಿಸಿಕೊಂಡಿದ್ರು.ಆದ್ರೆ ರಾಜಕೀಯದಲ್ಲಿ ಇದೆಲ್ಲಾ ಸಹಜ ಎಂದು ಮರೆತು ಸುಮ್ಮನಾಗಿದ್ದರು.ಕಳೆದ ಬಾರಿ ಕಾಂಗ್ರೆಸ್ ನ ಸಂಗಮೇಶ್ ಮೇಲೆ ಸೋತ ನಂತರ ರಾಜಕೀಯದಿಂದ ಬಹುತೇಕ ನಿವೃತ್ತರಾದಂತೆ ಕಂಡಿದ್ದ ಅಪ್ಪಾಜಿ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದರು.ತಮ್ಮ ಮಗ ಅಜಿತ್ ರನ್ನು ಶಾಸಕರನ್ನಾಗಿ ಬೆಳೆಸಬೇಕೆನ್ನುವ ಹಿರಿದಾಸೆ ಅವರಲ್ಲಿತ್ತು.ಅದಕ್ಕಾಗಿ ಅಖಾಡವನ್ನೂ ರೆಡಿ ಮಾಡಿಕೊಂಡಿದ್ದರು.

ಇದೆಲ್ಲದರ ನಡುವೆ ಭದ್ರಾವತಿಯಲ್ಲಿ ಏನೇ ಸಾಂಸ್ಕ್ರತಿಕ ಚಟುವಟಿಕೆ ಹಾಗು ಹೋರಾಟ ನಡುದ್ರೂ ಮಂಚೂಣಿಯಲ್ಲಿರುತ್ತಿದ್ದ ಅಪ್ಪಾಜಿ ದಾನಿಯಾಗಿಯೂ ಪ್ರಸಿದ್ಧಿ ಪಡೆದಿದ್ದರು.ತಮ್ಮ ಮನೆ ಬಾಗಿಲಿಗೆ ಕಷ್ಟ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಿದ್ದೇ ಇಲ್ಲ.ಭದ್ರಾವತಿಯ ಬಹುತೇಕ ಮಂದಿ ಅಪ್ಪಾಜಿ ಅವರಿಂದ ಸಹಾಯ ಪಡೆದವರಾಗಿದ್ದಾರೆ.ಕೊವಿಡ್ ಸಂದರ್ಭದಲ್ಲೂ ಬಡವರು ಹಾಗೂ ನಿರ್ಗತಿಕರಿಗೆ ಕೈಲಾದ ನೆರವು ನೀಡಿ ಜನಮನ ಗೆದ್ದಿದ್ದರು.

ಆದ್ರೆ ಕಳೆದೊಂದು ವಾರದಿಂದ ಹದಗೆಟ್ಟ ಅವರ ಆರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪಾಜಿಗೌಡ ಕೊರೊನಾಕ್ಕೆ ಬಲಿಯಾಗಿರುವುದು ಭದ್ರಾವತಿ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.ಅಪ್ಪಾಜಿ ಅವರ ಅಂತ್ಯಸಂಸ್ಕಾರ ಸೀಮಿತ ಬಂಧುಬಾಂಧವರ ಸಮ್ಮುಖದಲ್ಲಿ ನಾಳೆಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿವೆ.

Spread the love
Leave A Reply

Your email address will not be published.

Flash News