ಪೋಷಕರೇ ಪ್ಲೀಸ್..!ಪ್ಲೀಸ್..!ಮಕ್ಕಳಿಗೆ ಚಾಕೊಲೇಟ್-ಐಸ್ ಕ್ರೀಂ ಕೊಡಿಸೋ ಮುನ್ನ ಆಲೋಚಿಸಿ-ಪೋಷಕರನ್ನು ಕೈ ಮುಗಿದು ಮನವಿ ಮಾಡಿದ ಸಚಿವ ಸುರೇಶ್ ಕುಮಾರ್..

0

ಬೆಂಗಳೂರು:ಈ ಸ್ಟೋರಿ ಓದುವ ಮುನ್ನ ನಿಮ್ಗೆ ನಮ್ಮ ಆಣ್ಣಾವ್ರು ಡಾ.ರಾಜ್ ಅವರ  ಕೊನೆಯ ಚಿತ್ರ ಶಬ್ದವೇದಿ ಚಿತ್ರದ ಬಗ್ಗೆ ಒಂದಿಷ್ಟು ಹೇಳೊಕ್ಕೆ ಇಷ್ಟಪಡ್ತೇನೆ.. ನೀವೆಲ್ಲಾ ಆ ಚಿತ್ರ  ನೋಡಿರಬಹುದು. ಮಾದಕ ವಸ್ತುಗಳ ಗೀಳಿಗೆ ಹೇಗೆ ಯುವ ಜನತೆ ಬಲಿಯಾಗುತ್ತಾರೆ..ಡ್ರಗ್ಸ್ ಮಾಫಿಯಾದವರು ಹೇಗೆಲ್ಲಾ ಅಮಾಯಕರಿಗೆ ಡ್ರಗ್ಸ್ ಚಟವನ್ನ ಅಂಟಿಸುತ್ತಾರೆ.

ಅದರಲ್ಲೂ ಪುಟ್ಟ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡು ಅವರನ್ನ ಯಾವ ಯಾವ ರೀತಿ ಮಾದಕ ವಸ್ತುಗಳ ದುಶ್ಚಟಕ್ಕೆ ಬೀಳುವಂತೆ ಮಾಡ್ತಾರೆ ಅನ್ನೋದನ್ನ ಶಬ್ದವೇದಿ ಚಿತ್ರದಲ್ಲಿ ಎಳೆಎಳೆಯಾಗಿ ನೈಜರೀತಿಯಲ್ಲಿ ತೋರಿಸಲಾಗಿತ್ತು.ಡ್ರಗ್ ವ್ಯಸನದಿಂದ ದೂರ ಇರುವಂತೆ ದೊಡ್ಡ ಮಟ್ಟದ ಪ್ರೇರಣೆ-ಬದಲಾವಣೆಗೆ ಕಾರಣವಾದ ಚಿತ್ರ ಅದು. ಆ ಚಿತ್ರದಲ್ಲಿ ಹೇಳಲಾಗಿರುವ ಡ್ರಗ್ಸ್ ವಿಚಾರ ಇವತ್ತಿನ ದಿನಗಳಲ್ಲಿ  ಅಕ್ಷರಶಃ ಸತ್ಯಕ್ಕೆ ಅನ್ವರ್ಥವಾಗಿದೆ.

ಡ್ರಗ್ಸ್ ನಮ್ಮ ಸಮಾಜದಲ್ಲಿ ಸಾಕಷ್ಟು ವಿಸ್ತಾರವಾಗಿ ಬೇರು ಬಿಟ್ಟಿದೆ. ಪೊಲೀಸರು ಇದರ ವಿರುದ್ಧ ಎಷ್ಟೇ ಸಮರ ಸಾರಿದ್ರೂ ಇದನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತು ಹಾಕಲು ಇನ್ನೂ ಆಗುತ್ತಿಲ್ಲ. ದಿನೆ ದಿನೇ ಡ್ರಗ್ಸ್ ಮಾಫಿಯಾ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಲೇ ಇದೆ. ತುಂಬಾ ಆಘಾತಕಾರಿ ವಿಷಯ ಏನೆಂದ್ರೆ, ಶಾಲಾ ವಿದ್ಯಾರ್ಥಿಗಳ ಕೈಗೆ ಇದು ಸುಲಭವಾಗಿ ಸಿಗುತ್ತಿದೆ. ಅದು ವಿವಿಧ ರೂಪದಲ್ಲಿ… ಐಸ್ ಕ್ರೀಂ, ಚಾಕಲೋಟ್ ಸೇರಿದಂತೆ ವಿವಿಧ ವಸ್ತುಗಳ ಮೂಲಕ ಡ್ರಗ್ಸ್ ಭವಿಷ್ಯದ ಪ್ರಜೆಗಳ ದೇಹವನ್ನು ಸೇರುತ್ತಿದೆ….!

ಡ್ರಗ್ಸ್ ಮಾಫಿಯಾದವರು ಶಾಲಾ ಮಕ್ಕಳು ತಿನ್ನುವ ತಿಂಡಿ ತಿನಿಸುಗಳಿಗೆ ವಿವಿಧ ಬಗೆಯ ಡ್ರಗ್ಸ್‌ಗಳನ್ನು ಮಿಶ್ರಣ ಮಾಡಿ ಪುಟ್ಟ ಮಕ್ಕಳನ್ನು ಮಾದಕ ವಸ್ತುಗಳ ದಾಸರನ್ನಾಗಿ ಪರಿವರ್ತಿಸುತ್ತಿದ್ದಾರೆ..  ಈ ಗಂಭೀರ ವಿಷಯದ ಬಗ್ಗೆ ಕೆಲ ದಿನಗಳ ಹಿಂದೆ ಜಯಕಿರಣ ವರದಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ  ಬಗ್ಗೆ ದನಿ ಎತ್ತಿದ್ದಾರೆ.


ಈ ಬಗ್ಗೆ ಮಾತನಾಡಿರುವ ಸಚಿವ ಸುರೇಶ್ ಕುಮಾರ್ ದೊಡ್ಡ ದೊಡ್ಡ  ಶಾಲೆಗಳಲ್ಲಿ ಓದುತ್ತಿರುವ  ಮಕ್ಕಳನ್ನು ಸೆಳೆಯಲು ಐಸ್ ಕ್ರೀಂ, ಚಾಕೋಲೇಟ್ ಗಲ್ಲಿ ಡ್ರಗ್ಸ್ ಹಾಕಲಾಗುತ್ತಿದೆ, ಇದು ತುಂಬಾ ಅಪಾಯಕಾರಿ ಅಂತ ಹೇಳಿದ್ದಾರೆ… ಇದಿಷ್ಟೇ ಅಲ್ಲದೇ, ಡ್ರಗ್ಸ್ ಮೂಲಕ ಸಮಾಜದ ಯುವ ಜನತೆಯನ್ನ ಹಾಳುಮಾಡಲು ಯತ್ನಿಸುತ್ತಿರುವವರನ್ನ ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.

ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಮಾದಕ ವಸ್ತುಗಳು  ಸಮಾಜ ಹಾಗೂ ಯುವ ಜನತೆಯನ್ನ ದುರ್ಬಲಗೊಳಿಸುತ್ತಿದೆ. ಇದನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದಿದ್ದಾರೆ.

ಸುರೇಶ್ ಕುಮಾರ್ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ… ಡ್ರಗ್ಸ್ ಅನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ಇಲ್ಲವಾದರೇ ಭವಿಷ್ಯದ ಪ್ರಜೆಗಳ ಬದುಕು ಮೂರಾಬಟ್ಟೆ ಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಸದ್ಯ ಎದುರಾಗಿದೆ. ತಮ್ಮ ಮಕ್ಕಳ ನಡೆ ನುಡಿ ವರ್ತನೆ ಮೇಲೆ ಹಾಗೂ ಅವರ ಸಹವಾಸ ಸೇರಿದಂತೆ ಮಕ್ಕಳ ಇನ್ನಿತರ ಚಟುವಟಿಕೆ ಮೇಲೆ ಪೋಷಕರು ನಿಗಾ ಇಡಬೇಕಾಗಿದೆ. ಅಷ್ಟೇ ಅಲ್ಲಾ ತಮ್ಮ ಮಕ್ಕಳಿಗೆ ತಾವು ಕೊಟ್ಟ ಹಣವನ್ನ ಅವರು ಯಾವುದ್ಯಾವುದಕ್ಕೆ ಖರ್ಚು ಮಾಡುತ್ತಿದ್ದಾರೆ ಅನ್ನೋದನ್ನು ಪೋಷಕರು ತಿಳಿದುಕೊಳ್ಳಬೇಕಾಗಿದೆ.

ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾದವರ ಕಣ್ಣು ಶಾಲಾ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ಅದರಲ್ಲೂ ದೊಡ್ಡ ದೊಡ್ಡ ಶ್ರೀಮಂತ ಮಕ್ಕಳನ್ನ ಗುರಿಯಾಗಿಸಿಕೊಂಡು ಅವರನ್ನ ಡ್ರಗ್ಸ್ ದಾಸರನ್ನಾಗಿ ಮಾಡುತ್ತಿದ್ದಾರೆ. ಶಾಲೆ ಸುತ್ತ ಮುತ್ತಲ ಅಂಗಡಿಗಳಲ್ಲಿ ಅಥವಾ ಇನ್ನಿತರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಸೇವಿಸುವ ವಿವಿಧ ಬಗೆಯ ತಿಂಡಿ ತಿನಿಸುಗಳ ಬಗೆ ಬಗೆಯ ಡ್ರಗ್ಸ್ ಮಿಕ್ಸ್ ಮಾಡುತ್ತಿದ್ದಾರೆ. ಈ ಮೂಲಕ ಪುಟ್ಟ ಮಕ್ಕಳನ್ನ  ಡ್ರಗ್ಸ್ ಚಟಕ್ಕೆ ಒಳಪಡಿಸಿ ನಿರಂತರವಾಗಿ ಅವರಿಂದ ಹಣ ಕೀಳುವ ಡ್ರಗ್ಸ್ ಗ್ಯಾಂಗ್ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿದೆ….

ಈ  ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಚಲನ ವಲನ ಗಳ ಮೇಲೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ… ಇಲ್ಲವಾದರೇ ಮುಂದೊಂದು ದಿನ ನಿಮ್ಮ ಮಕ್ಕಳ ಭವಿಷ್ಯ ಹಾಳಾಗೋದರಲ್ಲಿ ಯಾವುದೇ ಸಂಶಯವಿಲ್ಲ….ಮಕ್ಕಳು ಹಠಕ್ಕೆ ಬೀಳ್ತಾರೆನ್ನೋದಕ್ಕೆ ತಲೆಕೆಡಿಸಿಕೊಳ್ಳದೆ ಅವರ ಬದುಕು-ಆರೋಗ್ಯ-ಭವಿಷ್ಯ ಕಾಪಾಡ್ಬೇಕಿದೆ ಪೋಷಕರು.

Spread the love
Leave A Reply

Your email address will not be published.

Flash News