TRP ಗೋಸ್ಕರ  ಸುದ್ದಿ ಮಾಡಿದ ಮಾದ್ಯಮಗಳು-ದೂರಿನ ಹಂತದಲ್ಲೇ ಪೊಲೀಸ್ ವಹಿಸಿದ ನಿರ್ಲಕ್ಷ್ಯವೇ  ಗಲಭೆಗೆ ಕಾರಣ- ಸತ್ಯಶೋಧನಾ ಸಮಿತಿ ವರದಿಯಲ್ಲಿ ಡಿಜೆಹಳ್ಳಿ-ಕೆಜಿಹಳ್ಳಿ ಗಲಭೆಗೆ  ಕಾರಣ ಬಹಿರಂಗ

0

ಬೆಂಗಳೂರು:ಟಿಆರ್ ಪಿ ದೃಷ್ಟಿಯನ್ನು ಬಿಟ್ಟು ವಿಶಾಲ ಮನೋಭಾವದಿಂದ ವರದಿ ಮಾಡಿದ್ದರೆ,ದೂರು ಬಂದಾಕ್ಷಣ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಿದ್ದೇ ಆದಲ್ಲಿ,ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಮೂವರ ಸಾವಿಗೆ,ಹಲವರ ನೋವಿಗೆ,ಹತ್ತಾರು ಕೋಟಿ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗುತ್ತಿರಲಿಲ್ಲ.. ಡಿಜೆ ಹಳ್ಳಿ-ಕೆಜಿ ಹಳ್ಳಿ ಘಟನೆ ಹಿನ್ನಲೆಯಲ್ಲಿ ಸತ್ಯಶೋಧನಾ ಸಮಿತಿ ಕಂಡುಕೊಂಡ ಸತ್ಯ ಇದು.

ಕಳೆದ ತಿಂಗಳು ನಡೆದ ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆಗೆ ಕಾರಣವೇನು..ಒಬ್ಬೊಬ್ಬರ ವಿಶ್ಲೇಷಣೆ-ಅವಲೋಕನ ಒಂದೊಂದ್ ರೀತಿಯಲ್ಲಿದೆ.ಈ ನಡುವೆಯೇ ಪ್ರಗತಿಪರರು,ಸಾಮಾಜಿಕ ಹೋರಾಟಗಾರರು-ಸಂಘಟನೆಗಳ  ಪ್ರಮುಖರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ತನ್ನದೇ ಆದ ವಿಶ್ಲೇಷಣೆಯನ್ನು ನೀಡಿದೆ.ಅದರ ಪ್ರಕಾರ ಗಲಭೆಗೆ ಕಾರಣವೇ ಪ್ರಚೋದನಕಾರಿ ಪೋಸ್ಟ್ ಹಾಗೂ ಗಲಭೆಯನ್ನು ಪ್ರಚೋದಿಸುವ ರೀತಿಯಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಮಾದ್ಯಮಗಳ ವರದಿಯಂತೆ.ವರದಿಯ ಪ್ರತಿ ಕನ್ನಡ ಫ್ಲಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯೂಸಿವ್ ಆಗಿ ಸಿಕ್ಕಿದೆ.

ಘಟನೆಯನ್ನು ಸತ್ಯಶೋಧನಾ ಸಮಿತಿ ಕಂಡುಕೊಂಡ ಪ್ರಕಾರ  .ಮುಸ್ಲಿಂ ಸಮುದಾಯದ ವಿರುದ್ಧ ಕೋಮುದ್ವೇಷ ಬಿತ್ತುವುದೇ ಪೋಸ್ಟ್ ಹಿಂದಿನ ಉದ್ದೇಶವಾಗಿತ್ತು.ಪೋಸ್ಟ್ ಹಿಂದಿರುವ ಸತ್ಯಾಂಶವನ್ನು ಅರಿಯುವ-ವಿಶ್ಲೇಷಿಸುವ ಬದಲು ಟಿಆರ್ ಪಿ ಗೋಸ್ಕರ ಹಿಂಸಾಚಾರವನ್ನು ಉದ್ರೇಕಗೊಳಿಸುವ ಕೆಲಸ ಮಾಡಿದ ಮಾದ್ಯಮಗಳಿಂದ್ಲೇ ಹಿಂಸಾಚಾರ ಭುಗಿಲೇಳ್ತಂತೆ.

ಹಾಗೆಯೇ ಗಲಭೆ ವೇಳೆ ನಡೆದ ಗುಂಪು ಹಿಂಸಾಚಾರದ ಬಗ್ಗೆ ಮಾಹಿತಿ ಕ್ರೋಢೀಕರಿಸಿರುವ ಸಮಿತಿ ಗಲಭೆಯಲ್ಲಿ ಗುಂಪುಗಳ ಪಾತ್ರ ಇದ್ದಿದ್ದು ಸ್ಪಷ್ಟ.,ಆದರೆ ಅದು ಒಂದು ನಾಯಕತ್ವದ ಮುಖೇನ ನಡೀತೆನ್ನುವುದು ಸುಳ್ಳು.ಗಲಭೆಯಲ್ಲಿ ಸತ್ತ ಮೂವರನ್ನು ಕೇಂದ್ರವಾಗಿಟ್ಟುಕೊಂಡು  ಇಡೀ ಘಟನೆಯನ್ನು ಸಾಮಾನ್ಯೀಕರಿಸುವುದು ಸರಿಯಲ್ಲ.ಕಿಡಿಗೇಡಿಗಳ ನಡುವೆ ಅಮಾಯಕರು ಗಾಯಗೊಂಡಿದ್ದಾರೆ.ಅವರ ಹಕ್ಕುಗಳನ್ನು ಕೂಡ ಗೌರವಿಸಬೇಕಾಗುತ್ತೆ ಎಂಬುದಾಗಿ ಸಮಿತಿ ಅಭಿಪ್ರಾಯಿಸಿದೆ.

ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆಯನ್ನು ನಿಯಂತ್ರಿಸುವಲ್ಲಿ ಪೊಲೀಸರ ವೈಫಲ್ಯ ಎದ್ದುಕಾಣುತ್ತದೆ ಎಂದು ಸಮಿತಿ ಅಭಿಪ್ರಾಯಿಸಿದೆ.ಪೇಸ್ಬುಕ್ ಪೋಸ್ಟ್ ಬಗ್ಗೆ ದೂರು ಬಂದಾಗ್ಲೇ ಎಚ್ಚೆತ್ತುಕೊಳ್ಳಬೇಕಿತ್ತು.

ಹಾಗೆ ಮಾಡಿದ್ದರೆ ಮೂಲಮಟ್ಟದಲ್ಲೇ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.ಘಟನೆ ಬಗ್ಗೆ ಮಾಹಿತಿ ಅರಿಯುವಲ್ಲಿ ಗುಪ್ತಚರ ಇಲಾಖೆಯೂ ವಿಫಲವಾಗಿದೆ.ಜನರು ಕುಪಿತರಾಗೊಕ್ಕೆ ಪೊಲೀಸ್ ರ ವೈಫಲ್ಯವೂ ಕಾರಣವಾಗಿದೆ ಎನ್ನುವ ಅಭಿಪ್ರಾಯಕ್ಕೆ  ಸತ್ಯಶೋಧನಾ ಸಮಿತಿ ಬಂದಿದೆ.

ಇನ್ನು ಘಟನೆ ಹಿಂದೆ ಕೋಮುಪ್ರಚೋದನೆ ಕಾರಣವಾಗಿತ್ತಾ..ಹಿಂದುಗಳನ್ನು ಟಾರ್ಗೆಟ್ ಮಾಡಿ ಮುಸ್ಲಿಂರು ಈ ಕೃತ್ಯ ಎಸಗಿದ್ರಾ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.ಸ್ಥಳೀಯರ ಪ್ರಕಾರ ಇದೆಲ್ಲದರ ಹಿಂದೆ ಘಟನೆಯನ್ನು ಬಿಬಿಎಂಪಿ ಚುನಾವಣೆಗೆ ಬಳಸಿಕೊಳ್ಳುವ ದುರುದ್ದೇಶವಿತ್ತೆನ್ನುವುದು ಸ್ಪಷ್ಟವಾಗಿದೆ.

ಘಟನೆ ಮುನ್ನ ವಿಫಲವಾದ ಪೊಲೀಸರು  ನಂತರವೂ ಪರಿಸ್ತಿತಿ ನಿಭಾಯಿಸುವಲ್ಲಿ ವಿಫಲವಾದ್ರು.ತನಿಖೆಯೂ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ.ಮಾದ್ಯಮಗಳು ಹೇಳಿದ್ದು,ಶಾಸಕರು ಹೇಳಿದ್ದನ್ನೇ ಸತ್ಯವೆಂದು ಪರಿಗಣಿಸಿ ಕಿಡಿಗೇಡಿಗಳೊಂದಿಗೆ ಕೆಲ ಅಮಾಯಕರನ್ನು ಜೈಲಿಗಟ್ಟುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ.ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಹಾಳು ಮಾಡಿದ್ದಾರೆಂದು ಸಮಿತಿ ಅಭಿಪ್ರಾಯಿಸಿದೆ.

ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳು ಕೂಡ ಜವಾಬ್ದಾರಿ ಮರೆತು ವರ್ತಿಸಿದವು.ಕೆಲವು ಇಂಗ್ಲೀಷ್ ಪತ್ರಿಕೆಗಳನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ದೃಶ್ಯ ಹಾಗೂ ಮುದ್ರಣ ಮಾದ್ಯಮಗಳು ತಮ್ಮ ಹೊಣೆಗಾರಿಕೆ ಮರೆತು ಟಿಆರ್ ಪಿ ಗೋಸ್ಕರ ಸುದ್ದಿಯನ್ನು ಬಿತ್ತರಿಸುವ ಕೆಲಸ ಮಾಡಿದ್ವು.

ಮಾದ್ಯಮಗಳು ಸಂಯಮ ವಹಿಸಿ ಶಾಂತಿ ಕಾಪಾಡುವಂತೆ ಅಪೀಲ್ ಮಾಡಿದ್ದರೆ ಗಲಭೆ ಹಿಂಸಾಚಾರದ ಸ್ವರೂಪ ಪಡೆಯುತ್ತಿರಲಿಲ್ಲವೇನೋ..ಟಿಆರ್ ಪಿಗೋಸ್ಕರ ಸಾಮಾಜಿಕ ಸ್ವಾಸ್ಥ್ಯ ಹಾಗೂ ಕೋಮು ಸಾಮರಸ್ಯವನ್ನು ಕದಡಿದ ಹೊಣೆಗೇಡಿತನದ ಕೆಲಸವನ್ನು ಮಾದ್ಯಮಗಳು ಮಾಡಿವೆ ಎಂದು ಸತ್ಯಶೋಧನಾ ಸಮಿತಿ ಅಭಿಪ್ರಾಯಿಸಿದೆ.

ಕೆಲ ದಿನಗಳವರೆಗೆ ಸತ್ಯಶೋಧನಾ ಸಮಿತಿ ಘಟನೆಗೆ ಸಂಬಂಧಿಸಿದಂತೆ ಕಾರಣ ಹುಡುಕಿ ಅದನ್ನು ವಿಶ್ಲೇಷಿಸಿದೆ. ತನ್ನ ಅಭಿಪ್ರಾಯ ತಿಳಿಸುವುದರ ಜತಗೆ ಸರ್ಕಾರಕ್ಕೆ 14 ಶಿಫಾರಸ್ಸು,ಪೊಲೀಸ್ ಇಲಾಖೆಗೆ  3 ಶಿಫಾರಸ್ಸು,ಮಾದ್ಯಮ ಹಾಗೂ ಸಮುದಾಯದ ಮುಖ್ಯಸ್ಥರಿಗೂ ಒಂದಷ್ಟು ಸಲಹೆ-ಶಿಫಾರಸ್ಸುಗಳನ್ನು ನೀಡಿದೆ.ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲು ಸಮಿತಿ ನಿರ್ಧರಿಸಿದೆ.ಈ ವರದಿ ಮೇಲೆ ಸರ್ಕಾರ ಯಾವ್ ಕ್ರಮ ಕೈಗೊಳ್ಳಬೇಕೆನ್ನುವ ನಿರ್ದಾರಕ್ಕೆ ಬರಲಿದೆ ಎನ್ನೋದನ್ನು ಕಾದು ನೋಡಬೇಕಿದೆ.  

Spread the love
Leave A Reply

Your email address will not be published.

Flash News