IAS ಕಪಿಲ್ ಮೋಹನ್ ಬೆನ್ ಬಿಡದ ಅಕ್ರಮ ಗಳಿಕೆ ಆರೋಪ: ಲೋಕಾಯುಕ್ತದಲ್ಲಿ ಕ್ಲೀನ್ ಚಿಟ್ ಪಡೆದ ಕಪಿಲ್ ಮೋಹನ್ ವಿರುದ್ದ ಎಸಿಬಿಗೆ ದೂರು

0

ಬೆಂಗಳೂರು: ಲೋಕಾಯುಕ್ತದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡ  ಹಿರಿಯ ಐಎಎಸ್  ಅಧಿಕಾರಿ ಕಪಿಲ್ ಮೋಹನ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ.ಕಪಿಲ್ ಮೋಹನ್ ಅವರ ವಿರುದ್ಧ ಇರುವ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆ ಆಗಬೇಕೆನ್ನುವುದು ದೂರಿನ ಸಾರಾಂಶ..

ಭ್ರಷ್ಟಾಚಾರಕ್ಕೆ ಪೂರಕ ಸಾಕ್ಷ್ಯಾಧಾರಗಳಿದ್ದ ಹೊರತಾಗ್ಯೂ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದ್ದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಸಿಬಿ ಬಾಗಿಲು ತಟ್ಟಿದ್ದಾರೆ.2015 ರಲ್ಲಿ ಕಪಿಲ್ ಮೋಹನ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ-ಅಕ್ರಮ ಆಸ್ತಿ ಸಂಪಾದನೆ ಆರೋಪಗಳು ಸಾಬೀತಾಗಿ ವಿಚಾರಣೆ ಲೋಕಾಯುಕ್ತದಲ್ಲಿ ನಡೆಯುತ್ತಿತ್ತು.ಆದ್ರೆ ಅಂತಿಮವಾಗಿ ಲೋಕಾಯುಕ್ತ ಕಪಿಲ್ ಮೋಹನ್ ಗೆ ಕ್ಲೀನ್ ಚಿಟ್ ಕೊಟ್ಟಿದೆ.ಇದನ್ನು ಪ್ರಶ್ನಿಸಿ ಇದೀಗ ದಿನೇಶ್ ಕಲ್ಲಹಳ್ಳಿ ಎಸಿಬಿಯಲ್ಲಿ ಮರು ತನಿಖೆಗೆ ದೂರು ದಾಖಲಿಸಿದ್ದಾರೆ.

ಈ ಹಿಂದೆ ಅಂದ್ರೆ 2015 ರಲ್ಲಿ ಯುವಜನಸೇವೆ-ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಪಿಲ್ ಮೋಹನ್  ವಿರುದ್ಧ ಅಂದು ನಡೆದ ತನಿಖೆ ವೇಳೆ ಎಚ್ ಎಸ್ ಆರ್ ಬಡಾವಣೆಯಲ್ಲಿನ ಮನೆ,ಯಶವಂತಪುರದ ಅಪಾರ್ಟ್ಮೆಂಟ್ ಮತ್ತು ಕೆಲಸ ಮಾಡುತ್ತಿದ್ದ ಕ್ರೀಡಾ ಇಲಾಖೆ ಕಚೇರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ತಡಕಾಡಿದ್ರು.ಆಗ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆ,ಚಿನ್ನಾಭರಣ,ಸ್ಥಿರಾಸ್ತಿ-ಚರಾಸ್ಥಿ ಪತ್ತೆಯಾಗಿತ್ತು. ಪರಿಶೀಲನೆ ಪೂರ್ಣಗೊಂಡ ಬಳಿಕ ಲೋಕಾಯುಕ್ತ ಎಸ್ಪಿ ಅವರೇ ಕಪಿಲ್ ಮೋಹನ್ ಕುಟುಂಬ ಅಕ್ರಮ ಹಾಗು ಅಸಮತೋಲನ ಆಸ್ತಿ ಹೊಂದಿರುವುದನ್ನು ದೃಢೀಕರಿಸಿದ್ದರು.ಅದು ಆ ವೇಳೆಯಲ್ಲಿ ಭಾರೀ ಸುದ್ದಿಯನ್ನೇ ಮಾಡಿತ್ತು.

ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಕೇವಲ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಷ್ಟೇ ಅಲ್ಲ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪತ್ನಿ ರಿಜಾ ಸಕ್ಸೆನಾ ಮೂಲಕವೂ ಕೋಟ್ಯಾಂತರ ಮೊತ್ತದ ಹಣಕಾಸು ವ್ಯವಹಾರ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು.ಆದರೆ ಲೋಕಾಯುಕ್ತ ದಾಳಿ ವೇಳೆ ಅಕ್ರಮವನ್ನೆಲ್ಲಾ ಮುಚ್ಚಾಕಿಕೊಳ್ಳಲು ಪತಿ ಹಾಗೂ ಪತ್ನಿ ಸಾಕಷ್ಟು ಸುಳ್ಳನ್ನು ಹೇಳಿದ್ದರು.ಕಪಿಲ್ ಮೋಹನ್ ಸರ್ಕಾರದ ಗಮನಕ್ಕೆ ಬಾರದೆ ಹಣವನ್ನು ಸಾಲವಾಗಿ ಪಡೆದಿದ್ದಕ್ಕೆ ದಾಖಲೆಗಳೇ ಇರಲಿಲ್ಲ.ಹಾಗೆಯೇ ಅವರ ಪತ್ನಿ ಬೆಂಗಳೂರಿನಲ್ಲಿ ವಿವಿಧ ವ್ಯವಹಾರಗಳಿಗೆ ಕೋಟ್ಯಾಂತರ ಹಣ ಸಾಲ ಮಾಡಿರುವುದಾಗಿ ಕಥೆ ಕಟ್ಟಿದ ಹೇಳಿಕೆಯನ್ನು ಲೋಕಾಯುಕ್ತ ದಾಖಲಿಸಿಕೊಂಡಿತ್ತು.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ

ಆರಂಭದಲ್ಲಿ ತುಂಬಾ ಗಂಭೀರವಾಗಿ ತನಿಖೆಯನ್ನು ಕೈಗೆತ್ತಿಕೊಂಡ ಲೋಕಾಯುಕ್ತ ಅಧಿಕಾರಿಗಳು ತದನಂತರದಲ್ಲಿ ತನಿಖೆಯ ಗತಿಯನ್ನೇ ಬದಲಿಸಿಬಿಟ್ಟರು.ಕಪಿಲ್ ಮೋಹನ್ ಹಾಗೂ ಅವರ ಪತ್ನಿ ಎಸಗಿರುವ ಅಕ್ರಮಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಕಲೆ ಹಾಕಲು ಪ್ರಜ್ಞಾಪೂರ್ವಕವಾಗಿಯೇ ಎಡವಿದರು ಎನ್ನೋ ಆರೋಪ ದಿನೇಶ್ ಕಲ್ಲಹಳ್ಳಿ ಅವರದು.ಅಕ್ರಮ ಆಸ್ತಿಯ ಲೆಕ್ಕ ಬಹಿರಂಗಗೊಳಿಸುವ ವೇಳೆಯಲ್ಲಿ ಬೇಕಂತಲೇ ಕಡಿಮೆ ಮೌಲ್ಯ ತೋರಿಸಿ ಕಪಿಲ್ ಮೋಹನ್ ಬೆನ್ನಿಗೆ ನಿಲ್ಲುವ ಕೃತ್ಯ ಎಸಗಿದ್ದರು.ಶೇಕಡಾ 110 ರಷ್ಟು ಅಕ್ರಮ ಆಸ್ತಿ ಗಳಿಕೆ ಕಂಡುಬಂದ್ರೂ ಲೋಕಾಯುಕ್ತ ಪೊಲೀಸರು ಅಂತಿಮವಾಗಿ ತೋರಿಸಿದ್ದು ಶೇಕಡಾ 8 ರಷ್ಟು ಅಕ್ರಮ ಆಸ್ತಿ ಗಳಿಕೆ ಎನ್ನುವ ಲೆಕ್ಕವನ್ನು.

ಅಷ್ಟೇ ಅಲ್ಲ ಕಪಿಲ್ ಮೋಹನ್ ವಿರುದ್ಧದ ಗಂಭೀರ ಆರೋಪಗಳನ್ನು KRISHNANAD AGNIHOTRI VS THE STATE OF MADHYA PRADESH( ಅಕ್ರಮ ಆಸ್ತಿ ಶೇಕಡಾ 10ಕ್ಕಿಂತ ಕಡಿಮೆ ಇದ್ದರೆ ಪ್ರಕರಣ ಊರ್ಜಿತವಾಗುವುದಿಲ್ಲ ಎಂಬ ಉಲ್ಲೇಖ )  ಪ್ರಕರಣವನ್ನು ಹಿನ್ನಲೆಯಾಗಿ ತೆಗೆದುಕೊಂಡು ಕಪಿಲ್ ಮೋಹನ್ ಅವರಿಗೆ ಕ್ಲೀನ್ ಚಿಟ್ ಕೊಟ್ಟು ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿ ಕ್ಲೋಸ್ ಮಾಡಿದ್ದಾರೆನ್ನುವುದು ದಿನೇಶ್ ಕಲ್ಲಹಳ್ಳಿ ಅವರ ಆರೋಪ.

ಶೇಕಡಾ 110 ಪ್ರಮಾಣ ಎಂದು ಲೋಕಾಯುಕ್ತವೇ ಹೇಳಿದ್ದ  ಅಕ್ರಮ ಆಸ್ತಿ ಶೇಕಡಾ 8 ರಷ್ಟು ಹೇಗಾಯ್ತು ಎನ್ನುವುದೇ ದೊಡ್ಡ ಪ್ರಶ್ನೆ. ಲೋಕಾಯುಕ್ತ  ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡುವ ಹಿನ್ನಲೆಯಲ್ಲಿ ಪ್ರಭಾವ-ವಶೀಲಿಬಾಜಿ-ಶಿಫಾರಸ್ಸು-ಐಎಎಸ್ ಲಾಭಿ-ಸರ್ಕಾರದ ಒತ್ತಡಗಳು ಕೆಲಸ ಮಾಡಿರಬಹುದಾದ ಸಾಧ್ಯತೆಗಳಿವೆ ಎಂದಿರುವ ದಿನೇಶ್ ಕಲ್ಲಹಳ್ಳಿ ಕಾನೂನಾತ್ಮಕ ಹೋರಾಟ ಕೈ ಬಿಡೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿ ACB ಗೆ ದೂರು ದಾಖಲಿಸಿರುವುದಾಗಿ ಹೇಳಿರುವ ಅವರು,ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.ಲೋಕಾಯುಕ್ತ ಬಿ ರಿಪೋರ್ಟ್ ಹಾಕಿದ್ದ ಪ್ರಕರಣವನ್ನು ಎಸಿಬಿಗೆ ದೂರು ಕೊಡುವ ಮೂಲಕ ದಿನೇಶ್ ಕಲ್ಲಹಳ್ಳಿ  ಐಎಎಸ್ ಕಪಿಲ್ ಮೋಹನ್ ಎದೆಯಲ್ಲಿ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ.

ಆದ್ರೆ ಪ್ರಶ್ನೆ ಇರೋದು ಎಸಿಬಿ ಈ ಪ್ರಕರಣವನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತೆ ಎನ್ನೋದು. ಲೋಕಾಯುಕ್ತದಲ್ಲಿ ಆದಂತದ್ದೇ ಇಲ್ಲೂ ನಡೆದೋದ್ರೆ ತಪ್ಪಿತಸ್ಥರು ಮತ್ತೆ ತಪ್ಪಿಸಿಕೊಳ್ಳುವ ಆತಂಕವಿದೆ.ಅಲ್ಲದೇ ಐಎಎಸ್ ಲಾಭಿ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರೆಷರ್ ಕ್ರಿಯೇಟ್ ಆದ್ರೆ ಪ್ರಕರಣಕ್ಕೆ ತಿಪ್ಪೆ ಸಾರಿಸಲ್ಪಡಬಹುದೇನೋ..?ದೂರುದಾರ ದಿನೇಶ್ ಕಲ್ಲಹಳ್ಳಿ ಆತಂಕವೂ ಅದೇ..  

Spread the love
Leave A Reply

Your email address will not be published.

Flash News