CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆ

ತೀರ್ಥೋದ್ಭವ ಮುಂದಿಟ್ಟುಕೊಂಡು ಇದೆಂಥಾ ಕಚ್ಚಾಟ- ತಲಕಾವೇರಿ ಪೂಜೆ ಹಕ್ಕಿಗೆ ಅಮ್ಮ ಕೊಡವ VS ಬ್ರಾಹ್ಮಣರ ಸಂಘರ್ಷ

ಮಡಿಕೇರಿ:ಮಂಜಿನ ನಗರಿ ಮಡಿಕೇರಿಗೆ ಇಂತದ್ದೊಂದು ಹಗರಣದ ಅಗತ್ಯ ನಿಜಕ್ಕೂ ಇರಲಿಲ್ಲ ಅನ್ಸುತ್ತೆ.ಮಡಿಕೇರಿಯ ಘನತೆ ಗೆ ಕೀರ್ತಿ ಕಳಶದಂತಿದ್ದ ತಲಕಾವೇರಿ ಕ್ಷೇತ್ರ ಬೇಡದ ಕಾರಣಗಳಿಗೆ ಸುದ್ದಿಯಾಗ್ತಿದೆ.ಅಕ್ಟೋಬರ್ 17 ರಂದು ಐತಿಹಾಸಿಕ ಕಾವೇರಿ ತೀರ್ಥೋದ್ಭವವಿದೆ.ದುರಂತ ಎನ್ನುವಂತೆ  ಭಗಂಡೇಶ್ವರ ಕ್ಷೇತ್ರವೂ ಪೂರ್ಣ ಜಲಾವೃತ್ತವಾಗಿದೆ.ಇಂಥದ್ದರ ನಡುವೆಯೇ ತಲಕಾವೇರಿಯ ಪೂಜಾ ಕೈಂಕರ್ಯದ ಹಕ್ಕು ಇದೀಗ ವಿವಾದದ ಕೋಲಾಹಲವನ್ನೇ ಸೃಷ್ಟಿಸಿದೆ.

ಬಹುಷಃ ಮಡಿಕೇರಿ ಇತಿಹಾಸದ ಬಗ್ಗೆ ಮಾಹಿತಿ ಇರೋರಿಗೆ ಇಂತದ್ದೊಂದು ಧಾರ್ಮಿಕ ವಿವಾದ ಈ ಶತಮಾನದಲ್ಲೇ ಸೃಷ್ಟಿಯಾಗಿರಲಿಲ್ಲಕ್ಕಿಲ್ಲವೇನೋ ಎನ್ನುವ ಮಾಹಿತಿ ಇರ್ಬೋದು..ನಾಡಿನ ಜೀವನದಿ ಕಾವೇರಿಯ ಉದ್ಭವಸ್ಥಳ ಕೊಡಗಿನ ಕುಲದೈವ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯ ಕೈಗೊಳ್ಳುವ ವಿಚಾರ ಈಗ ಎರಡು ಪ್ರಬಲ    ಅಮ್ಮ ಕೊಡವ ಸಮುದಾಯ ಹಾಗೂ ಬ್ರಾಹ್ಮಣ ಸಮುದಾಯ ಕಚ್ಚಾಟ ಶುರುವಾಗಿದೆ.

ತಲಕಾವೇರಿಯಲ್ಲಿ  ತಲೆಮಾರಿನಿಂದಲೂ ಪೂಜಾ ಕಾರ್ಯವನ್ನು ನಡೆಸಿಕೊಂಡು ಬರುತಿದ್ದ  ನಾರಾಯಣ ಆಚಾರ್‌ ಅವರು ಭೂ ಸಮಾಧಿಯಾದ ನಂತರ  ಅವರಿಗೆ ಗಂಡು ಮಕ್ಕಳು ಇಲ್ಲದಿದ್ದುದು ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ಶಾರದ ಮತ್ತು ನಮಿತ   ಕ್ರಿಶ್ಚಿಯನ್‌ ಮತ್ತು ಮುಸ್ಲಿಂ   ಯುವಕರನ್ನು ಮದುವೆ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಈ  ಎರಡು ಕಾರಣಗಳಿಂದ  ಅಮ್ಮ ಕೊಡವ ಸಮುದಾಯ ಹಕ್ಕು ಮಂಡಿಸಿದೆ ಎಂಬುದು ನಿರ್ವಿವಾದ. ನಾರಾಯಣ ಆಚಾರ್‌ ಅವರದ್ದು ಬಹುಶಃ ಸಹಜ ಸಾವಾಗಿದ್ದರೆ   ಪೂಜೆಯ ಹಕ್ಕಿನ ವಿಷಯ ಚರ್ಚೆಗೆ ಬರುತ್ತಿರಲಿಲ್ಲ.

ಅಮ್ಮ ಕೊಡವ ಸಮಾಜದ ಮುಖಂಡರ ವಾದವೇನು:ತಲಕಾವೇರಿಯಲ್ಲಿ ಮೊದಲಿನಿಂದಲೂ ಬ್ರಾಹ್ಮಣ ಅರ್ಚಕರೇ ಪೂಜೆ ಮಾಡಿಕೊಂಡು ಬರುತಿದ್ದಾರೆ. ಆದರೆ  ಸುಮಾರು 300 ವರ್ಷಗಳಿಗೂ ಮೊದಲು  ರಾಜರ ಕಾಲದಲ್ಲಿ  ಅಮ್ಮ ಕೊಡವ ಸಮುದಾಯದವರು ಪೂಜೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.”ನಮ್ಮ ಸಮುದಾಯ ಮೂರು ಶತಮಾನಗಳಿಗೂ ಮೊದಲು  ಪೂಜೆ ಮಾಡಿಕೊಂಡು ಬಂದಿದ್ದಕ್ಕೆ ದಾಖಲೆ ಇದೆ. ಕೊಡಗಿನ 18  ಮೂಲನಿವಾಸಿಗಳಲ್ಲಿ  ನಮ್ಮ ಸಮುದಾಯ ಮಾತ್ರ ಸಸ್ಯಾಹಾರಿ  ಆಗಿದ್ದು  ಜನಿವಾರ ಧರಿಸುವ ಪದ್ದತಿ , ವೇದ ಅಧ್ಯಯನ ಇದೆ. ಈಗಲೂ ಕೋತೂರು ಮತ್ತು  ಅರವತ್ತೊಕ್ಕಲಿನ ಎರಡು ದೇವಾಲಯಗಳಲ್ಲಿ ಅಮ್ಮ ಕೊಡವ ಸಮುದಾಯದವರೇ ಅರ್ಚಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.ಅಲ್ಲದೆ ಮುಂದಿನ ಅಷ್ಟ ಮಂಗಲ ಪ್ರಶ್ನೆಯಲ್ಲಿ  ತಲಕಾವೇರಿಯ ಕ್ಷೇತ್ರದ  ಪೂಜೆಯ ಕುರಿತ ಹಕ್ಕು ತೀರ್ಮಾನಗೊಳ್ಳಲಿದೆ ಎನ್ನುತ್ತಾರೆ ಅಮ್ಮ ಕೊಡವ ಸಮಾಜದ  ಗೌರವ ಅದ್ಯಕ್ಷ ಬಾನಂಡ ಪ್ರಥ್ವಿ.

ಅರೆ ಭಾಷೆ ಗೌಡ ಸಮುದಾಯ ಏನಂತಾರೆ;;ಆದರೆ, ಅರೆ ಭಾಷೆ ಗೌಡ ಸಮುದಾಯದವರ ವಾದವೇ ಬೇರೆ.ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದ ತಕ್ಕರಾಗಿರುವ  ಈ  ಸಮುದಾಯ  ಪೂಜೆ ಮಾಡುವ ಹಕ್ಕನ್ನು  ಬ್ರಾಹ್ಮಣ ಸಮುದಾಯಕ್ಕೆ ನೀಡಬೇಕೆಂದು  ಒತ್ತಾಯಿಸಿದೆ.  ಕ್ಷೇತ್ರದಲ್ಲಿ  ಪೂಜಾ ಕೈಂಕರ್ಯಗಳನ್ನು  ವೈದಿಕ ಶಿಕ್ಷಣ ಪರಿಣಿತ ಪುರೋಹಿತ ಕುಟುಂಬಗಳೇ ನಡೆಸಬೇಕೆಂಬುದು ಮೊದಲಿನಿಂದ ನಡೆದುಕೊಂಡು ಬಂದ ಪದ್ದತಿಯಾಗಿದೆ ಎನ್ನೋದು ಗೌಡ ಸಮಾಜ ಒಕ್ಕೂಟದ ಅದ್ಯಕ್ಷ ಸೂರ್ತಲೆ ಸೋಮಣ್ಣ ವಾದ.

ಇದರ ಹಿನ್ನಲೆ ಗಮನಿಸಿದ್ರೆ ತಲಕಾವೇರಿ  ಕ್ಷೇತ್ರದಲ್ಲಿ  ಮೊದಲಿನಿಂದಲೂ ಮಂಡೀರ , ಮಣವಟ್ಟೀರ ಮತ್ತು ಪಟ್ಟ ಮಾಡ ಎಂಬ ಕೊಡವ ಕುಟುಂಬಗಳೇ ತಕ್ಕರಾಗಿದ್ದು  1785 ರಲ್ಲಿ  ಕೊಡಗಿಗೆ ದಂಡೆತ್ತಿ ಬಂದ ಟಿಪ್ಪು ಸುಲ್ತಾನನು  ಭಾಗಮಂಡಲ ಸಮೀಪದ ದೇವಟ್‌ ಪರಂಬು ಎಂಬ ಜಾಗದಲ್ಲಿ  ಕೊಡವರನ್ನು ಸಂಧಾನಕ್ಕೆ ಕರೆಯುತ್ತಾನೆ. ನಿರಾಯುಧರಾಗಿ ಸಂಧಾನಕ್ಕೆ ಬಂದ ಸಾವಿರಾರು ಕೊಡವ ಗಂಡಸರು , ಹೆಂಗಸರು ಮತ್ತು ಮಕ್ಕಳನ್ನು  ಟಿಪ್ಪುವಿನ ಸೈನಿಕರು  ಕೊಲ್ಲುತ್ತಾರೆ. ಆಗ ತಕ್ಕರಾಗಿದ್ದ ಮೂರು ಮನೆಗಳವರೂ ಕೊಲ್ಲಲ್ಪಟ್ಟಾಗ  ಕೊಡಗಿನ ರಾಜನು  ಭಾಗಮಂಡಲ ಸಮೀಪದ ಪೆರಾಜೆ ಎಂಬ ಊರಿನಿಂದ  ಗೌಡ ಸಮುದಾಯದವರನ್ನು ಕರೆತಂದು  ಪೂಜೆ ನಿಂತು ಹೋಗಿದ್ದ ಕ್ಷೇತ್ರಕ್ಕೆ ತಕ್ಕರನ್ನಾಗಿ ನೇಮಿಸುತ್ತಾನೆ.  ನಮ್ಮ ದೇಶದ ಅನೇಕ ದೇವಾಲಯಗಳಲ್ಲಿ  ದಲಿತ , ಮಹಿಳೆ ಮತ್ತು ವಿಧವೆಯರೂ ಅರ್ಚಕ ವೃತ್ತಿ ಮಾಡುತಿದ್ದಾರೆ.

ಮಂಗಳೂರಿನ ಕುದ್ರೋಳಿ ದೇವಾಲಯದಲ್ಲಿ  ವಿಧವೆಯರು ಅರ್ಚಕರಾಗಿರುವುದನ್ನು  ನೋಡಬಹುದಾಗಿದೆ.  ಹಿಂದೂ ಸಮಾಜವು ಇಷ್ಟೊಂದು ಸುಧಾರಣೆ ಅಗಿರುವಾಗ ಅಮ್ಮ ಕೊಡವ ಸಮುದಾಯಕ್ಕೆ ಪೂಜೆಯ ಹಕ್ಕನ್ನು ನೀಡುವುದು ಹೇಗೆ ತಪ್ಪಾಗುತ್ತದೆ ಅಥವಾ ಅಪಚಾರ ಅಗುತ್ತದೆ ಎಂಬುದನ್ನು  ಅರ್ಚಕ ಸಮುದಾಯವೇ ಹೇಳಬೇಕು.ಮಡಿಕೆರಿಯ ಭವ್ಯ ಇತಿಹಾಸಕ್ಕೆ ಸಾಕ್ಷಿಪ್ರಜ್ಞೆಯಂತಿರುವ ಈ ವಿಷಯವನ್ನ ಗೊಂದಲದ ಗೂಡಾಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ.ಬದಲಿಗೆ ತೀರ್ಥೋದ್ಭವ  ಬೆನ್ನಿಗಿರುವ ಸಂದರ್ಭದಲ್ಲಿ ವಿವಾದ ಸುಖಾಂತ್ಯಗೊಳ್ಳಬೇಕಿದೆ.ಮಡಿಕೆರಿ ಜನರ ಆಶಯ ಕೂಡ ಅದೇ..

Spread the love

Related Articles

Leave a Reply

Your email address will not be published.

Back to top button
Flash News