“ಶಿರಾ”ವ್ಯೂಹ: ಜೆಡಿಎಸ್ ಗೆ ಮರ್ಮಾಘಾತ..! ಆಪರೇಷನ್ ಹಸ್ತಕ್ಕೆ “ದಳ”ಪತಿಗಳು ಬಲಿ?!-ಎಮ್ಮೆಲ್ಲೆ,ಎಮ್ಮೆಲ್ಸಿಗೆ ಗಾಳ..!?

0

ತುಮಕೂರು:ಶಿರಾ ಚುನಾವಣಾ ಅಖಾಡದಲ್ಲಿ ಹೀಗೇನಾದ್ರೂ ಆಗಿದ್ರೆ ಅದು ಕೋಲಾಹಲವನ್ನೇ ಸೃಷ್ಟಿಸೋದರಲ್ಲಿ ಅನುಮಾನವೇ ಇಲ್ಲ.ಪಕ್ಷದ ವರಿಷ್ಠರು ನೆಚ್ಚಿಕೊಂಡಿರುವ ಈ ಪ್ರಮುಖ ದಳಪತಿಗಳೇನಾದ್ರೂ ಕೈ ಕೊಟ್ಟಿದ್ದೇ ಆಗಿದ್ದಲ್ಲಿ ಜೆಡಿಎಸ್ ಯುದ್ದಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದಂತೆಯೇ ಎನ್ನುವ ರೀತಿಯಲ್ಲಿ ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗ್ತಿದೆ.

ಶಿರಾ ಉಪಚುನಾವಣೆ ಅಂಗಳದಲ್ಲಿ ಯಾರೂ ಊಹಿಸಲಿಕ್ಕೇನೆ ಸಾಧ್ಯವಾಗದ ಸ್ಪೋಟಕ-ಅಘಾತಕಾರಿ ಸುದ್ದಿಯೊಂದು ಹೊಗೆಯಾಡುತ್ತಿದೆ.ಅದೇನಾದ್ರೂ ಅಂದುಕೊಂಡಂತೆ ಆಗಿದ್ದೇ ಅದಲ್ಲಿ,ಜೆಡಿಎಸ್ ಪಾಲಿಗೆ ಇದಕ್ಕಿಂತ ದೊಡ್ಡ ಮರ್ಮಾಘಾತ ಮತ್ತೊಂದು ಬೇಕಿಲ್ಲ..ನಿರೀಕ್ಷೆಯಂತಾದ್ರೆ  ಕೈ ಪಾಲಿಗೆ ಗೆಲುವು ನೀರು ಕುಡಿದಷ್ಟು ಸಲೀಸು ಎನ್ನುತ್ತೆ ಮತ್ತೊಂದು ವಿಶ್ಲೇಷಣೆ.

ಇಡೀ ಕರ್ನಾಟಕ ರಾಜಕಾರಣದ ಸಧ್ಯದ  ಸೆಂಟರ್ ಆಫ್ ಅಟ್ರ್ಯಾಕ್ಷನ್ ಶಿರಾ ಉಪಚುನಾವಣೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್  ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.ಶತಗತಾಯ “ಶಿರಾ”ಗದ್ದುಗೆ ಅಲಂಕರಿಸ್ಬೇಕೆನ್ನುವ ಛಲದಲ್ಲಿದೆ ಜೆಡಿಎಸ್. ಕಾಲವಾದ ಜೆಡಿಎಸ್ ನ  ಸತ್ಯನಾರಾಯಣ ನಿಧನವನ್ನೇ ಎನ್ ಕ್ಯಾಶ್ ಮಾಡಿಕೊಳ್ಳಬೇಕು..ಶಿರಾ ನೆಲದಲ್ಲಿ ಅದು ವರ್ಕೌಟ್ ಕೂಡ ಆಗ್ಬೋದು ಎನ್ನುವ ನಿರೀಕ್ಷೆಯಲ್ಲಿದ್ದ  ಜೆಡಿಎಸ್ ನ  ಜಂಘಾಬಲವನ್ನೇ ಉಡುಗಿಸುವಂಥ ಸ್ಪೋಟಕ ಸುದ್ದಿ ತುಮಕೂರು ಜಿಲ್ಲಾ ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದೆ. ಜೆಡಿಎಸ್ ನ  ಒಬ್ಬ MLC,ಒಬ್ಬ  MLA ಹಾಗೂ ಮಾಜಿ ಎಮ್ಮೆಲ್ಲೆ ಜೆಡಿಎಸ್ ತೊರೆದು ಕೈಸೇರಲಿದ್ದಾರೆನನ್ನೋದೇ ಆ ಶಾಕಿಂಗ್ ನ್ಯೂಸ್..ಈ ಸುದ್ದಿ ಪಸರ್ ಆಗ್ತಿರುವಂಗೆ ದಳಪತಿಗಳು ಕನಲಿಹೋಗಿದ್ದಾರೆ.ಅಪ್ಪ-ಮಕ್ಕಳ ಬ್ಲಡ್ ಪ್ರೆಷರ್ ಹಾಗೆ ಬಿಪಿಯೂ ಅನ್ ಕಂಟ್ರೊಲ್ ಆಗಿದೆಯಂತೆ.

ಗುಬ್ಬಿ ಕ್ಷೇತ್ರದಿಂದ ಗೆದ್ದು  ಮಾಜಿ ಸಚಿವರು ಆಗಿ ಕೆಲಸ ಮಾಡಿದ್ದ  ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಶಿರಾ ಚುನಾವಣೆ ಹೊಸ್ತಿಲ ಲ್ಲೇ ಕೈ ಸೇರಲಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ. ಕಳೆದ ಬಾರಿ ನಡೆದ  ಸಾರ್ವತ್ರಿಕ ಚುನಾವಣೆಯಲ್ಲಿ ಗುಬ್ಬಿ  ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಆರ್. ಶ್ರೀನಿವಾಸ್ ಆಯ್ಕೆಯಾಗಿದ್ದರು. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ವಿಧಾನ ಪರಿಷತ್ತಿನ ಚುನಾವಣೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿಯೇ ಬೆಮೆಲ್ ಕಾಂತರಾಜು ಆಯ್ಕೆಯಾಗಿದ್ದರು. ಸಿ.ಬಿ .ಸುರೇಶ್ ಬಾಬು ಜೆಡಿಎಸ್ ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ  ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸೋಲು  ಅನುಭವಿಸಿದ್ರು.ಈ ಮೂವರೇ  ಕಾಂಗ್ರೆಸ್ ಸೇರುವ ಹೊಸ್ತಿಲಲ್ಲಿದ್ದಾರೆನ್ನಲಾಗ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಶಿರಾ ಚುನಾವಣೆ ಪ್ರತಿಷ್ಟೆಯ ಕಣವಾಗಿರುವುದರಿಂದ ಈ ಮೂವರನ್ನು  ಕೆಲವು ಷರತ್ತುಗಳ ಸಮೇತ ಕಾಂಗ್ರೆಸ್ಗೆ  ಸೇರಿಸಲು ನಿರ್ಧರಿಸಿದ್ದಾರೆನ್ನಲಾಗ್ತಿದೆ.

ಕೈ ಸೇರ್ಪಡೆಗೆ ಇವರು ಹಾಕಿರುವ ಕಂಡೀಷನ್ಸ್ ಏನು..? ಗುಬ್ಬಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಎಸ್. ಆರ್.ಶ್ರೀನಿವಾಸ್ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರಂತೆ. ಹಾಗೆಯೇ ವಿಧಾನ ಪರಿಷತ್ತಿನ ಸದಸ್ಯ ಬೆಮೆಲ್ ಕಾಂತರಾಜು ಗೆ ತುರುವೇಕೆರೆಯಿಂದ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಲಾಗಿದೆಯಂತೆ. ಇನ್ನುಳಿದಂತೆ ಸಿ.ಬಿ .ಸುರೇಶ್ ಬಾಬು ಅವರೂ ಚಿಕ್ಕನಾಯನಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರಂತೆ.ಈ ಮೂವರ ಬೇಡಿಕೆಗೂ ಕೈ ನಾಯಕರು ತಲೆಯಲ್ಲಾಡಿಸಿದ್ದಾರಂತೆ.

ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಭೆಯೊಂದರಲ್ಲಿಯೇ ಮುಂದಿನ ಚುನಾವಣೆಗೆ ನನಗೆ ಟಿಕೆಟ್ ಬೇಡ, ನೀವು ಯಾರಿಗಾದರೂ ನೀಡಿ ಎಂದು ಸೂಚ್ಯವಾಗಿ ಹೇಳಿದ್ದಾರಂತೆ. ಬೆಮೆಲ್ ಕಾಂತರಾಜು ಕೂಡ ಈಗಾಗಲೇ ತುರುವೇಕೆರೆ ಕ್ಷೇತ್ರದಲ್ಲಿ ಪ್ರಚಾರವನ್ನೇ ಆರಂಭಿಸಿದ್ದಾರೆ. ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಕಾಂತರಾಜು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಬಹಳ ದಿನಗಳೇ ಕಳೆದಿವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಸುರೇಶ್ ಬಾಬು ಭಾಗವಹಿಸುತ್ತಿಲ್ಲ.ಇದು ದಳ ತೊರೆಯುವ ಗುಮಾನಿಯನ್ನು ದೃಢೀಕರಿಸುತ್ತಿದೆ.

ಇನ್ನು ಸುರೇಶ್ ಬಾಬು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರುಗಳು ಗಳಸ್ಯ, ಕಂಠಸ್ಯ ಅನ್ನುವ ಹಾಗಿದ್ದರು. ಆದರೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದಾಗ ಕುಮಾರಸ್ವಾಮಿ ಸುರೇಶ್ ಬಾಬು ಅವರನ್ನ ದೂರವೇ ಇಟ್ಟಿದ್ದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಮಗಾರಿಗಳ ಬಗ್ಗೆಯೂ ನಿರ್ಲಕ್ಷ್ಯ ತೋರಿದ್ದರಂತೆ. ಒಬ್ಬ ಅಧಿಕಾರಿಯನ್ನೂ ಹಾಕಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಆದ್ದರಿಂದ ಬೇಸರಗೊಂಡಿರುವ ಸುರೇಶ್ ಬಾಬು ಪಕ್ಷ ಬಿಡಲು ನಿರ್ಧರಿಸಿದ್ದಾರೆನ್ನುವ ಮಾತಿದೆ.ಈ ಇಬ್ಬರು ಒಕ್ಕಲಿಗ ಶಾಸಕರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಮಾಜಿ ಶಾಸಕರ ನಡೆಯ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಹೀಗಿರುವಾಗಲೇ, ಶಿರಾ ಉಪಚುನಾವಣೆಯೂ ಬಂದಿದೆ. ಈ ಉಪಚುನಾವಣೆಯಲ್ಲಿ ಈ ಮೂವರ ನಡೆ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಸ್ವತಃ ಜೆಡಿಎಸ್ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ತುಮಕೂರು ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು  ವೇದಿಕೆ ಸಿದ್ದತೆಯಾಗಿತ್ತು. ಆಗ ಎಸ್.ಆರ್.ಶ್ರೀನಿವಾಸ್ ಮಧ್ಯಪ್ರವೇಶಿಸಿ, ಕಾಂಗ್ರೆಸ್ ಬೆಂಬಲಕ್ಕೆ ನಿಂತು ಕಾಂಗ್ರೆಸ್ ಮೇಯರ್ ಆಯ್ಕೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸುರೇಶ್ ಬಾಬು ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುವುದರಿಂದ ಶಿರಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳೂ ನಿರ್ಣಾಯ ಕವೂ ಆಗಿವೆ.  ಈಗಾಗಲೇ ಈ ಮೂವರು ಜೆಡಿಎಸ್ ಹಾಗೂ ಕಾಂಗ್ರೆಸ್ ದೋಣಿಯಲ್ಲಿ ಕಾಲಿಟ್ಟಿದ್ದಾರೆ. ಈಗಿರುವಾಗಲೇ ಶಿರಾ ಚುನಾವಣೆ ಎದುರಾಗಿದೆ. ಆದ್ದರಿಂದ ಈ ಮೂವರ ನಡೆ ಕುತೂಹಲ ಮೂಡಿಸಿದೆ.

ಆದರೆ ಈ ನಡೆಯಿಂದ ಕಂಗಾಲಾಗಿರುವ ದೇವೇಗೌಡ-ಕುಮಾರಸ್ವಾಮಿ ಜೋಡಿ ಹಾಲಿ-ಮಾಜಿಗಳ ಬೇಸರಕ್ಕೆ ಮದ್ದು ಕಂಡುಹಿಡಿಯಲು ನಿರ್ದರಿಸಿದ್ದಾರೆನ್ನಲಾಗಿದೆ.ಈ ಮೂವರನ್ನೇ ನಂಬಿಕೊಂಡಿರುವ ಪಕ್ಷಕ್ಕೆ ಇದು ದೊಡ್ಡಪೆಟ್ಟು ನೀಡಬಹುದೆನ್ನುವ ಹೆದರಿಕೆಯು ಮುಖಂಡರಿಗಿದೆ.ಆದರೆ ಅವರ ಮನವೊಲಿಕೆ ಯಶಸ್ವಿಯಾಗುತ್ತಾ..ಕಾಲವೇ ಇದಕ್ಕೆ ಉತ್ತರಿಸಬೇಕಿದೆ ಅಷ್ಟೆ.

Spread the love
Leave A Reply

Your email address will not be published.

Flash News