BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ರಾಜಕೀಯರಾಜ್ಯ-ರಾಜಧಾನಿ

ಇಂದು “ಪವರ್”ಗಾದ ಸ್ಥಿತಿಯೇ ನಾಳೆ ಬೇರೆ ಚಾನೆಲ್ಸ್ ಗೆ ಬರೊಲ್ವಾ..?? ಒಗ್ಗಟ್ಟಿನ ಮಂತ್ರ ಜಪಿಸೋದನ್ನು ಬಿಟ್ಟು..ವಿಕೃತ ಮನರಂಜನೆ ಪಡೆದ ಚಾನೆಲ್ಸ್ ..!!  

ಬೆಂಗಳೂರು:ಭ್ರಷ್ಟಾಚಾರ-ಅಕ್ರಮವನ್ನು ಹೊಡೆದೂಡಿಸುತ್ತೇವೆ..ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಬೊಬ್ಬೆ ಹೊಡೆದುಕೊಳ್ಳುವ  ಕನ್ನಡದ ನ್ಯೂಸ್ ಚಾನೆಲ್ಸ್  ಹಾಗೂ ದಿನಪತ್ರಿಕೆಗಳ ಪಾಲಿಗೆ  ನಿಜಕ್ಕೂ ಕರಾಳ ದಿನ.ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂದರ್ಭ..ತಾವು ಎಡವುತ್ತಿರೋದು ಎಲ್ಲಿ..ಈ ದುಡುಕು ಎಂಥಾದ್ದೊಂದು ಕೆಟ್ಟ ಸಂದೇಶವನ್ನು ರವಾನಿಸ್ತಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಇದು.

ಉತ್ತಮ ಸಮಾಜಕ್ಕಾಗಿ…, ನೇರ ದಿಟ್ಟ ನಿರಂತರ.. ಭರವಸೆಯ ಬೆಳಕು…, ಇದು ಯಾರ ಆಸ್ತಿಯೂ ಅಲ್ಲ…., ಜಾಲ ನಮ್ಮದು ಬಲ ನಿಮ್ಮದು….ಸುದ್ದಿಯಲ್ಲಿ ಸದಾ ಮುಂದೆ.. ಹೀಗೆ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ,ತಪ್ಪು, ಒಪ್ಪುಗಳನ್ನು ನೇರಾನೇರ ಬಿಂಬಿಸಿ,ಮುಕ್ತ-ನಿರ್ಭೀತ ಹಾಗೂ  ಸದೃಢ ಸಮಾಜವನ್ನು ನಿರ್ಮಿಸುವ ಟ್ಯಾಗ್‌ಲೈನ್‌ ಹಾಕ್ಕೊಂಡಿರುವ ನ್ಯೂಸ್ ಚಾನೆಲ್ಸ್ ಹಾಗೂ ಪೇಪರ್ಸ್ ಗಳಿಗೆ  ನಿಜಕ್ಕೂ ನೈತಿಕತೆ ಇದೆಯೆ..?.ಇನ್ನೊಬ್ಬರ ತಪ್ಪನ್ನು ಪ್ರಶ್ನಿಸುವ ಸೈದ್ಧಾಂತಿಕತೆ ಇದೆಯೇ..?

ಹೀಗೆ ಪ್ರಶ್ನಿಸಲು ಕಾರಣವೂ ಇದೆ. ನಮ್ಮ ವೃತ್ತಿಬಾಂಧವ ನ್ಯೂಸ್ ಚಾನೆಲ್ ಒಂದರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಸೌಜನ್ಯಕ್ಕೂ ಪ್ರಶ್ನಿಸುವ ಎದೆಗಾರಿಕೆ ಹಾಗೂ ವೃತ್ತಿಪರತೆಯನ್ನೇ ಯಾರೊಬ್ರು ತೋರಲಿಲ್ಲ..ಆದ್ರೆ,..,ಆದ್ರೆ ಒಂದು ಜವಾಬ್ದಾರಿಯುತ ಮಾದ್ಯಮವಾಗಿ ಕನ್ನಡ ಫ್ಲಾಶ್ ನ್ಯೂಸ್ ಇದನ್ನು ಪ್ರಶ್ನಿಸುತ್ತದೆ.

ನಮ್ಮಲ್ಲೇ ಮೊದಲು…ನಾವೇ ಮೊದಲು…ನಮ್ಮದೇ ಮೊದಲು..ಹೀಗೆಲ್ಲಾ ಬ್ರೇಕಿಂಗ್ ಹಾಕ್ಕೊಂಡ್ ಸ್ಪರ್ಧೆಗಿಳಿಯುವ ಮಾದ್ಯಮ ಗಳು  ಬಹುಷಃ ಇಂದು ಪವರ್ ಟಿವಿಗಾದ ಪರಿಸ್ಥಿತಿ ನಮಗೂ ನಾಳೆ ಎದುರಾಗ್ಬೋದೆನ್ನೋ ಸತ್ಯವನ್ನೇ ಮರೆತಂತಿವೆ.ಪಕ್ಕದ ಮನೆ ಬೆಂಕಿಗೆ ಆಹುತಿಯಾದ್ರೆ ಅವರ ಬೆನ್ನಿಗೆ ನಿಲ್ಲದೇ ಅದೇ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಸ್ವಾರ್ಥಕ್ಕೆ ಪವರ್ ಟಿವಿಯ ಇಂದಿನ ಸ್ಥಿತಿ ಹಾಗೂ ಇತರೆ ಮಾದ್ಯಮಗಳ ಸಂವೇದನಾರಹಿತ ಮನಸ್ತಿತಿ ದುರಂತ ಉದಾಹರಣೆಯಾಗುತ್ತೇನೋ..

ಆಳುವ ಸರ್ಕಾರದ ಮುಖ್ಯಮಂತ್ರಿ ಪುತ್ರನ ವಿರುದ್ಧ ಭ್ರಷ್ಟಾಚಾರ, ಅಕ್ರಮದಂತಹ ಗಂಭೀರ ಆರೋಪ ಕೇಳಿಬಂದರೂ ಬಹುತೇಕ ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಅದನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ! ಬದಲಿಗೆ ಆ ಸುದ್ದಿಯನ್ನು ಬಿತ್ತರಿಸಿದ  ಪವರ್ ಟಿವಿ ಆಡಳಿತ ಮಂಡಳಿ ಹಾಗೂ ಬಿ ವೈ ವಿಜಯೇಂದ್ರರ ವೈಯಕ್ತಿಕ ಸಂಘರ್ಷ ಇರಬಹುದೆನ್ನುವ  ಕಾರಣಕ್ಕೆ ಅದರ ಮೇಲೆ ಬೆಳಕು ಚೆಲ್ಲುವ ಕೆಲಸವನ್ನೇ ಮಾಡಲಿಲ್ಲ.ವೈಯಕ್ತಿಕ ಸಂಘರ್ಷ ಎನ್ನುವ ಸಂಗತಿಯನ್ನು ಬದಿಗಿಟ್ಟು ನೋಡಿದರೂ ಕೋಟ್ಯಂತರ ಅವ್ಯವಹಾರ, ಅಕ್ರಮ ನಡೆದಿರುವುದು ಕಡ್ಮೆ ಆರೋಪವೇ..ಆದ್ರೆ ಮಾಧ್ಯಮಗಳಿಗೆ ಅದು ಗಂಭೀರ ಆರೋಪ ಎನಿಸದೇ ಹೋದದ್ದು ಪತ್ರಿಕೋದ್ಯಮದ ದುರಂತ.

ಈ ಘಟನೆಗೆ ಸಂಬಂಧಿಸಿದಂತೆ, ಕೆಲವರು ಪವರ್ ಟಿವಿ ಆಡಳಿತ ಮಂಡಳಿಯ ಪರ ನಿಂತರೆ, ಇನ್ನು ಕೆಲವರು ವಿಜಯೇಂದ್ರ ಅವರ ಪರ ಬ್ಯಾಟಿಂಗ್‌ಗೆ ಮುಂದಾದ್ರು.(ಮಾದ್ಯಮಗಳು ತಟಸ್ಥ ನಿಲುವು ತಳೆದದ್ದೇ ತಪ್ಪು).ವಿಜಯೇಂದ್ರ ವಿರುದ್ಧ ಕೊಟ್ಟ ದೂರನ್ನು ಪೊಲೀಸರು ತಮ್ಮ ಕುರ್ಚಿಯ ಕೆಳಗೆ ಹಾಕಿ ಕೂತರೆ. ಪವರ್ ಟಿವಿ ವಿರುದ್ಧ ಕೊಟ್ಟ ದೂರಿಗೆ 24  ಗಂಟೆಯೊಳಗೆ ಎಫ್‌ಐಆರ್ ದಾಖಲಾಗುತ್ತದೆ. ಅದಾದ ಕೆಲವೇ ಗಂಟೆಗಳಲ್ಲಿ ಪವರ್ ಟಿವಿ ಎಂ.ಡಿ. ರಾಕೇಶ್ ಶೆಟ್ಟಿ ಹಾಗೂ ಪ್ರಧಾನ ಸಂಪಾದಕ ರೆಹಮಾನ್ ಅವರನ್ನು ಕೆ.ಪಿ.ಅಗ್ರಹಾರ ಪೊಲೀಸರು ಕರೆದುಕೊಂಡು ಹೋಗುತ್ತಾರೆ ಎಂದರೆ ಪೊಲೀಸ್ ವ್ಯವಸ್ಥೆಯನ್ನು ಆಳುವ ಸರ್ಕಾರಗಳು ಹೇಗೆ ಮಿಸ್ಯೂಸ್ ಮಾಡಿಕೊಳ್ತಿವೆ ಎನ್ನೋದು ಗೊತ್ತಾಗುತ್ತೆ.

ಮುಖ್ಯಮಂತ್ರಿ ಪುತ್ರ ಕೊಡಿಸಿದರೆನ್ನಲಾದ ದೂರನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದೇ ಅವರ ವಿರುದ್ಧ ದೂರಿನ ಹಿನ್ನಲೆಯಲ್ಲಿ 24  ಗಂಟೆಯೊಳಗೆ ಎಫ್‌ಐಅರ್ ಲಾಡ್ಜ್ ಮಾಡಬೇಕೆನ್ನುವ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುವ ಮಟ್ಟಕ್ಕೆ ಆಳುವ ಸರ್ಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದೆ ಎಂದರೆ ಇದಕ್ಕಿಂತ ದೌರ್ಭಾಗ್ಯಪೂರ್ಣ ಸಂಗತಿ ಮತ್ತೊಂದಿದೆಯೇ?

ಇದೆಲ್ಲಾ ಒತ್ತಟ್ಟಿಗಿರಲಿ, ನಿನ್ನೆ ಒಂದು ಮಾಧ್ಯಮ ಸಂಸ್ಥೆಯ ಮುಖ್ಯಸ್ಥರನ್ನು ಯಾವುದೇ ಮುನ್ಸೂಚನೆ ನೀಡದೆ ಅಥವಾ ಕಾನೂನುರೀತಿಯ ನಿಯಮಗಳನ್ನು ಪಾಲಿಸದೆ ಪೊಲೀಸರು ಸ್ಟೇಷನ್ನಿಗೆ ಕರೆದುಕೊಂಡು ಹೋಗಿರುವುದನ್ನು ಯಾವುದೇ ಟಿವಿ ಚಾನೆಲ್ ಆಗಲಿ ಅಥವಾ ನ್ಯೂಸ್ ಪೇಪರ್ ಆಗಲಿ ಪ್ರತಿಭಟಿಸುವ ಕೆಲಸವನ್ನು ಮಾಡಲೇ ಇಲ್ಲ. ಇದಕ್ಕೂ ನಮಗೂ ಸಂಬಂಧವೇ ಇಲ್ಲವೆನ್ನುವಂತೆ ದಿನವಿಡೀ ಕರ್ನಾಟಕ ಬಂದ್ ಅನ್ನು ಪ್ರಸಾರ ಮಾಡಿದವು. ಪವರ್ ಟಿವಿ ಒಂದೇ ಇದು ಪತ್ರಿಕೋದ್ಯಮದ ಮೇಲೆ ಆದ ದಾಳಿ ಎಂದು ಬೊಬ್ಬೆ ಹೊಡೆದುಕೊಂಡಿತು.ಆದ್ರೆ ಮಾಧ್ಯಮಗಳೆಲ್ಲಾ ಒಗ್ಗೂಡಿ, ಪವರ್ ಟಿವಿಯ ಮೇಲಾದ ದೌರ್ಜನ್ಯವನ್ನು ಸಂಘಟಿತವಾಗಿ ಖಂಡಿಸುವ ಕೆಲಸ ಮಾಡಿದ್ದರೆ ಅದರ ಪರಿಣಾಮವೇ ಬೇರೆ ಆಗುತ್ತಿತ್ತೇನೋ? ಆದರೆ ಯಾವ ಮಾಧ್ಯಮಕ್ಕೂ ಪವರ್ ಟಿವಿಯ ಮೇಲಾದ ದೌರ್ಜನ್ಯ ಗಂಭೀರ ಎನಿಸಲೇ ಇಲ್ಲ! ಇಂದು ಆ ಸಂಸ್ಥೆಗಾದ ಪರಿಸ್ಥಿತಿಯೇ ಮುಂದೊಂದು ದಿನ ತಮ್ಮ ಸಂಸ್ಥೆಗಳ ಮೇಲೂ ಆಗಬಹುದೆನ್ನುವ ಸಣ್ಣ ಕಾಮನ್‌ಸೆನ್ಸೂ ಇಲ್ಲದಂತೆ ಮಾಧ್ಯಮಗಳು ಸಂವೇದನಾರಹಿತವಾದದ್ದು ದೌರ್ಭಾಗ್ಯಪೂರ್ಣ.

ಬೇರೆಯವರ ಒಡಕಿನ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ, ಮಾಧ್ಯಮಗಳಲ್ಲೇ ಈವೊತ್ತು ಒಗ್ಗಟ್ಟು ಇಲ್ಲದಿರುವುದಕ್ಕೆ ಪವರ್ ಟಿವಿಯ ಏಕಾಂಗಿ ಹೋರಾಟ ನಿದರ್ಶನವಾಗುತ್ತದೆ. ಯಾವುದೋ ಹಿತಾಸಕ್ತಿಗಳಿಗೆ ಈಡಾಗಿ ಸರ್ಕಾರಗಳನ್ನು ಟೀಕಿಸದಷ್ಟು ಮಾಧ್ಯಮಗಳು ನಿಶ್ಯಕ್ತವಾಗುತ್ತವೆ, ಸಂವೇದನಾರಹಿತಗೊಳ್ಳುತ್ತವೆ ಎಂದರೆ ಸರ್ಕಾರಗಳ ವಿರುದ್ಧ ವಾಚ್ ಡಾಗ್‌ಗಳಾಗಿ ಮಾಧ್ಯಮಗಳು ಕೆಲಸ ಮಾಡಬೇಕೆನ್ನುವ ಪತ್ರಿಕೋದ್ಯಮದ ಸಿದ್ಧಾಂತಕ್ಕೆ ಬೆಲೆ ಬಂದಂತಾಗುತ್ತದೆಯೇ?

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಎಂದು ಹೇಳಿಕೊಳ್ಳುತ್ತೇವೆ.ಆದರೆ   ಜಗತ್ತು ಡಿಜಿಟಲೀಕರಣವಾದಂತೆ ಮಾದ್ಯಮಗಳು ಕೂಡ ಸುದ್ದಿಯ ಒಳಹೊಕ್ಕು ಸ್ಪೋಟಕ ವರದಿಗಳನ್ನು ಸುದ್ದಿ ಮಾಡಲು ಸ್ಪರ್ಧೆಗೆ ಬಿದ್ದವು.ನಿರೀಕ್ಷೆಯಂತೆ ಜಿದ್ದಾಜಿದ್ದಿನ ಸುದ್ದಿಯ ನಿರ್ವಾತ ಪರಿಸ್ತಿತಿ ಸೃಷ್ಟಿಯಾಯ್ತು.ನಾ ಮುಂದು ತಾ ಮುಂದು ಎನ್ನುವಂತೆ ಸ್ಪೋಟಕ ಶೀರ್ಷಿಕೆ ಅಡಿಯಲ್ಲಿ ಸುದ್ದಿಗಳು ಬಿತ್ತರಿಸಲು ಶುರುವಾಯ್ತು.ಸುದ್ದಿಯಿಂದ್ಲೇ ರಾಜ್ಯದ ಸರ್ಕಾರಗಳೇ ಬಿದ್ದುಹೋದ ನಿದರ್ಶನಗಳಿವೆ. ಸಾಮಾಜಿಕ ಜಾಲ ಬಳಸಿ ವಂಶಪಾರಂಪರ್ಯದ ರಾಜಕಾರಣಗಳು ಸೈಡ್ ಲೈನ್ ಆದ್ವು.ಹಾಗೆಯೇ ಮುಖ್ಯಮಂತ್ರಿ ಮಾನದಂಡದ ಅರ್ಹತೆಯೇ ಎರಡು ಬಾರಿ ರಾಷ್ಟ್ತದ ಪ್ರಧಾನಿ ಪಟ್ಟಕ್ಕೇರುವಂತಾಯ್ತು.

ಇದೆಲ್ಲಾ ಮಾದ್ಯಮದ ಪ್ರಭಾವವಲ್ಲವೇ.? ಒಪ್ಪುತಪ್ಪುಗಳನ್ನು ತಿದ್ದುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾದ್ಯಮಬೇಕು.ಆದರೆ ಅಕ್ರಮ-ಹಗರಣಗಳನ್ನು ಕೆದಕಿ ಕೇಳಿದರೆ ಮಾದ್ಯಮ ವಿರುದ್ಧ ಆಕ್ರೋಶವಾ..? ಅಧಿಕಾರ-ಪ್ರಭಾವ-ಶಕ್ತಿ ಬಳಿಸಿ ಜಿದ್ದಿಗೆ ಬಿದ್ದು,ಸುದ್ದಿ ಬಿತ್ತರಿಸಿದ ಕರ್ಮಕ್ಕೆ ಬುಡಕ್ಕೆ ಬಿಸಿನೀರು ಬಿಟ್ಟುಬಿಡುವುದಾ..?ಆನೆ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲಾ..?ಅದರರ್ಥ ಆನೆಯನ್ನು ನೇರವಾಗಿ ಕೊಲ್ಲಲಾಗದು.ಬದಲಾಗಿ ಎಲ್ಲರೂ ತಲೆ ಮೇಲೆ ಕಲ್ಲು ಎತ್ತಾಕಿ ಸತ್ಯದ ಸಮಾಧಿ ಮಾಡಿದಂತೆ ಆನೆಯನ್ನೇ ಕೊಂದು ಹೂತಾಕುವುದಾ..?

ಅಧಿಕಾರ-ಸಾರ್ವಭೌಮತ್ವ ಎಂದೂ ಶಾಶ್ವತವಲ್ಲ.ಶತಮಾನಗಳ ಹಿನ್ನಲೆ ಕೆದಕಿ ನೋಡಿದ್ರೆ ಸಾಮ್ರಾಟರೆಲ್ಲರೂ ಮಣ್ಣು ಮುಕ್ಕಿದರು.ವಂಶಪಾರಂಪರ್ಯ ಗಳೆಲ್ಲಾ ನಶಿಸಿ ಹೋದವು.ಇದೆಲ್ಲಾ ಯಾವ ಲೆಕ್.ದಶಕಗಳ ಕಾಲದ ರಾಜಕೀಯದ ಹಿನ್ನಲೆಯಲ್ಲಿ ಜಯಲಲಿತಾ,ಕರುಣಾನಿಧಿ,ಜಗನ್ ಮೋಹನ್ ರೆಡ್ಡಿ, ಶಶಿಕಲಾ..ಖುದ್ದು ನಮ್ಮ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸಂದರ್ಭ ಪರಿಸ್ತಿತಿಗೆ ಅನುಗುಣವಾಗಿ ಅಧಿಕಾರ ಕಳೆದುಕೊಂಡು ಅಂಧಕಾರದಲ್ಲಿ ಬಿದ್ದವರೇ..ನಂತರ ತಮ್ಮ ತಪ್ಪು ತಿದ್ದಿಕೊಂಡು ಅಧಿಕಾರದ ಗದ್ದುಗೆ ಏರಿದವರೇ.ಆದರೆ ಬದುಕಿನಲ್ಲಿ ಏರಿಳಿತಗಳಿರಲಿ..ಆದ್ರೆ ಸರ್ವಾಧಿಕಾರ ಧೋರಣೆ ಎಂದಿಗೂ ಒಳ್ಳೇಯದಲ್ಲ.ಅದು ಅಹಂಕಾರದ ಬುಡವನ್ನೇ ಸುಟ್ಟುಬಿಡುತ್ತೆ.ಅಹಂನ್ನು ದಹಿಸಿ ಬಿಡುತ್ತೆ.ಇಂದು ಒಂದು ಖಾಸಗಿ ಚಾನೆಲ್ ಗಾದ ಸ್ಥಿತಿ.ಮುಂದೆ ಎಲ್ಲರಿಗೂ ಇದೇ ಪರಿಸ್ತಿತಿ ಎದುರಾಗಲಿದೆ ದುಸ್ಥಿತಿ.

ಸರ್ಕಾರಿ ಅಧಿಕಾರಿಯಾಗಲಿ,ಕಾರ್ಪೊರೇಟ್ ಕಂಪೆನಿಗಳಾಗಲಿ,ಕೊನೆಗೆ ಪಕ್ಷಾತೀತ  ರಾಜಕಾರಣಿಗಳೇ ಆಗಲಿ,ಕೆಲವು ಸೈದ್ಧಾಂತಿಕ ವಿಚಾರಗಳಲ್ಲಿ ಒಮ್ಮತ-ಒಗ್ಗಟ್ಟು ಪ್ರದರ್ಶಿಸುತ್ತಾರೆ.ಇವತ್ತು ಪವರ್ ಟಿವಿಗಾದ ಪರಿಸ್ಥಿತಿ ನಾಳೆ ನಮಗೂ ಆಗಬಹುದು, ಇವೊತ್ತು ಪವರ್ ಟಿವಿಯ ಬೆನ್ನಿಗೆ ನಿಂತರೆ ನಾಳೆ ನಮ್ಮ ಸಂಕಷ್ಟಕ್ಕೂ ಉಳಿದ ಮಾಧ್ಯಮಗಳು ನಿಲ್ಲಲು ಸಾಧ್ಯ ಎನ್ನುವ ಸತ್ಯವನ್ನು ಯಾಕೆ ಮಾಧ್ಯಮಗಳು ಅರಿತುಕೊಳ್ಳುತ್ತಿಲ್ಲವೋ ಗೊತ್ತಾಗುತ್ತಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News