BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ದೇಶ-ವಿದೇಶಮಾಹಿತಿ/ತಂತ್ರಜ್ಞಾನರಾಜಕೀಯ

ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ  “ಮಾದ್ಯಮ” ಕ್ಕೆ ಆಶಾವಾದದ ಬೆಳ್ಳಿಗೆರೆ  “ತನುಶ್ರೀ”

ಸಾಮೂಹಿಕ ಭೀಬತ್ಸರೀತಿಯ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ದಲಿತ ಯುವತಿ
ಸಾಮೂಹಿಕ ಭೀಬತ್ಸರೀತಿಯ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ದಲಿತ ಯುವತಿ

ಫೀಲ್ಡ್ ಗೆ ಎಂಟ್ರಿಯಾಗಿ ವರ್ಷಗಳಾಗಿರೊಲ್ಲ..ಕೈಯಲ್ಲಿ ಲೋಗೋ ಸಿಕ್ರೆ ತಲೆಯೇ ನಿಲ್ಲದೆ ಮೆರೆಯುವ ಜರ್ನಲಿಸ್ಟ್ ಗಳಿಂದ ತುಂಬೋಗಿರುವ ಇವತ್ತಿನ ಮಾದ್ಯಮದ ಬಗ್ಗೆ ಜನ ನಂಬಿಕೆಯನ್ನೇ ಕಳ್ಕೊಂಡಿದ್ದಾರೆ(ಸರ್ವೆಗಳು ಕೂಡ ದೃಶ್ಯ ಮಾದ್ಯಮಕ್ಕಿಂತ ಮುದ್ರಣ ಮಾದ್ಯಮವೇ ಇವತ್ತು ವಿಶ್ವಾಸನಾರ್ಹ ಎಂದ್ಹೇಳಿರುವುದು ಕೂಡ ಇದಕ್ಕೇನೆ).

ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.ಒಂದು ಸುದ್ದಿ ಹಿಂದೆ ಕುರಿಗಳಂತೆ ಬಿದ್ದು ಕೆಲಸ ಮಾಡುವ ವರದಿಗಾರರನ್ನು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಬೇಕಾದ್ರೆ ಪ್ರಶ್ನಿಸಿ ನೋಡಿ,ಅವರಲ್ಲಿ ಬಹುತೆಕರಿಗೆ ವಿಷಯದ ಸೂಕ್ಷ್ಮತೆಯೂ ಗೊತ್ತಿರೊಲ್ಲ-ಆಳಅಗಲದ ಅರಿವೂ ಇರೊಲ್ಲ..ಇಂಥವ್ರನ್ನು ಇಟ್ಕೊಂಡು ಕೆಲಸ ಮಾಡುವ ಸುದ್ದಿ ಮಾದ್ಯಮಗಳನ್ನು ಆ ದೇವ್ರೇ ಕಾಪಾಡ್ಬೇಕು..

ಅಪ್ರಬುದ್ಧ-ಅರೆಬೆಂದ-ಪ್ರಶ್ನೆ ಮಾಡುವ ನೈತಿಕತೆಯನ್ನೇ ಕಳಕೊಂಡ,ಎಥಿಕ್ಸನ್ನು ಅಡವಿಟ್ಟುಕೊಂಡು ಕೆಲಸ ಮಾಡುವ ಬಹುಪಾಲು ವರದಿಗಾರರು,ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ  ನಡೆದ  ಅತ್ಯಾಚಾರ-ಕೊಲೆಯ ವರದಿ ಮಾಡಿದ ಆ ವರದಿಗಾರ್ತಿಯ ಬದ್ಧತೆ-ವೃತ್ತಿಪರತೆ-ಎದೆಗಾರಿಕೆ ನೋಡಿದಿದ್ರೆ, ನೈಜ ಪತ್ರಿಕೋದ್ಯಮ ಏನು..? ವರದಿಗಾರರು ಕೆಲಸ ಮಾಡ್ಬೇಕಾದ ರೀತಿ ಹೇಗೆ.? ಇಸಂಗಳನ್ನು ಬದಿಗಿಟ್ಟು ವೃತ್ತಿಗೆ ನ್ಯಾಯ ಒದಗಿಸುವ ರೀತಿ ಹೇಗಿರಬೇಕೆನ್ನುವ ಸತ್ಯ ದರ್ಶನವಾಗ್ತಿತ್ತು(ಆದ್ರೆ ಟ್ರ್ಯಾಜಿಡಿ ಏನ್ ಗೊತ್ತಾ,ಶೇಕಡಾ 75 ರಷ್ಟು ಪತ್ರಕರ್ತರು,ಅದರಲ್ಲೂ ಶೋಕಿಗಾಗಿ ಜರ್ನಲಿಸಂ ಮಾಡುವ ಬಹುತೇಕ ಹೊಸ ತಲೆಮಾರಿನ ಪತ್ರಕರ್ತರಿಗೆ ಈ ಘಟನೆಯ ಮಾಹಿತಿಯೂ ಇರಲಿಕ್ಕಿಲ್ಲವೇನೋ.?)..ವ್ಯವಸ್ಥೆಯನ್ನು ಪ್ರಶ್ನಿಸುವುದನ್ನೇ ಮರೆತು ವೃತ್ತಿಗೆ ದ್ರೋಹ ಮಾಡುತ್ತಿರುವ ಬಹುಪಾಲು ವರದಿಗಾರರಿಗೆ ಆ ವರದಿಗಾರ್ತಿಯ ಎದೆಗಾರಿಕೆ-ಧೈರ್ಯ-ಸಾಹಸ-ಬದ್ಧತೆ-ವೃತ್ತಿಪರತೆ ಚಾಟಿ ಏಟು ನೀಡುವಂತಿತ್ತು.

ಯುವತಿಯನ್ನು ಪೈಶಾಚಿಕವಾಗಿ ಅತ್ಯಾಚಾರ ಎಸಗಿದ ಕೀಚಕರು
                            ಯುವತಿಯನ್ನು ಪೈಶಾಚಿಕವಾಗಿ ಅತ್ಯಾಚಾರ ಎಸಗಿದ ಕೀಚಕರು

ಪತ್ರಿಕೋದ್ಯಮ ಕಾಲಕ್ಕೆ ತಕ್ಕಂತೆ ಬದಲಾಗಿದೆ ನಿಜ. ಟಿ.ವಿ ಪತ್ರಿಕೋದ್ಯಮ, ಡಿಜಿಟಲ್ ಜರ್ನಲಿಸಂ ದಿನಕಳೆದಂತೆ ಹೆಮ್ಮರವಾಗಿ ಬೆಳೆಯುತ್ತಿದೆ. ನಾಯಿ ಕೊಡೆಗಳಂತೆ ಸಾಕಷ್ಟು ಸುದ್ದಿವಾಹಿನಿಗಳು ತಲೆ ಎತ್ತುತ್ತಿವೆ. ನಿಷ್ಪಕ್ಷಪಾತ ಸುದ್ದಿಗಿಂತಲೂ ಪೇಯಿಡ್ ನ್ಯೂಸ್ ಗಳೇ ಹೆಚ್ಚಾಗಿ ತಾಂಡವವಾಡುತ್ತಿವೆ.ಅನ್ಯಾಯವನ್ನು ಪೋಷಿಸಿ  ಸತ್ಯವನ್ನು ಸಮಾಧಿ ಮಾಡುವ ಮಾತಿನ ಮಹಲುಗಳೇ ಹೆಚ್ಚಾಗ್ತಿವೆ.ಪತ್ರಕರ್ತರಲ್ಲಿ ನಿಷ್ಠೆ ಕಡ್ಮೆಯಾಗುತ್ತಿದೆ.ವೃತ್ತಿಧರ್ಮದ ಪಾಲನೆಗಿಂತ ಕಡಿಮೆ ಅವಧಿಯಲ್ಲೇ ಹಣ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ.ಇಂತದ್ದೊಂದು ಸಂಕಷ್ಟದ ಹಾದಿಯಲ್ಲಿ ತೆವಳುತ್ತಿರುವ ಪತ್ರಿಕೋದ್ಯಮದ ಮುಂದಿನ ಭವಿಷ್ಯ ಏನಾಗುತ್ತೋ ಎನ್ನೋ ಚಿಂತೆ ಕಾಡ ಹತ್ತಿದೆ.

ಸಮಾಜದಲ್ಲಿ ಸಾಕಷ್ಟು ಅಕ್ರಮ ಅನ್ಯಾಯ ಸಂಭವಿಸುತ್ತಿದ್ರೂ, ಅದ್ಯಾಕೋ  ಸುದ್ದಿವಾಹಿನಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ..ಸೋ ಕಾಲ್ಡ್   ಎನ್ನುವ  ರಾಷ್ಟ್ರೀಯ ಸುದ್ದಿವಾಹಿನಿಗಳಂತೂ ಆಳುವ ಪಕ್ಷಗಳ ಅಡಿಯಾಳಾಗಿ ಕೆಲಸ ಮಾಡುತ್ತಿರೋದು ದುರಂತದ  ಪರಮಾವಧಿ.ಇಂಥಾ ಅನಾರೋಗ್ಯಕರ ವಾತಾವರಣದ ನಡುವೆಯೇ ಪತ್ರಿಕೋದ್ಯಮ ಅಂದ್ರೆ ಏನು..? ಪತ್ರಕರ್ತರ ಜವಾಬ್ದಾರಿ ಹೇಗಿರು ಬೇಕು..ಅದರಲ್ಲೂ ಮಹಿಳಾ ವರದಿಗಾರ್ತಿ ಅಂದ್ರೆ ಹೀಗಿರಬೇಕು ಅನ್ನೋದನ್ನ ತನುಶ್ರೀ ಪಾಂಡೆ ಎಂಬ ದಿಟ್ಟ ವರದಿಗಾರ್ತಿ ತಿಳಿಸಿಕೊಟ್ಟಿದ್ದಾರೆ.

ಅಷ್ಟಕ್ಕೂ ಯಾರು ಈ ತನುಶ್ರಿ..? ಈಕೆ ಮಾಡಿದ ಮಹಾನ್ ಕಾರ್ಯವಾದ್ರೂ ಏನು ಅನ್ನೋದನ್ನ ನೋಡೋದಾದ್ರೆ, ಈಕೆಯ ಪೂರ್ಣ ಹೆಸರು ತನುಶ್ರೀ ಪಾಂಡೆ. ಇಂಡಿಯಾ ಟುಡೆ (ಆಜ್ ತಕ್) ಚಾನಲ್ ವರದಿಗಾರ್ತಿ. ಹತ್ರಾಸ್ ನಲ್ಲಿ ಭೀಕರವಾಗಿ ಅತ್ಯಾಚಾರ-ಕೊಲೆಗೆ ಈಡಾದ ಮನೀಷಾ ವಾಲ್ಮೀಕಿಯ ಮೃತದೇಹವನ್ನು ಪೊಲೀಸರು ಸುಟ್ಟು ಹಾಕಿದ  ವರದಿಯನ್ನ ಜಗತ್ ಜಾಹೀರು ಮಾಡಿದ ಧೈರ್ಯವಂತೆ…

ಆಜ್ ತಕ್ ಚಾನೆಲ್ ನ ದಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ
ಆಜ್ ತಕ್ ಚಾನೆಲ್ ನ ದಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ

ಬಹುಶಃ ತನುಶ್ರೀ ಈ ವರದಿ ಮಾಡದೇ ಇದ್ದಿದ್ದರೆ, ಉತ್ತರಪ್ರದೇಶವೆಂಬ ಗೂಂಡಾರಾಜ್ಯದಲ್ಲಿ ಪ್ರತಿನಿತ್ಯ ಜರುಗುವ ಅತ್ಯಾಚಾರ ಪ್ರಕರಣಗಳ ಹಾಗೇ ಇದೂ ಕೂಡ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ತನುಶ್ರೀ ಹಾಗಾಗಲು ಬಿಡಲಿಲ್ಲ. ಹಲ್ಲುಕಚ್ಚಿ ನಿಂತು ನಿಜವಾದ ಜರ್ನಲಿಸಂ ಏನೆಂದು ತೋರಿಸಿದರು. ಆದಿತ್ಯನಾಥನ ಸರ್ಕಾರದ ಅಸಲಿ ಮುಖವನ್ನು ಬಟಾಬಯಲು ಮಾಡಿದರು.

ಇತರೆ ಚಾಲನ್ ಗಳು ಡ್ರಗ್ ಕೇಸಿನಲ್ಲಿ ನಾಳೆ ಯಾವ ನಟ-ನಟಿಯನ್ನು ಸಿಲುಕಿಸುವುದು ಎಂದು ಕನಸು ಕಾಣುತ್ತ ರಾತ್ರಿ ಬೆಚ್ಚಗೆ ಮಲಗಿದ್ದಾಗ ತನುಶ್ರೀ ಎದ್ದುನಿಂತಿದ್ದರು. ಸರಿಯಾಗಿ ರಾತ್ರಿ ಹನ್ನೆರಡೂವರೆಗೆ ತನುಶ್ರೀ ಮನೀಷಾ ವಾಲ್ಮೀಕಿ ಪ್ರಕರಣದ ಬೆನ್ನು ಬಿದ್ದಿದ್ದರು. ಮನೀಷಾ ವಾಲ್ಮೀಕಿ ಮೃತದೇಹವನ್ನು ಹತ್ರಾಸ್ ಸಮೀಪದ ಆಕೆಯ ಹುಟ್ಟೂರಿಗೆ ತರಲಾಯಿತು. ಇಲ್ಲಿ ಏನೋ ನಡೆಯಬಾರದ್ದು ನಡೆಯಲಿದೆ ಎಂದು ತನುಶ್ರೀಗೆ ಬಲವಾಗಿ ಅನಿಸಿರಬೇಕು. ಅಥವಾ ಆಕೆಯ ಮಾಹಿತಿದಾರರು (ಪೊಲೀಸ್ ಮತ್ತು ಗ್ರಾಮಸ್ಥರ ನಡುವೆ) ಕೊಟ್ಟಿರಬಹುದಾದ ಟಿಪ್ಸ್ ಆಕೆಯನ್ನು ಜಾಗೃತಿಗೊಳಿಸಿರಬೇಕು.

ಪೊಲೀಸರು ಆಂಬುಲೆನ್ಸ್ ನಲ್ಲಿ ಶವವನ್ನು ತಂದಾಗ ಸಹಜವಾಗಿಯೇ ಕುಟುಂಬದವರು ಶವವನ್ನು ತಮಗೊಪ್ಪಿಸಬಹುದು ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಶವವನ್ನು ಒಪ್ಪಿಸುವುದಿರಲಿ, ಆಕೆಯ ಮುಖ ನೋಡಲೂ ಯಾರಿಗೂ ಅವಕಾಶ ನೀಡಲಿಲ್ಲ. ಸಂಬಂಧಿಕರು ಪ್ರತಿಭಟನೆಗೆ ಇಳಿದರು, ಆಂಬುಲೆನ್ಸ್ ಗೆ ಅಡ್ಡ ಮಲಗಿದರು. ಕೊನೆಗೆ ಬಲಪ್ರಯೋಗ ಮಾಡಿ, ಎಲ್ಲರನ್ನೂ ಅವರವರ ಮನೆಗಳಲ್ಲೇ ಕೂಡಿಹಾಕಲಾಯಿತು. ತನುಶ್ರೀ ಕ್ಯಾಮೆರಾ ಎಲ್ಲವನ್ನೂ ರೆಕಾರ್ಡ್ ಮಾಡಿತು. ಈ ಗಲಾಟೆಯ ನಡುವೆ ತನುಶ್ರೀಯವನ್ನು ಅವರ ಸಿಬ್ಬಂದಿ ರಕ್ಷಿಸುವ ದೃಶ್ಯಗಳೂ ಸೆರೆಯಾದವು. ಆಕೆ ಅಂಜಲಿಲ್ಲ, ಅಲ್ಲಿಂದ ಓಡಿಹೋಗಲಿಲ್ಲ. ಏನೇನಾಗುತ್ತೋ ಆಗಲಿ ಎಂದು ಹಲ್ಲುಕಚ್ಚಿ ನಿಂತುಬಿಟ್ಟರು.

ಸ್ಥಳೀಯ ಆಡಳಿತ ಮತ್ತು ಪೊಲೀಸರು, ಆಂಬ್ಯುಲೆನ್ಸ್  ಅನಾಮತ್ತಾಗಿ ಸ್ಮಶಾನಕ್ಕೆ ಕೊಂಡೊಯ್ದರು. ಮನೀಷಾ ಕುಟುಂಬದ ಒಬ್ಬ ಸದಸ್ಯ ಸದಸ್ಯೆಯನ್ನೂ ಜತೆಗೆ ಇಟ್ಟುಕೊಳ್ಳದೆ ಶವಕ್ಕೆ ಬೆಂಕಿ ಹಾಕಿಬಿಟ್ಟರು. ತನುಶ್ರೀ  ಕ್ಯಾಮೆರಾ ರೋಲ್ ಮಾಡಲು ಹೇಳಿ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದರು. ನೀವು ಸುಡುತ್ತಿರುವುದು ಏನನ್ನು? ಅದು ಮನಿಷಾ ದೇಹವಾಗಿದ್ದರೆ, ಆಕೆಯ ಕುಟುಂಬ ಸದಸ್ಯರನ್ನು ಯಾಕೆ ಕೂಡಿಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ಪೊಲೀಸರ ಬಳಿ ಉತ್ತರವಿರಲಿಲ್ಲ. ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬ ನಮಗೇನು ಕೇಳ್ತೀರಿ ಮೇಡಂ, ನಾನು ಇಲಾಖೆಯಲ್ಲಿ ಚಪರಾಸಿ ಕೆಲಸ ಮಾಡೋನು, ಹೋಗಿ ಡಿಎಂ (ಜಿಲ್ಲಾಧಿಕಾರಿ) ಕೇಳಿ ಎನ್ನುತ್ತಾನೆ. ತನುಶ್ರೀ ಎಲ್ಲ ರೆಕಾರ್ಡ್ ಮಾಡಿಕೊಂಡರು. ಪೊಲೀಸರ ಎದುರೇ ನಿಂತು, ಅವರ ವಾಹನಗಳ ಬಳಿಯೇ ನಿಂತು ಇಡೀ ಪ್ರಹಸನದ ಇಂಚಿಂಚು ಮಾಹಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಹೇಗೆ ಹತ್ತೊಂಭತ್ತು ವರ್ಷದ ಎಳೆಯ ವಯಸ್ಸಿನ ಹುಡುಗಿಯ ಕೊನೆಯ ವಿಧಿಗಳನ್ನು ನಿರ್ವಹಿಸುವ ಆಕೆಯ ಕುಟುಂಬದ ಹಕ್ಕನ್ನು ಕಿತ್ತುಕೊಳ್ಳಲಾಯಿತು ಎಂಬುದನ್ನು ಪೊಲೀಸರ ಮುಖಕ್ಕೆ ಹೊಡೆದಂತೆ ಅವರ ಎದುರೇ ಹೇಳುತ್ತ ರೆಕಾರ್ಡ್ ಮಾಡಿಕೊಂಡರು.

ಹತ್ರಾಸ್ ಅತ್ಯಾಚಾರ-ಹತ್ಯಾಕಾಂಡದ ಮೇಲೆ ಬೆಳಕು ಚೆಲ್ಲಿ ಸತ್ಯಾಂಶ ಬೆಳಕಿಗೆ ಬರುವಂತೆ ಮಾಡಿದ ತನುಶ್ರೀ ಯ ವರದಿಗಾರಿಕೆಯ ಖದರ್ ಇದು..
ಹತ್ರಾಸ್ ಅತ್ಯಾಚಾರ-ಹತ್ಯಾಕಾಂಡದ ಮೇಲೆ ಬೆಳಕು ಚೆಲ್ಲಿ ಸತ್ಯಾಂಶ ಬೆಳಕಿಗೆ ಬರುವಂತೆ ಮಾಡಿದ ತನುಶ್ರೀ ಯ ವರದಿಗಾರಿಕೆಯ ಖದರ್ ಇದು..

ಬೆಳಿಗ್ಗೆ ತನುಶ್ರೀ ಮಾಡಿದ ವರದಿಗಳು ಪ್ರಸಾರವಾಗುತ್ತಿದ್ದಂತೆ  ಇಡೀ ದೇಶದ ಪ್ರಜ್ಞಾವಂತ ಮನಸುಗಳು ಜಾಗೃತಗೊಂಡವು. ಮನೀಷಾ ಪ್ರಕರಣದಲ್ಲಿ ಪೊಲೀಸರ ದುಷ್ಟಹುನ್ನಾರಗಳು ಬಟಾಬಯಲಾಯಿತು. ನಿರೀಕ್ಷೆಯಂತೆ ಒಂದಾದಮೇಲೊಂದರಂತೆ ಸುಳ್ಳುಗಳನ್ನು ತೇಲಿಬಿಡಲಾಯಿತು. ಆಕೆಯ ಮೇಲೆ ಅತ್ಯಾಚಾರವೇ ನಡೆದಿರಲಿಲ್ಲ ಎಂದರು ಪೊಲೀಸರು. ಕೊಲೆ ಮಾಡಿದವನು ಸಂದೀಪ್ ಒಬ್ಬನೇ, ಅವರ ನಡುವೆ ಹಳೇ ದ್ವೇಷವಿತ್ತು ಎಂದರು. ಆದರೆ ಮನೀಷಾ ಸಾಯುವ ಮುನ್ನ ಮ್ಯಾಜಿಸ್ಟ್ರೇಟ್ ಎದುರು ತನ್ನ ಹೇಳಿಕೆ ದಾಖಲಿಸಿದ್ದಳಲ್ಲ, ಅದನ್ನು ಹೇಗೆ ಬದಲಾಯಿಸುವುದು? ಪೊಲೀಸರು ಅನಿವಾರ್ಯವಾಗಿ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದರು.

ಇಲ್ಲ, ನಾವು ಕುಟುಂಬ ಸದಸ್ಯರ ಸಮ್ಮತಿ ಪಡೆದೇ ಅಂತಿಮಸಂಸ್ಕಾರ ನಡೆಸಿದೆವು ಎಂದು ಯುಪಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು. ತನುಶ್ರೀ,  with due respect, ನೀವು ಹೇಳುತ್ತಿರುವುದೆಲ್ಲ ಸುಳ್ಳು. ಪ್ರತಿಯೊಂದಕ್ಕೂ ವಿಶುಯಲ್ ದಾಖಲೆ ಇದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅಧಿಕಾರಿ, ಎಸ್‌ಐಟಿ ತನಿಖೆ ಮಾಡುತ್ತದೆ, ಸ್ಥಳದಲ್ಲಿದ್ದ ಪೊಲೀಸರಿಂದ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು defence mode ಗೆ ಬದಲಾದರು.

ತನುಶ್ರೀ ಹಿಂದೆ CNN IBN ನಲ್ಲಿ ಇದ್ದವರು, ಬಹುಶಃ ರಾಜ್ ದೀಪ್ ಸರ್ದೇಸಾಯಿ ಐಬಿಎನ್ ನಿಂದ ಇಂಡಿಯಾ ಟುಡೆಗೆ ಬಂದ ನಂತರ ಅವರೂ ಇಂಡಿಯಾ ಟುಡೆಗೆ ಬಂದಿದ್ದಾರೆನಿಸುತ್ತದೆ. ಆಕೆ ನಿನ್ನೆ ಮಾಡಿದ ವರದಿಗಳನ್ನು ಗಮನಿಸಿ ನೋಡಿ. ಕೂಗಾಟ, ಕಿರುಚಾಟ, ಡ್ರಾಮೇಬಾಜಿಯಿಲ್ಲ. ತಾನೂ ಒಬ್ಬ ಹೆಣ್ಣುಮಗಳಾಗಿ ಇದನ್ನೆಲ್ಲ ವರದಿ ಮಾಡುವಾಗ ಎಮೋಷನಲ್ ಆಗುವುದು ಸಹಜ, ಆದರೆ ಆಕೆ ತನ್ನ ಭಾವನೆಗಳನ್ನು ಕಟ್ಟಿಟ್ಟುಕೊಂಡು, ಇಂಚಿಂಚೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತ ಹೋದರು. ಆಕೆ ಏನು ಮಾಡಬೇಕಿತ್ತೋ ಅದನ್ನಷ್ಟೇ ಮಾಡಿದರು. ಒಂಚೂರು ಕಡಿಮೆಯೂ ಅಲ್ಲ, ಚೂರು ಹೆಚ್ಚೂ ಅಲ್ಲ.

ತನುಶ್ರೀ ನಿಜಕ್ಕೂ ಮಾಡಿರುವುದು ಸಾಹಸದ ಕೆಲಸ. ಪೊಲೀಸರು ಈಕೆಯ ಮೇಲೂ ದಾಳಿ ಮಾಡುವ ಸಾಧ್ಯತೆ ಇತ್ತು, ಕ್ಯಾಮೆರಾ ಕಿತ್ತುಕೊಂಡು ಈಕೆಯನ್ನು ಕೂಡಿಹಾಕುವ ಸಾಧ್ಯತೆ ಇತ್ತು. ಆದರೆ ಈಕೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಲೇ ದೇಶದ ಮುಂದೆ ಆ ಮುಗ್ಧ ಹುಡುಗಿ ಮನೀಷಾಳ ಸಂಕಟಗಳನ್ನು ತೆರೆದಿಟ್ಟರು.ಇನ್ನಾದ್ರೂ ರಾಜಕಾರಣಿಗಳ ಬಕೆಟ್ ಹಿಡಿಯೋದನ್ನು ಬಿಟ್ಟು,ಅವರನ್ನು ಹೊಗಳಿ ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟು ಪತ್ರಕರ್ತರು ವಸ್ತುನಿಷ್ಟವಾಗಿ ಕೆಲಸ ಮಾಡೋದನ್ನು ಕಲಿಯಬೇಕಿದೆ.

ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ  “ಮಾದ್ಯಮ” ಕ್ಕೆ ಆಶಾವಾದದ ಬೆಳ್ಳಿಗೆರೆ  “ತನುಶ್ರೀ”

Spread the love

Related Articles

Leave a Reply

Your email address will not be published.

Back to top button
Flash News