ಎಸ್ಟಿ ಮೀಸಲು ಸಿಗೋವರೆಗೂ ಹೋರಾಟ ಬಿಡದಿರಲು “ಕುರುಬ”ರ ನಿರ್ಧಾರ-ಅಕ್ಟೋಬರ್ 11ಕ್ಕೆ ಬೃಹತ್ ಸಮಾವೇಶ

0

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ನಿರ್ಣಯ ಕೈಗೊಳ್ಳಲು ಅಕ್ಟೋಬರ್ 11 ರಂದು ಅರಮನೆ ಮೈದಾನದಲ್ಲಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತದೆ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಶಾಸಕ, ಸಂಸದರವರೆಗೆ ಎಲ್ಲಾ ಚುನಾಯಿತ ಪ್ರತಿನಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ವಾಲ್ಮೀಕಿ ಸಮುದಾಯದ ಮೀಸಲಾತಿಗೆ ನಾವು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಹಿಂದುಳಿದ ವರ್ಗದ ನಮ್ಮ ಮೀಸಲಾತಿಯೊಂದಿಗೆ ನಾವು ಎಸ್ಟಿ ಸಮುದಾಯಕ್ಕೆ ಸೇರ್ಪಡೆಯಾಗಲು ಹೋರಾಟ ನಡೆಸಲಿದ್ದೇವೆ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಕುರುಬ ಸಮುದಾಯ ಬುಡಕಟ್ಟು ಜನಾಂಗದಿಂದ ಗುರುತಿಸಿಕೊಂಡಿದೆ. ಬೀದರ್, ಕಲಬುರಗಿ, ಯಾದಗಿರಿ ಮೂರು ಜಿಲ್ಲೆಗಳಿಂದ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಪ್ರಸ್ತಾಪ ಕೇಂದ್ರಕ್ಕೆ ಹೋಗಿದೆ. ಕೊಡಗು ಕುರುಬರ ಬೇಡಿಕೆ ವಾಪಾಸ್ಸಾಗಿದೆ. ಎಲ್ಲವನ್ನೂ ಒಟ್ಟಾಗಿ ಸೇರಿಸಿ ರಾಜ್ಯಾದ್ಯಂತ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಹೋರಾಟ ನಡೆಸಲು ಕುರುಬ ಎಸ್ಟಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಹೆಚ್.ಎಂ.ರೇವಣ್ಣ ಮಾತನಾಡಿ, ಇದು ಇಂದಿನ ಬೇಡಿಕೆಯಲ್ಲ. ಬಹುಕಾಲದ ಬೇಡಿಕೆಯಾಗಿದೆ. ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಪಕ್ಷಾತೀತವಾಗಿ ನಾವು ಸರ್ಕಾರಕ್ಕೆ ಒತ್ತಾಯ ಮಾಡಲು ಮುಂದಾಗಿದ್ದೇವೆ. ಸಂಘಟಿತರಾಗಿ ಹೋರಾಟ ಮಾಡುತ್ತಿದ್ದೇವೆ. ಜಯ ಸಿಗುವ ವಿಶ್ವಾಸವಿದೆ ಎಂದರು. ಅಕ್ಟೋಬರ್ ೧೧ರಂದು ಸಮುದಾಯದ ಶಾಸಕ, ಸಂಸದರು ಸೇರುದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯಲಾಗಿದ್ದು, ಹೋರಾಟದ ರೂಪುರೇಷೆಗಳನ್ನು ರೂಪಿಸಲು ಪೂರ್ವಭಾವಿ ಸಭೆ ಕರೆಯಲಾಗಿದೆ.

ಚರ್ಚೆ ನಡೆಸಿ ಹೋರಾಟದ ತೀವ್ರತೆ ರೂಪಿಸಲಾಗುತ್ತದೆ. ಇಡೀ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಒತ್ತಾಯ ಮಾಡಲಾಗುತ್ತದೆ ಎಂದರು. ಎಸ್ಟಿ ಸಮುದಾಯದವರು ಶೇ. ೩ರಿಂದ ೭ಕ್ಕೆ ಮೀಸಲಾತಿ ಬೇಡಿಕೆ ಇಟ್ಟಿದ್ದು, ಅದಕ್ಕೆ ನಮ್ಮ ಬೆಂಬಲವಿದೆ. ಎಸ್ಟಿಗೆ ಹೋಗಿ ಅಲ್ಲಿರುವ ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣಕ್ಕೆ ತೊಂದರೆ ಕೊಡಲ್ಲ. ಹಿಂದುಳಿದ ವರ್ಗದ ನಮ್ಮ ಮೀಸಲಾತಿ ಪರ್ಸೆಂಟೇಜ್ ತೆಗೆದುಕೊಂಡೇ ನಾವು ಎಸ್ಟಿಗೆ ಹೋಗುತ್ತೇವೆ ಎಂದರು.

ಸಚಿವರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೇಳುವ ಅಂಶಗಳನ್ನು ಕೊಡುತ್ತೇವೆ. ಕುರುಬ ಎಸ್ಟಿ ವ್ಯವಸ್ಥೆ ಆಗಬೇಕು ಎನ್ನುವ ಅಪೇಕ್ಷೆ ಇದೆ. ಇನ್ನು ಕೆಲ ಹಿಂದುಳಿದ ವರ್ಗಗಳು ಬಂದು ನಮಗೂ ಬೆಂಬಲ ಕೊಡಿ ಎನ್ನುತ್ತಿವೆ. ಕೋಲಿ ಸಮಾಜ, ಸವಿತಾ ಸಮಾಜ, ಕಾಡುಗೊಲ್ಲರು ಸಹಕಾರ ಕೇಳಲು ಬಂದಿವೆ.

ಅವರಿಗೂ ನಾವು ಸಾಥ್ ನೀಡಲಿದ್ದೇವೆ. ಈ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಈಗಾಗಲೇ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಲಾಗಿದೆ. ಅರ್ಹರು ಯಾರಿದ್ದಾರೆ ಅವರೆಲ್ಲಾ ಬಂದರೆ ಅವರ ಪರವಾಗಿಯೂ ನಾವು ಹೋರಾಟ ಮಾಡಲಿದ್ದೇವೆ. ಅಕ್ಟೋಬರ್ 11 ರಂದು ಬೆಳಗ್ಗೆ 11  ಗಂಟೆಗೆ ಅರಮನೆ ಮೈದಾನದಲ್ಲಿ ಸಮುದಾಯದ ಎಲ್ಲಾ ಜನಪ್ರತಿನಿಧಿಗಳ ಸಭೆ ನಡೆಸಿ ಮುಂದಿನ ಕಾರ್ಯಕ್ರಮ ಯಾವ ರೀತಿ ಇರಬೇಕು ಎಂದು ನಿರ್ಣಯ ಕೈಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಗಳಾದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು ಮತ್ತು ಬೆಳಗಾವಿ ಜಿಲ್ಲೆಯ ಅಮರೇಶ್ವಸರ ಮಹಾ ಸ್ವಾಮೀಜಿಗಳು ಕೂಡ  ಉಪಸ್ಥಿತರಿದ್ದರು.

ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಮುಕುಡಪ್ಪ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ, ಕೆ.ವಿರುಪಾಕ್ಷಪ್ಪ, ಡಿ.ವೆಂಕಟೇಶ್‌ಮೂರ್ತಿ, ರಾಜೇಂದ್ರ ಸಣ್ಣಕ್ಕಿ, ಶಾಂತಪ್ಪ, ಪುಟ್ಟಸ್ವಾಮಿಯವರು, ಟಿ.ಬಿ.ಬಳಗಾವಿ ಮುಂತಾದವರು ಭಾಗವಹಿಸಿದ್ದರು. 

Spread the love
Leave A Reply

Your email address will not be published.

Flash News