ಮೈಸೂರು “ಡಿಸಿ”ಗಾಧಿಗೆ, ಇವರನ್ ಬಿಟ್ಟು..ಅವರ್ಯಾರು ..ಶರತ್  VS ರೋಹಿಣಿ ಸಿಂಧೂರಿ:CAT ಫೈಟ್ ಗೆ ನಾಳೆಯೇ  ರಿಸಲ್ಟ್.!

0

ಮೈಸೂರು:ಮೈಸೂರು ಜಿಲ್ಲಾಧಿಕಾರಿ ಯಾರಾಗಲಿದ್ದಾರೆ..? ರೋಹಿಣಿ ಸಿಂಧೂರೀನಾ ಅಥವಾ ಬಿ. ಶರತ್ತಾ….? ಇಂತಹದ್ದೊಂದು ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ. ನಾಳೆಯ ಸಿಎಟಿ (ಕೇಂದ್ರ ಆಡಳಿತ ಮಂಡಳಿ)ಯ ತೀರ್ಪು ಇದನ್ನು ನಿರ್ಧರಿಸಲಿದೆ. ಯೆಸ್…ದಕ್ಷ, ಸಮರ್ಥ, ಪ್ರಾಮಾಣಿಕ, ಪಾರದರ್ಶಕ..ಈ ಪದಗಳೆಲ್ಲಾ  ಹಿಂದಿನ ಡಿಸಿ ಬಿ. ಶರತ್ ಹಾಗೂ ಮೊನ್ನೆ ಮೊನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ರೋಹಿಣಿ ಸಿಂಧೂರಿ ಇಬ್ಬರಿಗೂ ಅನ್ವರ್ಥವಾಗುತ್ವೆ.ಇಬ್ಬರಲ್ಲಿ ಯಾರೇ ಫೈನಲ್ ಆದ್ರೂ ಜನರಿಗೆ ಲಾಸ್ ಅಂತೂ ನಯಾಪೈಸೆ ಇಲ್ಲ.

ಕೊರೋನಾದಂತಹ ಸಂದರ್ಭದ ಲ್ಲೂ ಇಡೀ ಮೈಸೂರಿನ ಜಿಲ್ಲಾಡಳಿತವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿದ್ರು ಬಿ. ಶರತ್.ಕೊರೋನಾ ವಿಷಯದಲ್ಲಿ ಮೈಸೂರಿಗೆ ಕಳಂಕ ಬಂದ ಸಂದರ್ಭದಲ್ಲೂ ಅದನ್ನು ತೊಡೆದುಹಾಕಲು ತಮ್ಮ ಜೀವವನ್ನೇ ಪಣಕ್ಕಿಟ್ಟ ದಕ್ಷ ಐಎಎಸ್ ಅಧಿಕಾರಿ. ಇದನ್ನು ಇಡೀ ಮೈಸೂರೇ ಒಪ್ಪಿಕೊಳ್ಳುತ್ತದೆ.

ಆದರೆ ಯಾವುದೋ ಕೆಟ್ಟ ಗಳಿಗೆಯಲ್ಲಿ ಬಿ. ಶರತ್ ಬಗ್ಗೆ ಸರ್ಕಾರಕ್ಕೆ ಅಸಮಾಧಾನ ಉಂಟಾದ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡುವ ಪ್ರಯತ್ನಗಳು ಶುರುವಾದವು. ಆ ಸುಳಿವು ಶರತ್ ಅವರಿಗೂ ಕೂಡ ಸಿಕ್ಕಿತ್ತು. ಆದರೆ ಅಧಿಕಾರ, ಸ್ಥಾನಮಾನಕ್ಕಾಗಿ ಎಂದೂ ಲಾಬಿ ಮಾಡದ ಶರತ್ ಮೈಸೂರಿನಲ್ಲೇ ಉಳಿದುಕೊಳ್ಳುವ ಯಾವುದೇ ಪ್ರಯತ್ನಗಳಿಗೂ ಕೈ ಹಾಕಲಿಲ್ಲ. ಅವರನ್ನು ಪ್ರಚೋದಿಸುವ ಸಾಕಷ್ಟು ಕೆಲಸಗಳು ನಡೆದರೂ ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡಿರುವ ಕೆಲವೇ ಕೆಲವು ಐಎಎಸ್‌ಗಳಲ್ಲಿ ಒಬ್ಬರಾದ ಶರತ್ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಹಾಗಾಗಿಯೇ ಅವರ ಸ್ಥಾನ ಪಲ್ಲಟಕ್ಕೆ ಸರ್ಕಾರ ನಡೆಸಿದ ಪ್ರಯತ್ನಗಳು ರೋಹಿಣಿ ಸಿಂಧೂರಿಯವರನ್ನು ತಂದು ಕೂರಿಸುವ ಮೂಲಕ ಯಶಸ್ವಿಯಾಯಿತೆನ್ನುವ ಮಾತುಗಳಿವೆ.

ರೋಹಿಣಿ ಸಿಂಧೂರಿ ದಕ್ಷ ಐಎಎಸ್ ಅಧಿಕಾರಿಯೆನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಅವರ ಪ್ರೊಫೈಲ್, ಕೆರಿಯರ್ ಬ್ಯಾಕ್‌ಗ್ರೌಂಡೇ ಪುಷ್ಟೀಕರಿಸುತ್ತದೆ. ಆದರೆ ಮೈಸೂರು ಜಿಲ್ಲಾಧಿಕಾರಿಯಾಗಿ ಅವರು ಬಂದ ಸಂದರ್ಭದಲ್ಲೇ ಸಾ.ರಾ.ಮಹೇಶ್ ಅವರಂತಹ ಚುನಾಯಿತರೇ ಅಸಮಾಧಾನ ವ್ಯಕ್ತಪಡಿಸಿದ್ದರು. ತಿರುಪತಿ ಅಭಿವೃದ್ಧಿಯ ಟೆಂಡರ್‌ನಲ್ಲಿ ರೋಹಿಣಿ ಸಿಂಧೂರಿ ಕಿಕ್‌ಬ್ಯಾಕ್ ಪಡೆದಿದ್ದಾರೆನ್ನುವ ನೇರ ಆರೋಪ ಮಾಡಿದ್ದರು. ಇದು ರೋಹಿಣಿಯವರಿಗೂ ಆರಂಭದಲ್ಲಿ ತೀವ್ರ ಮುಜುಗರ ಹಾಗೂ ಬೇಸರವನ್ನುಂಟು ಮಾಡಿದ್ದು ಸುಳ್ಳಲ್ಲ. ಆದರೆ ಇಂತಹ ಆರೋಪಗಳಿಗೆ ತಲೆಕೆಡಿಸಿಕೊಳ್ಳುವವಳು ನಾನಲ್ಲ. ಸರ್ಕಾರ ನನಗೆ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಸಾ.ರಾ.ಮಹೇಶ್‌ಗೆ ಸಕತ್ತಾಗೇ ಠಕ್ಕರ್ ಕೊಟ್ಟಿದ್ದರು.

ವರ್ಗಾವಣೆ ಎನ್ನುವುದು ಸರ್ಕಾರದ ಮಟ್ಟದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ. ಆದರೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ತಮ್ಮ ವರ್ಗಾವಣೆ ಆಗಿದ್ದರ ಬಗ್ಗೆ ಶರತ್ ತೀವ್ರ ಮುಜುಗರಕ್ಕೊಳಗಾಗಿದ್ದರು.  ರೋಹಿಣಿ ಸಿಂಧೂರಿ ಅವರ ಬಗ್ಗೆ ಕಿಂಚಿತ್ತೂ ಅಸಮಾಧಾನವಿಲ್ಲದ ಶರತ್  ಅವರು ತಮ್ಮ ವರ್ಗಾವಣೆಯನ್ನು ಸಿಎಟಿಯಲ್ಲಿ ಪ್ರಶ್ನಿಸಿದ್ದೂ ಕೂಡಾ ಇದೇ ಕಾರಣಕ್ಕೆ. ತಮ್ಮ ವರ್ಗಾವಣೆಯ ಬಗ್ಗೆ ಸಾರ್ವಜನಿಕವಾಗಿ ಮತ್ತು ಇಲಾಖಾಮಟ್ಟದಲ್ಲಿ ಕೆಟ್ಟ ಸಂದೇಶವನ್ನು ರವಾನಿಸಬಹುದೆನ್ನುವ ಕಾರಣಕ್ಕೆ ಶರತ್ ತಮ್ಮ ವರ್ಗಾವಣೆಯ ಪ್ರಸ್ತುತತೆಯನ್ನು ಸಿಎಟಿಯಲ್ಲಿ ಪ್ರಶ್ನಿಸಿದರು. ಅದರ ತೀರ್ಪು ನಾಳೆ ಹೊರಬೀಳಲಿದೆ.

ಒಂದು ವೇಳೆ ನಾಳೆಯ ತೀರ್ಪು ಶರತ್ ಪರವಾಗಿ ಬಂದರೆ, ಅದು ಸತ್ಯ, ನಿಷ್ಠೆ, ಪ್ರಾಮಾಣಿಕತೆಯನ್ನೇ ಉಸಿರಾಡುತ್ತಿರುವ ಶರತ್ ಅವರಂತಹ ಅಧಿಕಾರಿಗೆ ಸಂದ ಜಯವಾಗುತ್ತದೆ. ಹಾಗಂತ ರೋಹಿಣಿ ಸಿಂಧೂರಿಯವರಿಗೆ ಅದು ಮುಖಭಂಗವಲ್ಲ. ಒಂದು ವೇಳೆ ರೋಹಿಣಿ ಸಿಂಧೂರಿಯವರ ಪರವಾಗಿ ತೀರ್ಪು ಬಂದರೂ, ಕೊಂಚ ಬೇಸರ ಶರತ್ ಅವರಿಗೆ ಆಗುವುದು ಸತ್ಯ. ಆದರೆ ದಕ್ಷ ಹಾಗೂ ಖಡಕ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಉಳಿಸಿಕೊಂಡ ಸಾರ್ಥಕತೆ ಮೈಸೂರಿಗೆ ಸಿಗುತ್ತದೆ. ಹಾಗಾಗಿ ಶರತ್ ಮತ್ತು ರೋಹಿಣಿ ಸಿಂಧೂರಿ ವರ್ಗಾವಣೆ ಕುರಿತಾದ ಸಿಎಟಿ ತೀರ್ಪು ಕೂಡಾ ತೀವ್ರ ರೋಚಕತೆ ಮೂಡಿಸಿದೆ.

Spread the love
Leave A Reply

Your email address will not be published.

Flash News