ಕ್ವಾರಿಗಳಾಯ್ತು…ಈಗ ಕಪ್ಪತಗುಡ್ಡದ ಮೇಲೆ ದೈತ್ಯಗಣಿಧಣಿ ಬಲ್ಡೋಟಾ ವಕ್ರದೃಷ್ಟಿ..!? ಕಿಕ್ ಬ್ಯಾಕ್ ಆಸೆಗೆ ಗಣಿಗಾರಿಕೆಗೆ ಕೊಡಲಾಗುತ್ತಾ ಗ್ರೀನ್ ಸಿಗ್ನಲ್

0

ಬಳ್ಳಾರಿ/ಗದಗ: ಕಪ್ಪತಗುಡ್ಡದ ಅಸ್ಥಿತ್ವಕ್ಕೆ ದಿನೇ ದಿನೇ ಕೊಡಲಿಪೆಟ್ಟು ನೀಡುವ ದ್ರೋಹಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಕಾಯಬೇಕಾದ ಸರ್ಕಾರವೇ ಅದೇಕೋ ಹಿಂಬಾಗಿಲಿನಿಂದ ದುಷ್ಟರಿಗೆ ಸಾಥ್ ಕೊಡುತ್ತಿದೆಯಾ ಎನ್ಸುತ್ತೆ.ಏಕೆಂದ್ರೆ 14 ಕ್ವಾರಿಗಳ ಕಾರ್ಯಚಟುವಟಿಕೆಗೆ ಅವಕಾಶ ಕೊಡಿ ಎಂದು ಸಂಸದರ ಶಿವಕುಮಾರ್ ಉದಾಸಿ ಕೇಂದ್ರಕ್ಕೆ ಪತ್ರ ಬರೆದು ಪರಿಸರವಿರೋಧಿ ನಿಲುವನ್ನು ಪ್ರದರ್ಶಿಸಿದ್ದರು.ಇದೀಗ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸ್ತೇನೆಂದು ದೈತ್ಯ ಗಣಿ ಕಂಪೆನಿಯೊಂದು ಅವಕಾಶ ಕೋರಿ ಪತ್ರ ಬರೆದಿದೆ ಎನ್ನಲಾಗ್ತಿದೆ..ಸರ್ಕಾರದ ಕೆಲವು ರಾಜಕಾರಣಿಗಳೇ ಮುಂದೆ ನಿಂತು ಅವಕಾಶಕ್ಕೆ ಗ್ರೀನ್ ಸಿಗ್ನಲ್ ನೀಡಲು ತೀರ್ಮಾನಿಸಿದ್ದಾರೆನ್ನುವ ಆತಂಕದ ಸುದ್ದಿ ಹೊರಬಿದ್ದಿದೆ.

ಜೀವವೈವಿಧ್ಯತಾಣವಾದ ಕಪ್ಪತಗುಡ್ಡಕ್ಕೆ ಕಂಟಕವಾಗಲಿರುವ  ಮತ್ತೊಂದು ಶಾಕಿಂಗ್ ಹೊರಬಿದ್ದಿದೆ. ಕಪ್ಪತಗುಡ್ಡ ಒಡಲನ್ನು ಬಗೆಯಲು ದೈತ್ಯ ಗಣಿಗಾರಿಕೆ ಕಂಪನಿ ಹುನ್ನಾರ ನಡೆಸುತ್ತಿರುವ, ಸರ್ಕಾರ ಅದಕ್ಕೆ ಅವಕಾಶ ಕೊಡುವ ಸಾಧ್ಯತೆಗಳಿವೆ ಎನ್ನುವ ಸಂಗತಿ ಬಯಲಾಗಿರುವುದು ಹೋರಾಟಗಾರರ ಕಣ್ಣನ್ನು ಕೆಂಪಾಗಿಸಿದೆ. ಕಪ್ಪತಗುಡ್ಡ ಜೀವವೈವಿಧ್ಯತಾಣದ ಮೇಲೆ ಕ್ವಾರಿಗಳು ನಡೆಸಲು ಉದ್ದೇಶಿಸಿದ ದೌರ್ಜನ್ಯದ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್   ವರದಿ ಮಾಡಿತ್ತು.14  ಕ್ವಾರಿ ಕಂಪನಿಗಳ ಬೆನ್ನಿಗೆ ನಿಂತಿರುವ ಬಿಜೆಪಿ ಸಂಸದ ಶಿವಕುಮಾರ ಉದಾಸಿ ಅವರ ಬಂಡವಾಳವನ್ನು ಬಯಲು ಮಾಡುವ ಮೂಲಕ ಹೋರಾಟಗಾರರನ್ನು ಪರಿಸರ ಚಳವಳಿಯೊಂದಕ್ಕೆ ಅಣಿಗೊಳಿಸುವ ಕೆಲಸವೂ ನಡೆದಿತ್ತು  ಕಪ್ಪತಗುಡ್ಡದ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳೋ ಮೂಲಕ ಎಲ್ಲವೂ ಸರಿಯಾಗಲಿದೆ ಎಂದು ಸಮಾಧಾನಪಡುವ ಮುನ್ನವೇ  ಬಲ್ಡೋಟಾ ಎನ್ನುವ ದೈತ್ಯ ಗಣಿಗಾರಿಕೆ ಕಂಪನಿ ಕಪ್ಪತಗುಡ್ಡದ ಮೇಲೆ  ಸ್ಕೆಚ್ ಹಾಕುತ್ತಿದೆ ಎನ್ನುವ ಸುದ್ದಿ ಬಂದಿದೆ.

ಅಂದ್ಹಾಗೆ ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಗರ್ಭವನ್ನು ಅಗೆದು, ಅಪಾರ ಮಟ್ಟದ ಗಣಿಗಾರಿಕೆಯನ್ನು ನಡೆಸಿ, ಬಳ್ಳಾರಿಯನ್ನು ಬೋಳುಬೋಳನ್ನಾಗಿಸಿದ ಕುಖ್ಯಾತಿ ಬಲ್ಡೋಟಾ ಕಂಪನಿಗಿದೆ.ಪರಿಸರವಾದಿಗಳು ಈಗಾಗಲೇ ಬಲ್ಡೋಟಾ ಕಂಪನಿಯ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸುತ್ತಲೂ ಇದ್ದಾರೆ. ನ್ಯಾಯಾಲಯದಿಂದಲೂ ಈ ಕಂಪನಿಗೆ ಸಾಕಷ್ಟು ಚಾಟಿಯೂ ಬೀಸಲ್ಪಟ್ಟಿದೆ. ನಿರಂತರ ಎಚ್ಚರಿಕೆಯಿಂದ ತಣ್ಣಗಾಗಿದ್ದ ಕಂಪನಿ ಇದ್ದಕ್ಕಿದ್ದಂತೆ ಕಪ್ಪತಗುಡ್ಡದ ಮೇಲೆಯೇ ಕಣ್ಣು ಹಾಕಿರುವುದು ಪರಿಸರವಾದಿಗಳನ್ನು ಕೆಂಡಾಮಂಡಲಗೊಳಿಸಿದೆ.  

ಬಹುತೇಕ ಜನರಿಗೆ ಕಪ್ಪತಗುಡ್ಡದ ಹಿನ್ನಲೆಯೇ ಗೊತ್ತಿಲ್ಲ ಎನ್ಸುತ್ತೆ.ಇದು ಸುಮಾರು 80,000 ಎಕರೆಯಲ್ಲಿ ಮೈಚಾಚಿಕೊಂಡಿರುವ  ವಿಶಾಲ ಪ್ರದೇಶ. ರಾಜ್ಯದ ಅತಿದೊಡ್ಡ ಅರಣ್ಯಪ್ರದೇಶಗಳಲ್ಲೊಂದು. ಅಪಾರ ಜೀವವೈವಿಧ್ಯ ಹಾಗೂ ಸಸ್ಯ ಪ್ರಬೇಧಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಖ್ಯಾತಿ ಇದಕ್ಕಿದೆ. ಎಲ್ಲಕ್ಕೂ ಪ್ರಮುಖವಾಗಿ ಆಯುರ್ವೇದ ಸಸ್ಯದ ದೊಡ್ಡ ಕಣಜ ಇದಾಗಿದೆ. ಸುಮಾರು 5  ಜಿಲ್ಲೆಗಳಿಗೆ ಮನತಣಿಯುವಷ್ಟು ಮಳೆಯಾಗುತ್ತಿರುವುದೇ ಈ ಕಪ್ಪತಗುಡ್ಡದಿಂದ. ಸುಮಾರು 7 ರಿಂದ 10 ಜಿಲ್ಲೆಗಳು ಇವೊತ್ತು ನೆಮ್ಮದಿಯ ನಿಟ್ಟುಸಿರನ್ನು ಹಾಗೂ ಸಂತೋಷದ ಬದುಕನ್ನು ಸವೆಸುತ್ತಿವೆಯೆಂದರೆ, ಅದಕ್ಕೆ ಮೂಲಕಾರಣವೇ ಈ ಕಪ್ಪತಗುಡ್ಡ ಹಾಗೂ ಅದರೊಂದಿಗೆ ತಳುಕುಹಾಕಿಕೊಂಡಿರುವ ಪ್ರಾಕೃತಿಕ ಸಂಪತ್ತು.

ಇಂತಹ ಅರಣ್ಯ ಪ್ರದೇಶವನ್ನೇ ಹಾಳು ಮಾಡಲು ಬಲ್ಡೋಟಾ ಕಂಪನಿ ಮುಂದಾಗಿ ಅದಕ್ಕೆ ಪೂರಕವಾಗಿ ಅರ್ಜಿಯನ್ನು ಸರ್ಕಾರಕ್ಕೂ ಸಲ್ಲಿಸಿದೆ ಎನ್ನುವುದೇ ಆಕ್ರೋಶ ಮೂಡಿಸುತ್ತದೆ. ಕೆಲವು ಮೂಲಗಳ ಪ್ರಕಾರ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನಲ್ಲಿರುವ ಈ ಕಪ್ಪತಗುಡ್ಡದಲ್ಲಿ ಅಪಾರ ಚಿನ್ನದ ನಿಕ್ಷೇಪವಿದೆ ಎನ್ನುವ ಸಂಗತಿ ಈ ಕಂಪನಿಗಿದೆಯಂತೆ. ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಧನ, ತೆರಿಗೆ ಹಾಗೂ ಇತರೆ ಶುಲ್ಕವನ್ನು ನೀಡುವ ಆಸೆಯನ್ನು ಈಗಾಗಲೇ ಚುನಾಯಿತ ಪ್ರತಿನಿಧಿಗಳಿಗೆ ತೋರಿಸಿದೆಯಂತೆ. ಹಣದ ಆಸೆಗೆ ನಾಲಿಗೆ ಚಾಚಿಕೊಂಡಿರುವ ರಾಜಕಾರಣಿಗಳು, ಬಲ್ಡೋಟಾ ಕಂಪನಿಯ ಗಣಿಗಾರಿಕೆಗೆ ಗ್ರೀನ್ ಸಿಗ್ನಲ್ ಕೂಡಾ ನೀಡಿದ್ದಾರೆ ಎನ್ನುವ ವರ್ತಮಾನವಿದೆ.

14  ಕ್ವಾರಿಗಳ ವಿಷಯದಲ್ಲೇ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ನೀಡಿದ್ದ ಪರಿಸರವಾದಿಗಳು ಬಲ್ಡೋಟಾ ಕಂಪನಿಯ ಈ ಹುನ್ನಾರಕ್ಕೆ ನಿಗಿನಿಗಿ ಕೆಂಡವಾಗಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಅದರ ಕಾವನ್ನು ಅರ್ಥಮಾಡಿಕೊಳ್ಳಬಹುದು ಎಂಬ ಸತ್ಯವನ್ನು ಅರ್ಥಮಾಡಿಕೊಂಡಿರುವ ಹೋರಾಟಗಾರರು ಹಾಗೂ ಸಂಘಟನೆಗಳು ಶೀಘ್ರವೇ ಇದಕ್ಕೊಂದು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.ಇದು ಸರ್ಕಾರಕ್ಕೂ ದೊಡ್ಡ ಹಿನ್ನಡೆ. ಬಲ್ಡೋಟಾ ಕಂಪನಿಗೆ ತೀವ್ರ ಮುಖಭಂಗ.ಸರ್ಕಾರ ಹಣದಾಸೆಗೆ ಬಿದ್ದು ಬಲ್ದೊಟಾ ಕಂಪೆನಿಗೆ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ದೊಡ್ಡ ಆಂದೋಲನವೇ ಸೃಷ್ಟಿಯಾಗಬಹುದು.ಅಂಥದ್ದಕ್ಕೆ ಅವಕಾಶವಾಗಬಾರದು ಎನ್ನುವುದು ಪರಿಸರವಾದಿಗಳ ಮನವಿ.  

Spread the love
Leave A Reply

Your email address will not be published.

Flash News