ಟಿಕೆಟ್ ಸಿಕ್ರೂ ಮುನಿಗಿಲ್ಲ ಸಂತೋಷ-ತುಳಸಿ ಸಾಫ್ಟ್ ಆದ್ರಷ್ಟೇ..ಮುನಿ ಗೆಲುವು ಅನಾಯಾಸ :ಬಿಎಸ್ ವೈ ಎದುರು ಸಂತೋಷ್ ಜೀ ಗೆ ಸೋಲು-ಶಿಷ್ಯೋತ್ತಮನಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲ..!1

0

ಬೆಂಗಳೂರು:ಕೊನೆಗೂ ರಾಜಕೀಯ ಪ್ರಹಸನಗಳ ನಂತರ ಬೆಂಗಳೂರಿನ ಪ್ರತಿಷ್ಟಿತ ರಾಜರಾಜೇಶ್ವರಿ ನಗರ ಬೈ ಎಲೆಕ್ಷನ್ ಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.ಮುನಿರತ್ನನೋ.. ತುಳಸಿ ಮುನಿರಾಜೋ ಎನ್ನುವ ಗೊಂದಲಕ್ಕೆ ಖುದ್ದು ಸಿಲುಕಿದ್ದ ಹೈಕಮಾಂಡೇ ಕೊನೆಗೆ ವಚನಭ್ರಷ್ಟ ಹಣೆಪಟ್ಟಿ ಕಟ್ಟಿಕೊಳ್ಳಬಾರದೆನ್ನುವ ಹಿನ್ನಲೆಯಲ್ಲಿ ಮುನಿರತ್ನಂ ನಾಯ್ಸು ಅವರಿಗೆ ಟಿಕೆಟ್ ಫೈನಲ್ ಮಾಡಿದೆ.ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಕಚೇರಿಗೆ ಆಗಮಿಸಲಿರುವ ಮುನಿರತ್ನಂ ನಾಯ್ಡು ಅಧೀಕೃತವಾಗಿ ಬಿ.ಫಾರಂ ಪಡೆಯಲಿದ್ದಾರೆ.ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲು ಮುಹೂರ್ತವನ್ನು ಫಿಕ್ಸ್ ಮಾಡಲಾಗಿದೆ.

ಬಿಜೆಪಿ ಸರ್ಕಾರ ರಚನೆಯಾಗೊಕ್ಕೆ ಸಹಕರಿಸಿದವರ ನಾಯಕತ್ವ ವಹಿಸಿದ್ದ ಮುನಿರತ್ನಂ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ವರಿಷ್ಠರು ತಮ್ಮ ಮಾತು ಉಳಿಸಿಕೊಂಡಿದ್ದಾರೆ.ತೀವ್ರ ಸ್ಪರ್ಧೆಯೊಡ್ಡಿದ್ದ ತುಳಸಿ ಮುನಿರಾಜು ಅವರ ಹೋಲಿಕೆಯಲ್ಲಿ ಮುನಿರತ್ನಂ ಅವರೇ ಸಮರ್ಥ ಎಂದು ಹೈಕಮಾಂಡ್ ಡಿಸೈಡ್ ಮಾಡ್ಕೊಂಡಿದೆ.ತುಳಸಿಗಿಂತ ಮುನಿ ಪರವಾಗಿ ಬ್ಯಾಟಿಂಗ್ ಮಾಡಿದ ಮುಖಂಡರ ಒತ್ತಾಯಕ್ಕೆ ಹೈಕಮಾಂಡ್ ಮಣಿದಿದೆ.

ಟಿಕೆಟ್ ನೀಡುವ ವಿಚಾರದಲ್ಲಿ ಇಡೀ ಬಿಜೆಪಿ ಸರ್ಕಾರ ಮುನಿರತ್ನಂ ಅವರಿಗೆ ಟಿಕೆಟ್ ಕೊಡ್ಬೇಕೆನ್ನುವ ವಾದ ಒಡ್ಡಿತ್ತು.ತುಳಸಿ ಬೆನ್ನಿಗೆ ಸಂತೋಷ್ ಜೀ ಹಾಗೂ ಗ್ಯಾಂಗ್ ನಿಂತಿತ್ತು.ಇದು ಮೇಲ್ನೋಟಕ್ಕೆ ತುಳಸಿ ಹಾಗೂ ಮುನಿ ನಡುವೆ ಪೈಪೋಟಿಯಾಗಿ ಕಂಡ್ರೂ ಆಂತರಿಕವಾಗಿ ಬಿಎಸ್ ವೈ ಹಾಗೂ ಸಂತೋಷ್ ಜೀ ಪ್ರತಿಷ್ಟೆಯಾಗಿ ಪರಿಣಮಿಸಿತ್ತು.ಆದ್ರೆ ಇವತ್ತು ಸುಪ್ರಿಂ ಕೋರ್ಟ್ ಚುನಾವಣೆ ನಡೆಸುವ ವಿಚಾರದಲ್ಲಿ ತೀರ್ಪು ಮುನಿರತ್ನ ಪರ ಬರುತ್ತಿದ್ದಂತೆ ಹೈಕಮಾಂಡ್ ಮುನಿರತ್ನಂ ಅವರಿಗೆ ಟಿಕೆಟ್ ಫೈನಲ್ ಮಾಡಿ ಸಂಜೆಯಾಗುತ್ತಿದ್ದಂತೆ ಟಿಕೆಟ್ ಫೈನಲ್ ಮಾಡಿದೆ.

ಟಿಕೆಟ್ ಫೈನಲ್ ಆಗ್ತಿದ್ದಂಗೆ ಪಕ್ಷದ ವಲಯದಲ್ಲಿ  ಸಂತೋಷ್ ಜೀ ಗಿಂತ ಬಿಎಸ್ ವೈ ಕೈ ನೇ ಮೇಲಾಯ್ತು ಎನ್ನುವ ರೀತಿಯ ವಿಶ್ಲೇಷಣೆಗಳು ಕೇಳಿಬಂದಿದ್ದು ಸತ್ಯ.ತಮ್ಮ ಶಿಷ್ಯನಿಗಾಗಿ ಕೊನೇ ಹಂತದವರೆಗು ಸಂತೋಷ್ ಜೀ ಲಾಬಿ ಮಾಡಿದ್ರೂ ಬಿಎಸ್ ವೈ ಎದುರು ಅದು ಸಾಧ್ಯವಾಗಲಿಲ್ಲ..ಹಾಗಾಗಿ ಸಂತೋಷ್ ಜೀ ಸೋತು,ಬಿಎಸ್ ವೈ ಗೆದ್ದರೆನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಮುನಿರತ್ನಂ ಗೆ ಟಿಕೆಟ್ ಸಿಕ್ಕಾಕ್ಷಣ ಗೆಲುವು ಅನಾಯಾಸ ಎಂದೂ ಹೇಳಲಿಕ್ಕಾಗೊಲ್ಲ..ಹಾಗೊಂದು ಓವರ್ ಕಾನ್ಫಡೆನ್ಸ್ ನಲ್ಲೂ ಮುನಿರತ್ನಂ ಇಲ್ಲ..ಇದಕ್ಕೆ ಕಾರಣ ಆರ್ ಆರ್ ನಗರಾದ್ಯಂತ ಮುನಿರತ್ನಂ ಬಗ್ಗೆ ಇರುವ ವಿರೋಧ.ಕೈ ನಲ್ಲಿದ್ದಾಗ ಬಿಜೆಪಿಯನ್ನು ಹಿಗ್ಗಾಮುಗ್ಗಾ ಬೈಯ್ದು,ಕಾರ್ಯಕರ್ತರ ವಿರುದ್ಧವೆಲ್ಲಾ ಹರಿಹಾಯ್ದು-ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದನ್ನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಮರೆತಿಲ್ಲ.ಆ ಸೇಡನ್ನು ಚುನಾವಣೆಯಲ್ಲಿ ತೀರಿಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುತ್ತಿಲ್ಲ..ಹಾಗಾಗಿ ಮುನಿರತ್ನಂಗೆ ಹೊರಗಿನ ಶತೃಗಳಿಗಿಂತ ಆಂತರಿಕ ಶತೃಗಳೇ ಹೆಚ್ಚಾಗಿರುವುದು ಕೂಡ ಅಷ್ಟೇ ಸತ್ಯ.

ಮುನಿರತ್ನಂಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ  ಬಿಜೆಪಿಯಲ್ಲೇ  ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿಗೂ,ಹಾಗೂ ಈ  ಹಿಂದೆ ಕಾಂಗ್ರೆಸ್ಸಿನಲ್ಲಿ ಆರ್ಭಟಿಸಿ ಮೆರೆದ ಮುನಿರತ್ನಂಗೂ ಎಣ್ಣೆಸೀಗೆಕಾಯಿ ನಂಟು…! ಅದರಲ್ಲೂ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ಡಜನ್‌ಗಟ್ಟಲೆ ಕೇಸುಗಳು, ಗೂಂಡಾ ಆಕ್ಟ್‌ನಲ್ಲಿ ಕ್ಷೇತ್ರ ಬಿಡಿಸಿದ ಅತೃಪ್ತರೆಲ್ಲಾ ಈ ಚುನಾವಣೆಯಲ್ಲಿ ಮುನಿರತ್ನಂ ವಿರುದ್ಧ ಒಗ್ಗಟ್ಟಾಗಿ ತಿರುಗಿಬೀಳಲಿದ್ದಾರೆ ಎನ್ನುವುದನ್ನು ಗಮನಿಸಲೇಬೇಕು.

ಇನ್ನು ಹೇಳಿ ಕೇಳಿ ಆರ್ ಆರ್ ನಗರ ಒಕ್ಕಲಿಗ ಸಮುದಾಯದ ಭದ್ರಕೋಟೆ. ಸರಿಸುಮಾರು 300 ಕ್ಕೂ ಬಲಾಢ್ಯ ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ಗಳಾಗಿ, ಉದ್ಯಮಿಗಳಾಗಿ, ಬಿಲ್ಡರ್‌ಗಳಾಗಿ ಮೆರೆದವರು ಮುನಿರತ್ನಂ ಕೋಟಲೆಗೆ, ಗೋಳಿಗೆ ರೋಸೆತ್ತಿಹೋಗಿದ್ದರು. ಅವರ ದಿವ್ಯಮೌನ ಹಾಗೂ ಅಸಹನೆಯ ಕಟ್ಟೆ ಒಡೆದರೆ ಅದರ ದಳ್ಳುರಿಯಲ್ಲಿ ಮುನಿರತ್ನಂ ಸ್ಥಿತಿ ಬೆಂಕಿಯಿಂದ ಬಾಣಲೆಗೆ…ಆರ್.ಎಸ್.ಎಸ್. ಹಿನ್ನೆಲೆಯ ಬಿಜೆಪಿ ಮನಃಸ್ಥಿತಿಯ ಯಾವುದೇ ಕಾರ್ಯಕರ್ತ ಈ ಚುನಾವಣೆಯಲ್ಲಿ ಮುನಿರತ್ನಂಗೆ ಮತ ಹಾಕುವುದು ಕ್ಷೀಣ. ಬೆಂಬಲಿಸುವುದಂತೂ ದೂರದ ಮಾತು.

ಸದ್ಯ ಬಿಜೆಪಿಯಿಂದ ಮಮತಾ ವಾಸುದೇವ್, ಕಾಂಗ್ರೆಸ್‌ನಿಂದ ಆಶಾ ಸುರೇಶ್, ಜೆಡಿಎಸ್‌ನಿಂದ ಮಂಜುಳಾ ನಾರಾಯಣ ಸ್ವಾಮಿ…ಹೀಗೆ  ಎಲ್ಲಾ ಮುನಿರತ್ನಂ ಆಕ್ರೋಶದ ವಿರುದ್ಧ ಕಣ್ಣೀರು ಸುರಿಸಿದವರೇ….. ಅವರ ಆಕ್ರೋಶದ ಕಿಡಿ ಈ ಚುನಾವಣೆಯಲ್ಲಿ ಮುನಿರತ್ನಂ ಬುಡ ಕಡಿದರೂ ಅಚ್ಚರಿಯಿಲ್ಲ. ಬಹುತೇಕ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಒಕ್ಕಲಿಗ ತುಳಸಿಗೆ ಅವಕಾಶ ತಪ್ಪಿಸಿದ್ದರಿಂದ ಬಿಜೆಪಿ ಪರ ಇರುವ ಒಕ್ಕಲಿಗರು ಸಿಡಿದೆದ್ದು ತಟಸ್ಥರಾದರೆ, ಅದು ಕಾಂಗ್ರೆಸ್‌ಗೆ ವರದಾನವಾದರೂ ಅಚ್ಚರಿಯಿಲ್ಲ ಎಂದೇ ಹೇಳಲಾಗುತ್ತಿದೆ.

ನಿರ್ಣಾಯಕ ಒಕ್ಕಲಿಗ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಒಟ್ಟುಗೂಡಿದರೂ ಮುನಿರತ್ನಂ ಗೆಲುವು ಕಷ್ಟ. ಇಂದಿಗೂ ಜಾತಿ ಸಮುದಾಯದ ಸಮೀಕರಣವನ್ನು ಒಡೆದು ಆಳುವ ಲೆಕ್ಕಾಚಾರಗಳು ಸದ್ಯ ಆರ್.ಆರ್.ನಗರದಲ್ಲಿ ವರ್ಕೌಟ್ ಆಗುವ ಲಕ್ಷಣಗಳಿಲ್ಲ. ಒತ್ತಡ, ಪ್ರಭಾವ, ತಂತ್ರಗಾರಿಕೆಯಿಂದ ಬಿ ಫಾರಂ ಪಡೆಯುವುದು ಬೇರೆ… ಗೆಲ್ಲುವುದು ಬೇರೆ. ಡಿ.ಕೆ.ಬ್ರದರ್ಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಈ ಕ್ಷೇತ್ರ ಅಚ್ಚರಿ ಹಾಗೂ ರೋಚಕ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತವೆ ಮೂಲಗಳು.

ಇದೆಲ್ಲವೂ ರಾಜಕೀಯದಲ್ಲಿ ಎಲ್ಲಾ ಪೆಟ್ಟು ತಿಂದು ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಮುನಿರತ್ನಂಗೆ ತಿಳಿಯದ ಸತ್ಯಗಳೇನಲ್ಲ.ಟಿಕೆಟ್ ಪಡೆದಾಕ್ಷಣ ಗೆಲುವು ನಿಶ್ಚಿತ ಎಂಬ ಓವರ್ ಕಾನ್ಫಡೆನ್ಸ್ ನಲ್ಲಿರುವುದು ಮುಳುವಾಗುತ್ತೆನ್ನುವ ಆತಂಕದ ಅರಿವೂ ಅವರಿಗಿದೆ.ತುಳಸಿ ಮುನಿರಾಜು ಸಾಫ್ಟ್ ಆಗದ ಹೊರತು,ತನ್ನ ಗೆಲುವು ಕಷ್ಟ ಎನ್ನುವ ಸತ್ಯವೂ ಗೊತ್ತಿದೆ.ಹಾಗಾಗಿ ಮೊದಲು ತುಳಸಿಯನ್ನು ಅವರಿವರ ಮೂಲಕ ಹೇಳಿಸಿ ತಣ್ಣಗಾಗಿಸುವ ಕೆಲಸಕ್ಕೆ ಮುನಿರತ್ನ ಕೈ ಹಾಕಿದ್ದಾರೆ.ಅದು ಅಂದುಕೊಂಡಷ್ಟು ಸುಲಭವೇನಲ್ಲ..ಹಾಗಾಗಿ ಟಿಕೆಟ್ ಸಿಕ್ಕರೂ ಮುನಿರತ್ನ ಬಹುದೊಡ್ಡ ಸಂಘರ್ಷ-ಸವಾಲು ಎದುರಿಸ್ಬೇಕಾದ ಸಂದಿಗ್ಧತೆಯಲ್ಲಿ ಸಿಲುಕಿದ್ದಾರೆ.ಹಾಗಾಗಿ ಇಲ್ಲಿನ ಚುನಾವಣಾ ಕಣ ಕ್ಷಣ ಕ್ಷಣಕ್ಕೂ ರೋಚಕವಾಗ್ತಾ ಹೋದ್ರೂ ಆಶ್ಚರ್ಯವಿಲ್ಲ.

Spread the love
Leave A Reply

Your email address will not be published.

Flash News