ನ್ಯಾಯ ಗೆದ್ದಿತು.. ವರ್ತೂರ್ ಹೋಬಳಿಯ 27 ಎಕ್ರೆ ಸಂರಕ್ಷಿತ ಅರಣ್ಯದೊಳಗೆ ಕ್ರೀಡಾಂಗಣ ನಿರ್ಮಾಣದ ಹುನ್ನಾರಕ್ಕೆ ಕೋರ್ಟ್ ಬ್ರೇಕ್..

0

ಬೆಂಗಳೂರು:ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಜವಾಬ್ದಾರಿಯುತ ಇಲಾಖೆಗಳೇ ಹೊಣೆಗೇಡಿತನ ಪ್ರದರ್ಶಿಸಿ, ಏನ್ ಬೇಕಾದ್ರೂ ಮಾಡಬಹುದು ಎಂಬ ಅಹಮ್ಮಿನಲ್ಲಿ ನಮ್ಮ ಸಂವಿಧಾನ ಒಪ್ಪಿದ ನೆಲದ ಕಾನೂನನ್ನು ಧಿಕ್ಕರಿಸುವ ಪ್ರಯತ್ನ ಮಾಡಿದರೂ ಅದಕ್ಕೆ ಬ್ರೇಕ್ ಹಾಕಲು ಕಾನೂನು ನಮ್ಮಲ್ಲಿ ಇನ್ನೂ ಜೀವಂತವಿದೆ ಎನ್ನುವುದನ್ನು ಸಾಕ್ಷೀಕರಿಸುವಂತಹ ಮಹತ್ವದ ಪ್ರಕರಣ ಇದು.

ಇಲ್ಲಿ ಕಾನೂನನ್ನು ಗಾಳಿಗೆ ತೂರಿದ್ದು ಎರಡು ಜವಾಬ್ದಾರಿಯುತ ಇಲಾಖೆಗಳೇ. ಒಂದು ಅರಣ್ಯ ಇಲಾಖೆ. ಇನ್ನೊಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಯುವ ಸಬಲೀಕರಣ ಇಲಾಖೆ ಸಂರಕ್ಷಿತ ಅರಣ್ಯದಲ್ಲಿ ವಿಶಾಲವಾದ ಕ್ರೀಡಾಂಗಣವನ್ನು ನಿರ್ಮಿಸಲು ಹೊರಟರೆ ಅದಕ್ಕೆ ಅವಕಾಶ ಕೊಟ್ಟಿದ್ದು ಅರಣ್ಯ ಇಲಾಖೆ. ಕೊಟ್ಟರೆ ತಪ್ಪಾಗುತ್ತದೆ ಎನ್ನುವ ಅರಿವಿದ್ದರೂ ಯುವ ಸಬಲೀಕರಣ ಇಲಾಖೆ ಕೂಡ ಸರ್ಕಾರದ್ದಲ್ಲವೇ ಮುಂದೆ ಏನೇ ಸಮಸ್ಯೆ ಬಂದರೂ ಅದನ್ನು ಬ್ಯಾಲೆನ್ಸ್ ಮಾಡಲು ಸರ್ಕಾರ ಇರುತ್ತೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಡಲು ಹೊರಟಂತಹ ಪ್ರಮಾದಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.

ಘಟನೆ ನಡೆದಿರುವುದು ಬೆಂಗಳೂರಿನ ಹೊರ ವಲಯದ ವರ್ತೂರು ಹೋಬಳಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಮೇಲ್ಕಂಡ ಪ್ರದೇಶದ ಸರ್ವೆ ನಂ.108 ರಲ್ಲಿ ಸಂರಕ್ಷಿತ ಅರಣ್ಯದ 27 ಎಕರೆ ಪ್ರದೇಶವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಆಯ್ದುಕೊಳ್ಳಲಾಗಿತ್ತು.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗಳು ನಡೆಯಬಾರದೆನ್ನುವ ನಿಯಮವಿದ್ದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿತ್ತು. ಅಷ್ಟೇ ಅಲ್ಲ ಕ್ರೀಡಾಂಗಣ ನಿರ್ಮಾಣಕ್ಕೂ ಅನುಮತಿ ಪಡೆದಿತ್ತು ಎನ್ನುವುದು ಬಗ್ಗೆ ಎರಡೂ ಇಲಾಖೆಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿ ಒಟ್ಟಾರೆ ಪ್ರಕ್ರಿಯೆಗೆ ತಡೆ ತರಲು ಕಾರಣವಾದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ನರಸಿಂಹಮೂರ್ತಿಯವರ ವಾದ.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗಿದ್ದೇ ಅಕ್ಷಮ್ಯ. ಅದರಾಚೆ ನಡೆದಂತಹ ಪ್ರಕ್ರಿಯೆಗಳು, ತೀರ್ಮಾನಗಳು ಮುಂದೆ ಕಾನೂನಾತ್ಮಕವಾಗಿ ದೊಡ್ಡ ಸಂಕಷ್ಟವನ್ನೇ ತಂದೊಡ್ಡಬಹುದೆನ್ನುವ ಅರಿವಿದ್ದರೂ ಅದನ್ನೂ ಮೀರಿದ್ದು ಬಹುದೊಡ್ಡ ಪ್ರಮಾದ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಣ್ಣ ಪರಿಜ್ಞಾನವೂ ಇಲ್ಲದೆ ಹೋದದ್ದು ದುರಂತ. ಅರಣ್ಯ ಇಲಾಖೆಯ ಸಂರಕ್ಷಿತ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಿ, ಅಲ್ಲಿ ಚಟುವಟಿಕೆ ನಡೆಸುವುದು ಕಾನೂನುಬಾಹಿರ ಎನ್ನುವ ಕಾನೂನಾತ್ಮಕ ಅರಿವು ಕ್ರೀಡಾ ಇಲಾಖೆಗೆ ಇರಲಿಲ್ಲವೇ? ಎನ್ನುವುದೂಕೂಡ ಪ್ರಶ್ನೆ.

ಇದೆಲ್ಲವನ್ನೂ ಪ್ರಶ್ನಿಸಿ, ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಅವರ ಪರ ವಕೀಲ ಉಮಾಪತಿ ಬಗ್ಗೆ ಕಾನೂನಾತ್ಮಕವಾದ ಅಂಶಗಳ ಆಧಾರದಲ್ಲಿ ವಾದವನ್ನೂ ಮಂಡಿಸಿದ್ದರು. ಇದೆಲ್ಲವನ್ನೂ ಕ್ರೋಢೀಕರಿಸಿ ಹಾಗೆಯೇ 14-01-2020  ರಂದು ಬೆಂಗಳೂರು ನಗರ ಉಪವಿಭಾಗದ ಉಪ ಸಂರಕ್ಷಣಾಧಿಕಾರಿ ಮೇಲ್ಕಂಡ ಯೋಜನೆಯನ್ನು ರದ್ದು ಮಾಡುವಂತೆ ಹೊರಡಿಸಿದ್ದ ಆದೇಶವನ್ನು ಗಮನಿಸಿ ಕೋರ್ಟ್ ತಡೆ ನೀಡಿದೆ.

ಕ್ರೀಡಾಂಗಣ ನಿರ್ಮಿಸುವ ಕಾಮಗಾರಿಗಾಗಲೀ, ಕ್ರೀಡಾಂಗಣ ವ್ಯಾಪ್ತಿಯ ಭೂಮಿಯಲ್ಲಿ ಬೋರ್ವೆಲ್ ಕೊರೆಸುವ ಪ್ರಕ್ರಿಯೆಗಾಗಲೀ ಯಾವುದೇ ಕಾರಣಕ್ಕೂ ಆದೇಶ ನೀಡಬಾರದೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. 27  ಎಕರೆಯಷ್ಟು ಸಂರಕ್ಷಿತ ಅರಣ್ಯ ಪ್ರದೇಶವನ್ನು ಕ್ರೀಡಾ ಚಟುವಟಿಕೆಯ ನೆವದಲ್ಲಿ ಲೂಟಿ ಮಾಡಲು ಹೊರಟ 2 ಇಲಾಖೆಗಳ ಹುನ್ನಾರಕ್ಕೆ ನಮ್ಮ ಘನತೆವೆತ್ತ ಕಾನೂನು ಬ್ರೇಕ್ ಹಾಕಿದೆ. ಆದೇಶ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಮತ್ತಷ್ಟು ಬಲಗೊಳ್ಳುವಂತೆ ಮಾಡಿದೆ ಎಂದರೂ ತಪ್ಪಾಗಲಾರದು

Spread the love
Leave A Reply

Your email address will not be published.

Flash News