ಬಸ್ ಅಲಂಕಾರಕ್ಕೆ KSRTC ಯಿಂದ 100 ರೂ ಆಯುಧಪೂಜೆ ಗಿಫ್ಟ್..!! ಅದ್ರಲ್ಲೇ ಬಸ್  ಕ್ಲೀನ್-ಹೂ ಖರೀದಿ-ತಳಿರು ತೋರಣ-ಬಣ್ಣದ ಪೇಪರ್ ಕೊಳ್ಬೇಕಂತೆ.

0

ಬೆಂಗಳೂರು: ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂ ಗೂ ಬೆಲೆನೇ ಇಲ್ಲವಾಗಿದೆ.100 ರೂ ನೋಟ್ ಕಳ್ಳೆಪುರಿಯಂತೆ ಖರ್ಚಾಗಿ ಕೈಯಲ್ಲಿ ಚಿಲ್ಲರೆನೂ ಉಳಿಯೊಲ್ಲ..ಅಂತದ್ದರಲ್ಲಿ 100 ರೂಗೆ ಒಂದಿಡೀ ಬಸ್ ನ್ನು ಕ್ಲೀನ್ ಮಾಡಿ,ಪೂಜೆ-ಡೆಕೋರೇಟ್ ಮಾಡಿ,ಸಂಭ್ರಮಿಸಿ ಎಂದ್ರೆ ಸಾಧ್ಯನಾ.. ಉದಾಹರಣೆಗೆ ನೋಡಿ..

*ಹೂವು,( ಒಂದು ಮೊಳ ಹೂವು-80-100 ರೂ)

*ಬಣ್ಣದ ಕಾಗದ( ಒಂದು ರೋಲ್ 50 ರೂ),

*ತಳಿರು-ತೋರಣ( ಕನಿಷ್ಠ 100 ರೂ),

*ಬೂದುಗುಂಬಳ ಕಾಯಿ(100-150 ರೂ),

*ನಿಂಬೆಹಣ್ಣು(ಕನಿಷ್ಠ 8 ಚಕ್ರಕ್ಕೆ 16 ಬೇಕು-100 ರೂ),

*ತೆಂಗಿನಕಾಯಿ(ಪೂಜಾಯೋಗ್ಯ 35-40 ರೂ) ಕೊಳ್ಳಲು ಆಗುತ್ತದಾ?

ಪರಿಸ್ತಿತಿ ಹೀಗಿರುವಾಗ 100 ರೂನಲ್ಲಿ ಎಲ್ಲವನ್ನು ಖರೀದಿಸಿ ಎಂದ್ರೆ ಆಗೋದ್ಹೇಗೆ..ಆದ್ರೂ ಅಷ್ಟರಲ್ಲೇ ಎಲ್ಲವನ್ನು ಮುಗಿಸಿ ಎಂದು ಫರ್ಮಾನ್ ಹೊರಡಿಸಿದ್ದಾರೆ ಕೆಎಸ್ ಆರ್ ಟಿಸಿ,ಬಿಎಂಟಿಸಿ  ಸೇರಿದಂತೆ ನಾಲ್ಕು ನಿಗಮಗಳಿಗೆ ಕೆಎಸ್ ಆರ್ ಟಿಸಿ ಮುಖ್ಯಯಾಂತ್ರಿಕ ಅಭಿಯಂತರರು.ಆದರೆ  ಈ ಸುತ್ತೋಲೆಗೆ ನಿಗಮಗಳಲ್ಲೇ ಅಪಸ್ವರ ವ್ಯಕ್ತವಾಗಿದೆ. ಈ  ಸುತ್ತೋಲೆ ಕನ್ನಡ ಫ್ಲಾಶ್ ನ್ಯೂಸ್ ಗೆ  ಲಭ್ಯವಾಗಿದೆ.

ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಸೇರಿದಂತೆ 4  ನಿಗಮಗಳಲ್ಲಿ ಆಯುಧ ಪೂಜೆಗೆ ಅದರದೇ ಆದ ಮಹತ್ವವಿದೆ. ವರ್ಷವಿಡೀ ತಾವು ಬಳಸುವ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ಪೂಜೆ ಮಾಡುವುದೇ ಡ್ರೈವರ್ಸ್-ಕಂಡಕ್ಟರ್‍ಸ್‌ಗೆ ಎಲ್ಲಿಲ್ಲದ ಸಂಭ್ರಮ. ಬೇರೆ ಯಾವುದೇ ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸದಷ್ಟು ಖುಷಿ, ಸಂತೋಷವನ್ನು ಆಯುಧಪೂಜೆಯಲ್ಲಿ ಅನುಭವಿಸುತ್ತಾರೆ. ಇದು ಆಡಳಿತ ಮಂಡಳಿಗೂ ಗೊತ್ತು. ಹಾಗಾಗಿಯೇ ಬಸ್‌ಗಳ ಸ್ವಚ್ಛತೆ ಹಾಗೂ ಸಿಂಗಾರಕ್ಕೆ ಒಂದಷ್ಟು ಹಣವನ್ನು ಬಿಡುಗಡೆ ಮಾಡುವ ಸಂಪ್ರದಾಯವೂ ಇದೆ.

ಇದೆಲ್ಲಾ ಸರಿ. ಆದರೆ ಬಸ್‌ಗಳ ಸ್ವಚ್ಛತೆ, ಸಿಂಗಾರ ಹಾಗೂ ಪೂಜೆಗೆ ಬೇಕಾದಷ್ಟು ಹಣವನ್ನು ಬಿಡುಗಡೆ ಮಾಡಬೇಕಲ್ಲವೇ? ನಿಮಗೆ ಆಶ್ಚರ್ಯವಾಗಬಹುದು. ಆಡಳಿತ ಮಂಡಳಿ ಪ್ರತಿಯೊಂದು ಡಿಪೋಗೂ ಬಿಡುಗಡೆ ಮಾಡುವ ಹಣ ಎಷ್ಟು ಗೊತ್ತೇ? ಈ ಬಾರಿ ಸುತ್ತೋಲೆಯಲ್ಲಿ ಪ್ರತಿ ವಾಹನಕ್ಕೆ ರೂ. 100 ರೂ, ಪ್ರತಿ ಡಿಪೋಗೆ 1,000 ರೂ. ಹಣವನ್ನು ಬಸ್‌ಗಳ ಸ್ವಚ್ಛತೆ, ಅಲಂಕಾರ, ಡಿಪೋಗಳ ಸೌಂದರ್ಯ ಹಾಗೂ ಯಂತ್ರೋಪಕರಣಗಳ ಪೂಜಾ ಕಾರ್ಯಕ್ಕೆ ಬಿಡುಗಡೆ ಮಾಡಿರುವುದಾಗಿ ಮುಖ್ಯ ಯಾಂತ್ರಿಕ ಅಭಿಯಂತರರು ತಿಳಿಸಿದ್ದಾರೆ.

ಆದರೆ ನೀವೇ ಆಲೋಚನೆ ಮಾಡಿ. ಇಷ್ಟು ಕಡಿಮೆ ಹಣದಲ್ಲಿ ಬಸ್‌ಗಳನ್ನು ಸಿಂಗರಿಸಲು ಸಾಧ್ಯವೇ? ಹೂವು,( ಒಂದು ಮೊಳ ಹೂವು-80-100 ರೂ) ಬಣ್ಣದ ಕಾಗದ( ಒಂದು ರೋಲ್ 50 ರೂ), ತಳಿರು-ತೋರಣ( ಕನಿಷ್ಠ 100 ರೂ), ಬೂದುಗುಂಬಳ ಕಾಯಿ(100-150 ರೂ), ನಿಂಬೆಹಣ್ಣು(ಕನಿಷ್ಠ 8 ಚಕ್ರಕ್ಕೆ 16 ಬೇಕು-100 ರೂ), ತೆಂಗಿನಕಾಯಿ(ಪೂಜಾಯೋಗ್ಯ 35-40 ರೂ) ಕೊಳ್ಳಲು ಆಗುತ್ತದಾ? ಈ ಎಲ್ಲಾ  ಸತ್ಯ ಗೊತ್ತಿದ್ದರೂ 100  ರೂ.ಗಳನ್ನು ಪ್ರತಿ ಬಸ್ ಅಲಂಕಾರಕ್ಕೆ ನೀಡುತ್ತಿರುವುದು ಕಾಟಾಚಾರವಲ್ಲದೆ ಇನ್ನೇನು?

ಈ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್  ಕೆಲವು ಘಟಕಗಳ ನೌಕರರನ್ನು ಸಂಪರ್ಕಿಸಿ 100 ರೂ.ನಲ್ಲಿ ಇಷ್ಟೆಲ್ಲಾ ಮಾಡಲು ಸಾಧ್ಯವಾ? ಎಂದು ಪ್ರಶ್ನಿಸಿತ್ತು ಕೂಡಾ. ಆಗ, ಕೊರೋನಾ ಇರುವ ಕಾರಣಕ್ಕೆ ನಾವು ಈ ಬಾರಿ ಆಯುಧಪೂಜೆ ಮಾಡುವುದೇ ಬೇಡ ಎನ್ನುವ ಆಲೋಚನೆಯಲ್ಲಿದ್ದೆವು. ಆದರೆ ನಮಗೆ ಅನ್ನ ನೀಡುವ ವಾಹನಗಳಿಗೆ ಗೌರವ ಕೊಡಬೇಕೆನ್ನುವ ಒಂದೇ ಒಂದು ಸಂಪ್ರದಾಯದ ಉದ್ದೇಶಕ್ಕೆ ಅತ್ಯಂತ ಸರಳ ವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಹಾಗಂತ ಇಷ್ಟು ಕಡಿಮೆ ಹಣದಲ್ಲಿ ಆಯುಧ ಪೂಜೆ ಮಾಡುವುದು ಸಾಧ್ಯವೇ ಇಲ್ಲ. ಈ ಸತ್ಯ ನಮ್ಮ ಆಡಳಿತ ಮಂಡಳಿಗೂ ಗೊತ್ತು. ಆದರೂ ಹಣ ಬಿಡುಗಡೆ  ಎಂದು ಬೇಸರ ವ್ಯಕ್ತಪಡಿಸ್ತಾರೆ ನೌಕರರು.

ಅದೊಂದು ಕಾಲವಿತ್ತು..ಆ ವೇಳೆ ಇದ್ದಂಥ ಉಪೇಂದ್ರ ತ್ರಿಪಾಠಿಯಂತಹ ಎಂ.ಡಿ.ಗಳಿದ್ದ ಸಂದರ್ಭದಲ್ಲಿ ಬೋನಸ್ ಕೊಟ್ಟಿದ್ದೇ ಕೊನೆ. ಆನಂತರ ಬೋನಸ್ ಎನ್ನುವ ಶಬ್ದವನ್ನೇ ಕೇಳಿಲ್ಲ…! ಈ ಎಂ.ಡಿ.ಗಳ ಅವಧಿಯಲ್ಲಾದರೂ ಆ ಬೋನಸ್ ಸಿಗುವಂತಾದರೆ ನಮಗಿಂತ ಖುಷಿ ಪಡುವವರು ಇನ್ನೊಬ್ಬರಿಲ್ಲ. 2007-080 ರಲ್ಲಿನ ಗತ ವೈಭವ ಮರಳಿತು ಎನ್ನುವ ಖುಷಿಯಲ್ಲಿ ಸಂಭ್ರಮಿಸಿಬಿ ಡುತ್ತೇವೆ. ಆಯುಧ ಪೂಜೆಗೆ ಹಣ ನೀಡುವ ಅವಶ್ಯಕತೆ ನಮಗಿಲ್ಲ. ಅದರ ಬದಲಿಗೆ ಬೋನಸ್ ಕೊಟ್ಟರೆ ನಾವು ನಮ್ಮ ಕುಟುಂಬ ಸಂಭ್ರಮಿಸುತ್ತೇವೆ ಎನ್ನುತ್ತಾರೆ ನೌಕರರು.ಅದೇನೇ ಆಗಲಿ, ಕೆಎಸ್ ಆರ್ ಟಿಸಿ ಸೇರಿದಂತೆ ನಾಲ್ಕು ನಿಗಮಗಳಲ್ಲಿ ಈ ಬಾರಿ ಆಯುಧಪೂಜೆ ಮಾಡೊಕ್ಕೆ 100 ರೂ ಗಿಪ್ಟ್ ನೀಡಿರುವುದಕ್ಕೆ ಇಡೀ ನೌಕರ ಸಮುದಾಯ ಬೇಸರ ವ್ಯಕ್ತಪಡಿಸಿರುವುದಂತೂ ಸತ್ಯ.

Spread the love
Leave A Reply

Your email address will not be published.

Flash News