ರಾಜ್ಯ ವನ್ಯಜೀವಿ ಮಂಡಳಿಗೆ ಯಲಹಂಕ MLA ವಿಶ್ವನಾಥ್ ಸುಪುತ್ರ ಅಲೋಕ್ – ನೇಮಕಾತಿ ಮಾನದಂಡದ ಬಗ್ಗೆ ಪರಿಸರವಾದಿಗಳ ಆಕ್ಷೇಪ..!?

0

ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಗೆ ನೇಮಕಗೊಂಡಿರುವವರ ಹಿನ್ನಲೆ ಸಾಕಷ್ಟು ಚರ್ಚೆಗಿಡಾಗುತ್ತಿದೆ. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ ಆರೋಪ ಎದುರಿಸುತ್ತಿರುವವರಿಗೆಲ್ಲಾ ಸರ್ಕಾರದ ಮಂತ್ರಿ ಮಹೋದಯರು ಶಿಫಾರಸ್ಸು ಪತ್ರ ನೀಡಿರುವ ಬಗ್ಗೆ ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡಿರುವ ತಜ್ಞರು ಅಪಸ್ವರ ತೆಗೆದಿದ್ದಾರೆ.ಇದೆಲ್ಲದರ ಜೊತೆಗೆ ಯಲಹಂಕ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಪುತ್ರನನ್ನು ಕೂಡ ವನ್ಯಜೀವಿ ಮಂಡಳಿಗೆ ನಿಯೋಜನೆ ಮಾಡಿರುವುದು ಹೊಸ ವಿವಾದವನ್ನೇ ಸೃಷ್ಟಿಸಿದೆ.

ನಿಗಮ ಮಂಡಳಿಗಳಿಗೆ ಆಯ್ಕೆ ಅಥವಾ ನಿಯೋಜನೆಯ ಮಾನದಂಡವೇ ಬದಲಾಗೋಗಿದೆ. ವಿಷಯ ಪರಿಣಿತರು,ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳನ್ನೇ ನಿಯೋಜನೆ ಮಾಡಬೇಕೆನ್ನುವ ನಿಯಮವನ್ನು ಯಾವುದೇ ಸರ್ಕಾರ ಬಂದ್ರೂ ಅದನ್ನು ಗಾಳಿಗೆ ತೂರುತ್ತಲೇ ಬಂದಿದೆ.ಇದಕ್ಕೆ ಹಿಂದಿನ ಮೈತ್ರಿ ಸರ್ಕಾರವೂ ಹೊರತಲ್ಲ.ಹಾಗೆಯೇ ಹೀಗಿರುವ ಬಿಜೆಪಿ ಸರ್ಕಾರವೂ ಈ ಆಪಾದನೆಯಿಂದ ಮುಕ್ತವಾಗಿಲ್ಲ.ಇದಕ್ಕೆ ಸಾಕಷ್ಟು ನಿಗಮ ಮಂಡಳಿಗಳಿಗೆ ನಡೆದಿರುವ ನೇಮಕಾತಿಯೇ ಸಾಕ್ಷಿಯಂತಿದೆ.ಇದೀಗ ಯಲಹಂಕ ಶಾಸಕರ ಸುಪುತ್ರ ಅಲೋಕ್ ವಿಶ್ವನಾಥ್ ರ ನಿಯೋಜನೆಯೂ ವಿವಾದದ ಸುಂಟರಗಾಳಿಯನ್ನೇ ಎಬ್ಬಿಸಿದೆ.

ಮಹತ್ವದ ನಿಗಮ ಮಂಡಳಿಗಳಲ್ಲಿ ರಾಜ್ಯ ವನ್ಯಜೀವಿ ಮಂಡಳಿಯೂ ಹೌದೆನ್ನುತ್ವೆ ಮೂಲಗಳು.ಪ್ರಾಕೃತಿಕ ಸಂಪತ್ತು ಉಳಿಸಿ ಬೆಳೆಸುವ ಹೊಣೆಯಲ್ಲಿ ಈ ಮಂಡಳಿ ಕೆಲಸ ಮಾಡುತ್ತದೆ.ಹಾಗಾಗಿ ಒಂದಷ್ಟು ತುರುಸಿನ ಪೈಪೋಟಿ-ಸ್ಪರ್ಧೆ ಇದ್ದೇ ಇರುತ್ತೆ.ಈ ಬಾರಿಯೂ ಅಂತದ್ದೇ ತುರುಸಿನ ಸ್ಪರ್ಧೆ ಇದ್ದರೂ ಕೆಲವರ ನಿಯೋಜನೆ ವಿಷಯದಲ್ಲಿ ಸರ್ಕಾರ ಸ್ವಹಿತಾಸಕ್ತಿ-ಮಮಕಾರದ ಧೋರಣೆಯನ್ನು ಪ್ರದರ್ಶಿಸಿದೆಯಾ ಎನ್ನುವ ಅನುಮಾನ ಕಾಡುತ್ತೆ.ಏಕೆಂದರೆ ಬೇಲಕೇರಿ ಅದಿರು ಪ್ರಕರಣದಲ್ಲಿ ಆಪಾದಿತವಾಗಿರುವ ದಿನೇಶ್ ಸಿಂಗಿ ಎನ್ನುವವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿರುವುದು ಪರಿಸರವಾದಿಗಳನ್ನು ಕೆಂಡಾಮಂಡಲಗೊಳಿಸಿದೆ.ಅಂದ್ಹಾಗೆ ಈ ದಿನೇಶ್ ಸಿಂಗಿ ಭಾರತ್ ಮೈನ್ಸ್ ಅಂಡ್ ಮಿನರಲ್ಸ್,ಬಿಎಂಎಂ ಇಸ್ಪಾತ್ ಲಿಮಿಟೆಡ್ ನ ಸಿಇಓ ಎನ್ನಲಾಗ್ತಿದೆ.ಈ ಸಂಸ್ಥೆ ಬೇಲಕೇರಿ ಅದಿರು ರಪ್ತಿನ ಅಕ್ರಮದಲ್ಲಿ ಭಾಗಿಯಾಗಿತ್ತೆನ್ನುವ ಆರೋಪವಿದೆ.ದುರಂತವೇನ್ ಗೊತ್ತಾ? ದಿನೇಶ್ ಸಿಂಗಿ ನಿಯೋಜನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಡಿಸಿಎಂ ಡಾ.ಸಿಎನ್ ಅಶ್ವತ್ಥನಾರಾಯಣ ಅವರಂತೆ.

ಇದು ಒಂದಾದ್ರೆ ವಿಶ್ಚನಾಥ್ ಪುತ್ರ ಅಲೋಕ್ ನಿಯೋಜನೆಗೂ ವ್ಯಾಪಕ ಆಕ್ಷೇಪ ಕೇಳಿಬಂದಿದೆ.ಯಾವ ಮಾನದಂಡದಲ್ಲಿ ಅಲೋಕ್ ಅವರನ್ನು ವನ್ಯಜೀವಿ ಮಂಡಳಿ ಸದಸ್ಯನನ್ನಾಗಿ ನಿಯೋಜನೆ ಮಾಡಲಾಗಿದೆ.ಅದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಬೇಕೆಂದು ಪರಿಸರವಾದಿಗಳು ಕನ್ನಡ ಫ್ಲಾಶ್ ನ್ಯೂಸ್ ಮೂಲಕ ಪ್ರಶ್ನಿಸಿದ್ದಾರೆ.ವನ್ಯಜೀವಿ ಮಂಡಳಿ ಸದಸ್ಯರಾಗೊಕ್ಕೆ ಬೇಕಾದ ಮಾನದಂಡಗಳ ಅನ್ವಯವೇ ಅವರ ನೇಮಕಾತಿ ನಡೆದಿದೆ ಎನ್ನುವ ವಿಶ್ವಾಸ ನಮಗಿಲ್ಲ.ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಅವರ ಕೊಡುಗೆಗಳೇನು..ಕೈಯಲ್ಲಿ ಗನ್ ಹಿಡಿದಾಕ್ಷಣ ವನ್ಯಜೀವಿ ಹಾಗೂ ಪರಿಸರವನ್ನು ಉಳಿಸುವ ಕೆಲಸ ಮಾಡಿದ್ದಾರೆನ್ನುವ ಸಮರ್ಥನೆಗೆ ಬರೊಕ್ಕಾಗುತ್ತಾ..?ಎಂದು ಪ್ರಶ್ನಿಸಿದ್ದಾರೆ.

ಸಿಂಗನಾಯಕನಹಳ್ಳಿಯ ಅಲೋಕ್ ವಿಶ್ಚನಾಥ್ ಅವರ ನಿಯೋಜನೆಗೆ ಪೂರಕವಾದ ಶಿಫಾರಸ್ಸನ್ನು ಸಚಿವ ಆರ್.ಅಶೋಕ್,ಸಿಸಿ ಪಾಟೀಲ್ ಹಾಗೂ ಡಾ.ಅಶ್ಚತ್ಥನಾರಾಯಣ ಸೇರಿಕೊಂಡೇ ಮಾಡಿದ್ದಾರೆನ್ನುವ ಮಾತುಗಳಿವೆ.ಇದನ್ನು ಅಂತಿಮವಾಗಿ ಸಿಸಿ ಪಾಟೀಲ್ ಅವರೇ ಅನುಮೋದಿಸಿದ್ದಾರೆ.ಆದರೆ ಅಲೋಕ್ ಅವರು ಫೇಸ್ ಬುಕ್ ನಲ್ಲಿ ಉಲ್ಲೇಖಿಸಿರುವಂತೆ ಅವರು ನ್ಯೂಯಾರ್ಕ್ ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ವ್ಯಾಸಾಂಗ ಮಾಡಿದ್ದಾರೆ.ಬೆಂಗಳೂರಿನ ಪ್ರತಿಷ್ಟಿತ ಬಿಎಂಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.ತಮ್ಮ ತಂದೆ-ತಾಯಿಯವರು ನಡೆಸುತ್ತಿರುವ ವಿಶ್ವವಾಣಿ ಫೌಂಡೇಷನ್ ನಲ್ಲಿ ಟ್ರಸ್ಟಿಯಾಗಿ ಕೆಲಸ ಮಾಡುತ್ತಿರುವುದಾಗಿ ನಮೂದಿಸಿದ್ದಾರೆ.ತಮ್ಮ ಫ್ರೊಫೈಲ್ ನಲ್ಲಿ ಕೊರೊನಾ ವೇಳೆ ತಂದೆ-ತಾಯಿ ಜೊತೆ ಸೇರಿ ಫೌಂಡೇಷನ್ ಮೂಲಕ ಸಹಾಯ ಮಾಡಿರುವ ಒಂದಷ್ಟು ಫೋಟೋಗಳಿವೆ.ಇನ್ನು ವನ್ಯಜೀವಿ ಮಂಡಳಿ ಸದಸ್ಯರಾಗೊಕ್ಕೆ ಬೇಕಾದ ಮಾನದಂಡಗಳಿಗೆ ಪೂರಕವಾಗಿ (ಕೈಯಲ್ಲಿ ಕೋವಿ ಹಿಡಿದ ಫೋಟೋ ಬಿಟ್ಟರೆ ಏನೂ ಇಲ್ಲ). ಯಾವುದೇ ಸಾಕ್ಷ್ಯಗಳಿಲ್ಲ. ಹೀಗಿರುವಲ್ಲಿ ಅವರನ್ನು ವನ್ಯಜೀವಿ ಮಂಡಳಿ ನಾಮನಿರ್ದೇಶಿತ ಸದಸ್ಯರನ್ನಾಗಿ ಹೇಗೆ ನೇಮಕ ಮಾಡಲಾಯಿತೆನ್ನುವ ಪ್ರಶ್ನೆ ಸಾರ್ವಜನಿಕವಾಗಿ ಮೂಡುತ್ತಿದೆ.

ವನ್ಯಜೀವಿ ಹಾಗೂ ಪರಿಸರ ಕ್ಷೇತ್ರದಲ್ಲಿ  ದಶಕಗಳಿಂದಲೂ ಬೆವರು ಸುರಿಸಿ,ಅಹಿರ್ನಿಷಿಯಾಗಿ ಕೆಲಸ ಮಾಡುತ್ತಿರುವ ಸಾಕಷ್ಟು ವನ್ಯಜೀವಿ ತಜ್ಞರಿದ್ದಾರೆ.ಪರಿಸರ ಪ್ರೇಮಿಗಳಿದ್ದಾರೆ.ಅವರು ಅಪ್ಲಿಕೇಷನ್ ಹಾಕಿದ್ರೂ ಅವರನ್ನು ನಿರ್ಲಕ್ಷ್ಯಿಸಲಾಗ್ತಿದೆ.ಆದರೆ ಅಲೋಕ್ ಅವರಂಥವರಿಗೆ ಅವರು ಕೇಳದಿದ್ದರೂ ರೆಡ್ ಕಾರ್ಪೆಟ್ ಹಾಸಿ ಸದಸ್ಯತ್ವ ಕೊಡಲಾಗ್ತದೆ ಎಂದ್ರೆ ನಮ್ಮ ವ್ಯವಸ್ಥೆ ಎಲ್ಲಿಗೆ ಬಂದು ತಲುಪಿದೆ ಎಂದು ಅರ್ಥ ಮಾಡಿಕೊಳ್ಳಬಹುದು.ಇದನ್ನು ಪ್ರಶ್ನಿಸಿದರೂ ಪ್ರಯೋಜನವಿಲ್ಲ..ಅಲೋಕ್ ಅವರಂಥವ್ರ ನೇಮಕಕ್ಕೆ ಅವರ ತಂದೆ ಒಬ್ಬ ಎಮ್ಮೆಲ್ಲೆ ಎಲ್ಲಕ್ಕಿಂತ ಹೆಚ್ಚಾಗಿ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎನ್ನುವ ಮಾನದಂಡವೇ ಬೇಕಾದಷ್ಟಾಗುತ್ತೆ ಎಂದು ನೋವಿನಿಂದ ಮಾತನಾಡುತ್ತಾರೆ ಪರಿಸರವಾದಿಗಳು,ನಮಗಿಷ್ಟ ಬಂದಂತೆ ನಮ್ಮವರನ್ನು ನೇಮಕ ಮಾಡಿಕೊಳ್ಳುತ್ತೇವೆಂದು ಸರ್ಕಾರ ಘೋಷಿಸಿಕೊಂಡ್ರೆ ಆಸಕ್ತರು ಅರ್ಜಿ ಹಾಕಿ ಚಾತಕಪಕ್ಷಿಗಳಂತೆ ಕಾಯೋದು ತಪ್ಪುತ್ತದೆ..ಅದಕ್ಕೆ ಬೇರೆ ಮಾನದಂಡಗಳ ಪ್ರಕಟಣೆ ಮಾಡೋ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸ್ತಾರೆ.

ವಿಶ್ವನಾಥ್ ಪುತ್ರ ಅಲೋಕ್ ಅವರನ್ನು ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ನಿಯೋಜಿಸಿರುವಂತದ್ದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಆದರೆ ಇದನ್ನು ಪ್ರಶ್ನಿಸಿದ್ರೂ ಸಮಾಧಾನಕರವಾದ ಉತ್ತರ-ಪ್ರತಿಕ್ರಿಯೆ ಸಿಗುತ್ತೆನ್ನುವ ನಂಬಿಕೆ ಇಲ್ಲದಿರುವುದರಿಂದ ಕಣ್ಣೆದುರಿಗಿನ ಅನ್ಯಾಯವನ್ನು ಸಹಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ. 

Spread the love
Leave A Reply

Your email address will not be published.

Flash News