ಒಂದೊಂದು ಚಾನೆಲ್-ಪೇಪರ್ ಒಬ್ಬೊಬ್ಬ ಅಭ್ಯರ್ಥಿಯ  “ವ್ಯಕ್ತಿಪೂಜೆ”ಗೆ ಸೀಮಿತವಾಗ್ತಿವೆಯಾ? ಮಾದ್ಯಮಗಳ ಬದ್ಧತೆ ಮಣ್ಣುಪಾಲಾಯ್ತಾ..?!   

0

ಬೆಂಗಳೂರು: ಆರ್.ಆರ್.ನಗರ ಉಪಕದನದ ವಿಷಯದಲ್ಲಿ ಮಾಧ್ಯಮಗಳು  ನಡೆದುಕೊಳ್ಳುತ್ತಿರುವ ರೀತಿ ಇಂತದ್ದೊಂದು ಪ್ರಶ್ನೆಯನ್ನು ಸಾರ್ವಜನಿಕವಾಗಿ ಸೃಷ್ಟಿಸಿದೆ.ಒಂದೊಂದು ಚಾನೆಲ್-ಒಂದೊಂದು ಪೇಪರ್  ಒಬ್ಬೊಬ್ಬ ಅಭ್ಯರ್ಥಿಯ ಬೆನ್ನಿಗೆ ನಿಂತಂತೆ ಕೆಲಸ ಮಾಡಿದ್ರೆ  ಮಾಧ್ಯಮಗಳ ಸಂವೇದನೆ, ಬದ್ಧತೆ, ನಿಷ್ಠೆ, ಪ್ರಾಮಾಣಿಕತೆ, ತತ್ವ ಸಿದ್ಧಾಂತ, ಬಾಧ್ಯಸ್ಥಿಕೆಯನ್ನು ಪ್ರಶ್ನಿಸಲೇಬೇಕಾಗುತ್ತದೆಯೆಲ್ಲವೇ ಎಂದು ಜನಸಾಮಾನ್ಯ ಶಂಕಿಸಲಾರಂಭಿಸಿದ್ದಾನೆ..ಈ ವಿಷಯದಲ್ಲಿ ಮಾದ್ಯಮಗಳು ನಡೆದುಕೊಳ್ಳುತ್ತಿರುವ ರೀತಿಯೂ ಹಾಗೆಯೇ ಇದೆ..ಇದು ಮತದಾರರನ್ನು ಟೀಕಿಸುವ ಕಾಲವಾಗದೆ ಮಾದ್ಯಮಗಳಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸನ್ನಿವೇಶವಾಗ್ಬೇಕೆನ್ನುವುದು ಮಾದ್ಯಮತಜ್ಞರ ಅಭಿಪ್ರಾಯ ಕೂಡ.

ಆರ್.ಆರ್.ನಗರ ಬೈ ಎಲೆಕ್ಷನ್ ಸದ್ಯದ ಮಟ್ಟಿಗೆ ಹೈ ವೋಲ್ಟೇಜ್ ಕದನ ಕಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕಾವಿನ ಮುಂದೆ ಶಿರಾ ರಣಕಣವೂ ಸೊರಗಿದ್ದು ಎಲ್ಲರಿಗೂ ಗೊತ್ತಿದೆ. ಯಾವುದೇ ಟಿ.ವಿ. ಚಾನೆಲ್‌ಗಳನ್ನು ಹಾಕಿದ್ರೂ ಹಾಗೆ ಪತ್ರಿಕೆ ತಿರುವಾಕಿದ್ರೂ ಕಂಡುಬರುವುದು ಆರ್.ಆರ್.ನಗರ ಎಲೆಕ್ಷನ್ ಚಿತ್ರಣ ಮಾತ್ರ. ಚುನಾವಣೆಗೆ ಸಂಬಂಧಿಸಿದ ಸುದ್ದಿಗಳು ನಿಷ್ಪಕ್ಷಪಾತ ರೀತಿಯಲ್ಲಿ ಮೂಡಿಬಂದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಕಣದಲ್ಲಿರುವುದು ಕೇವಲ ಮೂವರೇ ಅಭ್ಯರ್ಥಿಗಳು ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಕಣದಲ್ಲಿರುವ ಇತರೆ ಅಭ್ಯರ್ಥಿಗಳು ಹಾಗೂ ಮತದಾರರನ್ನು ಕೆಂಡಾಮಂಡಲಗೊಳಿಸಿದೆ.

ಪಕ್ಷೇತರ ಅಭ್ಯರ್ಥಿ ಮಹೇಶ್ ಗೌಡ
ಪಕ್ಷೇತರ ಅಭ್ಯರ್ಥಿ ಮಹೇಶ್ ಗೌಡ
ಆಮ್ ಆದ್ಮಿ ಪಕ್ಷದ ಅರವಿಂದ್
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿರುವುದು ಸತ್ಯ. ಈ ಮೂವರಲ್ಲೇ ಇಬ್ಬರ ನಡುವೆ ತುರುಸಿನ ಸ್ಪರ್ಧೆ ಇರುವುದು ಕೂಡ ಅಷ್ಟೇ ನಿಜ. ಇದನ್ನು ಮಾಧ್ಯಮಗಳು ಬಿಂಬಿಸಲಿ ಬೇಸರವಿಲ್ಲ. ಹಾಗಂಥ ಕಣದಲ್ಲಿರುವ ನಮ್ಮನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ನಮ್ಮ ಬಗ್ಗೆ ದೊಡ್ಡಮಟ್ಟದ ಪ್ರಚಾರವೇನೂ ಬೇಡ. ಅಟ್‌ಲೀಸ್ಟ್ ನಾವು ಕಣದಲ್ಲಿದ್ದೇವೆ. ಪ್ರಚಾರವನ್ನೂ ಮಾಡುತ್ತಿದ್ದೇವೆ ಎಂಬ ವಿಷಯವನ್ನು ಟಿ.ವಿ., ಪತ್ರಿಕೆಗಳಲ್ಲಿ ತೋರಿಸದಿರುವಷ್ಟು ಬೇಡವಾದೆವೇ? ಎಂಬ ನೋವನ್ನು ವ್ಯಕ್ತಪಡಿಸುತ್ತಾರೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೆ. ಬಿ.

ಮಾಧ್ಯಮಗಳು ಹಾಗೂ ಅವುಗಳ ಅಭ್ಯರ್ಥಿಯೊಂದಿಗಿನ ವ್ಯವಹಾರದ ಬಗ್ಗೆ ನಮ್ಮ ಯಾವುದೇ ಆಕ್ಷೇಪ, ತಗಾದೆಗಳಿಲ್ಲ. ಅವರು ಪ್ರಚಾರ ನೀಡಲಿ. ಅದರ ಬಗ್ಗೆ ಬೇಸರವಿಲ್ಲ. ಆದರೆ ನಮ್ಮನ್ನೂ ಸ್ವಲ್ಪ ಪ್ರಮಾಣದಲ್ಲಿ ಬಿಂಬಿಸಿದರೆ ಮಾಧ್ಯಮಗಳ ನೈತಿಕತೆಯನ್ನು ಪ್ರಶ್ನಿಸುವ ಪ್ರಮೇಯವೇ ಬರುವುದಿಲ್ಲ. ಅಲ್ಲದೆ ಎಲ್ಲಾ ಚುನಾವಣೆಗಳು ಅಭ್ಯರ್ಥಿಗಳು ಹರಿಸುವ ಹಣದ ಹೊಳೆ ಮೇಲೆಯೇ ನಿರ್ಧರಿತವಾದರೆ ಹೇಗೆ? ಅದರಿಂದಾಚೆ ಸುದ್ದಿ ಮಾಡುವುದು ಮಾಧ್ಯಮಗಳ ಬಾಧ್ಯಸ್ಥಿಕೆಯಲ್ಲವೇ? ನಾವು ಹಣ ಅಥವಾ ಜಾಹೀರಾತು ಕೊಟ್ಟು ಪ್ರಚಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ನಮ್ಮ ಆರ್ಥಿಕತೆಯೂ ಅಷ್ಟು ಸ್ಥಿರವಾಗಿಲ್ಲ.

ನಾವು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸುವ ಉದ್ದೇಶದಲ್ಲಿದ್ದೇವೆ. ಇದು ಮಾಧ್ಯಮಗಳಿಗೂ ಗೊತ್ತು. ಹಾಗಿದ್ದಾಗ್ಯೂ ಕೇವಲ ಮೂವರು ಅಭ್ಯರ್ಥಿಗಳಿಗೆ ಪ್ರಚಾರ ನೀಡಿ ಸ್ಪರ್ಧೆಯನ್ನು ಅವರ ನಡುವೆಯೇ ಸೀಮಿತಗೊಳಿಸುವುದು ಎಷ್ಟು ಸರಿ? ಮತದಾರರ ಮನಃಸ್ಥಿತಿಯನ್ನು ಇದು ಕೆಡಿಸುವುದಿಲ್ಲವೇ? ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆನ್ನುವ ನಿರ್ಧಾರದ ಮೇಲೆ ಪ್ರಭಾವ ಬೀರುವುದಿಲ್ಲವೆ ಎಂಬುದು ಕಹಳೆ ಗುರುತಿನಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಮಹೇಶ್ ಗೌಡ ಅಳಲು.

ಇದೆಲ್ಲವನ್ನೂ ಗಮನಿಸಿದಾಗ ಮಾಧ್ಯಮಗಳು ಎಲ್ಲೋ ಒಂದು ಕಡೆ ತಮ್ಮ ಹೊಣೆಗಾರಿಕೆ ಮತ್ತು ಬದ್ಧತೆಯನ್ನು ಮರೆತು ಕೆಲಸ ಮಾಡುತ್ತಿವೆಯೇ ಎನ್ನುವ ಅನುಮಾನ ಮೂಡುವುದು ಸಹಜ. ಕೇವಲ ವ್ಯಕ್ತಿ ಓಲೈಕೆಗೆ ಸೀಮಿತವಾಗಿರುವ ಚುನಾವಣಾ ಸುದ್ದಿಗಳ ಪ್ರಸಾರವನ್ನೇ ಆದ್ಯತೆಯನ್ನಾಗಿಸಿಕೊಂಡರೆ ಹೇಗೆ? ಮಾಧ್ಯಮಗಳು ನಿಜಕ್ಕೂ ಈ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೂವರು ಅಭ್ಯರ್ಥಿಗಳಂತೆ ಉಳಿದವರೂ ಕೂಡ ಚುನಾವಣಾ ಕಣದಲ್ಲಿದ್ದಾರೆ..ಇದನ್ನು ಮಾದ್ಯಮಗಳು ಮರೆಯಬಾರದು..ಅಷ್ಟೇ. 

Spread the love
Leave A Reply

Your email address will not be published.

Flash News