ಜನಸೇವೆಗೆ ಚಕ್ಕರ್-ವೈದ್ಯಕೀಯ ವೆಚ್ಚಕ್ಕೆ ಮಾತ್ರ ಹಾಜರ್! ಉಗ್ರಪ್ಪ- ಕೊಂಡಯ್ಯ-ರೇವಣ್ಣ,ಸರವಣರಿಂದ ಲಕ್ಷ ಲಕ್ಷ ವೈದ್ಯಕೀಯ ವೆಚ್ಚ ಮಂಜೂರು

0
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್

ಬೆಂಗಳೂರು:ಇವರಿಗೆ ಜನರ ಪರ ಕೆಲಸ ಮಾಡ್ಲಿಕ್ಕೆ ಸಿಕ್ಕಾಪಟ್ಟೆ ಉದಾಸೀನ.ಆದ್ರೆ ಸರ್ಕಾರದಿಂದ ಯಾವುದೇ ಸೌಲಭ್ಯ-ಸವಲತ್ತು ಸಿಗುತ್ತೆಂದ್ರೆ ಅದನ್ನು ಪಡೆಯೊಕ್ಕೆ ಕ್ಯೂನಲ್ಲಿ ನಿಂತ್ ಬಿಡ್ತಾರೆ.ಅದು ಸಿಗೋವರೆಗೂ ಬೇತಾಳದಂತೆ ಬೆಂಬಿಡದೆ ಕಾಡು ತ್ತಾರೆ.ಅದೇ ಕ್ಷೇತ್ರದ ಜನರಿಗೆ ತೊಂದರೆ ತಾಪತ್ರೆಯಗಳು ಬಂತೆಂದ್ರೆ ತಮ್ಮ ಹಾಗೂ ತಮ್ಮ ಕುಟುಂಬದ ವಿಷಯದಲ್ಲಿ ತೋರುವಂಥ ಕಾಳಜಿಯನ್ನೇ ಮರೆತೇ ಬಿಡ್ತಾರೆ.ಇದಕ್ಕೆ ವೈದ್ಯಕೀಯ ವೆಚ್ಚವೂ ಕೂಡ ಒಂದೇ.ಎಮ್ಮೆಲ್ಸಿಗಳು 2018 ರಿಂದ 2020ರವರೆಗೆ ಮಂಜೂರು ಮಾಡಿಸಿಕೊಂಡಿರುವ ವೈದ್ಯಕೀಯ ವೆಚ್ಚವೂ ಇದಕ್ಕೆ ಹೊರತಾಗಿಲ್ಲ.

ಸರ್ಕಾರದಲ್ಲಿ ಕುಳಿತು ಶಾಸನ ರೂಪಿಸಿ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ ನಮ್ಮ ಚುನಾಯಿತ ಪ್ರತಿನಿಧಿಗಳು ಕೆಲಸಕ್ಕೆ ಚಕ್ಕರ್, ಊಟಕ್ಕೆ ಮಾತ್ರ ಹಾಜರ್  ಎನ್ನುವ ಮನಸ್ಥಿತಿಯವರು. ಜನಪರವಾದ ಕೆಲಸ ಬೇಕಾದ್ರೂ ಮರೆತಾರು, ಆದರೆ ತಮಗೆ ಸಿಗುವ ಸೌಲಭ್ಯವನ್ನು ಚಿಕ್ಕಾಸೂ ಬಿಡದೆ ಪಡೆಯುವುದನ್ನು ಮಾತ್ರ ಮರೆಯೋಲ್ಲ ಎನ್ನುವುದು ಅವರಿಗೆ ಸಿಗುವ ಹಲವಾರು ಭತ್ಯೆಗಳ ವಿಚಾರದಲ್ಲಿ ಸಾಬೀತಾಗಿದೆ. ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರಿಗೆ ನೀಡಿರುವ ದಾಖಲೆಗಳು ಇದನ್ನು ಪುಷ್ಟೀಕರಿಸುತ್ತವೆ.

ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು, ವಿಧಾನ ಪರಿಷತ್ ಸದಸ್ಯರು 2018 ರಿಂದ 2020ರ ಅವಧಿಯಲ್ಲಿ ಎಷ್ಟು ವೈದ್ಯಕೀಯ ವೆಚ್ಚವನ್ನು  ಬಳಸಿಕೊಂಡಿದ್ದಾರೆ. ಎನ್ನುವುದನ್ನು ತಿಳಿಯಲು ಮಾಹಿತಿ ಹಕ್ಕು ಕಾಯಿದೆಯಲ್ಲಿ ಅರ್ಜಿ ಗುಜರಾಯಿಸಿದರು. ಇದಕ್ಕೆ ಪೂರಕವಾಗಿ ನೀಡಿರುವ ಉತ್ತರದ ಪ್ರತಿಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಲಭಿಸಿವೆ. ಇದರ EXCLUSIVE  ಡೀಟೈಲ್ಸ್ ಇಲ್ಲಿದೆ.

2018ರಲ್ಲಿ ಮಂಜೂರಾದ ವೈದ್ಯಕೀಯ ವೆಚ್ಚ: 2018ರ ಅವಧಿಯಲ್ಲಿ 54  ಎಂಎಲ್‌ಸಿಗಳ ಪೈಕಿ ಅತಿ ಹೆಚ್ಚು ವೈದ್ಯಕೀಯ ಭತ್ಯೆಯನ್ನು ಪಡೆದುಕೊಂಡ ಎಂಎಲ್‌ಸಿ ಸಾಲಿನಲ್ಲಿ ಇಬ್ಬರಿದ್ದಾರೆ. ವಿ.ಎಸ್.ಉಗ್ರಪ್ಪ ಹಾಗೂ ಚೌಡರೆಡ್ಡಿ ತೂಪಲ್ಲಿ ಇದ್ದಾರೆ. ಉಗ್ರಪ್ಪ 8.34  ಲಕ್ಷ ವೈದ್ಯಕೀಯ ಭತ್ಯೆಯನ್ನು ಪಡೆದಿದ್ದರೆ, ಚೌಡರೆಡ್ಡಿ ತೂಪಲ್ಲಿ 8.9 ಲಕ್ಷ ಹಣ ಪಡೆದಿದ್ದಾರೆ. ಅವರ ನಂತರ, ಕೆ.ಸಿ.ಕೊಂಡಯ್ಯ 6.98 ಲಕ್ಷ, ಸೈಯದ್ ಮುದೀರ್ ಆಗಾ 3.27 ಲಕ್ಷ, ಕೆ.ಬಿ.ಶಾಣಪ್ಪ 2.84 ಲಕ್ಷ, ಟಿ.ಎ.ಸರವಣ 2.23  ಲಕ್ಷ ಪಡೆದಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಕಾಂತೇಶ್ ಅವರ ಹೆಸರು ಪ್ರಸ್ತಾಪ:ವಿಶೇಷ ಹಾಗೂ ಆಶ್ಚರ್ಯದ ವಿಷಯವೆಂದರೆ ಇದೇ ವರ್ಷದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪರವರ ಪುತ್ರ ಕೆ.ಈ.ಕಾಂತೇಶ್ ಅವರ ಹೆಸರು ಉಲ್ಲೇಖವಾಗಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಕಾಂತೇಶ್ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಅವರೇಗೆ ವೈದ್ಯಕೀಯ ವೆಚ್ಚವನ್ನು ಮಂಜೂರು ಮಾಡಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಕಾರಣ 2018 ರಲ್ಲಿ 5  ಬಾರಿ ತಲಾ ಒಂದು ಲಕ್ಷ ಹಣವನ್ನು ವೈದ್ಯಕೀಯ ಭತ್ಯೆಯಾಗಿ ಮಂಜೂರು ಮಾಡಿಸಿಕೊಂಡಿರುವುದು ಆರ್‌ಟಿಐ ದಾಖಲೆಗಳಲ್ಲಿ ಬಹಿರಂಗವಾಗಿದೆ.

2019ರಲ್ಲಿ ಮಂಜೂರಾದ ವೈದ್ಯಕೀಯ ವೆಚ್ಚ:ಇನ್ನು 2019 ರ ಸಾಲಿನಲ್ಲಿ ಹೆಚ್.ಎಂ.ರೇವಣ್ಣ ಅತಿ ಹೆಚ್ಚು ಅಂದರೆ 8.29 ಲಕ್ಷ, ಟಿ.ಎ.ಸರವಣ 7.4 ಲಕ್ಷ, ಆರ್.ಪ್ರಸನ್ನಕುಮಾರ್  2.6 ಲಕ್ಷ, ಜಯಮ್ಮ  1.3 ಲಕ್ಷ ವೈದ್ಯಕೀಯ ವೆಚ್ಚವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಹಾಗೆಯೇ

2020 ರಲ್ಲಿ ಮಂಜೂರಾದ ವೈದ್ಯಕೀಯ ವೆಚ್ಚ: ಇನ್ನು 2020 ರಲ್ಲಿ ಬಿ.ಎ.ಹಸನಬ್ಬ 6.28 ಲಕ್ಷ, ಎಸ್. ರುದ್ರೇಗೌಡ 5.73 ಲಕ್ಷ, ಎಸ್.ವಿ.ಸಂಕನೂರ 2.31 ಲಕ್ಷ, ಹೊನ್ನಪ್ಪ 2.9 ಲಕ್ಷ ಹಣವನ್ನು ವೈದ್ಯಕೀಯ ವೆಚ್ಚವಾಗಿ ಹಣವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆರ್‌ಟಿಐನಲ್ಲಿ ನೀಡಲಾಗಿದೆ.

ಒಂದು ಲಕ್ಷದ ಒಳಗೆ ಹಣವನ್ನು ಮಂಜೂರು ಮಾಡಿಸಿಕೊಂಡ ಎಂಎಲ್‌ಸಿಗಳು ಹೆಚ್ಚಿದ್ದಾರೆ. ಆದೇನೇ ಆಗಲಿ ಸರ್ಕಾರ ಹಣ ಕೊಡುತ್ತದೆ ಎಂಬ ಕಾರಣಕ್ಕೆ ತಮ್ಮ ಕೈಯಿಂದ ಖರ್ಚು ಭರಿಸುವ ಶಕ್ತಿ ಇದ್ದರೂ, ಸರ್ಕಾರದ ಹಣಕ್ಕೆ ಜಾತಕಪಕ್ಷಿಗಳಂತೆ ಬಾಯಿಬಿಟ್ಟು ಕಾಯುವ ಈ ಜನಪ್ರತಿನಿಧಿಗಳ ಹಪಾಹಪಿತನ ನೋಡಿದರೆ ಅಸಹ್ಯಕರ ಹಾಗೂ ಅಯ್ಯೋ ಎನಿಸುತ್ತದೆ.ಇಂಥಾ ಬಾಳು ಬೇಕಾ ಎನ್ನೋ ಪ್ರಶ್ನೆ ಮೂಡುತ್ತದೆ. 

Spread the love
Leave A Reply

Your email address will not be published.

Flash News