ಭೀಮಾತೀರದಲ್ಲಿ ಮೊರೆದ ಗುಂಡು-ಸಾಹುಕಾರ ಮಹಾದೇವ ಭೈರಗೊಂಡನ ಮೇಲೆ ಫೈರಿಂಗ್ -ಬಲಗೈ ಭಂಟ ಬಾಬುರಾಯ ಸಾವು ..

0
ಸಾಹುಕಾರ ಮಹಾದೇವ ಭೈರಗೊಂಡ
ಸಾಹುಕಾರ ಮಹಾದೇವ ಭೈರಗೊಂಡ

ಬಿಜಾಪುರ: ಭೀಮೆಯ ಮಣ್ಣಿಗೆ ಮತ್ತೆ ರಕ್ತತರ್ಪಣವಾಗಿದೆ.ಪಾರಂಪರಿಕ ದ್ವೇಷಕ್ಕೆ ಪ್ರತೀಕಾರವಾಗಿ ಗುಂಡಿನ ಸದ್ದು ಭೀಮೆ ತೀರದಲ್ಲಿ ಮೊಳಗಿದೆ.ಸಾಹುಕಾರ್ ಮಹಾದೇವ ಭೈರಗೊಂಡನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಭೈರಗೊಂಡನ ಗ್ರಹಚಾರ ನೆಟ್ಟಗಿತ್ತು ಅನ್ಸುತ್ತೆ,ಆತ ಬದುಕುಳಿದಿದ್ದಾನೆ.ಆದ್ರೆ ಆತನ ಜತೆಯಲ್ಲಿದ್ದ ಬಾಬುರಾಯ ಗಂಭೀರ ಗಾಯಗಳಿಂದ ಕೊನೆಯುಸಿರೆಳೆದಿದ್ದಾನೆ.ಮತ್ತೋರ್ವನ ಕಾಲು ಕಟ್ ಆಗಿದೆ.

ಭೀಮೆಯ ತೀರಕ್ಕೂ ರಕ್ತದ ಕಮಿಟು ವಾಸನೆಗೂ  ಇನ್ನಿಲ್ಲದ ಸಂಬಂಧ.. ಹಾಗೆ ನೋಡಿದ್ರೆ ಬಹುಷ: ಇಲ್ಲಿ ನೀರಿಗಿಂತ ರಕ್ತದ ಕೋಡಿ ಹರಿದದ್ದೇ ಹೆಚ್ಚೇನೋ… ಜಮೀನ್ದಾರಿ ಪದ್ಧತಿ ಹಾಗೂ ಊಳಿಗಮಾನ್ಯದ ಹೊಯ್ಲಾಟದಲ್ಲಿ ಬಣಗಳ ನಡುವೆ ದ್ವೇಷ-ರಕ್ತದ ದಾಹ-ಕೊಲೆ-ಗುಂಡಿನ ದಾಳಿ ಕಾಮನ್ ಆಗೋಗಿದೆ.ಇಂದು ನಡೆದದ್ದೂ ಅದರ ಮುಂದುವರೆದ ಭಾಗ ಅಷ್ಟೇ..

ಭೀಮಾ ತೀರದಲ್ಲಿ ನಡೆದ ಗ್ಯಾಂಗ್ ವಾರ್ ಗಳು ಅದೆಷ್ಟೋ..ರಾಜ್ಯವನ್ನೇ ಬೆಚ್ಚಿಬೀಳಿಸಿದಂಥ ರಕ್ತಪಿಪಾಸುಗಳು ಇಲ್ಲಿಯೇ ಹುಟ್ಟಿದವರು.ಅವರಲ್ಲಿ ಚಂದಪ್ಪ ಹರಿಜನ, ಕೇಶಪ್ಪ ತಾವರಖೇಡಾ, ಶಿವಾಜಿ ಬೋರಗಿ, ಮಲ್ಲಿಕಾರ್ಜುನ ಚಡಚಣ… ಹೀಗೆ ಅವರ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸಾಹುಕಾರ ಭೈರಗೊಂಡ ಸಂಚರಿಸುತ್ತಿದ್ದ ಕಾರಿಗೆ ಅರಕೇರಿ ತಾಂಡಾ ಬಳಿ ಇದ್ದಕ್ಕಿದ್ದಂತೆ ಟಿಪ್ಪರ್ ಎದುರಾಗಿದೆ.ಟಿಪ್ಪರ್ ನಿಂದ ಹೊರಬಂದ ದುಷ್ಕರ್ಮಿಗಳು ಮನಸೋಇಚ್ಛೆ ಫೈರ್ ಮಾಡಿದ್ದಾರೆ.ದಾಳಿಯಲ್ಲಿ ಸಾಹುಕಾರನ  ಬಲಭುಜದ ಹಿಂಭಾಗಕ್ಕೆ ಒಂದು ಗುಂಡು ಹೊಕ್ಕಿದೆ.ದಾಳಿಯ ತೀವ್ರತೆ ಹೇಗಿತ್ತೆಂದರೆ ಗುಂಡು ಆತನ ಹೊಟ್ಟೆಗೆ ತಾಗಿ ಹೊರ ಹೋಗಿದೆ.ಆತನ ಜೊತೆಯಲ್ಲಿದ್ದ ಹುಸೇನಿ ಭಜಂತ್ರಿ ತಲೆಗೆ ಗುಂಡು ತಾಗಿದೆ. ಚಾಲಕನ ಕಾಲು‌ ಕಟ್ ಆಗಿದೆ. ಗಾಯಾಳುಗಳಿಗೆ ವಿಜಯಪುರ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಡಚಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿ ನಿರತವಾಗಿದ್ದಾರೆ. ದ್ವೇಷಕ್ಕೆ ಪ್ರತೀಕಾರ ಎನ್ನುವಂತೆ ಪ್ರಕರಣ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮುಂದುವರೆದ ಸಂಚಿಕೆಯಂತೆ ಈ ಕೃತ್ಯಕ್ಕೆ ಪ್ರತೀಕಾರವಾಗಿ ಮತ್ತೊಂದು ತಂಡ ಸೇಡು ತೀರಿಸಿಕೊಳ್ಳದೆ ಅದರ ಉಂಡ ಅನ್ನ ಅರಗದು. ನೀರು ಕುಡಿದಷ್ಟೂ ದಾಹ ಇಂಗದು. ಅಲ್ಲಿಗೆ ಭೀಮೆಯ ಮಣ್ಣಿಗೆ ಮತ್ತಷ್ಟು ರಕ್ತದೋಕುಳಿ ನಿಶ್ಚಿತ.

Spread the love
Leave A Reply

Your email address will not be published.

Flash News