“ಸಿನಿಲಹರಿ”ಕನ್ನಡ ಚಿತ್ರಜಗತ್ತಿನ ಸುದ್ದಿಪ್ರಪಂಚದಲ್ಲಿ ಹೊಸ ಶಖೆ-ಆಯಾಮ-ಕ್ರಾಂತಿಯ ಪ್ರೇರಕ-ಚಾಲನಾ ಶಕ್ತಿಯಾಗಲಿ….

0
ಸಿನಿ ಲಹರಿಯ ಚಾಲನಾಶಕ್ತಿ ದೇಶಾದ್ರಿ ಹೊಸ್ಮನೆ
ಸಿನಿ ಲಹರಿಯ ಚಾಲನಾಶಕ್ತಿ ದೇಶಾದ್ರಿ ಹೊಸ್ಮನೆ
 ಸಿನಿಲಹರಿಯ ಪ್ರೇರಕಶಕ್ತಿಯ ಸಮಾನಮನಸ್ಕ ಗೆಳೆಯ ವಿಜಯಭರಮಸಾಗರ
 ಸಮಾನಮನಸ್ಕ ಪತ್ರಕರ್ತ ಗೆಳೆಯ ವಿಜಯಭರಮಸಾಗರ

ಬೆಂಗಳೂರು:ಸ್ನೇಹಿತ, ದೇಶಾದ್ರಿ ಹೊಸ್ಮನೆ,ತನ್ನ  ಸಮಾನಮನಸ್ಕ ಗೆಳೆಯ ವಿಜಯ ಭರಮಸಾಗರ ಜೊತೆಗೂಡಿ ಲೋಕಾ ರ್ಪಣೆ ಮಾಡಿ ರುವ, ಚಿತ್ರರಂಗಕ್ಕೆ ಸಂಬಂಧಿಸಿದ “ಸಿನಿಲಹರಿ”ಎನ್ನುವ ವೆಬ್ ಸೈಟ್ ಲೋಕಾರ್ಪಣೆಗೆ ಮೊದಲು ಅಭಿನಂದನೆ, ಶುಭಾಷಯ ಹಾಗೂ ಶುಭಹಾರೈಕೆ.ಇವರಿಬ್ಬರ ಹೆಜ್ಜೆಗಳು, ಈಗಾಗ್ಲೇ ಇರುವ ವೆಬ್ ಸೈಟ್ ಗಳಲ್ಲಿ ಒಂದಾಗಿ ಉಳಿಯದೆ ಸುದ್ದಿಸಂಸ್ಥೆಗಳ ಇತಿಹಾಸದಲ್ಲಿ ಮೈಲಿಗಲ್ಲಿನ ವೆಬ್ ಸೈಟಾಗಿ ಉಳಿದು,ಬೆಳೆಯಲಿ ಎನ್ನೋದು ಶುದ್ಧಾಂತಕರಣದ ಆಶಯ.

ಗೆಳೆಯಾ ದೇಶಾದ್ರಿ ಹೊಸ್ಮನಿ,ನಾನು ದಶಕಗಳಿಂದಲೂ ನೋಡುತ್ತಾ ಬಂದಿರುವ ಸಹೃದಯಿ. ವಯಸ್ಸಿನಲ್ಲಿ ನನಗಿಂತ ಒಂದಷ್ಟು ಹಿರಿಯನಾದ್ರೂ, ಹೋಗೋ…ಬಾರೋ..ಎಂದು ಏಕವಚನದಲ್ಲಿ ಮಾತನಾಡುವಷ್ಟು,ಜಗಳಕ್ಕಿಳಿಯುವಷ್ಟರ ಸಲಿಗೆ-ಒಡನಾಟ. ನೋಡೊಕ್ಕೆ ಸೌಮ್ಯ ಹಾಗೂ ನಾಚಿಕೆ ಸ್ವಭಾವದಂತೆ ಕಂಡ್ರೂ  ಕೆಲಸಕ್ಕಿಳಿದ್ರೆ  ಆತ ರಣ.. ಇದು ನಾನು ಆತನಲ್ಲಿ ಕಂಡುಕೊಂಡ ಸತ್ಯ.ಆತನಲ್ಲಿನ ಆ ಅಧಮ್ಯ ಉತ್ಸಾಹವೇ ಅದೆಷ್ಟೋ ಬಾರಿ ಹೊಟ್ಟೆಕಿಚ್ಚು ಹಿಡಿಸಿದ್ದಿದೆ.ಅವನಂತೆ “ನಾನೇಕೆ ಇಲ್ಲ..” ಎನ್ನೋ ಆತ್ಮಾವಲೋಕನಕ್ಕೆ ದೂಡಿದ್ದಿದೆ.

ಮನಸು  ಒಪ್ಪದ್ದನ್ನು ಜಪ್ಪಯ್ಯ ಎಂದ್ರು ಮಾಡದಷ್ಟು ಹಠವಾದಿ ಆತ,.ಅದೇ,ಅನ್ಯಾಯಕ್ಕೆ-ತುಳಿತಕ್ಕೆ ಒಳಗಾದವರನ್ನು ಕಂಡರೆ, ಬೆಂಕಿ ಎದುರಿನ ಬೆಣ್ಣೆಯಷ್ಟು ಸಂವೇದನೆ ಆತನದು.ಇದಕ್ಕೆ ಕಾರಣವೂ ಇದೆ..ಏಕೆಂದ್ರೆ ಆತನ ಬದುಕಿನ ಹಿನ್ನಲೆಯೇ ಅಂತದ್ದು. ಆತ ಜೀವನದಲ್ಲಿ ಸುಖ ಕಂಡಿದ್ದಕ್ಕಿಂತ  ನೋವುಂಡಿದ್ದೇ ಹೆಚ್ಚು. ನಗುವಿಗಿಂತ  ಕಷ್ಟಕಾರ್ಪಣ್ಯ ಅನುಭವಿಸಿದ್ದೇ ಹೆಚ್ಚು.. ದಮನಿತರ ಬೆನ್ನಿಗೆ ನಿಂತು,ತುಳಿತಕ್ಕೊಳಗಾದವರ ಪರ ತನ್ನ ಅಕ್ಷರಗಳ ಮೂಲಕವೇ ಪ್ರತಿಭಟನೆ ನಡೆಸಿ ಶೋಷಿತರ ಮುಖದಲ್ಲಿ ನಗುವನ್ನು ಮೂಡಿಸಿದ ಗೆಳೆಯಾ..ಒಂದೊಂದು ಸುದ್ದಿ ಮೂಲಕವೂ ಒಬ್ಬೊಬ್ಬ ಶತೃವನ್ನೇ  ತನ್ನ ಸುತ್ತಲೇ ಸೃಷ್ಟಿಸಿಕೊಂಡಾತ.  

ಶಿವಮೊಗ್ಗ ಜಿಲ್ಲೆ ಸೊರಬಾದ ಕುಗ್ರಾಮದಿಂದ ಬಂದ ಗೆಳೆಯನ ಪರಿಚಯ ಮೊದಲಾಗಿದ್ದು ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಮುಖೇನ.ಅದಾಗಲೇ ತನ್ನ ಬರಹಗಳಿಂದ ಹೆಸರಾಗಿದ್ದಾತ ದೇಶಾದ್ರಿ.ಆಗೆಲ್ಲಾ  ಹೀಗಿರುವಷ್ಟು ಅನಾಯಾಸವಾಗಿ ಪತ್ರಿ ಕೋದ್ಯಮ ಪ್ರವೇಶಿಸುವುದು ಸಲೀಸಾಗಿರಲಿಲ್ಲ.(ಈಗ ಬಿಡಿ,ಪತ್ರಕರ್ತರಾಗೊಕ್ಕೆಯಾವುದೇ ಮಾನದಂಡಗಳೇ ಬೇಕಿಲ್ಲ.ಯಾವ ಅನುಭವವೂ ಬೇಡ..ವಿಷಯದ ಅರಿವೂ ಬೇಕಿರೊಲ್ಲ..ಏನೇ ಮಾಡಿದ್ರೂ ತಮ್ಮ  ಬೆನ್ನಿಗೆ ನಿಲ್ಲೋ ”  ಗಾಡ್ ಫಾದರ್ಸ್ ಬೇಕು..ಎಲ್ಲಕ್ಕಿಂತ ಚೆನ್ನಾಗಿ ಬಕೆಟ್ ಹಿಡಿಯೋದನ್ನು ಚೆನ್ನಾಗಿ ಅರಿತಿರಬೇಕು ಅಷ್ಟೇ).ನಮ್ಮಲ್ಲಿರುವ ಸಾಮರ್ಥ್ಯ-ಅರ್ಹತೆ ಎಲ್ಲಕ್ಕಿಂತ ಹೆಚ್ಚಾಗಿ ಇರಬಹುದಾದ ಕಸುವನ್ನು ಓರೆಗೆ ಹಚ್ಚಿದ ನಂತರವೇ ಪತ್ರಕರ್ತರ ಸ್ಥಾನಮಾನ ಸಿಗುವಂಥ ಕಾಲವದು.ಆ ಸನ್ನಿವೇಶದಲ್ಲೇ ಪತ್ರಕರ್ತನಾದಾಗ ನನಗೂ ಒಂದು ಯುದ್ಧಗೆದ್ದ ಸಂಭ್ರಮ.

ಕ್ರಾಂತಿದೀಪದಲ್ಲಿ ಒಂದಷ್ಟು ದಿನ ಕೆಲಸ ಮಾಡಿದ ತರುವಾಯ ಫುಲ್ ಟೈಮ್ ಪತ್ರಕರ್ತನಾಗಿ ಭಡ್ತಿ ಸಿಕ್ಕು ಪೂರ್ಣಪ್ರಮಾಣದ ವರದಿಗಾರನಾಗಿ ಕೆಲಸ ಶುರುಮಾಡಿದ್ದು “ನಮ್ಮನಾಡು”ವಿನಲ್ಲಿ.ವರದಿಗಾರಿಕೆಯ ವಿಭಿನ್ನ ಸನ್ನಿವೇಶಗಳಲ್ಲಿ  ದೇಶಾದ್ರಿ ಜೊತೆ ಮುಖಾಮುಖಿಯಾಗುತ್ತಿದ್ದೆ.ಆ ಒಡನಾಟ “ಬಾನಾಡಿ” ಬಳಗ ಎನ್ನೋ ಸಮಾನಮನಸ್ಕ ಪತ್ರಕರ್ತ ಮಿತ್ರರ ಸಂಸ್ಥೆಯ ಹುಟ್ಟಿಗೆ ಕಾರಣವಾಯ್ತು.ಆದ್ರೆ ಕಣ್ ಬಿಡುವ ಮುನ್ನವೇ ಗರ್ಭಪಾತವಾದದ್ದು ಇತಿಹಾಸ ಬಿಡಿ..

ಬೆಂಗಳೂರಿಗೆ ಶಿಫ್ಟ್ ಆದ್ಮೇಲೆ ದೇಶಾದ್ರಿ ಜೊತೆಗಿನ ಒಡನಾಟ ಇದ್ದೇ ಇರುತ್ತಿತ್ತು.ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೆವು. ಪ್ರಚಲಿತ ವಿದ್ಯಾಮಾನ-ರಾಜಕೀಯ..ಸಂವೇದನಾಶೀಲ ಬರಹಗಳಿಗೆ ಹೆಸರಾಗಿದ್ದ ದೇಶಾದ್ರಿ  ಬದುಕಿನ ಅನಿವಾರ್ಯತೆಯ ಕಾರಣಕ್ಕೆ ಆತನಿಗೆ ಇಷ್ಟವೇ ಇಲ್ಲದ ಸಿನೆಮಾ ಬರಹಗಾರಿಕೆಯನ್ನು ಏಕೆ..ಹೇಗೆ ಆಯ್ಕೆ ಮಾಡಿಕೊಂಡನೋ ಎನ್ನುವುದೇ ಇಂದಿಗೂ ನನ್ನನ್ನು ಕಾಡುತ್ತಿರುವ ಪ್ರಶ್ನೆ.ಇದನ್ನು ಅನೇಕ ಬಾರಿ ಆತನಿಗೆ ಕೇಳಿದ್ದೂ ಇದೆ.

ವ್ಯವಸ್ಥೆ ಹಾಗೂ ಅದರ ಆಗುಹೋಗುಗಳ ಬಗ್ಗೆ ತುಂಬಾ ನಿಷ್ಠೂರವಾಗಿ ಮಾತನಾಡುತ್ತಿದ್ದ ದೇಶಾದ್ರಿ, ಆತನಿಗೆ ಸಂಬಂಧವೇ ಇಲ್ಲದ ಸಿನೆಮಾ ಎನ್ನುವ ಥಳಕುಬಳುಕಿನ ವಿಚಿತ್ರಪ್ರಪಂಚದೊಳಗೆ ಪ್ರವೇಶಿಸಿದ್ದು ಎಷ್ಟು ಅಚ್ಚರಿನೋ,ಅದನ್ನು ಜೀರ್ಣಿಸಿಕೊಂಡು ಬೆಳೆದದ್ದು ಕೂಡ ಅಷ್ಟೇ ಸೋಜಿಗ.ಮನಸು ಮಾಡಿದಿದ್ದರೆ ಅದೆಷ್ಟೋ ಸಿನೆಮಾ ಪತ್ರಕರ್ತರಂತೆ ದೇಶಾದ್ರಿ ಆಸ್ತಿ-ಅಂತಸ್ತು-ಮನೆ-ಕಾರು-ಐಷಾರಾಮಿ ಜೀವನವನ್ನು ನಡೆಸಬಹುದಿತ್ತು..ಆದ್ರೆ ಆತನ ಉದ್ದೇಶ ಎಂದೂ ಅದಾಗಿರಲೇ ಇಲ್ಲ.

ಇಷ್ಟೆಲ್ಲಾ ಅನುಭವ-ಅದ್ಭುತ ಬರವಣಿಗೆ ಇದ್ದಾಗ್ಯೂ ಬದುಕಿನ ನಿರ್ವಹಣೆಗೆ ಗೆಳೆಯ ದೇಶಾದ್ರಿ ಪರದಾಡಿದ್ದಿದೆ.ಪತ್ರಕರ್ತನ ಬದುಕು ಅಸ್ಥಿತ್ವ ಕಂಡುಕೊಳ್ಳುವ ಮುನ್ನವೇ ಮುಗಿದೋಗಿರುತ್ತೆ ಎನ್ನುವ ಮಾತಿನಂತೆ ಇವತ್ತಿಗೂ ನನ್ನಂತೆ ಆತನಿಗೂ  ಅಭದ್ರತೆ ಕಾಡುತ್ತಲೇ ಇದೆ. ಎಲ್ಲಿಯೂ ನಿಲ್ಲದಿರು..ಮನೆಯನೊಂದು ಕಟ್ಟದಿರು ಎನ್ನುವ ವಿಶ್ವಮಾನವತಾವಾದಿ ಕುವೆಂಪು ಅವರ ಸಂದೇಶವನ್ನೇ ಜೀವನವನ್ನಾಗಿಸಿಕೊಂಡಿರುವುದರಿಂದ್ಲೇ ದೇಶಾದ್ರಿ ಅವರಂಥ ದಿಟ್ಟ ಹಾಗೂ ನಿಷ್ಠೂರ ಮನಸ್ತಿತಿಯ ಪತ್ರಕರ್ತರಿಗೆ ಇಂದಿಗೂ ಬದುಕಿನ ಅಸ್ಥಿತ್ವದ ಪ್ರಶ್ನೆ ಕಾಡುತ್ತಲೇ ಇದೆ.ಇದನ್ನು ಅನೇಕ ಬಾರಿ ಹಂಚಿಕೊಂಡಿದ್ದಿದೆ…   

ಅದೆಲ್ಲವನ್ನು ಮೀರಿ..ಮರೆತು ಗೆಳೆಯಾ ದೇಶಾದ್ರಿ ಸಿನಿಲಹರಿ ಪ್ರಾರಂಭಿಸಿದ್ದಾನೆ.ಇಲ್ಲಿಯಾದರೂ ಆತನ ಬದುಕಿನ ಪಯಣ ಸುಖಕರವಾಗಿರಲಿ..ಕಷ್ಟದ ದಿನಗಳು ಶಾಶ್ವತವಾಗಿ ದೂರವಾಗಲಿ..ಸದಾ ನಗು-ನೆಮ್ಮದಿಯ ವೃತ್ತಿಪರ ಹಾಗೂ ವೈಯುಕ್ತಿಕ ಜೀವನ ಅವನದಾಗಲಿ..ಪಯಣ ಗಮ್ಯದತ್ತ ದಾಪುಗಾಲಿಡಲಿ..ಅವರಿವರ ಬಳಿ ಕೆಲಸ ಮಾಡುವಾಗ ಸಾಧಿಸದೆ ಉಳಿದೋಯ್ತಲ್ಲ ಎನ್ನುವ ಆ ಒಂದು ಕೊರತೆ ಸಮಾನಮನಸ್ಕ ಗೆಳೆಯರ ಹೊಸ ಪ್ರಯತ್ನದ ಮೂಲಕ ನೀಗೋಗಲಿ..

ಸಿನಿ ದುನಿಯಾಕ್ಕೆ ನಿಜಕ್ಕೂ ಬೇಕಿರುವ ಆ ಒಂದು ಅಗತ್ಯವನ್ನು ಪೂರೈಸುವ ಕೆಲಸ ನಿನ್ನಿಂದಾಗಲಿ..ನಿನ್ನಲ್ಲಿರುವ ಆ ಬ್ರಹ್ಮಾಂಡ ಕಸುವು-ಅಗಾಧ ಸಾಮರ್ಥ್ಯ-ಬೃಹತ್ ಪ್ರಭಾವಳಿ ಪ್ರಜ್ವಲಿಸಲಿ..ಅಂದುಕೊಂಡಿದ್ದು..ಸಾಧಿಸಬೇಕೆಂದುಕೊಂಡಿದ್ದೆಲ್ಲಾ ಕಾರ್ಯರೂಪಕ್ಕೆ ಬರುವಂತಾಗಲಿ..ಮತ್ತೊಮ್ಮೆ ನಿಮ್ಮ ಸಿನಿಲಹರಿ ಪ್ರಯತ್ನ ಕೇವಲ ಚಿತ್ರಜಗತ್ತಿನ ಸುದ್ದಿಪ್ರಪಂಚದಲ್ಲಿ ಕ್ರಾಂತಿ ಮಾಡದೆ ಎಲ್ಲಾ ಆಯಾಮಗಳಲ್ಲೂ ದಿಗ್ವಿಜಯ ಸಾಧಿಸುವಂತಾಗಲಿ..ಸಿನಿಲಹರಿಯಿಂದ ಒಂದು ಇತಿಹಾಸ ಸೃಷ್ಟಿಯಾಗಲಿ..ಎನ್ನೋದೇ ಕನ್ನಡ ಫ್ಲಾಶ್ ನ್ಯೂಸ್ ನ ಹಾರೈಕೆ..

Spread the love
Leave A Reply

Your email address will not be published.

Flash News