ಲಾಕ್ ಡೌನ್ ಡ್ಯೂಟಿ ಮಾಡಿದ ಬಿಎಂಟಿಸಿ ಸಿಬ್ಬಂದಿಗೆ ವಂಡರ್ ಲಾ ಟೂರ್ ಗಿಫ್ಟ್..! 200 ನೌಕರ ಕುಟುಂಬ ಸೇರಿದಂತೆ 800 ಮಂದಿಗೆ ವಂಡರ್ ಲಾ ವಿಸಿಟ್ ಸೌಭಾಗ್ಯ..

0

ಬೆಂಗಳೂರು: ಲಾಕ್‌ಡೌನ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ವೈಯಕ್ತಿಕ ಬದುಕು, ಕುಟುಂಬ ಹಾಗೂ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಚಾಲನಾ ಸಿಬ್ಬಂದಿಗೆ ಆಡಳಿತ ಮಂಡಳಿ ಬಂಪರ್ ಗಿಫ್ಟ್ ಘೋಷಿಸಿದೆ. ಹಾಗೆಂದು ಅದು ಬೋನಸ್, ಇಂಕ್ರಿಮೆಂಟ್ ಅಥವಾ ಇನ್ನೊಂದು ರೀತಿಯ ಪ್ರೋತ್ಸಾಹಕ ಭತ್ಯೆಯೆಂದು ಖಂಡಿತಾ ಭಾವಿಸಬೇಡಿ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ ಕೆಲವೇ ಕೆಲವು ಚಾಲನಾ ಸಿಬ್ಬಂದಿಗೆ ಆಡಳಿತ ಮಂಡಳಿ ನೀಡಲು ಹೊರಟಿರುವ ಗಿಫ್ಟ್ ವಂಡರ್‌ಲಾ ಟೂರ್.

ಹೌದು, ದಿನನಿತ್ಯ ಸಾವಿರಾರು ಪ್ರಯಾಣಿಕರ ನಡುವೆ ಕಾರ್ಯನಿರ್ವಹಿಸುವ ಬಿಎಂಟಿಸಿ ಚಾಲನಾ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಗೌರವದಿಂದ ಸಂಬೋಧಿಸಲಾಗುತ್ತಿದೆ. ಜೀವವನ್ನು ಅಪಾಯಕ್ಕಿಟ್ಟು ಕೆಲಸ ಮಾಡಿದ ಸಾಕಷ್ಟು ನೌಕರರು ಕೊರೊನಾ ಸೋಂಕಿತರಾಗಿದ್ದೂ ಎಲ್ಲರಿಗೂ ಗೊತ್ತಿದೆ. ಅವರ ಸೇವೆಯನ್ನು ಪರಿಗಣಿಸಿ ಆಡಳಿತ ಮಂಡಳಿ ಒಂದು ದಿನದ ಮಟ್ಟಿಗೆ ವಂಡರ್‌ಲಾ ಟೂರ್‌ಗೆ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯೇ ಎನ್ನಲಾಗುತ್ತಿದೆ. ದಿನವಿಡೀ ಒತ್ತಡದಲ್ಲೇ ಕೆಲಸ ಮಾಡುವ ಹಾಗೂ ಕುಟುಂಬದೊಂದಿಗೆ ಆತಂಕದಲ್ಲೇ ದಿನದೂಡಬೇಕಾದ ಸಂದಿಗ್ಧ ಸನ್ನಿವೇಶದಲ್ಲಿರುವ ಚಾಲನಾ ಸಿಬ್ಬಂದಿಗೆ ಇದೊಂದು ರೀತಿಯ ರಿಲ್ಯಾಕ್ಸ್ ಟೂರ್ ಎಂದರೂ ತಪ್ಪಾಗಲಿಕ್ಕಿಲ್ಲ.

ಮಾರ್ಚ್ 24,2020 ರಿಂದ ಏಪ್ರಿಲ್ 2020 ರ ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ವಂಡರ್‌ಲಾ ಟೂರ್‌ನ ಅವಕಾಶ ಸಿಗುತ್ತಿಲ್ಲ. ಈ ಅವಧಿಯಲ್ಲಿ ಹೆಚ್ಚು ದಿನ ಕಾರ್ಯನಿರ್ವಹಿಸಿದ ಚಾಲನಾ ಸಿಬ್ಬಂದಿಯನ್ನು ಮಾತ್ರ ಆಯ್ಕೆ ಮಾಡಲಾಗುತ್ತಿದೆ. ಇದೇ ತಿಂಗಳ 11 ರಂದು ವಂಡರ್‌ಲಾಗೆ ವಿಸಿಟ್ ಮಾಡುವ ಅವಕಾಶ ನೀಡಲಾಗುತ್ತಿದ್ದು, ಚಾಲಕರು ತಮ್ಮೊಂದಿಗೆ ಕುಟುಂಬದ ಸದಸ್ಯರನ್ನೂ ಸೇರಿದಂತೆ ಮೂವರನ್ನು ಒಂದು ದಿನದ ವಂಡರ್‌ಲಾ ಟೂರ್‌ಗೆ ಕರೆದುಕೊಂಡು ಹೋಗಬಹುದಾಗಿದೆ.

ಎಲ್ಲಾ ಘಟಕಗಳಿಗೂ ಈ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಿಂದ ಸುತ್ತೋಲೆ ರವಾನೆಯಾಗಿದೆ. ಘಟಕ ವ್ಯವಸ್ಥಾಪಕರು ಕೊರೊನಾ coronaeleven.wonderla.com  ಗೆ ಲಾಗಿನ್ ಆಗಿ ಚಾಲನಾ ಸಿಬ್ಬಂದಿಗೆ ಉಚಿತ ಕೂಪನ್‌ಗಳನ್ನು ವಿತರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಲಾಕ್‌ಡೌನ್ ಸಂಕಷ್ಟದ ಸಂದರ್ಭದಲ್ಲಿ ಹಲವಾರು ಕಾರಣಗಳಿಂದ ಗೈರು ಹಾಜರಾದವರು, ರಜೆ ಪಡೆದವರು ಹಾಗೂ ಅಮಾನತುಗೊಂಡಂತಹ ಸಿಬ್ಬಂದಿಗೆ ಉಚಿತ ಕೂಪನ್‌ಗಳು ನಿಗದಿಯಾಗಿ ಮೇಲ್ಕಂಡ ಕಾರಣಗಳಿಂದ ಅದು ರದ್ದಾದರೆ ಆ ಕೂಪನ್‌ಗಳನ್ನು ಆ ಸಿಬ್ಬಂದಿಗಳ ಬದಲು ಬೇರೆಯವರಿಗೆ ವಿತರಿಸುವ ಅವಕಾಶ ಇರುವುದಿಲ್ಲ.

ಆ ಕೂಪನ್‌ಗಳು ವಲಯ ಕಚೇರಿಗೆ ರವಾನೆ ಮಾಡಬೇಕೆಂಬ ಕಟ್ಟಪ್ಪಣೆಯನ್ನು ಮಾಡಲಾಗಿದೆ. ಅಂದ ಹಾಗೆ ಒಂದು ಮೂಲದ ಪ್ರಕಾರ 200ರಷ್ಟು ಸಿಬ್ಬಂದಿಗೆ ವಂಡರ್‌ಲಾ ವಿಸಿಟ್ ಮಾಡುವ ಅವಕಾಶ ಲಭ್ಯವಾಗಲಿದೆ.ಅಂದ್ಹಾಗೆ 200 ಸಿಬ್ಬಂದಿ ಹಾಗೂ ಆತನ ಮನೆಯ ನಾಲ್ವರು..ಒಟ್ಟು 800 ಜನರಿಗೆ ವಂಡರ್ ಲಾ ಸುತ್ತುವ ಸೌಲಭ್ಯ ಸಿಗಲಿದೆ.ಅಂದ್ಹಾಗೆ ಇದಕ್ಕೆ ಬಿಎಂಟಿಸಿ ನಯಾಪೈಸೆ ಖರ್ಚು ಮಾಡುತ್ತಿಲ್ಲ.ವಂಡರ್ ಲಾ ಸಂಸ್ಥೆ ಅವರೇ ಕೊರೊನಾ ವಾರಿಯರ್ಸ್ ಗೆ ನೀಡುತ್ತಿರುವ ಗಿಫ್ಟ್ ಇದು ಎನ್ನುತ್ತಾರೆ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ತೋರಗಲ್.

ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ ತಮ್ಮ ಸೇವೆಯನ್ನು ಪರಿಗಣಿಸಿ ಆಡಳಿತ ಮಂಡಳಿ ಈ ಗಿಫ್ಟ್ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ನಮ್ಮನ್ನು ಕರೆದುಕೊಂಡು ಹೋಗಲಾಗುತ್ತಿರುವ ವಂಡರ್‌ಲಾದ ವಾತಾವರಣ ಎಷ್ಟರಮಟ್ಟಿಗೆ ಕೊರೊನಾ ಮುಕ್ತ ಹಾಗೂ ಸುರಕ್ಷಿತ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕೊರೊನಾ ಮಹಾಮಾರಿಯಿಂದ ವಾತಾವರಣವಿನ್ನೂ ಮುಕ್ತವಾಗದ ಸನ್ನಿವೇಶದಲ್ಲಿ ವಂಡರ್ ಲಾದ  ಅವಶ್ಯಕತೆ ಏನಿತ್ತು? ಎಂದು ಸಾರಿಗೆ ನೌಕರರ ಯೂನಿಯನ್‌ಗಳು ಪ್ರಶ್ನಿಸಿವೆ.

ಕೊರೊನಾ ವೇಳೆ  ಡ್ಯೂಟಿ ಮಾಡಿ ವಂಡರ್ ಲಾ ನೋಡುವ ಅವಕಾಶ ಸಿಕ್ಕರೆ ಹೋಗ್ತೀರಾ ಎಂದು ಕನ್ನಡ ಫ್ಲಾಶ್ ನ್ಯೂಸ್ ನೌಕರರ ಕುಟುಂಬಗಳನ್ನು ಪ್ರಶ್ನಿಸಿದಾಗ 800 ಜನ ಒಟ್ಟಾಗಿ ಹೋಗುತ್ತಿರುವ ಸನ್ನಿವೇಶವೇ ಸರಿಯಿಲ್ಲ.ಕೊರೊನಾ ಸೋಂಕು ಅಲ್ಲಿ ಹರಡಿದ್ರೆ ನಮ್ಮ ಕುಟುಂಬ ಸದಸ್ಯರ ಗತಿ ಏನು..?ಕೊರೊನಾ ಸೋಂಕಿತ ನೌಕರರ ವಿಷಯದಲ್ಲಿ ಆಡಳಿತ ಮಂಡಳಿ ನಡೆದುಕೊಂಡಿರುವ ರೀತಿಯನ್ನು ಹತ್ತಿರದಿಂದ ನೋಡಿದ್ದೇವೆ.ನಮಗು ಅಂಥಾ ಸ್ಥಿತಿ ಬರಬಾರದು..ಹಾಗಾಗಿ ವಂಡರ್ ಲಾ ಜೊತೆಗೆ ಹಣ ಕೊಟ್ರೂ ಅಲ್ಲಿಗೆ ಹೋಗೊಲ್ಲ..ನಮಗೆ ಜೀವ-ಜೀವನಗಳು ಮುಖ್ಯ ಎನ್ನುತ್ತಾರೆ.

ಇದೆಲ್ಲದರ ನಡುವೆಯೇ ಕೊರೊನಾದಂಥ ಮಾರಣಾಂತಿಕ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುವ ಅದೆಷ್ಟೋ ನೌಕರರನ್ನು ಕ್ಷುಲ್ಲಕ ಕಾರಣಕ್ಕಾಗಿ ಅಮಾನತ್ತುಗೊಳಿಸಲಾಗಿದೆ. ಸರ್ಕಾರವೇ ಒಂದೆಡೆ ಸಾರಿಗೆ ನೌಕರರ ಸೇವೆಯನ್ನು ಕೊಂಡಾಡಿದಷ್ಟೇ ಅಲ್ಲ. ಅವರನ್ನು ಯಾವುದೇ ಕಾರಣಕ್ಕೂ ಸೇವೆಯ ಸಂದರ್ಭದಲ್ಲಿ ಡಿಸ್ಟರ್ಬ್ ಮಾಡಬಾರದು ಎಂಬ ಆದೇಶ (ಸಂಖ್ಯೆ: ಕಂಇ೧೭೮ ಟಿ.ಎಸ್. ಆರ್. ೨೦೨೦ ದಿನಾಂಕ ೩೦-೦೩-೨೦೨೦) ವನ್ನು ಲಿಖಿತವಾಗಿಯೇ ನೀಡಿದೆ. ಆದರೆ ಮನುಷ್ಯತ್ವ ಇಲ್ಲದವರಂತೆ ವರ್ತಿಸಿರುವ ಅಧಿಕಾರಿಗಳು ಸಕಾರಣವಿಲ್ಲದೆ ನೂರಾರು ನೌಕರರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಹೀಗಿರುವಲ್ಲಿ ಸಾರಿಗೆ ನೌಕರರ ಸೇವೆಗೆ ಬಂದ ಬೆಲೆಯಾದರೂ ಏನು? ಎಂಬುದು ಅಮಾನತುಗೊಂಡ ಅದೆಷ್ಟೋ ನೌಕರರ ಅಳಲು.

ಕೆಲಸ ಮಾಡಲು ಮುಕ್ತ ಹಾಗೂ ನಿರಾತಂಕವಾದ ವಾತಾವರಣ ಕಲ್ಪಿಸಿಕೊಡುವ ಜೊತೆಗೆ ನಿಯಮಿತವಾಗಿ ಪ್ರತಿತಿಂಗಳೂ ಸಂಬಳ ಕೊಟ್ಟರೆ ಸಾಕು ನಮಗೆ ಯಾವ ಹೆಚ್ಚುವರಿ ಭತ್ಯೆಗಳೂ ಬೇಡ, ಸವಲತ್ತುಗಳೂ ಬೇಡ, ವಂಡರ್‌ಲಾ ಟೂರು ಮೊದಲೇ ಬೇಡ ಎಂದು ಕೈಮುಗಿದು ಬೇಡುತ್ತಿರುವ ಸಾರಿಗೆ ನೌಕರರ ಬೇಡಿಕೆ, ಭಿನ್ನಹವನ್ನು ಆಡಳಿತ ಮಂಡಳಿ ಪರಿಗಣಿಸುತ್ತಾ ಕಾದು ನೋಡಬೇಕು.

Spread the love
Leave A Reply

Your email address will not be published.

Flash News