ನಿಖಿಲ್ ಆಯ್ಕೆ “ಚನ್ನಪಟ್ಟಣ”ನೋ “ರಾಮನಗರ”ವೋ… ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಯುವರಾಜ

0

 

ಬೆಂಗಳೂರು:ದೊಡ್ಡ ಗೌಡ್ರ ಕುಟುಂಬದ ಲೆಕ್ಕಾಚಾರ…ಕ್ಯಾರೆಕ್ಟರ್ರೇ ಒಂದ್ರೀತಿ ವಿಚಿತ್ರ..ಅರ್ಥ ಮಾಡಿಕೊಳ್ಳೊಕ್ಕೇನೆ ಆಗೊಲ್ಲ..ಈಗ ಅಂದಿ ದ್ದನ್ನು ಮತ್ತೊಂದ್ ಕ್ಷಣಕ್ಕೆ ಅಂದೇ ಇಲ್ಲ ಎಂದ್ ಬಿಡ್ತಾರೆ..ಅಮೇಲೆ ಹಾಗೆ ಅನ್ನಲೇ ಇಲ್ಲ..ಹೌದಾ ಹಾಗಂದ್ ಬಿಟ್ವಾ.. ಹಾಗಾಗಬಾರದಿತ್ತಲ್ಲ ಎಂದು ಹೇಳಿ ಎಲ್ಲಕ್ಕು ತಿಪ್ಪೆ ಸವರಿಬಿಡ್ತಾರೆ.ಗೌಡ್ರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿರು ವವರಿಗೇನೆ ಇವತ್ತಿಗೂ ಕುಟುಂಬದ ಲೆಕ್ಕಾಚಾರ-ನಡೆ-ಧೋರಣೆ-ನಿಲುವು ಅರ್ಥವಾಗೋದಿಲ್ಲ..ಅಷ್ಟೊಂದು ನಿಗೂಢ.. ಇದನ್ನೆಲ್ಲಾ ಯಾಕೆ ಹೇಳ್ತಿದಿವಿ..ಇದೆಲ್ಲಾ ಏಕೆ ನೆನಪಿಗೆ ಬಂತು ಎನ್ನುವುದಕ್ಕೆ ಕಾರಣವೇ ನಿಖಿಲ್ ಸ್ಪರ್ಧೆ.

Deve Gowda

ಚುನಾವಣೆ ನಮಗೇ ಮುಗಿದುಬಿಡಲಿ…ನಮ್ಮ  ಕುಟುಂಬದ ಕುಡಿಗಳನ್ನು ಮತ್ತೆ ರಾಜಕಾರಣಕ್ಕೆ ತರೋ ಪ್ರಶ್ನೆ ಇರಲಿ,ಅದರ  ಆಲೋಚನೆಯೂ ನಮಗಿಲ್ಲ ಎನ್ನುತ್ತಲೇ ದೇವೇಗೌಡ್ರು ತಮ್ಮ ಕುಟುಂಬದವರನ್ನೆಲ್ಲಾ ಕರೆ ತಂದು ತಾವೇ ಮುಂದೆ ನಿಂತು ಗೆಲ್ಲಿಸಿದ್ರು(ಪಕ್ಷದ ನಿಷ್ಠಾವಂತ ಕಾರ್ಯಕರ್ತರ ವಿಚಾರದಲ್ಲಿ ಇದೇ ಕಾಳಜಿ-ಆಸ್ಥೆ ತೋರಿಸಿದ್ದರೆ ಇವತ್ತಿಗೆ ಅದೆಷ್ಟೋ ಜನ ಗೆದ್ದುಬಿಡುತ್ತಿದ್ದರು..ಆದ್ರೆ ಗೌಡ್ರ ಕುಟುಂಬದ ಹಾಗೆ ಮಾಡಲೇ ಇಲ್ವೇ..?)ಅದು ನಿಖಿಲ್ ವಿಚಾರದಲ್ಲೂ ಹೊರತಾಗಿರಲಿಲ್ಲ ಬಿಡಿ.,ಇದಕ್ಕೆ ಮಂಡ್ಯ ಲೋಕಸಭಾ ಎಲೆಕ್ಷನ್ನೇ ಸಾಕ್ಷಿ.

ತನ್ನ ಕುಟುಂಬದ ಯಾವುದೇ ಸದಸ್ಯರನ್ನೂ ಚುನಾವಣಾ ಅಖಾಡಕ್ಕೆ ಇಳಿಸೊಲ್ಲ ಎನ್ನುತ್ತಲೇ ಕೊನೆಗೆ ನಿಖಿಲ್ ಅವರನ್ನೇ ಹುರಿಯಾಳನ್ನಾಗಿಸಿದ್ರು.ಕಾರಣ ಕೇಳುದ್ರೆ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಎಂದ್ರು..ಗೌಡ್ರ ಡಬಲ್ ಸ್ಟ್ಯಾಂಡರ್ಡ್ ರಾಜಕಾರಣದಿಂದ ಬೇಸತ್ತು-ಆಕ್ರೋಶಗೊಂಡ ಕಾರ್ಯಕರ್ತರೇ ಹಠಕ್ಕೆ ಬಿದ್ದವರಂತೆ ಸುಮಲತಾ ಪರ ನಿಂತು ಕೆಲಸ ಮಾಡಿ ನಿಖಿಲ್ ಕೈಗೆ ಚಿಪ್ಪು ಕೊಟ್ರು.ದುರಂತ ಎಂದ್ರೆ ನಿಖಿಲ್  ಅವರ ಸೋಲಿನ ವಿಚಾರದಲ್ಲಿ ಅವರ ಕುಟುಂಬದವ್ರ ಕೊಡುಗೆಯೂ ಅಪಾರವಾಗಿದೆ ಬಿಡಿ..ಇದೆಲ್ಲಾ ಆಗಿಹೋದ ಕಥೆ ಬಿಡಿ..ಈಗ ಹೊಸ ವಿಚಾರಕ್ಕೆ ಬರೋಣ..

ಸಧ್ಯಕ್ಕೆ ಯಾವುದೇ ಹುದ್ದೆಯಿಲ್ಲದೆ ಪತ್ನಿ ರೇವತಿಯೊಂದಿಗೆ ಸಂಸಾರ ನಡೆಸುತ್ತಿರುವ ನಿಖಿಲ್ ಶಿರಾ ಹಾಗೂ ಆರ್ ಆರ್ ನಗರದಲ್ಲಿ ಕಾಣಿಸಿಕೊಂಡಿದ್ದೂ ಅಷ್ಟಕ್ಕಷ್ಟೇ..ಆದರೆ ಇದೀಗ ರಾಮನಗರದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.ಮುಂದಿನ ಚುನಾವಣೆಗೆ ಈಗಲೇ ಕ್ಷೇತ್ರವನ್ನು ಆಯ್ದುಕೊಳ್ಳುವ ಅವಶ್ಯಕತೆಯಿದೆ.ಆದ್ರೆ ಯಾವ್ ಕ್ಷೇತ್ರ ಎನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.ಏಕೆಂದ್ರೆ ಅನಾಯಾಸವಾಗಿ ಗೆಲ್ಲಬಲ್ಲಂಥ ಕ್ಷೇತ್ರ ನಿಖಿಲ್ ಗೆ ಇದ್ದಂತಿಲ್ಲ.ಇದ್ದರೂ ಆ ಕ್ಷೇತ್ರಗಳಲ್ಲಿ ತಮ್ಮ ಕುಟುಂಬದವ್ರೇ ಇದ್ದಾರೆ.ಹಾಗಾಗಿ ಕುಟುಂಬದವ್ರೇ ಒಂದು ಕ್ಷೇತ್ರವನ್ನು ನಿಖಿಲ್ ಗಾಗಿ ತ್ಯಾಗ ಮಾಡ್ಬೇಕಾಗಿ ಬಂದಿದೆ.ಆ ಕ್ಷೇತ್ರಗಳು ಯಾವುದು ಎನ್ನೋದ್ರ ಕುತೂಹಲ ಎಲ್ಲರಿಗೂ ಇದ್ದೇ ಇದೆ.ಅಂದ್ಹಾಗೆ ನಿಖಿಲ್ ಬಾಯ್ಬಿಟ್ಟಂತೆ ಅವರು ಕಣ್ಣಾಕಿರುವ ಕ್ಷೇತ್ರ ಎರಡು.ಒಂದು ತಂದೆ ಮಾಜಿ ಸಿಎಂ ಕುಮಾರಸ್ವಾಮಿ  ಪ್ರತಿನಿಧಿಸುತ್ತಿರುವ ರಾಮನಗರ,ತಾಯಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ.

ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗಿಳಿಯುವುದು ಬಹುತೇಕ ಅನುಮಾನ.ಇದಕ್ಕೆ ಕಾರಣ ಹಲವು.ಅದರಲ್ಲಿ ಪ್ರಮುಖವಾದದ್ದು ಅಭಿವೃದ್ಧಿ ಮಾತು ಹಾಳಾಗಿ ಹೋಗ್ಲಿ ಕ್ಷೇತ್ರದ ಜನರಿಗೇನೆ ಸಿಗದಷ್ಟು ಮೇಡಮ್ ನಾಟ್ ರೀಚಬಲ್ ಆಗಿರುವುದು.ಮಧುಗಿರಿ ಕ್ಷೇತ್ರದ ಎಮ್ಮೆಲ್ಲೆಯಾದಾಗ ವಹಿಸಿದ ನಿರ್ಲಕ್ಷ್ಯಕ್ಕೆ ಮರು ಚುನಾವಣೆಯಲ್ಲಿ ಜನ ಕೊಟ್ಟ ತೀರ್ಪು ಏನನ್ನೋದು ಇಡೀ ರಾಜ್ಯದ ಜನರಿಗೆ ಗೊತ್ತು.ಅದರ ನಂತರ ಚನ್ನಪಟ್ಟಣದಿಂದ ಎಮ್ಮೆಲ್ಲೆಯಾಗಿ ಆಯ್ಕೆಯಾದ್ರೂ ಅದೇ ಚಾಳಿಯನ್ನು ಮೇಡಮ್ ಮುಂದುವರೆಸಿದ್ದಾರೆ.ಇದು ಪಕ್ಷದ ಕಾರ್ಯಕರ್ತರನ್ನು ಕೆಂಡಾಮಂಡಲವಾಗಿಸಿದೆ.ಮುಂದಿನ ಚುನಾವಣೆಯಲ್ಲಿ ಮೇಡಮ್ ನಿಂತ್ರೆ ತಕ್ಕ ಪಾಠ ಕಲಿಸುವ ತೀರ್ಮಾನಕ್ಕೂ ಬಂದಿದ್ದಾರೆನ್ನಲಾಗಿದೆ.

ದೊಡ್ಡ ಗೌಡ್ರ ಕುಟುಂಬದ ಸೊಸೆಯನ್ನು ಕ್ಷೇತ್ರದ ಮತದಾರರು ಸೋಲಿಸಲು ಮಾಡಿರುವ ಹುನ್ನಾರವನ್ನು ಅರಿತೇ ತಕ್ಷಣ ಚನ್ನಪಟ್ಟಣದಿಂದ ತಮ್ಮ ಮೊಮ್ಮಗ ನಿಖಿಲ್ ಗೆ ಸ್ಥಾನ ಕಲ್ಪಿಸುವ ಚಿಂತನೆ ನಡೆಸಿದ್ದಾರಂತೆ.ಆದ್ರೆ ದಿಢೀರ್ ಹೆಸರನ್ನು ಹರಿಯಬಿಟ್ಟರೆ ಕ್ಷೇತ್ರದ ಜನ ರಾಜಕೀಯವೇನು ಕುಟುಂಬದ ಜಹಗೀರ್ ದಾರಾ ಎಂದುಕೊಂಡಾರು ಎಂಬ ಅಂಜಿಕೆಗೆ ಕೆಲವರಿಂದ ನಿಖಿಲ್ ಹೆಸರನ್ನು ಬೇಕಂತಲೇ ಹರಿಯಬಿಡಲಾರಂಭಿಸಿದ್ದಾರೆ ಎನ್ನಲಾಗ್ತಿದೆ.

ಹೇಳಬೇಕಿರುವುದನ್ನು ನೇರವಾಗಿ ಹೇಳೋ ಜಾಯಮಾನ ಗೌಡ್ರ ಫ್ಯಾಮಿಲಿಯದ್ದಲ್ಲ..ಸುತ್ತಿ ಬಳಸಿ ಹೇಳಿ,ಆ ಫಾರ್ಮ್ಯೂಲಾವನ್ನೇ ವರ್ಕೌಟ್ ಮಾಡಿಕೊಳ್ಳುವ ಚತುರಬುದ್ಧಿಯ ಗೌಡ್ರ ಫ್ಯಾಮಿಲಿ ನಿಖಿಲ್ ಹೆಸರನ್ನೂ ಸಂದರ್ಭ ನೋಡಿಕೊಂಡು ಹರಿಯಬಿಟ್ಟಿದೆ.ಹಾಗಂತ ಅದು ಸಾರ್ವಜನಿಕವಾದ್ರೂ ಅದನ್ನು ತೇಲಿಸಿಬಿಡುವುದು ಹೇಗೆನ್ನುವುದು ಕೂಡ ಗೌಡ್ರ ಫ್ಯಾಮಿಲಿಗೆ ಗೊತ್ತು.ರಾಮನಗರದಲ್ಲಿ ನಿಖಿಲ್ ನಡೆದುಕೊಂಡಿರುವ ರೀತಿಯೂ ಹಾಗೆಯೇ ಇದೆ.

ರಾಮನಗರನೋ..ಚನ್ನಪಟ್ಟಣನೋ ಎಂದು ಮಾದ್ಯಮಗಳು ಕೇಳಿದ್ರೆ,ಅದನ್ನಿನ್ನು ಡಿಸೈಡ್ ಮಾಡಿಲ್ಲ..ಅದರ ಆಲೋಚನೆಯೇ ನನಗಿಲ್ಲ..ನಮ್ಮ ಅಜ್ಜ,ಅಪ್ಪ,ಅಮ್ಮ ಏನನ್ನುತ್ತಾರೋ ಅದೇ ಫೈನಲ್..ಅವರು ಹೇಳಿದಂತೆ ನಡೆಯೋದಷ್ಟೇ ನನ್ನ ಕೆಲಸ ಎಂಬ ಜಾಣ್ಮೆಯ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ.ಗೌಡ್ರ ಕುಟುಂಬದ ಕುಡಿ ಹೀಗೊಂದು ಉತ್ತರ ಕೊಟ್ಟರೆ ಅದರ ಒಳಮರ್ಮ ಏನು ಎಂದು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಜನರೆನ್ನೋದನ್ನು ಗೌಡ್ರ ಫ್ಯಾಮಿಲಿ ಗ್ರಹಿಸೋದು ಕೂಡ ಒಳ್ಳೇದೇ..

ಅದೇನೇ ಆಗಲಿ,ಒಟ್ಟಿನಲ್ಲಿ ರಾಮನಗರದಲ್ಲಿ ನಿಖಿಲ್ ಕೊಟ್ಟಿರುವ ಹೇಳಿಕೆಯಿಂದ ಒಂದಂತೂ ಸ್ಪಷ್ಟವಾಗಿದೆ, ಮುಂದಿನ ಚುನಾವಣೆಯಲ್ಲಿ ನಿಖಿಲ್ ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಸ್ಪರ್ಧಿಸೋದು ಖಚಿತ ಎನ್ನೋದು..ಇದಕ್ಕಾಗಿ ನಿಖಿಲ್ ಗೆ ರಾಜಕೀಯ ಪಟ್ಟುಗಳನ್ನು ಕಲಿಸಲು ಗೌಡ್ರ ಫ್ಯಾಮಿಲಿ ತಾಲೀಮು ಶುರುವಿಟ್ಟುಕೊಂಡಿದೆ ಎನ್ನೋದು ಕೂಡ ಅಷ್ಟೇ ಸತ್ಯ.

ನಿಖಿಲ್ ಆಯ್ಕೆ “ಚನ್ನಪಟ್ಟಣ”ನೋ “ರಾಮನಗರ”ವೋ… ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಯುವರಾಜ..

 

Spread the love
Leave A Reply

Your email address will not be published.

Flash News